ಈತ ಹಿರೊಶಿಮಾ,ನಾಗಸಾಕಿ ಅಣುಬಾಂಬ್ ದಾಳಿಗಳಲ್ಲಿ ಬದುಕುಳಿದಿದ್ದ!

Update: 2017-08-09 11:37 GMT

1945,ಆ.6ರಂದು ಬೆಳಿಗ್ಗೆ ತ್ಸುಟೊಮು ಯಮಾಗುಚಿ ಹಿರೊಶಿಮಾದಿಂದ ತನ್ನ ಮನೆಗೆ ವಾಪಸಾಗಲು ರೈಲ್ವೆ ನಿಲ್ದಾಣದತ್ತ ಹೆಜ್ಜೆಗಳನ್ನು ಹಾಕುತ್ತಿದ್ದ. ಇದೇ ವೇಳೆ ಅಮೆರಿಕ ವಿಶ್ವದ ಮೊದಲ ಅಣುಬಾಂಬ್ ‘ಲಿಟ್ಲ್ ಬಾಯ್ ’ಅನ್ನು ಹಿರೋಶಿಮಾದ ಮೇಲೆ ಸ್ಫೋಟಿಸಿತ್ತು. ಯಮಾಗುಚಿ ಗ್ರೌಂಡ್ ಝೀರೊ ಎಂಂದು ಕರೆಯಲಾಗುವ ಈ ಸ್ಥಳದಿಂದ ಕೇವಲ ಮೂರು ಕಿ.ಮೀ.ವ್ಯಾಪ್ತಿಯಲ್ಲಿದ್ದ. ಬಾಂಬ್ ದಾಳಿಯಿಂದ ತಕ್ಷಣವೇ 80,000 ಜನರು ಸಾವನ್ನಪ್ಪಿದರೆ, ಈತ ಮಾತ್ರ ಸುಟ್ಟಗಾಯಗಳೊಂಂದಿಗೆ ಬದುಕುಳಿದಿದ್ದ. ಅದೇ ಸ್ಥಿತಿಯಲ್ಲಿ ಆತ ತನ್ನ ಮನೆಯಿರುವ ನಾಗಸಾಕಿಗೆ ಮರಳಿದ್ದ. ಮೂರು ದಿನಗಳ ಬಳಿಕ, ಅಂದರೆ 1945,ಆ.9ರಂದು ಅಮರಿಕ ಇನ್ನಷ್ಟು ಶಕ್ತಿಯುತವಾದ ಇನ್ನೊಂದು ಅಣುಬಾಂಬ್‌ನ್ನು ನಾಗಸಾಕಿ ಮೇಲೆ ಹಾಕಿತ್ತು. ಈಗಲೂ ಯಮಾಗುಚಿ ಗ್ರೌಂಡ್ ಝೀರೋದಿಂದ ಮೂರು ಕಿ.ಮೀ.ವ್ಯಾಪ್ತಿಯಲ್ಲೇ ಇದ್ದ. ಆತ,ಆತನ ಪತ್ನಿ ಮತ್ತು ಪುತ್ರ ಪವಾಡಸದೃಶವಾಗಿ ಬದುಕುಳಿದಿದ್ದರು.

ಮಿತ್ಸುಬಿಷಿ ಹೆವಿ ಇಂಡಸ್ಟ್ರೀಸ್‌ನ ಉದ್ಯೋಗಿಯಾಗಿದ್ದ ಯಮಾಗುಚಿಯನ್ನು ಹಿರೊಶಿಮಾದಲ್ಲಿನ ಕಂಪನಿಯ ಯಾರ್ಡನಲ್ಲಿ ಮೂರು ತಿಂಗಳುಗಳಿಂದ ನಿಯೋಜಿಸ ಲಾಗಿತ್ತು. 1945,ಆ.6ರಂದು ಆತ ಮತ್ತು ಸಹೋದ್ಯೋಗಿಗಳಾದ ಅಕಿರಾ ಇವಾಂಗಾ ಮತ್ತು ಕನಿಯೋಷಿ ಸಾಟೊ ನಾಗಸಾಕಿಗೆ ಮರಳಲು ಸಿದ್ಧರಾಗಿದ್ದರು. ಬೆಳಿಗ್ಗೆ ಬೇಗನೇ ಎದ್ದು ತಮ್ಮ ಗಂಟುಮೂಟೆಗಳನ್ನು ಕಟ್ಟಿಕೊಂಡು ರೈಲ್ವೆ ನಿಲ್ದಾಣಕ್ಕೆ ಸಾಗುತ್ತಿದ್ದರು. ತಾನು ತನ್ನ ವೈಯಕ್ತಿಕ ಮೊಹರನ್ನು ಕಚೇರಿಯಲ್ಲಿಯೇ ಬಿಟ್ಟಿದ್ದೇನೆ ಎನ್ನುವುದು ದಾರಿಮಧ್ಯೆ ಯಮಾಗುಚಿಗೆ ನೆನಪಾಗಿತ್ತು. ಹೀಗಾಗಿ ಸಹೋದ್ಯೋಗಿಗಳನ್ನು ಬೀಳ್ಕೊಟ್ಟು ಮೊಹರನ್ನು ತರಲೆಂದು ಧಾವಿಸುತ್ತಿದ್ದ.

ಇದೇ ವೇಳೆ ಅಮೆರಿಕ ‘ಎನೋಲಾ ಗೇ’ ಬಿ-29 ಬಾಂಬರ್ ವಿಮಾನ ಆಕಾಶದಲ್ಲಿ ಸುತ್ತು ಹೊಡೆಯುತ್ತಿತ್ತು. ಆದರೆ ಅದರಲ್ಲೇನೂ ವಿಶೇಷ ಯಮಾಗುಚಿಗೆ ಕಂಡು ಬಂದಿರಲಿಲ್ಲ. ಆಗ ಹಿರೊಶಿಮಾ ಯುದ್ಧಕಾಲದ ಪ್ರಮುಖ ಕೈಗಾರಿಕಾ ನೆಲೆಯಾಗಿತ್ತು ಮತ್ತು ಆಗಸದಲ್ಲಿ ವಿಮಾನಗಳು ಸುತ್ತು ಹೊಡೆಯುವ ಶಬ್ದ ಅಲ್ಲಿ ಸಾಮಾನ್ಯವಾಗಿತ್ತು.

ಬೆಳಿಗ್ಗೆ 8:15ಕ್ಕೆ 580 ಮೀ.ಎತ್ತರದಿಂದ ಮಧ್ಯ ಹಿರೊಶಿಮಾದ ಮೇಲೆ ‘ಲಿಟ್ಲ್ ಬಾಯ್’ನ್ನು ಸ್ಫೋಟಿಸಲಾಗಿತ್ತು. ಕಣ್ಣು ಕೋರೈಸುವ ಬೆಳಕು ಮತ್ತು ಕಿವಿಗಡಚಿಕ್ಕುವ ಭೀಕರ ಶಬ್ದದೊಂದಿಗೆ ಸಂಭವಿಸಿದ್ದ ಸ್ಫೋಟದ ತೀವ್ರತೆಗೆ ನೆಲ ಅದುರಿದ್ದು, ಯಮಾಗುಚಿ ಆಘಾತಗೊಂಡು ಕೆಳಕ್ಕೆ ಬಿದ್ದಿದ್ದ.

ಸುಟ್ಟಗಾಯಗಳಾಗಿದ್ದ ಮತ್ತು ಸಂಭವಿಸಿದ್ದು ಏನು ಎನ್ನುವುದನ್ನು ಅರ್ಥೈಸಿಕೊಳ್ಳಲಾಗದ ಸ್ಥಿತಿಯಲ್ಲಿದ್ದ ಆತ ಅಂದು ರಾತ್ರಿ ವಾಯುದಾಳಿ ಶೆಲ್ಟರ್‌ನಲ್ಲಿ ಕಳೆದಿದ್ದ. ಮರುದಿನ ಬೆಳಿಗ್ಗೆ ರೈಲ್ವೆ ನಿಲ್ದಾಣವನ್ನು ತಲುಪಿದಾಗ 13 ಕಿಲೋಟನ್ ತೂಕದ ಬಾಂಬ್ ಮಾಡಿದ್ದ ವಿನಾಶವನ್ನು ಕಣ್ಣಾರೆ ಕಂಡಿದ್ದ.

180 ಮೈಲು ದೂರದ ನಾಗಸಾಕಿಯನ್ನು ಹೇಗೋ ತಲುಪಿದ್ದ ಯಮಾಗುಚಿ ಮರುದಿನ, ಅಂದರೆ 1945,ಆ.9ರಂದು ಬೆಳಿಗ್ಗೆ ಸುಟ್ಟಗಾಯಗಳಿಗೆ ಬ್ಯಾಂಡೇಜ್ ಕಟ್ಟಿಕೊಂಡು ಕೆಲಸಕ್ಕೆ ಹಾಜರಾಗಿದ್ದ. ಹಿರೊಶಿಮಾದಂತಹ ದೊಡ್ಡ ನಗರವನ್ನು ಬಾಂಬ್ ನಾಮಾವಶೇಷಗೊಳಿಸಿದೆ ಎಂದು ಹೇಳಿದಾಗ, ಆತ ಕಟ್ಟುಕಥೆಯನ್ನು ಹೇಳುತ್ತಿದ್ದಾನೆ ಎಂದು ಮೇಲಿನ ಅಧಿಕಾರಿ ತಮಾಷೆ ಮಾಡುತ್ತಿದ್ದಾಗಲೇ ನಾಗಸಾಕಿಯ ಮೇಲೂ ಬಾಂಬ್ ದಾಳಿ ನಡೆದಿತ್ತು. ಅಮೆರಿಕ ಈ ಬಾರಿ 25 ಕಿಲೋಟನ್ ತೂಕದ ಪ್ಲುಟೋನಿಯಂ ಬಾಂಬ್ ಹಾಕಿತ್ತು.

ಬಾಂಬ್ ದಾಳಿಯಿಂದ ನಾಶವಾಗಿದ್ದ ತನ್ನ ಮನೆಯಿದ್ದ ಜಾಗದ ಬಳಿಯ ಶೆಲ್ಟರ್‌ನಲ್ಲಿ ಯಮಾಗುಚಿ ಪತ್ನಿ ಮತ್ತು ಪುಟ್ಟ ಮಗನೊಂದಿಗೆ ಒಂದು ವಾರ ಆಶ್ರಯ ಪಡೆದಿದ್ದ. ಈಗ 93 ವರ್ಷವಾಗಿರುವ ಯಮಾಗುಚಿಯ ಮಗ ತನ್ನ 59ನೆಯ ವಯಸ್ಸಿನಲ್ಲಿ ಕ್ಯಾನ್ಸರ್‌ಗೆ ಬಲಿಯಾಗಿದ್ದಾನೆ.

ಯಮಾಗುಚಿ ಎರಡು ಬಾರಿ ಗ್ರೌಂಡ್ ಝೀರೋದ ಸಮೀಪವೇ ಇದ್ದ. ಆದರೂ ಸಾವಿನ ದವಡೆಯಿಂದ ಪಾರಾಗಿದ್ದ. ಆದರೆ ನಾಗಸಾಕಿಯ ಇತರ 70,000 ಜನರು ಅವನಷ್ಟು ಅದೃಷ್ಟವಂತರಾಗಿರಲಿಲ್ಲ. ಅತ್ತ ಹಿರೊಶಿಮಾದಲ್ಲಿ ಒಟ್ಟೂ 1.40 ಲಕ್ಷ ಜನರು ಬಾಂಬ್‌ಗೆ ಬಲಿಯಾಗಿದ್ದರು. ಈ ಪೈಕಿ 80,000 ಜನರು ಅಂದೇ ಸಾವನ್ನಪ್ಪಿದ್ದರೆ ಉಳಿದವರು ವಿಕಿರಣದಿಂದಾಗಿ ಹಲವಾರು ತಿಂಗಳ ಕಾಲ ನರಳಿ ಕೊನೆಯುಸಿರೆಳೆದಿದ್ದರು.

ಆ ಭೀಕರ ಘಟನೆಯ 60 ವರ್ಷಗಳ ಬಳಿಕ ನಿನ್ನೆ ಯಮಾಗುಚಿ ಎರಡೂ ಬಾಂಬ್ ದಾಳಿಗಳಿಂದ ಬದುಕುಳಿದ ಮೊದಲ ಮತ್ತು ಏಕೈಕ ವ್ಯಕ್ತಿ ಎಂಬ ಮಾನ್ಯತೆಯನ್ನು ಜಪಾನಿ ಅಧಿಕಾರಿಗಳು ನೀಡಿದ್ದಾರೆ.

ಬಾಂಬ್ ದಾಳಿಯಿಂದ ಬದುಕುಳಿದಿದ್ದವರು ವಿಕಿರಣದ ಪರಿಣಾಮದಿಂದಾಗಿ ಕ್ಯಾನ್ಸರ್ ಮತ್ತು ಇತರ ಕಾಯಿಲೆಗಳಿಗೆ ಬಲಿಯಾಗಿದ್ದರೆ ಯಮಾಗುಚಿಯ ಆರೋಗ್ಯ ಉತ್ತಮವಾಗಿಯೇ ಇದೆ. ಒಂದು ಕಿವಿ ಸರಿಯಾಗಿ ಕೇಳಿಸುತ್ತಿಲ್ಲ,ಅಷ್ಟೇ. ಇತ್ತೀಚಿಗೆ ತನ್ನ ಕಾಲುಗಳು ದುರ್ಬಲಗೊಳ್ಳುತ್ತಿವೆ ಎಂದಾತ ಹೇಳಿಕೊಂಡಿದ್ದಾನೆ.

 ಬಾಂಬ್‌ದಾಳಿಯಲ್ಲಿ ಬದುಕುಳಿದಿರುವ ವ್ಯಕ್ತಿಯಾಗಿ ನೋಂದಣಿ ಹೊಂದಿರುವ ಆತನಿಗೆ 1957ರಿಂದ ಮಾಸಾಶನ, ಉಚಿತ ವೈದ್ಯಕೀಯ ತಪಾಸಣೆಯ ಸೌಲಭ್ಯ ದೊರೆಯುತ್ತಿದೆ. ಅಲ್ಲದೆ ಆತನ ಅಂತ್ಯಸಂಸ್ಕಾರದ ವೆಚ್ಚವನ್ನೂ ಸರಕಾರವು ಭರಿಸಲಿದೆ. 2.60 ಲಕ್ಷಕ್ಕೂ ಅಧಿಕ ಜನರು ಈ ಸೌಲಭ್ಯಗಳನ್ನು ಪಡೆಯುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News