ವಿದ್ಯಾರ್ಥಿಗಳಿಂದ ರವಿವಾರವನ್ನು ಕಸಿದುಕೊಳ್ಳಬೇಡಿ

Update: 2017-08-07 18:36 GMT

‘‘ಇನ್ನು ಮುಂದೆ ರವಿವಾರವೂ ಕಾಲೇಜಿಗೆ ತೆರಳಬೇಕಂತೆ’’ ಎಂದು ಪ್ರಥಮ ಪಿ.ಯು.ಸಿ.ಯಲ್ಲಿ ಓದುತ್ತಿರುವ ನನ್ನ ಮಗಳು ಬಂದು ಹೇಳಿದಾಗ ನಾನೇನೂ ಅಷ್ಟು ಗಂಭೀರವಾಗಿ ಯೋಚಿಸಿರಲಿಲ್ಲ. ಒಂದೆರಡು ರವಿವಾರ ಇರಬಹುದು, ಅದರಲ್ಲೂ ಸರಕಾರಿ ಕಾಲೇಜಿನಲ್ಲಿ ರವಿವಾರವೂ ಪಾಠ ಮಾಡುತ್ತಾರಲ್ಲ, ಅದಕ್ಕಾಗಿ ಖುಷಿ ಪಟ್ಟೆ. ನಾನು ಉದ್ದೇಶ ಪೂರ್ವಕವಾಗಿಯೇ ಸರಕಾರಿ ಕಾಲೇಜಿಗೆ ನನ್ನ ಮಗಳನ್ನು ಸೇರಿಸಿದವನು.

ಉತ್ತಮ ಉಪನ್ಯಾಸಕರಿದ್ದಾರೆ; ಎಲ್ಲಕ್ಕಿಂತಲೂ ಮುಖ್ಯವಾಗಿ ಖಾಸಗಿಯವರ ಮಧ್ಯರಾತ್ರಿಯವರೆಗಿನ ಓದು-ಬರಹಗಳೆಂಬ ಹಿಡಿತ, ಕೇವಲ ಕಲಿಕೆಗೆ ಮಾತ್ರ ಆದ್ಯತೆಯಿಂದ ಮಕ್ಕಳ ಸರ್ವಾಂಗೀಣ ಬೆಳವಣಿಗೆಗೆ ತೊಡಕಾಗುತ್ತದೆ. ಸರಕಾರಿ ಕಾಲೇಜಿನಲ್ಲಿ ಕನಿಷ್ಠದಿಂದ ಗರಿಷ್ಠ ಅಂಕ ಪಡೆದು ಬಂದ ಎಲ್ಲಾ ಪ್ರತಿಭೆಯ ವಿದ್ಯಾರ್ಥಿಗಳ ಜೊತೆ ಸೇರಿ ಮಗಳು ಬದುಕಿನ ವಿವಿಧ ಮಜಲುಗಳನ್ನು ಅರಿಯಲಿ ಎಂದು ಪ್ರಜ್ಞಾಪೂರ್ವಕವಾಗಿ ಒಂದು ಸರಕಾರಿ ಕಾಲೇಜಿಗೆ ಸೇರಿಸಿದೆ. ನನ್ನ ಸ್ನೇಹಿತರ, ಕುಟುಂಬಿಕರ ಬಹುತೇಕ ಮಕ್ಕಳು ಖಾಸಗಿ ಕಾಲೇಜಿನಲ್ಲಿ ಓದುತ್ತಿರುವಾಗ, ನಾನು ಅನೇಕ ಪ್ರಶ್ನೆಗಳನ್ನು ಎದುರಿಸಿ, ಸಮರ್ಥನೆಯೊಂದಿಗೆ ಸರಕಾರಿ ಕಾಲೇಜಿಗೆ ಸೇರಿಸಿದೆ.

ಉತ್ತಮ ಉಪನ್ಯಾಸಕರಿದ್ದಾರೆ ಎಂಬ ಕಾರಣಕ್ಕಾಗಿ ಪ್ರವೇಶಕ್ಕಾಗಿ ಹೋಗಿ ದಾಖಲಾತಿ ಮಾಡಲು ಹೋದ ನನಗೆ ಮೊದಲ ದಿನವೇ ನಿರಾಶೆಯುಂಟಾಯಿತು. ಏಕೆಂದರೆ ಅಲ್ಲಿನ ಕೆಲವು ಉತ್ತಮ ಉಪನ್ಯಾಸಕರು ಎರಡು ವರ್ಷ ನನ್ನ ಮಗಳಿಗೆ ಬೋಧಿಸಲು ಲಭ್ಯವಿರುವುದಿಲ್ಲ ಎಂದು ಪ್ರಾಂಶುಪಾಲರ ಮೂಲಕ ಮನದಟ್ಟಾಯಿತು. ಏಕೆಂದರೆ 2-3 ಉಪನ್ಯಾಸಕರು ಬಿ.ಎಡ್. ಅಧ್ಯಯನಕ್ಕಾಗಿ ತೆರಳಿದ್ದಾರಂತೆ, ಅವರ ಬದಲಿಗೆ ಅತಿಥಿ ಉಪನ್ಯಾಸಕರನ್ನು ನೇಮಿಸುತ್ತಾರಂತೆ. ಮೊದಲ ದಿನವೇ ಭ್ರಮನಿರಸನಗೊಂಡೆ. ಹಿಂದಿರುಗಿ ಬಂದರೆ ಮತ್ತೆ ಅದೇ ಖಾಸಗಿ ಕಾಲೇಜಿಗೆ ಸೇರಿಸಬೇಕು, ಇಷ್ಟಕ್ಕೂ ಕೆಲವರು ಖಾಸಗಿ ಕಾಲೇಜಿನ ವ್ಯಾಮೋಹಿಗಳ ವಾದಕ್ಕೆ ಪುಷ್ಟಿಯೂ ದೊರಕಿದಂತಾಗುತ್ತದೆ,

ಕೊನೆಗೂ ಧೈರ್ಯ ಮಾಡಿ ಪ್ರಾಂಶುಪಾಲರ ಭರವಸೆಯಂತೆ ಹಿಂದಿರುಗಿ ಪಡೆದಿದ್ದ ದಾಖಲಾತಿ ಅರ್ಜಿಯನ್ನು ಮತ್ತೆ ನೀಡಿ, ಶುಲ್ಕ ಪಾವತಿಸಿದೆ. ಇಂದು ನಮ್ಮ ಸರಕಾರಿ ಕಾಲೇಜಿಗೆ ಪರಿಣಿತ ಉಪನ್ಯಾಸಕರನ್ನು ನೇಮಿಸಿಕೊಳ್ಳಲಾಗುತ್ತದೆ. ಮತ್ತೆ ಅವರನ್ನು ಹೆಚ್ಚುವರಿ ಕಲಿಕೆಗಾಗಿ ವರ್ಷಪೂರ್ತಿ ಕಳುಹಿಸಿಕೊಡುತ್ತದೆ. ಅವರು ವರ್ಷ ಕಳೆದು ವಾಪಸ್ ಬರುತ್ತಾರೆ. ಆದರೆ ಮಕ್ಕಳು ಆ ತರಗತಿಗೆ ವಾಪಸ್ ಬರಲು ಸಾಧ್ಯವೇ?

ಪ್ರತಿದಿನ ಕಾಲೇಜಿನ ಚಟುವಟಿಕೆಗಳ ಬಗ್ಗೆ ಮಗಳಲ್ಲಿ ವಿಚಾರಿಸುವ ನನಗೆ ಇದೀಗ ಮತ್ತೊಂದು ಸುದ್ದಿಯು ಈ ಇಲಾಖೆಯ ಕಾರ್ಯ ವೈಖರಿ ಬಗ್ಗೆ ಭ್ರಮನಿರಸನ ಉಂಟುಮಾಡಿತು. ದಾಖಲಿಸಿದ್ದಕ್ಕಾಗಿ ಈ ವರ್ಷ ಒಂದು ಪೂರೈಸಿ ಮುಂದಿನ ವರ್ಷ ಬೇರೆ ಕಾಲೇಜಿಗೆ ಬದಲಾವಣೆ ಮಾಡಬೇಕೆಂದು ನಿರ್ಧರಿಸಿಯೇ ಈ ಪತ್ರ ಬರೆಯುತ್ತಿದ್ದೇನೆ.  ಈಗ ರವಿವಾರವೂ ಕಾಲೇಜಿಗೆ ತೆರಳಬೇಕಾದ ಅನಿವಾರ್ಯತೆ ಸರಕಾರಿ ಕಾಲೇಜಿನ ಮಕ್ಕಳಿಗೆ ಒದಗಿದೆ. ಮಗಳಿಂದ ಮಾಹಿತಿ ಪಡೆದ ನಾನು ಕಾಲೇಜಿನಲ್ಲಿ ವಿಚಾರಿಸಿದಾಗ ಒಂದೊಂದೇ ವಿಷಯಗಳು ಹೊರಬಂದವು.

ಜನವರಿ 2018ರವರೆಗೂ ಪ್ರತೀ ರವಿವಾರ ಸರಕಾರಿ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಕಾಲೇಜಿಗೆ ತೆರಳಬೇಕು. ನನ್ನ ಊರಿನ ಅನೇಕ ವಿದ್ಯಾರ್ಥಿಗಳು ರವಿವಾರವೂ ಅರ್ಧ ಚಹಾ ತಿಂಡಿ ಸೇವಿಸಿ, ಕೆಲವೊಮ್ಮೆ ಏನನ್ನೂ ಸೇವಿಸದೆ ಕಾಲೇಜಿಗೆ ದೌಡಾಯಿಸುವುದನ್ನು ನೋಡಿಯೇ ಸರಕಾರಿ ಕಾಲೇಜಿಗೆ ಸೇರಿಸಿದ ನನ್ನ ಮಗಳು ಕೂಡಾ ಇನ್ನು ಅದೇ ರೀತಿ ರವಿವಾರವೂ ತೆರಳಬೇಕು!

ನಮ್ಮ ಶಿಕ್ಷಣ ಇಲಾಖೆಯ ಶಿಕ್ಷಣ ತಜ್ಞರ ತೀರ್ಮಾನ ಹೇಗಿದೆ ನೋಡಿ.

1. ವಿದ್ಯಾರ್ಥಿಗಳು ಕಲಿಯುವ ಕಾಲೇಜಿನಲ್ಲಿ ರವಿವಾರದ ವಿಶೇಷ ತರಗತಿ ನಡೆಯದೆ ತಾಲೂಕಿನ ಒಂದು ಕಾಲೇಜಿನಲ್ಲಿ ಮಾತ್ರ ನಡೆಯಲಿದೆ. ಸುಮಾರು 40ರಿಂದ 50ಕಿ.ಮೀ. ದೂರವಿರುವ ಆ ಕಾಲೇಜಿಗೆ ಪ್ರತೀ ರವಿವಾರ ವಿದ್ಯಾರ್ಥಿಗಳು ತೆರಳಬೇಕು.

2.ಸುಮಾರು ಎರಡರಿಂದ ನಾಲ್ಕು ಗಂಟೆಯವರೆಗೆ ಪ್ರಯಾಣಿಸಿದರೆ ಅಲ್ಲಿ 90 ನಿಮಿಷಗಳ ತರಬೇತಿ ಸಿಗುವುದು.

3.ತಾಲೂಕಿನ ಸಾವಿರಾರು ವಿದ್ಯಾರ್ಥಿಗಳಿಗೆ ಒಂದು ಕಾಲೇಜಿನಲ್ಲಿ ಇಂಗ್ಲಿಷ್ ತರಬೇತಿ ನೀಡಲು ಸಾಧ್ಯವೇ? ಅಗತ್ಯ ತರಗತಿ ಕೊಠಡಿಗಳು ಮತ್ತು ಪೀಠೋಪಕರಣಗಳಿವೆಯೇ? ಇಷ್ಟೊಂದು ಸಂಖ್ಯೆಯ ವಿದ್ಯಾರ್ಥಿಗಳಿಗೆ ಪರಿಣಾಮಕಾರಿ ತರಗತಿ ನಡೆಯಬಹುದೇ?

4. ನನ್ನ ಮಗಳು ತಾಲೂಕಿನ ಕೇಂದ್ರಕ್ಕೆ ಹೋಗಿ ಬರಬೇಕಾದರೆ ಸುಮಾರು 80 ರೂಪಾಯಿ ಖರ್ಚು ಮಾಡಬೇಕು. ಜೊತೆಗೆ ರವಿವಾರವೂ ಬುತ್ತಿ ಸಿದ್ಧಪಡಿಸಿಬೇಕು. ಇನ್ನು ಕೆಲವು ಕಾಲೇಜಿನ ವಿದ್ಯಾರ್ಥಿಗಳು ನೂರು ರೂಪಾಯಿಗಳಿಗಿಂತಲೂ ಅಧಿಕ ಹಣ ಖರ್ಚು ಮಾಡಬೇಕು.

5. ಮಕ್ಕಳ ಸುರಕ್ಷತೆಯ ಬಗ್ಗೆ ಕಾಳಜಿ ವಹಿಸುವ ನನ್ನಂತಹ ಹೆತ್ತವರು ಮಕ್ಕಳು ಮನೆಗೆ ತಲುಪಿದ ಮೇಲೆಯೇ ಸಮಾಧಾನ ಪಡುವುದು. ಕಾಡು ದಾರಿಯಲ್ಲಿ ನಡೆದು ಹೋಗಿ ಬರುವ ಮಕ್ಕಳಿದ್ದಾರೆ. ಹೊಸ ಊರಿನ ಕಾಲೇಜಿಗೆ ತೆರಳುವಾಗ ಮಕ್ಕಳ ಸುರಕ್ಷತೆಗೆ ಯಾರು ಜವಾಬ್ದಾರಿ?.

6. ಎಷ್ಟೋ ಸರಕಾರಿ, ಅನುದಾನಿತ ಕಾಲೇಜಿನ ವಿದ್ಯಾರ್ಥಿಗಳು ರವಿವಾರದಂದು ಕ್ಯಾಂಟೀನ್, ಅಂಗಡಿಗಳಲ್ಲಿ ದುಡಿದು, ಇನ್ನೂರು -ಮುನ್ನೂರು ರೂಪಾಯಿ ಸಂಪಾದಿಸಿ, ಮರುದಿನ ಕಾಲೇಜಿಗೆ ತೆರಳುತ್ತಾರೆ. ಅವರಿಗೇನು ಪರಿಹಾರ?

7. ಸಣ್ಣ ಪುಟ್ಟ ಹೊಲಗದ್ದೆಗಳಲ್ಲಿ, ಮನೆಗೆಲಸಗಳಲ್ಲಿ ತೊಡಗಿಸಿಕೊಳ್ಳುವ ವಿದ್ಯಾರ್ಥಿಗಳಿದ್ದಾರೆ. ಅವರಿಗೆ ಒಂದು ಬಿಡುವು ಬೇಡವೇ?.

8. ತಮ್ಮ ಬಟ್ಟೆ ಬರೆಗಳನ್ನು ತಾವೇ ಶುಚಿಗೊಳಿಸಿ, ತಮ್ಮ ಮನೆಯನ್ನು ತಾವೇ ಸ್ವಚ್ಛವಾಗಿಡಿ ಎಂದು ಮೌಲ್ಯ ಬೋಧಿಸುವ ಶಿಕ್ಷಕರೇ ರವಿವಾರವೂ ಬನ್ನಿ ಎಂದು ಹೇಳಿದರೆ ಮಕ್ಕಳ ಬಟ್ಟೆಬರೆ ತೊಳೆಯವರು ಯಾರು.?

9. ನಾನು ನೋಡಿದ ಒಬ್ಬ ಪಿಯುಸಿ ಹುಡುಗ ಕಾಲೇಜು ಬಿಟ್ಟು ಬಂದು ಪ್ರತಿದಿನ ಸಂಜೆ ಝೆರಾಕ್ಸ್ ಅಂಗಡಿಯಲ್ಲಿ ಮೂರು ಗಂಟೆ ಕೆಲಸ ಮಾಡಿ ಚಿಲ್ಲರೆ ಹಣ ಸಂಪಾದಿಸುತ್ತಾನೆ. ರವಿವಾರದಂದು ತನ್ನ ಓದು ಬರಹಕ್ಕೆ ಗಮನ ಕೊಡುತ್ತಾನೆ. ಅಂಥಹವರ ಪಾಡೇನು?

10. ಕೇವಲ ಇಂಗ್ಲಿಷ್‌ಗೆ ಮಾತ್ರ ಆದ್ಯತೆ ನೀಡಿ ಪಾಸಾದರೆ ಸಾಕೇ? ಉಳಿದ ವಿಷಯಗಳನ್ನು ಓದುವುದು, ಬರೆಯುವುದು ಯಾವಾಗ?

Similar News