ಮುತವಲ್ಲಿ ಸಮಾವೇಶ ನಡೆಸಲು ಮುಖ್ಯಮಂತ್ರಿ ಸಲಹೆ
ಬೆಂಗಳೂರು, ಆ.9: ರಾಜ್ಯದಲ್ಲಿನ ವಕ್ಫ್ ಆಸ್ತಿಗಳ ಸದ್ಬಳಕೆ, ಅಲ್ಪಸಂಖ್ಯಾತ ಸಮುದಾಯದಲ್ಲಿರುವ ಸಮಸ್ಯೆಗಳು ಹಾಗೂ ಮತದಾನದ ಮಹತ್ವದ ಬಗ್ಗೆ ವಕ್ಫ್ ಸಂಸ್ಥೆಗಳ ಮುತವಲ್ಲಿಗಳಲ್ಲಿ ಜಾಗೃತಿ ಮೂಡಿಸಲು ರಾಜ್ಯಮಟ್ಟದ ಮುತವಲ್ಲಿ ಸಮಾವೇಶ ನಡೆಸುವಂತೆ ಉಲೇಮಾಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸಲಹೆ ನೀಡಿದ್ದಾರೆ.
ಬುಧವಾರ ಗೃಹ ಕಚೇರಿ ಕೃಷ್ಣಾದಲ್ಲಿ ನಗರಾಭಿವೃದ್ಧಿ ಸಚಿವ ರೋಷನ್‌ಬೇಗ್ ನೇತೃತ್ವದಲ್ಲಿ ತಮ್ಮನ್ನು ಭೇಟಿ ಮಾಡಿದ ಮುಸ್ಲಿಮ್ ಸಮುದಾಯದ ಧಾರ್ಮಿಕ ಮುಖಂಡರ ನಿಯೋಗದೊಂದಿಗೆ ಚರ್ಚೆ ನಡೆಸಿದ ವೇಳೆ ಅವರು ಈ ಸಲಹೆಯನ್ನು ನೀಡಿದರು.
ಅಲ್ಪಸಂಖ್ಯಾತ ಸಮುದಾಯದಲ್ಲಿ ವಕ್ಫ್ ಆಸ್ತಿಗಳ ಸದ್ಭಳಕೆ, ಮತದಾನ, ಸರಕಾರದ ಯೋಜನೆಗಳು ಹಾಗೂ ಕಾರ್ಯಕ್ರಮಗಳ ಜಾಗೃತಿ ಮೂಡಿಸುವ ಅಗತ್ಯವಿದೆ. ಈ ಕೆಲಸವನ್ನು ಮುತವಲ್ಲಿಗಳು ತಮ್ಮ ವ್ಯಾಪ್ತಿಯಲ್ಲಿರುವ ವಕ್ಫ್ ಸಂಸ್ಥೆಗಳ ಮೂಲಕ ಮಾಡಬೇಕು. ಸಚಿವ ರೋಷನ್‌ಬೇಗ್ ನೇತೃತ್ವದಲ್ಲೆ ಸಮಾವೇಶವನ್ನು ನಡೆಸಿ ಎಂದು ಅವರು ಹೇಳಿದರು.
ಹಜ್‌ಯಾತ್ರೆಗೆ ಸಂಬಂಧಿಸಿದಂತೆ ಕಸ್ಟಮ್ಸ್ ಹಾಗು ಇಮಿಗ್ರೇಷನ್ ವಿಷಯದಲ್ಲಿ ಆಗುತ್ತಿರುವ ತೊಂದರೆಯನ್ನು ನಿವಾರಿಸುವಂತೆ ಕೋರಿ ಕೇಂದ್ರ ಗೃಹ ಸಚಿವರು, ವಿದೇಶಾಂಗ ವ್ಯವಹಾರಗಳ ಸಚಿವರು, ಹಣಕಾಸು ಸಚಿವರಿಗೆ ಪತ್ರ ಬರೆಯುವುದಾಗಿ ಸಿದ್ದರಾಮಯ್ಯ ಭರವಸೆ ನೀಡಿದರು.
ರಾಜ್ಯ ವಕ್ಫ್ ಮಂಡಳಿಯ ಅಧ್ಯಕ್ಷರು ಹಾಗೂ ಸದಸ್ಯರ ಅಧಿಕಾರವಧಿ ಮುಗಿದು ಒಂದೂವರೆ ವರ್ಷವಾಗಿದೆ. ಸರಕಾರ ಆಡಳಿತಾಧಿಕಾರಿ ಮೂಲಕ ವಕ್ಫ್ ಮಂಡಳಿಯ ಕಾರ್ಯಚಟುವಟಿಕೆಗಳನ್ನು ನಿರ್ವಹಿಸುತ್ತಿದೆ. ಆದಷ್ಟು ಬೇಗ ವಕ್ಫ್ ಮಂಡಳಿಗೆ ಚುನಾವಣೆ ನಡೆಸಲು ಕ್ರಮ ಕೈಗೊಳ್ಳುವಂತೆ ಉಲೇಮಾಗಳು ಮುಖ್ಯಮಂತ್ರಿಗೆ ಮನವಿ ಮಾಡಿದರು.
ಅಲ್ಪಸಂಖ್ಯಾತರ ಕಲ್ಯಾಣಕ್ಕಾಗಿ ಇರುವಂತಹ ವಕ್ಫ್ ಆಸ್ತಿಗಳ ಸಂರಕ್ಷಣೆ ಹಾಗೂ ಅಭಿವೃದ್ಧಿಗೆ ಸರಕಾರ ಬದ್ಧವಾಗಿದ್ದು, ವಕ್ಫ್ ಮಂಡಳಿಯೂ ಸಮರ್ಪಕವಾಗಿ ಕಾರ್ಯನಿರ್ವಹಿಸುವಂತೆ ಸರಕಾರ ಅಗತ್ಯ ಕ್ರಮ ಕೈಗೊಳ್ಳಲಿದೆ ಎಂದು ಸಿದ್ದರಾಮಯ್ಯ ಭರವಸೆ ನೀಡಿದರು.
ರಾಜ್ಯ ಸರಕಾರವು ಅಲ್ಪಸಂಖ್ಯಾತರ ಕಲ್ಯಾಣಕ್ಕೆ ಸಾವಿರಾರು ಕೋಟಿ ರೂ.ಗಳನ್ನು ಒದಗಿಸಿರುವುದಾಗಿ ಹೇಳುತ್ತಿದೆ. ಆದರೆ, ವಾಸ್ತವಾಗಿ ನಿರೀಕ್ಷಿತ ಮಟ್ಟದಲ್ಲಿ ಕೆಲಸಗಳು ಆಗುತ್ತಿಲ್ಲ. ಎಲ್ಲ ಭಾಗ್ಯಗಳನ್ನು ರಾಜ್ಯದ ಜನತೆಗೆ ನೀಡಿದ್ದೀರಾ, ನಮಗೆ ಈ ಸಮಸ್ಯೆಗಳಿಂದ ‘ಪರಿಹಾರಭಾಗ್ಯ’ವನ್ನು ನೀಡಿ ಎಂದು ಉಲೇಮಾ ಒಬ್ಬರು ಬೇಸರ ವ್ಯಕ್ತಪಡಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಪ್ರಗತಿ ಪರಿಶೀಲನೆ ಸಂದರ್ಭದಲ್ಲಿ ಈ ಎಲ್ಲ ಅಂಶಗಳ ಬಗ್ಗೆ ಗಮನ ಹರಿಸಲಾಗುವುದು ಎಂದರು. ಗಣೇಶ ಚತುರ್ಥಿ ಹಾಗೂ ಬಕ್ರೀದ್ ಹಬ್ಬ ಜೊತೆಯಲ್ಲಿ ಬರುತ್ತಿದೆ. ಸಮಾಜದಲ್ಲಿ ಅಶಾಂತಿ ಸೃಷ್ಠಿಸಲು ಕೋಮುವಾದಿ ಸಂಘಟನೆಗಳು ಪ್ರಯತ್ನಿಸಬಹುದು. ಕುರ್ಬಾನಿಗಾಗಿ ಜಾನುವಾರುಗಳನ್ನು ಖರೀದಿಸಿ ತರುವಾಗ ಗುಂಪು ಹಲ್ಲೆಗಳು ನಡೆಯುವ ಸಾಧ್ಯತೆಗಳಿರುತ್ತವೆ. ಆದುದರಿಂದ, ಕಾನೂನು ಸುವ್ಯವಸ್ಥೆ ಕಾಪಾಡಲು ಸರಕಾರ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು ಎಂದು ನಿಯೋಗವು ಮನವಿ ಮಾಡಿತು.
ಇದಕ್ಕೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ರಾಜ್ಯದಲ್ಲಿ ಕಾನೂನು ಕೈಗೆತ್ತಿಕೊಳ್ಳಲು ಯಾರಿಗೂ ಅವಕಾಶ ನೀಡುವುದಿಲ್ಲ. ಕೇಂದ್ರ ಸರಕಾರ ಇತ್ತೀಚೆಗೆ ಗೋಹತ್ಯೆ ನಿಷೇಧ ಹಾಗೂ ಜಾನುವಾರು ಮಾರಾಟಕ್ಕೆ ಸಂಬಂಧಿಸಿ ಹೊರಡಿಸಿದ್ದ ಸುತ್ತೋಲೆಯನ್ನು ಅನುಷ್ಠಾನಗೊಳಿಸಲು ಸಾಧ್ಯವಿಲ್ಲ. .ಈಗಾಗಲೆ ವಿರೋಧ ವ್ಯಕ್ತಪಡಿಸಲಾಗಿದೆ ಎಂದರು.
ಹಬ್ಬ ಹರಿದಿನಗಳು ಸಮಾಜದಲ್ಲಿ ಶಾಂತಿ, ಸಹೋದರತೆಯನ್ನು ಹರಡಬೇಕು, ಕೋಮುದ್ವೇಷವನ್ನಲ್ಲ. ಎಲ್ಲ ಜನ ಸಮುದಾಯಗಳು ಯಾವುದೆ ಸಮಸ್ಯೆಗಳಿಲ್ಲದೆ, ಕಾನೂನಿನ ಚೌಕಟ್ಟಿನಲ್ಲಿ ತಮ್ಮ ತಮ್ಮ ಸಂಪ್ರದಾಯಗಳನ್ನು ಆಚರಿಸಲು ಸರಕಾರ ಸಹಕಾರ ನೀಡಲಿದೆ ಎಂದು ಮುಖ್ಯಮಂತ್ರಿ ನಿಯೋಗಕ್ಕೆ ಭರವಸೆ ನೀಡಿದರು.