×
Ad

ಗುಜರಾತ್‌ಗೆ ಕಾಂಗ್ರೆಸ್ ಶಾಸಕರ ಪ್ರಯಾಣ

Update: 2017-08-06 20:31 IST

ಬೆಂಗಳೂರು, ಆ. 6: ಗುಜರಾತ್ ರಾಜ್ಯಸಭಾ ಚುನಾವಣೆ ಹಿನ್ನೆಲೆಯಲ್ಲಿ ಆಪರೇಷನ್ ಕಮಲ ಭೀತಿಗೆ ಒಳಗಾಗಿ ಜು.28ಕ್ಕೆ ಕರ್ನಾಟಕ ರಾಜ್ಯಕ್ಕೆ ಆಗಮಿಸಿದ್ದ ಅಲ್ಲಿನ 44 ಮಂದಿ ಕಾಂಗ್ರೆಸ್ ಶಾಸಕರು, ರವಿವಾರ ತಡರಾತ್ರಿ ಗುಜರಾತ್‌ಗೆ ಪ್ರಯಾಣ ಬೆಳೆಸಲು ಸನ್ನದ್ದರಾಗಿದ್ದಾರೆ.

ಇಂಧನ ಸಚಿವ ಡಿ.ಕೆ.ಶಿವಕುಮಾರ್ ಅವರ ನೇತೃತ್ವದಲ್ಲಿ ಕಳೆದ 9 ದಿನಗಳಿಂದ ಬೆಂಗಳೂರು ಹೊರವಲಯದ ಬಿಡದಿ ಸಮೀಪದ ಈಗಲ್ ಟನ್ ರೆಸಾರ್ಟ್‌ನಲ್ಲಿ ವಾಸ್ತವ್ಯ ಹೂಡಿದ್ದ ಗುಜರಾತ್ ಶಾಸಕರು, ಮಧ್ಯರಾತ್ರಿ ಬೆಂಗಳೂರಿನ ಕಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮೂಲಕ ಅಹಮದಾಬಾದ್‌ಗೆ ಪ್ರಯಾಣ ಬೆಳೆಸಲಿದ್ದಾರೆ.

ಅಲ್ಲಿಂದ ಆ.8ರಂದು ನಡೆಯಲಿರುವ ರಾಜ್ಯಸಭಾ ಚುನಾವಣೆಯಲ್ಲಿ ತಮ್ಮ ಹಕ್ಕು ಚಲಾಯಿಸಲಿದ್ದಾರೆ ಎಂದು ಗೊತ್ತಾಗಿದೆ. ಇಂಧನ ಸಚಿವ ಡಿ.ಕೆ.ಶಿವಕುಮಾರ್ ಅವರ ನಿವಾಸದ ಮೇಲೆ ಐಟಿ ದಾಳಿ ಸೇರಿದಂತೆ ಹಲವು ಹೈಡ್ರಾಮಾಗಳಿಗೆ ಸಾಕ್ಷಿಯಾಗಿದ್ದ ಗುಜರಾತ್ ಕಾಂಗ್ರೆಸ್ ಶಾಸಕರು ತಮ್ಮ ರಾಜ್ಯಕ್ಕೆ ಮರಳಿದ್ದಾರೆ.

ಗುಜರಾತ್ ವಿಧಾನಸಭೆಯಿಂದ ರಾಜ್ಯಸಭೆಯ ಮೂರು ಸ್ಥಾನಗಳಿಗೆ ಆ.8ಕ್ಕೆ ಮತದಾನ ನಡೆಯಲಿದ್ದು, ಬಿಜೆಪಿಯ ರಾಷ್ಟ್ರೀಯಾಧ್ಯಕ್ಷ ಅಮಿತ್ ಷಾ, ಕೇಂದ್ರ ಸಚಿವೆ ಸ್ಮತಿ ಇರಾನಿ ಹಾಗೂ ಎಐಸಿಸಿ ಅಧ್ಯಕ್ಷ ಸೋನಿಯಾ ಗಾಂಧಿ ಅವರ ರಾಜಕೀಯ ಕಾರ್ಯದರ್ಶಿ ಅಹ್ಮದ್ ಪಟೇಲ್ ಸೇರಿ ನಾಲ್ಕು ಮಂದಿ ಸ್ಪರ್ಧಿಸಿದ್ದಾರೆ.

ಆದರೆ, ಅಹ್ಮದ್ ಪಟೇಲ್ ಸೋಲಿಸಲು ಬಿಜೆಪಿಯ ಅಮಿತ್ ಷಾ, ಅಲ್ಲಿನ ಕಾಂಗ್ರೆಸ್ ಶಾಸಕರಿಗೆ ತಲಾ 15 ಕೋಟಿ ರೂ.ಆಮಿಷವೊಡ್ಡಿ ಆಪರೇಷನ್ ಕಮಲಕ್ಕೆ ಮುಂದಾಗಿದ್ದರು ಎಂದು ಆರೋಪಿಸಲಾಗಿತ್ತು. ಆಹಿನ್ನೆಲೆಯಲ್ಲಿ ಕಾಂಗ್ರೆಸ್ ಶಾಸಕರನ್ನು ರಾಜ್ಯಕ್ಕೆ ಕರೆತರಲಾಗಿತ್ತು.

ಬಾಕ್ಸ್..

‘ಗುಜರಾತಿನ 44 ಮಂದಿ ಕಾಂಗ್ರೆಸ್ ಶಾಸಕರು ಮಧ್ಯರಾತ್ರಿ ಅಹಮದಾಬಾದ್‌ಗೆ ಪ್ರಯಾಣ ಬೆಳೆಸಲಿದ್ದು, ಎಲ್ಲರಿಗೂ ಈಗಾಗಲೇ ವಿಮಾನದ ಟಿಕೆಟ್ ಕಾಯ್ದಿರಿಸಿದ್ದು, ನಾಳೆ ಗುಜರಾತ್‌ಗೆ ತೆರಳಲಿದ್ದಾರೆ. ಅವರೊಂದಿಗೆ ತಾನೂ ತೆರಳುತ್ತೇನೆ’

-ಡಿ.ಕೆ.ಶಿವಕುಮಾರ್ ಇಂಧನ ಸಚಿವ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News