ನಾಲ್ಕು ಕಡೆ ಸರ ಕಳವು
ಬೆಂಗಳೂರು, ಆ.9: ನಗರದ ನಾಲ್ಕು ಕಡೆಗಳಲ್ಲಿ ಚಿನ್ನಾಭರಣ ಕಳವು ಪ್ರಕರಣಗಳು ಬೆಳಕಿಗೆ ಬಂದಿವೆ.
ಬುಧವಾರ ಮುಂಜಾನೆ ಮನೆ ಬಳಿಯ ಯೋಗ ಶಾಲೆಗೆ ಹೋಗುತ್ತಿದ್ದ ರಾಘವೇಂದ್ರ ಮಠ ಸಮೀಪದ ನಿವಾಸಿ ಶಕುಂತಲಾ ರಾಮಣ್ಣ ಎಂಬುವರನ್ನು ಬೈಕ್‌ನಲ್ಲಿ ಹಿಂಬಾಲಿಸಿದ ಇಬ್ಬರು, ಆಕೆಯ ಕತ್ತಿನಲ್ಲಿದ್ದ 70 ಗ್ರಾಂ ಚಿನ್ನದ ಸರ ಎಳೆದುಕೊಂಡು ಪರಾರಿಯಾಗಿದ್ದಾರೆ.
ಈ ಸಂಬಂಧ ಆರ್‌ಆರ್‌ನಗರ ಪೊಲೀಸ್ ಠಾಣೆಯಲ್ಲಿ ಮೊಕದ್ದಮೆ ದಾಖಲಾಗಿದೆ.
ಗಾರ್ಮೆಂಟ್ಸ್ ಉದ್ಯೋಗಿಯೊಗಿರುವ ಮಾನಸ ನಗರ ನಿವಾಸಿ ಗೌರಮ್ಮ (45) ಎಂಬುವರು ಕೆಲಸ ಮುಗಿಸಿಕೊಂಡು ಮನೆಗೆ ಹೋಗುತ್ತಿದ್ದಾಗ ಬೈಕ್‌ನಲ್ಲಿ ಹಿಂಬಾಲಿಸಿದ ದುಷ್ಕರ್ಮಿಗಳು, ಆಕೆಯ ಕತ್ತಿನಲ್ಲಿದ್ದ 20 ಗ್ರಾಂ ಚಿನ್ನದ ಸರ ಕಸಿದು ಪರಾರಿಯಾಗಿದ್ದಾರೆ. ಅದೇ ರೀತಿ, ರಾಘವೇಂದ್ರ ಲೇಔಟ್ ನಿವಾಸಿ ಜಯಲಕ್ಷ್ಮಮ್ಮ ಎಂಬುವರನ್ನು ಅಡ್ಡಗಟ್ಟಿ 55 ಗ್ರಾಂ ಚಿನ್ನದ ಸರ ಕಳವು ಮಾಡಿದ್ದು, ಈ ಸಂಬಂದ ಆರ್‌ಎಂಸಿ ಯಾರ್ಡ್ ಪೊಲೀಸ್ ಠಾಣೆಯಲ್ಲಿ ಮೊಕದ್ದಮೆ ದಾಖಲಾಗಿದೆ.
ಆರ್‌ಟಿ ನಗರ: ಶಾಲೆಯಿಂದ ಮಗುವನ್ನು ಕರೆದುಕೊಂಡು ಮನೆ ಬಳಿ ಬರುತ್ತಿದ್ದ ಮಹಿಳೆಯನ್ನು ಅಡ್ಡಗಟ್ಟಿ ಚಿನ್ನದ ಸರ ಕಳವು ಮಾಡಿರುವ ಘಟನೆ ಇಲ್ಲಿನ ಆರ್‌ಟಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಗಿಡ್ಡಪ್ಪಬ್ಲಾಕ್ ನಿವಾಸಿ ಸವಿತಾ ಎಂಬುವರು ಮಂಗಳವಾರ ಮಧ್ಯಾಹ್ನ 3 ಗಂಟೆಯಲ್ಲಿ ಶಾಲೆಯಿಂದ ಮಗುವನ್ನು ಕರೆದುಕೊಂಡು ಮನೆಗೆ ಬರುತ್ತಿದ್ದ ವೇಳೆ ಇಬ್ಬರು ಅಡ್ಡಗಟ್ಟಿ 45 ಗ್ರಾಂ ಚಿನ್ನದ ಸರ ಕಳವು ಮಾಡಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.