ಆ.12ರಂದು ಅಮಿತ್ ಶಾ ಬೆಂಗಳೂರಿಗೆ
ಬೆಂಗಳೂರು, ಆ.7: ಮುಂದಿನ ವಿಧಾನ ಸಭಾ ಚುನಾವಣೆಗೆ ಬಿಜೆಪಿ ಪಕ್ಷವನ್ನು ಸನ್ನದ್ದುಗೊಳಿಸಲು ಅನುಸರಿಸಬೇಕಿರುವ ಕಾರ್ಯತಂತ್ರಗಳಿಗೆ ಅಂತಿಮ ಸ್ಪರ್ಶ ನೀಡಲು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಆ.12ರಂದು ನಗರಕ್ಕೆ ಆಗಮಿಸಲಿದ್ದಾರೆ.
ಸೋಮವಾರ ನಗರದ ರಾಜ್ಯ ಬಿಜೆಪಿ ಕೇಂದ್ರ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿಯ ವಕ್ತಾರ ಸುರೇಶ್ ಕುಮಾರ್ ಮಾತನಾಡಿ, ಆ.12ರಿಂದ ಮೂರು ದಿನಗಳ ಕಾಲ ನಗರದಲ್ಲೇ ಅಮಿತ್ ಶಾ ಮೊಕ್ಕಾಂ ಹೂಡಲಿದ್ದು, ಸುಮಾರು 25ಕ್ಕೂ ಹೆಚ್ಚು ಸಭೆ, ಸಂವಾದದಲ್ಲಿ ಪಾಲ್ಗೊಂಡು ಚುನಾವಣೆಗೆ ಕಾರ್ಯತಂತ್ರ ರೂಪಿಸುವ ಕುರಿತು ಮಾರ್ಗದರ್ಶನ ನೀಡಲಿದ್ದಾರೆ ಎಂದು ತಿಳಿಸಿದರು.
ಆ.12 ರಂದು ಬೆಳಿಗ್ಗೆ 10.45ಕ್ಕೆ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಶಾ ಆಗಮಿಸಲಿದ್ದಾರೆ. ನಂತರ ಪಕ್ಷದ ಕಾರ್ಯಾಲಯದಲ್ಲಿರುವ ಗ್ರಂಥಾಲಯವನ್ನು ಉದ್ಘಾಟಿಸಿದ ಬಳಿಕ ರಾಜ್ಯ ಬಿಜೆಪಿ ಪದಾಧಿಕಾರಿಗಳು, ವಿಭಾಗ ಸಂಘಟನಾ ಕಾರ್ಯದರ್ಶಿಗಳು, ಜಿಲ್ಲಾ ಪ್ರಭಾರಿಗಳು, ಜಿಲ್ಲಾಧ್ಯಕ್ಷರು, ಪ್ರಧಾನ ಕಾರ್ಯದರ್ಶಿಗಳು, ವಿವಿಧ ಮೋರ್ಚಾ ಅಧ್ಯಕ್ಷರು, ಪ್ರಧಾನ ಕಾರ್ಯದರ್ಶಿಗಳು, ವಿವಿಧ ಪ್ರಕೋಷ್ಠ ಸಂಚಾಲಕರೊಂದಿಗೆ ಸಂವಾದ ನಡೆಸಲಿದ್ದಾರೆ ಎಂದು ತಿಳಿಸಿದರು.
ಈ ಸಭೆಯ ನಂತರ ರಾಜ್ಯದ ಬಿಜೆಪಿಯ ವಿಧಾನಸಭಾ ಸದಸ್ಯರು ಹಾಗೂ ವಿಧಾನ ಪರಿಷತ್‌ನ ಸದಸ್ಯರೊಂದಿಗೆ ಸಭೆ ನಡೆಸಲಿದ್ದಾರೆ. ನಂತರ ವಿವಿಧ ಕ್ಷೇತ್ರಗಳ ಗಣ್ಯರು ಹಾಗೂ ವಿಚಾರವಂತರ ಜತೆ ಸಂವಾದ ನಡೆಸಲಿದ್ದಾರೆ ಎಂದು ಹೇಳಿದರು. ಆ.13 ರಂದು ಪಕ್ಷದ ರಾಜಕೀಯ ವ್ಯವಹಾರಗಳ ಸಮಿತಿ ಸಭೆಯಲ್ಲಿ ಪಾಲ್ಗೊಂಡ ನಂತರ ನಾಗಮಂಗಲದ ಆದಿಚುಂಚನಗಿರಿ ಮಠ ಹಾಗೂ ರವಿಶಂಕರ್ ಗುರೂಜಿ ಆಶ್ರಮಕ್ಕೆ ಭೇಟಿ ನೀಡಲಿದ್ದಾರೆ. ಆ.14 ರಂದು ಲೋಕಸಭಾ ಕ್ಷೇತ್ರಗಳಲ್ಲಿ ಸೋತ ಬಿಜೆಪಿ ಅಭ್ಯರ್ಥಿಗಳ, ಎಸ್ಸಿಎಸ್ಟಿ ಮುಖಂಡರ ಹಾಗೂ ರಾಜ್ಯದ ಕೋರ್ ಕಮಿಟಿಯ ಜೊತೆ ಪ್ರತ್ಯೇಕ ಸಭೆ ನಡೆಸಿ ಮಾತುಕತೆ ನಡೆಸಲಿದ್ದಾರೆ ಎಂದು ತಿಳಿಸಿದರು.
ಗೋಷ್ಠಿಯಲ್ಲಿ ವಕ್ತಾರರಾದ ಅನ್ವರ್ ಮಾನಪ್ಪಾಡಿ, ಮಾಳವಿಕಾ ಅವಿನಾಶ್, ತೇಜಶ್ವಿನಿಗೌಡ ಸೇರಿದಂತೆ ಇತರರು ಇದ್ದರು.