×
Ad

ಕೇಂದ್ರ ಸರಕಾರಕ್ಕೆ ಪತ್ರ: ಸಿದ್ದರಾಮಯ್ಯ

Update: 2017-08-07 22:06 IST

ಬೆಂಗಳೂರು, ಆ.7: ಪ್ರತಿ ವರ್ಷ ಎಮಿಗ್ರೇಷನ್ ಪ್ರಕ್ರಿಯೆಯೂ ಹಜ್ ಕ್ಯಾಂಪ್‌ನಲ್ಲಿ ನಡೆಯುತ್ತಿತ್ತು. ಆದರೆ, ಪ್ರಸ್ತುತ ಸಾಲಿನಲ್ಲಿ ಕೇಂದ್ರ ಸರಕಾರವು ಎಮಿಗ್ರೇಷನ್ ವ್ಯವಸ್ಥೆಯನ್ನು ವಿಮಾನ ನಿಲ್ದಾಣದ ಹಜ್ ಟರ್ಮಿನಲ್ನಲ್ಲಿಯೆ ಮಾಡುವಂತೆ ನಿಯಮ ಮಾಡಿದೆ. ಈ ಬಗ್ಗೆ ಕೇಂದ್ರಕ್ಕೆ ಪತ್ರ ಬರೆದು ಹಿಂದಿನ ಸಂಪ್ರದಾಯವನ್ನು ಮುಂದುವರೆಸುವಂತೆ ಮನವಿ ಮಾಡಲಾಗುವುದೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ಸೋಮವಾರ ನಗರದಲ್ಲಿ ಕರ್ನಾಟಕ ರಾಜ್ಯ ಹಜ್ ಸಮಿತಿ ಹಮ್ಮಿಕೊಂಡಿದ್ದ ಪ್ರಸಕ್ತ ಸಾಲಿನ ಪವಿತ್ರ ಹಜ್‌ಯಾತ್ರೆ ಕೈಗೊಳ್ಳುತ್ತಿರುವ ಯಾತ್ರಿಗಳ ಬೀಳ್ಕೊಡುಗೆ ಸಮಾರಂಭವನ್ನುದ್ದೇಶಿಸಿ ಮಾತನಾಡಿದ ಅವರು, 344 ಹಜ್ ಯಾತ್ರಿಗಳು ಇಂದು ಮೊದಲ ಹಂತದಲ್ಲಿ ಯಾತ್ರೆಗೆ ಹೋಗುತ್ತಿದ್ದಾರೆ. ಸುರಕ್ಷಿತವಾಗಿ ಯಾತ್ರೆ ಮುಗಿಸಿಕೊಂಡು ಬರಲಿ. ಯಾತ್ರೆ ವೇಳೆ ನಮಗೆ ಒಳ್ಳೆಯದಾಗಲಿ ಎಂದು ಪ್ರಾರ್ಥಿಸಿ ಎಂದು ಮನವಿ ಮಾಡಿದರು.

ರಾಜ್ಯದಿಂದ ಈ ಬಾರಿ 5990 ಯಾತ್ರಿಗಳು ಪ್ರಯಾಣ ಬೆಳೆಸಲು ಅವಕಾಶ ಕಲ್ಪಿಸಲಾಗಿತ್ತು. ವಿವಿಧ ಕಾರಣಗಳಿಂದಾಗಿ ಅಷ್ಟೂ ಮಂದಿ ಹೋಗಲು ಸಾಧ್ಯವಾಗಿಲ್ಲ. ಈ ನುಡುವೆ ನಿರೀಕ್ಷಣ ಪಟ್ಟಿಯಲ್ಲಿದ್ದ 650 ಮಂದಿಗೆ ಅವಕಾಶ ಕಲ್ಪಿಸಲಾಗಿದೆ. ಯಾತ್ರಿಗಳಿಗೆ ಯಾವುದೇ ರೀತಿಯ ತೊಂದರೆಗಳು ಎದುರಾಗದಂತೆ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ತಿಳಿಸಿದರು.

ದೇಶಕ್ಕೆ, ಸಮಾಜಕ್ಕೆ, ಮನುಷ್ಯರಿಗೆ ಒಳ್ಳೆಯದಾಗಲಿ. ಎಲ್ಲ ಧರ್ಮಗಳು ಮನುಷ್ಯರನ್ನು ಪ್ರೀತಿಸಿ ಎಂದು ಸಾರುತ್ತವೆ. ಕೆಲವರು ರಾಜಕೀಯಕ್ಕೋಸ್ಕರ ಧರ್ಮ ಬಳಸಿಕೊಳ್ಳುತ್ತಿದ್ದಾರೆ ಎಂದ ಅವರು, ಧರ್ಮ ಬಳಸಿಕೊಂಡು ರಾಜಕಾರಣ ಮಾಡುವವರು ಮತಾಂಧರು ಎಂದು ಕಿಡಿಕಾರಿದರು.

ನಮ್ಮ ಸರಕಾರ ಜಾತ್ಯತೀತತೆಗೆ ಬದ್ಧ. ನಾಡಿನ ಆರೂವರೆ ಕೋಟಿ ಜನರ ಜೊತೆಗೆ ದುರ್ಬಲ ಅಲ್ಪಸಂಖ್ಯಾತರಿಗೆ ವಿಶೇಷ ರಕ್ಷಣೆಯ ಜವಾಬ್ದಾರಿ ಸರಕಾರದ್ದು, ಸಮಾಜದ ಸ್ವಾಸ್ಥ ಕೆಡಿಸುವವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಸಿದ್ದರಾಮಯ್ಯ ಹೇಳಿದರು.

ಕಾರ್ಯಕ್ರಮದಲ್ಲಿ ಸಚಿವರಾದ ಯು.ಟಿ.ಖಾದರ್, ಕೆ.ಜೆ.ಜಾರ್ಜ್, ರಾಮಲಿಂಗಾರೆಡ್ಡಿ, ರೋಶನ್‌ಬೇಗ್ ಸೇರಿ ಪ್ರಮುಖರು ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News