ಚುನಾವಣೆಗಳು ಹಿಂದೆಂದಿಗಿಂತಲೂ ಹೆಚ್ಚು ದ್ವೇಷಮಯವಾಗಲಿವೆಯೇ?

Update: 2017-08-08 18:42 GMT

ಕಾಂಗ್ರೆಸ್ ರಾಜಕಾರಣ ತನ್ನ ಗ್ರಾಸ್ ರೂಟ್ ಬಿಟ್ಟು ಎಷ್ಟು ದೂರಸರಿದಿದೆ ಮತ್ತು ಬಿಜೆಪಿ ರಾಜಕಾರಣ ತನ್ನ ಶಾಖಾರೂಟ್ ಬಿಟ್ಟು ಎಷ್ಟು ಅಡ್ಡಹಾದಿ ಹಿಡಿದಿದೆ ಎಂಬುದಕ್ಕೆ ಅಳತೆಯೇನಾದರೂ ಬೇಕಿದ್ದಲ್ಲಿ ಕಳೆದವಾರ ಕರ್ನಾಟಕದಲ್ಲಿ ನಡೆದ ಆದಾಯ ತೆರಿಗೆ ಇಲಾಖೆ ವಿರಚಿತ, ಮಾಧ್ಯಮ ಪ್ರಾಯೋಜಿತ ದಾಳಿ ನಾಟಕವನ್ನು ಕನ್ನಡಕ ಹಾಕದೇ ನೋಡಿಕೊಳ್ಳಿ.

8/11 ನೋಟುರದ್ದತಿಯ ಬಳಿಕ ಕಾಸಿದ್ದವರಿಗೆ ಹಾಗಾದದ್ದು ಒಳ್ಳೆಯದಾಯಿತು ಎಂದು ಖುಷಿಪಟ್ಟಿದ್ದ ಕೆಳಮಧ್ಯಮ ವರ್ಗದ ಮನಸ್ಸಿನಲ್ಲೇನಿದೆ ಎಂಬುದನ್ನು ಅರ್ಥಮಾಡಿಕೊಳ್ಳುವಲ್ಲಿ ಭಾರತದ ಈವತ್ತಿನ ರಾಜಕೀಯ ಸೋತಿದೆ. ದೇಶದ ಶೇ. 90 ಸಂಪತ್ತು ಬರಿಯ ಶೇ. 10 ಜನರಲ್ಲಿ ಶೇಖರಣೆಗೊಂಡು, ಬಡವರು-ಶ್ರೀಮಂತರ ನಡುವಿನ ಅಂತರ ದಿನೇದಿನೇ ಹೆಚ್ಚುತ್ತಾ ಸಾಗಿದೆ.

ಕಾಸೊಂದು ಬಳಿ ಇದ್ದರೆ ಏನನ್ನೂ ಜಯಿಸಿಕೊಳ್ಳಬಹುದು ಎಂಬ ಸಿರಿವಂತಿಕೆಯ ಹಮ್ಮು ಬಡಸಮುದಾಯಗಳಲ್ಲಿ ಹುಟ್ಟಿಸುತ್ತಿರುವ ಅಸಹನೆ ದಿನಕಳೆದಂತೆಲ್ಲ ಬೇರೆಬೇರೆ ರೂಪಗಳಲ್ಲಿ ಹೊರಹೊಮ್ಮಲಾರಂಭಿಸಿದೆ. ಇಂತಹ ಅಸಹನೆಯನ್ನು ಕಾಂಗ್ರೆಸ್‌ಗಿಂತ ಹೆಚ್ಚು ಸುಲಭವಾಗಿ ಗುರುತಿಸಿಕೊಂಡಿರುವ ಬಿಜೆಪಿ ಪರಿವಾರ ಅದನ್ನು ತನ್ನ ಅಧಿಕಾರದ ಆಟಗಳಿಗೆ ದಾಳವಾಗಿ ಬಳಸಿಕೊಳ್ಳಲಾರಂಭಿಸಿದೆ.

ಕಳೆದ 4 ವರ್ಷಗಳ ಬಿಜೆಪಿ ಆಡಳಿತದಲ್ಲಿ ಇದರ ಝಲಕ್‌ಗಳನ್ನು ಢಾಳಾಗಿ ಕಾಣಬಹುದು. ಹಾಗಿದ್ದರೆ ಕಾಂಗ್ರೆಸ್ ಕೂಡ ‘ಗರೀಬಿ ಹಠಾವೋ’ ಎಂದೇ ಆರಂಭಿಸಿತ್ತಲ್ಲ ಎಂಬ ಪ್ರಶ್ನೆ ಏಳುತ್ತದೆ. ಹೌದು, ಕಾಂಗ್ರೆಸ್ ಕೂಡ ಗ್ರಾಸ್ ರೂಟ್‌ನಿಂದ ದೂರಸರಿಯುತ್ತಾ ಮಾಡಿದ್ದು ಅದನ್ನೇ. ಆದರೂ ಅದಕ್ಕೊಂದು ಚೂರು ದಯೆ-ದಾಕ್ಷಿಣ್ಯ ಇತ್ತು. ಮನಮೋಹನ್ ಸಿಂಗ್ ಅವರಂತಹ ಮಾರುಕಟ್ಟೆಪರ ಪ್ರಧಾನಿ ಕೂಡ ಸಬ್ಸಿಡಿ ನಿವಾರಣೆ, ರೂಪಾಯಿ ಪರಿವರ್ತನೆ, ಖಾಸಗೀಕರಣ, ತೆರೆದ ಮಾರುಕಟ್ಟೆ, ತೆರಿಗೆ ಬಲೆ ಹಿಗ್ಗಿಸುವಿಕೆಯಂತಹ ವಿದೇಶಿ ಒತ್ತಡಗಳು ಮೂಗುಮಟ್ಟ ಇದ್ದರೂ ಸಣ್ಣ ಹಿಂಜರಿಕೆ ಹೊಂದಿದ್ದರು. ಆದರೆ ಆಗ ಪ್ರತಿಪಕ್ಷವಾಗಿ ತಾನು ಏನನ್ನೆಲ್ಲ ವಿರೋಧಿಸಿತ್ತೋ ಅದೇ ಅಂಶಗಳನ್ನು ಬಿಜೆಪಿ ಪರಿವಾರ ಈವತ್ತು ದಾಕ್ಷಿಣ್ಯದ ಲವಲೇಷವೂ ಇಲ್ಲದೆ ಬಣ್ಣದಂಗಿ ತೊಡಿಸಿ ರಂಗುರಂಗಾಗಿ ಮಾರುತ್ತಿದೆ!

ಸ್ವತಃ ತನ್ನದೇ ಪಕ್ಷದೊಳಗೆ, ತನ್ನ ಪರವಾಗಿ ನಿಂತಿರುವ ಕಾರ್ಪೊರೇಟ್ ಜಗತ್ತಿನೊಳಗೆ ಇರುವ ಅಕ್ರಮ ಸಂಪತ್ತನ್ನು, ಬೇನಾಮಿ ಆಸ್ತಿಗಳನ್ನು ಮೊದಲು ಸರಕಾರಕ್ಕೆ ಮಟ್ಟುಗೋಲು ಹಾಕಿಕೊಂಡ ಬಳಿಕ ಉಳಿದ ರಾಜಕೀಯ ಪಕ್ಷಗಳತ್ತ ತಲೆ ಹಾಕುತ್ತಿದ್ದರೆ, ಬಿಜೆಪಿ ಪರಿವಾರ ಪ್ರಶ್ನಾತೀತವಾಗಿರುತ್ತಿತ್ತು. ಆದರೆ ಮನೆ ಗೆದ್ದ ಬಳಿಕ ಮಾರುಗೆಲ್ಲುವ ಬದಲು, ಚುನಾವಣೆಗೆ ಸಿದ್ಧಗೊಳ್ಳುತ್ತಿರುವ ಕರ್ನಾಟಕದಲ್ಲಿ ಆಯಕಟ್ಟಿನ ಜಾಗದಲ್ಲಿರುವ ನಾಯಕರೊಬ್ಬರ ಮೇಲೆ ಐಟಿ ದಾಳಿ ನಡೆಸುವ ಮೂಲಕ ಬಹಳ ಕೆಟ್ಟ ಸಂದೇಶವೊಂದು ರವಾನೆ ಆಗಿದೆ. ಇದು ನಾಳೆ ಪರಸ್ಪರರನ್ನು ಬಲಿಹಾಕಿಕೊಳ್ಳುವ ರಾಜಕೀಯ ವೈಷಮ್ಯವಾಗಿ ಬೆಳೆದುನಿಂತರೂ ಅಚ್ಚರಿ ಇಲ್ಲ. ಸಂಸತ್ತಿನಲ್ಲೇ ಪ್ರತಿಪಕ್ಷ ನಾಯಕ ಖರ್ಗೆಯವರು ಈ ವಿಚಾರವನ್ನು ಪ್ರಸ್ತಾಪ ಮಾಡಿದ್ದಾರೆ. ಇಂತಹದೊಂದು ಆಟ ಶುರುವಾಯಿತೆಂದರೆ, ಪ್ರಜಾತಂತ್ರಕ್ಕೆ ಅಪಾಯ ಎದುರಾಗಿದೆ ಎಂದೇ ಅರ್ಥ.

ಇಡಿಯ ಗದ್ದಲದಲ್ಲಿ ಮಾಧ್ಯಮಗಳ ಪಾತ್ರ ವಾಕರಿಕೆ ತರಿಸುವಂತಹದು. ಮಧ್ಯಮ ವರ್ಗವನ್ನು ಪ್ರತಿನಿಧಿಸುವ ಮಾಧ್ಯಮದ ಪ್ರತಿನಿಧಿಗಳಿಗೆ ಸಿರಿವಂತರ ಮೇಲೆ ಪ್ರಭುತ್ವದ ಎಲ್ಲ ದಾಳಿಗಳೂ ಖುಷಿ ತರುವುದು ಸಹಜ. ಆದರೆ, ಸಂಯಮ ಮರೆತು, ಹದ್ದು ಮೀರಿ ನಡೆಸಿದ ಪ್ರಭುತ್ವ ಪರ ಕ್ರುಸೇಡ್ ನಾಳೆ ತಮ್ಮ ಕಾಲಿಗೆ ತಾವೇ ಹೊಡೆದುಕೊಂಡಿರುವ ಕೊಡಲಿ ಹೊಡೆತ ಎಂದು ಮಾಧ್ಯಮಗಳಿಗೆ ಅರಿವಾಗುವ ಹೊತ್ತಿಗೆ ಕಾಲ ಮಿಂಚಿರುತ್ತದೆ.

ಪ್ರಭುತ್ವಗಳು ಈಗೀಗ ಬಡತನ ನಿರ್ಮೂಲನದ ಹೆಸರಲ್ಲಿ ಬಡವರ ನಿರ್ಮೂಲನ ಆರಂಭಿಸಿವೆ ಎಂಬುದನ್ನೂ ಅರಿಯದ ಮಾಧ್ಯಮಗಳ ಯುಗದಲ್ಲಿ ನಾವಿದ್ದೇವೆ. ಅಂಬಾನಿಯಂತಹ ಕಾರ್ಪೊರೇಟ್ ದೊರೆಗಳ ಸಂಬಳಕ್ಕಿರುವ ಮಾಧ್ಯಮಗಳು ಇವತ್ತು ತಾವು ಕೆಲಸ ಮಾಡುತ್ತಿರುವುದು ತಾವು ಪ್ರತಿನಿಧಿಸುತ್ತಿರುವ ಜನಸಮುದಾಯದ ವಿರುದ್ಧವೇ ಎಂಬುದನ್ನು ಅರಿತುಕೊಳ್ಳುವ ತನಕ ಪರಿಸ್ಥಿತಿ ಸುಧಾರಿಸುವುದಿಲ್ಲ.

ಕಳೆದ ವಾರದ ಡಿ.ಕೆ. ಶಿವಕುಮಾರ್ ಪ್ರಕರಣದಲ್ಲಿ ರಾಜಕೀಯ ಲಾಭಕ್ಕಾಗಿ ಮೇಲಾಟ ಬಿಟ್ಟರೆ ಬೇರಿನ್ನೇನೂ ಆಗುವುದಿಲ್ಲ. ಹಾಗೆನ್ನುವುದಕ್ಕೆ ಬೇಕಾದಷ್ಟು ಪೂರ್ವೋದಾಹರಣೆಗಳೂ ಕರ್ನಾಟಕದಲ್ಲೇ ಲಭ್ಯವಿವೆ. ಆದರೆ, ಈ ಬಾರಿಯ ವಿಧಾನಸಭೆ ಚುನಾವಣೆಗಳು ಮತ್ತು ಆ ಬಳಿಕ ಲೋಕಸಭಾ ಚುನಾವಣೆಗಳು ಹಿಂದೆಂದಿಗಿಂತಲೂ ಹೆಚ್ಚು ದ್ವೇಷದ ವಾತಾವರಣದಲ್ಲಿ ನಡೆಯಲಿವೆ ಎಂಬುದಕ್ಕೆ ಸಾಕಷ್ಟು ಸೂಚನೆಗಳು ಈಗಾಗಲೇ ಕಾಣಿಸಲಾರಂಭಿಸಿವೆ.

ಇಂತಹದೊಂದು ವಿಷಮಯ ವಾತಾವರಣ ಬೇಡ ಎಂದಿದ್ದಲ್ಲಿ ಕಾಂಗ್ರೆಸ್ ಮತ್ತು ಉಳಿದ ಪ್ರತಿಪಕ್ಷಗಳು ತಳಮಟ್ಟದ ಜನರ ನಾಡಿಯನ್ನು ಅರಿಯುವ ಕೆಲಸವನ್ನು ಮಾಡಬೇಕಿದೆ. ಮಾಡಲು ಉದ್ಯೋಗ, ಉಣ್ಣಲು ಆಹಾರ, ತಲೆಯ ಮೇಲಿನ ಸೂರು, ಉಡುವ ಬಟ್ಟೆ ಸಹಿತ ನೂರಾರು ಸಮಸ್ಯೆಗಳೇ ಇರುವ ಜನರ ತಲೆಯಲ್ಲಿ ಧರ್ಮ, ಜಾತಿ, ಭಾಷೆ, ಯುದ್ಧದಂತಹ ಹಾದಿತಪ್ಪಿಸುವ ಅಜೆಂಡಾಗಳನ್ನು ತುರುಕಿಸುವ ಪ್ರಯತ್ನದ ಎದುರು ವಾಸ್ತವಗಳನ್ನು ಮುಂದಿಟ್ಟು, ಅರಿವು ಮೂಡಿಸುವ ಕೆಲಸ ಆರಂಭಿಸಬೇಕಾಗಿದೆ.

ಇದು ರಾತ್ರಿ ಹಗಲಾಗುವುದರೊಳಗೆ ನಡೆಯುವ ಮ್ಯಾಜಿಕ್ ಅಲ್ಲ; ಆದರೆ ಎಲ್ಲಿಂದಾದರೂ ಆರಂಭ ಆಗದಿದ್ದರೆ ಅನಗತ್ಯ ಅಜೆಂಡಾಗಳಿಗೆ ಉತ್ತರಿಸುವುದರಲ್ಲೇ ಇವರ ಆಯಸ್ಸು ಮುಗಿದು ಹೋಗಲಿದೆ.

-ಕೃಪೆ: ಅವಧಿ

Writer - ರಾಜಾರಾಂ ತಲ್ಲೂರು

contributor

Editor - ರಾಜಾರಾಂ ತಲ್ಲೂರು

contributor

Similar News