ರಾಜ್ಯ ನಗರ ಯೋಜನಾ ಪ್ರಧಾನ ಕಾರ್ಯದರ್ಶಿಗೆ ಮನವಿ ಸಲ್ಲಿಸಲು ಹೈಕೋರ್ಟ್ ನಿರ್ದೇಶನ
ಬೆಂಗಳೂರು, ಆ.7: ಶಿವಾನಂದ ಸರ್ಕಲ್ ಸಮೀಪ ಸ್ಟೀಲ್ ಬ್ರಿಡ್ಜ್ ನಿರ್ಮಾಣ ಸಂಬಂಧಿಸಿದಂತೆ ರಾಜ್ಯ ಸರಕಾರ ಹೊರಡಿಸಿದ ಅಧಿಸೂಚನೆ ರದ್ದುಗೊಳಿಸುವಂತೆ ಕೋರಿ ಪಿಐಎಲ್ ಅರ್ಜಿ ಸಲ್ಲಿಸಿದ ಹಿನ್ನೆಲೆಯಲ್ಲಿ ಹೈಕೋರ್ಟ್ ಬೆಂಗಳೂರು ಅಭಿವೃದ್ಧಿ ಹಾಗೂ ರಾಜ್ಯ ನಗರ ಯೋಜನಾ ಪ್ರಧಾನ ಕಾರ್ಯದರ್ಶಿಗೆ ಮನವಿ ಸಲ್ಲಿಸುವಂತೆ ಅರ್ಜಿದಾರರಿಗೆ ಹೈಕೋರ್ಟ್ ನಿರ್ದೇಶಿಸಿದೆ.
ಈ ಸಂಬಂಧ ಕೆ.ಎಸ್.ಪ್ರಸಾದ್ ಸೇರಿ ಮತ್ತಿತರರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎಸ್.ಕೆ.ಮುಖರ್ಜಿ ಹಾಗೂ ನ್ಯಾಯಮೂರ್ತಿ ಪಿ.ಎಸ್.ದಿನೇಶ್‌ಕುಮಾರ್ ಅವರಿದ್ದ ವಿಭಾಗೀಯ ನ್ಯಾಯಪೀಠ ಈ ಆದೇಶ ನೀಡಿತು. ಅರ್ಜಿದಾರರ ಮನವಿ ಸ್ವೀಕರಿಸುವ ಇಲಾಖೆಗಳು ವಿಚಾರಣೆ ನಡೆಸಿ ಎರಡು ತಿಂಗಳೊಳಗೆ ನಿರ್ಧಾರ ತೆಗೆದುಕೊಳ್ಳುವಂತೆ ಸರಕಾರಕ್ಕೆ ಸೂಚಿಸಿ ಅರ್ಜಿ ಇತ್ಯರ್ಥಪಡಿಸಿದೆ. ಅರ್ಜಿದಾರರ ಪರ ವಾದಿಸಿದ ವಕೀಲ ಅಶೋಕ್ ಬಿ. ಪಾಟೀಲ್ ಅವರು, ರಾಜ್ಯ ಸರಕಾರ ಮುನ್ಸಿಪಲ್ ಕಾಯ್ದೆಯನ್ನು ಉಲ್ಲಂಘಿಸಿ ಆದೇಶ ಹೊರಡಿಸಿದೆ. ಹಾಗೂ ಮೇಲ್ಸೇತುವೆ ನಿರ್ಮಾಣಕ್ಕೆ ನೂತನ ಭೂ ಒತ್ತುವರಿ ಕಾಯ್ದೆ ಅನುಸಾರ ಪರಿಹಾರ ನೀಡಿಲ್ಲ. ಅಲ್ಲದೆ, ರೈಲ್ವೆ ಅಂಡರ್ ಪಾಸ್‌ವರೆಗೂ ಸ್ಟೀಲ್ ಬ್ರಿಡ್ಜ್ ನಿರ್ಮಾಣ ಮಾಡಲು ನಿರ್ಧಾರ ತೆಗೆದುಕೊಂಡಿದೆ. ಇದರಿಂದ, ಮತ್ತೆ ಟ್ರಾಫಿಕ್ ಹೆಚ್ಚಾಗಲಿದ್ದು, ಜನಸಾಮಾನ್ಯರಿಗೆ ತೊಂದರೆಯಾಗಲಿದೆ. ಹೀಗಾಗಿ, ಸರಕಾರದ ಆದೇಶವನ್ನು ರದ್ದುಪಡಿಸಬೇಕು ಎಂದು ಪೀಠಕ್ಕೆ ತಿಳಿಸಿದರು.
ಪ್ರಕರಣದ ಹಿನ್ನಲೆ: ರೇಸ್ ಕೋರ್ಸ್ ರಸ್ತೆಯಿಂದ ಶಿವಾನಂದ ಸರ್ಕಲ್‌ವರೆಗೆ 19.85 ಕೋಟಿ ರೂಪಾಯಿ ವೆಚ್ಚದಲ್ಲಿ ಸ್ಟೀಲ್ ಫ್ಲೈ ಓವರ್ ನಿರ್ಮಾಣಕ್ಕೆ ಜೂನ್ 8ರಂದು ರಾಜ್ಯ ಸಂಪುಟ ಸಭೆ ಒಪ್ಪಿಗೆ ನೀಡಿತ್ತು. ಭೂ ಪರಭಾರೆ ಸೇರಿ ಒಟ್ಟಾರೆ ಸ್ಟೀಲ್ ಬ್ರಿಡ್ಜ್ ನಿರ್ಮಾಣ ವೆಚ್ಚ 40 ಕೋಟಿ ದಾಟಲಿದೆ. ಹರೇ ಕೃಷ್ಣ ರಸ್ತೆ ಮತ್ತು ಕುಮಾರ್ ಕೃಪಾ ರಸ್ತೆಯ ಮಧ್ಯೆ ಶಿವಾನಂದ ಸರ್ಕಲ್ ನಲ್ಲಿ ಈ ಫ್ಲೈಓವರ್ ನಿರ್ಮಾಣವಾಗಲಿದ್ದು, ವೆಂಕಟರಾವ್ ಇನ್ಫಾಪ್ರಾಜೆಕ್ಟ್ ಗೆ ಟೆಂಡರ್ ನೀಡಲಾಗಿದೆ. ಹೀಗಾಗಿ ಸರಕಾರದ ಅಧಿಸೂಚನೆ ರದ್ದು ಕೋರಿ ಅರ್ಜಿದಾರರು ಹೈಕೋರ್ಟ್ ಮೇಟ್ಟಿಲೇರಿದ್ದರು