ನರ್ಮದಾ ಬಚಾವೋ ಆಂದೋಲನಕ್ಕೆ ಬೆಂಬಲಿಸಿ ಧರಣಿ

Update: 2017-08-06 14:40 GMT

ಬೆಂಗಳೂರು,ಆ.6:ನರ್ಮದಾ ಬಚಾವೋ ಆಂದೋಲನದ ಹೋರಾಟದ ಅಂಗವಾಗಿ ಮಹಾರಾಷ್ಟ್ರದಲ್ಲಿ ಹಮ್ಮಿಕೊಂಡಿರುವ ಅನಿರ್ದಷ್ಟಾವಧಿ ಉಪವಾಸ ಸತ್ಯಾಗ್ರಹಕ್ಕೆ ಬೆಂಬಲ ಸೂಚಿಸಿ ಇಂದು ನಗರದಲ್ಲಿ ಜನಾಂದೋಲನಗಳ ರಾಷ್ಟ್ರೀಯ ಸಮನ್ವಯ ಸಂಘಟನೆಯ ಕಾರ್ಯಕರ್ತರು ಧರಣಿ ನಡೆಸಿದರು.

ರವಿವಾರ ನಗರದ ಮೈಸೂರು ಬ್ಯಾಂಕ್ ವೃತ್ತದಲ್ಲಿ ಹಮ್ಮಿಕೊಂಡಿದ್ದ ಧರಣಿಯಲ್ಲಿ ಪಾಲ್ಗೊಂಡಿದ್ದ ಕಾರ್ಯಕರ್ತರು ಸರ್ದಾರ್ ಸರೋವರ್ ಅಣೆಕಟ್ಟಿನ ಗೇಟ್‌ಗಳನ್ನು ಮುಚ್ಚಿರುವುದರಿಂದ ಸಂತ್ರಸ್ಥರಾಗಿರುವ 193 ಹಳ್ಳಿಗಳ 40 ಸಾವಿರ ಕುಂಟುಬಗಳಿಗೆ ಕೂಡಲೆ ಪುನರ್ ವಸತಿ ಕಲ್ಪಿಸಬೇಕು ಎಂದು ಆಗ್ರಹಿಸಿದರು.

ಪುನರ್ ವಸತಿಗಾಗಿ ಆಗ್ರಹಿಸಿ ಕಳೆದ 32 ವರ್ಷಗಳಿಂದ ನರ್ಮದಾ ಕಣಿವೆಯ ರೈತರು, ಆದಿವಾಸಿಗಳು, ಮೀನುಗಾರರು ಹಾಗೂ ಸ್ಥಳೀಯ ನಿವಾಸಿಗಳು ಹೋರಾಟ ಮಾಡುತ್ತಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಪುನರ್ ವಸತಿ ಕಲ್ಪಿಸುವಂತೆ ಅನೇಕ ಸಮಿತಿಗಳು ವರದಿಯನ್ನು ಸಲ್ಲಿಸಿದರು ಸರಕಾರಗಳು ವಿಳಂಬ ಧೋರಣೆ ತಾಳುತ್ತಿವೆ ಎಂದು ಕಿಡಿಕಾರಿದರು.

 ಸಂಘಟನೆಯ ಸದಸ್ಯ ಮನೋಹರ್ ಯಳವರ್ತಿ ಮಾತನಾಡಿ, ನರ್ಮದಾ ನದಿಯ ಸಂತ್ರಸ್ಥ ಕುಂಟುಂಬಗಳಿಗೆ ಕೂಡಲೆ ಪುನರ್ ವಸತಿ ಕಲ್ಪಿಸಬೇಕು. ಪುನರ್ ವಸತಿ ಕಲ್ಪಿಸುವವರೆಗೂ ಅಣೆಕಟ್ಟಿನ ಗೇಟುಗಳನ್ನು ತೆರೆಯಬೇಕು ಎಂದು ಆಗ್ರಹಿಸಿದರು.

 ಅಲ್ಲಿನ ಸರಕಾರ ಕೂಡಲೆ ಉಪವಾಸ ಸತ್ಯಾಗ್ರಹ ನಡೆಸುತ್ತಿರುವ ಮೇಧಾ ಪಾಟ್ಕರ್ ಜೊತೆ ಮಾತುಕತೆ ನಡೆಸಲು ಮುಂದಾಗಬೇಕು. ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿರುವವರ ವಿರುದ್ಧ ಬೇದರಿಕೆಗಳನ್ನು ಒಡ್ಡುವುದು ಕೂಡಲೆ ನಿಲ್ಲಿಸಬೇಕು ಎಂದು ಒತ್ತಾಯಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News