ಕೋಮುವಾದ ನಿರ್ಮೂಲನೆಗೆ ಎರಡನೇ ಸ್ವಾತಂತ್ರ್ಯ ಸಂಗ್ರಾಮಕ್ಕೆ ಸಜ್ಜುಗೊಳ್ಳೋಣ: ಡಾ.ರಹಮತ್ ತರೀಕೆರೆ
ಬೆಂಗಳೂರು, ಆ.6: ಕೋಮುವಾದಿ, ಜಾತಿವಾದಿ ಹಾಗೂ ಭ್ರಷ್ಟಾಚಾರ ಮುಕ್ತ ಭಾರತ ನಿರ್ಮಿಸಲು ಎರಡನೇ ಸ್ವಾತಂತ್ರ ಹೋರಾಟಕ್ಕೆ ಸಜ್ಜುಗೊಳ್ಳಬೇಕಾಗಿದೆ ಎಂದು ಹಿರಿಯ ಸಂಶೋಧಕ ಡಾ.ರಹಮತ್ ತರೀಕೆರೆ ತಿಳಿಸಿದ್ದಾರೆ.
ರವಿವಾರ ವಿದ್ಯಾರ್ಥಿ ಹೋರಾಟಗಳ ರಾಷ್ಟ್ರೀಯ ಸಮಾವೇಶದ ಸಮಾರೋಪ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಪ್ರಸ್ತುತ ಸಮಾಜ ಕೋಮುವಾದಿಗಳ ಹಿಡಿತಕ್ಕೆ ಸಿಲುಕಿ ಅನಾರೋಗ್ಯಕ್ಕೆ ಸಿಲುಕಿದೆ. ಈ ಕೋಮುವಾದಿಗಳನ್ನು ಮಟ್ಟ ಹಾಕಬೇಕಾದರೆ ಎರಡನೇ ಸ್ವಾತಂತ್ರ ಹೋರಾಟಕ್ಕೆ ಸಜ್ಜುಗೊಳ್ಳುವುದೊಂದೆ ನಮ್ಮ ಮುಂದಿರುವ ಆಯ್ಕೆಯೆಂದು ತಿಳಿಸಿದರು.
ಇಂದಿನ ವಿದ್ಯಾರ್ಥಿಗಳು ಸಮ ಸಮಾಜವನ್ನು ನಿರ್ಮಿಸುವತ್ತ ಮುನ್ನುಗ್ಗುತ್ತಿರುವುದು ಸಂತಸ ತಂದಿದೆ. ಕೇವಲ ವಿಶ್ವವಿದ್ಯಾಲಯಗಳಿಂದ ಮನುಷ್ಯತ್ವದ ಪಾಠ ಕಲಿಯುತ್ತೇವೆ ಎನ್ನುವುದು ಕೇವಲ ಕನಸಿನ ಮಾತು. ವಿಶ್ವವಿದ್ಯಾಲಯಗಳು ಮಾಡದ ಕೆಲಸವನ್ನು ವಿದ್ಯಾರ್ಥಿ ಚಳವಳಿಗಳು ಮಾಡುತ್ತಿರುವುದು ಭವಿಷ್ಯದ ಅರಿವಿನ ಸಂಕೇತವಾಗಿ ಗೋಚರಿಸುತ್ತಿದೆ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.
ಕೋಮುವಾದವನ್ನು ವಿಜ್ಞಾನದ ಮೂಲಕ ಎದುರುಗೊಳ್ಳಬೇಕಾದ ಅನಿವಾರ್ಯತೆ ಉಂಟಾಗಿದೆ. ಇದರ ಜವಾಬ್ದಾರಿಯನ್ನು ವಿಜ್ಞಾನ, ತಂತ್ರಜ್ಞಾನ ಹಾಗೂ ಐಐಟಿ ವಿದ್ಯಾರ್ಥಿಗಳು ವಹಿಸಿಕೊಳ್ಳಬೇಕಾಗಿದೆ. ಆ ಮೂಲಕ ವಿದ್ಯಾರ್ಥಿ ಹಾಗೂ ಜನಪರ ಚಳವಳಿಗೆ ಹೊಸ ಅಲೆಯ ಜ್ಞಾನತುಂಬಲಿ ಎಂದು ಅವರು ಆಶಿಸಿದರು.
ಇಂದಿನ ವಿದ್ಯಾರ್ಥಿಗಳು ದೇಶದ ಬಹುತ್ವವನ್ನು ಆರ್ಥ ಮಾಡಿಕೊಳ್ಳಬೇಕಾಗಿದೆ. ಈ ನಿಟ್ಟಿನಲ್ಲಿ ಚಳವಳಿಗಳು ವಿದ್ಯಾರ್ಥಿಗಳಿಗೆ ರಾಜಕೀಯ, ಪರಂಪರೆ, ಸಾಹಿತ್ಯ ಹಾಗೂ ಸಂಗೀತ ಜ್ಞಾನವನ್ನು ತಿಳಿಸಿಕೊಡುವ ಅಗತ್ಯವಿದೆ. ಆ ನಿಟ್ಟಿನಲ್ಲಿ ಕಳೆದ ಎರಡು ದಿನಗಳ ಕಾಲ ನಡೆದ ವಿದ್ಯಾರ್ಥಿ ಹೋರಾಟಗಳ ರಾಷ್ಟ್ರೀಯ ಸಮಾವೇಶ ಉತ್ತಮ ಆಶಯವನ್ನು ಮೂಡಿಸಿದೆ ಎಂದು ಅವರು ತಿಳಿಸಿದರು.