ಅಡ್ಡಿ ಆತಂಕಗಳಿಲ್ಲದ ಗಣೇಶ ಉತ್ಸವಕ್ಕೆ ವಿಎಚ್‌ಪಿ ಒತ್ತಾಯ
ಬೆಂಗಳೂರು, ಆ.9: ಗಣೇಶ ಉತ್ಸವದ ಆಚರಣೆಗೆ ಪೊಲೀಸರ ಅನುಮತಿ ಪಡೆಯುವುದನ್ನು ಏಕಗವಾಕ್ಷಿ ಮೂಲಕ ಒದಗಿಸಲು ಕ್ರಮ ಕೈಗೊಳ್ಳಬೇಕೆಂದು ವಿಶ್ವ ಹಿಂದೂ ಪರಿಷತ್ ಒತ್ತಾಯಿಸಿದೆ.
ನಗರದ ಪ್ರೆಸ್‌ಕ್ಲಬ್‌ನಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ವಿಚ್‌ಪಿ ದಕ್ಷಿಣ ರಾಜ್ಯಗಳ ಸಂಘಟನಾ ಕಾರ್ಯದರ್ಶಿ ಗೋಪಾಲ್, ಬಹುಸಂಖ್ಯಾತ ನಾಗರಿಕರ ಧಾರ್ಮಿಕ ಹಕ್ಕು ಅನುಭವಿಸಲು ಅವಕಾಶ ಹಾಗೂ ಅದಕ್ಕೆ ಅಗತ್ಯವಿರುವ ಎಲ್ಲ ಸೌಲಭ್ಯಗಳನ್ನು ಒದಗಿಸುವುದು ರಾಜ್ಯ ಸರಕಾರದ ಕರ್ತವ್ಯವಾಗಿದ್ದು, ನಮ್ಮ ಧಾರ್ಮಿಕ ಕಾರ್ಯಕ್ರಮಗಳನ್ನು ಹತ್ತಿಕ್ಕುವ ಕೆಲಸಕ್ಕೆ ಸರಕಾರ ಮುಂದಾಗಬಾರದೆಂದು ಹೇಳಿದರು.
ಹಿಂದೂಗಳು ತಮ್ಮ ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಸಲು ಅಡ್ಡಿ ಆತಂಕಗಳನ್ನು ಎದುರಿಸುವ ಪರಿಸ್ಥಿತಿ ಈ ದಿನಗಳಲ್ಲಿ ಉಂಟಾಗಿದೆ. ಅಲ್ಲದೆ, ಹಬ್ಬದ ಆಚರಣೆಯಲ್ಲಿ ಕಾಣುವ ಸಂಭ್ರಮ ಉತ್ಸಾಹಗಳ ಉತ್ಸವಗಳು ಹಿಂದೂ ಪರಂಪರೆಯ ಭಾಗವೇ ಆಗಿದ್ದು, ಲೋಕಮಾನ್ಯ ಬಾಲಗಂಗಾಧರ ತಿಲಕರು ಬ್ರಿಟಿಷರ ವಿರುದ್ಧ ಹೋರಾಟಕ್ಕೆ ಜನ ಜಾಗೃತಿಯ ಅಸ್ತ್ರವಾಗಿ ಗಣೇಶ ಹಬ್ಬವನ್ನು ಸಾರ್ವಜನಿಕಗೊಳಿಸಿದರು ಎಂದರು.
ರಾಜ್ಯ ಸರಕಾರವು ಹಿಂದೂಗಳ ಸಾರ್ವಜನಿಕ ಉತ್ಸವಗಳಿಗೆ ಅಗತ್ಯ ಸೌಲಭ್ಯಗಳನ್ನು ಒದಗಿಸಿ ಅವರ ಸಂಭ್ರಮದ ಆಚರಣೆಗೆ ಸಹಕರಿಸುವ ಬದಲು ಅನೇಕ ವಿಘ್ನಗಳನ್ನೊಡ್ಡುತ್ತಿದೆ ಎಂದ ಅವರು, ಗಣೇಶ ಮೂರ್ತಿ ಮೆರವಣಿಗೆಯ ಮಾರ್ಗವನ್ನು ಬದಲಿಸಲು ಒತ್ತಡ ಹೇರಿ, ಅದನ್ನು ಒಪ್ಪದಿದ್ದಾಗ ವಿವಿಧ ರೀತಿಯ ಕ್ರಿಮಿನಲ್ ಮೊಕದ್ದಮೆಗಳನ್ನು ದಾಖಲಿಸುವ ಬೆದರಿಕೆ ಹಾಕಲಾಗುತ್ತಿದೆ ಎಂದು ಆರೋಪಿಸಿದರು.
ಗಣೇಶ ಉತ್ಸವ ಮಂಡಳಿಗಳಿಗೆ ಅಗತ್ಯವಿರುವ ಮೂಲಭೂತ ಸೌಲಭ್ಯಗಳಾದ ವಿದ್ಯುತ್ ಸರಬರಾಜು, ಗಣಪತಿ ಕೂರಿಸುವ ಸ್ಥಳ, ಪರಿಸರದ ಅಲಂಕಾರಕ್ಕೆ ನಗರಸಭೆಗಳ ಅನುಮತಿ, ಧ್ವನಿವರ್ಧಕ ಬಳಕೆಗೆ ಪೊಲೀಸ್ ಅನುಮತಿ ಇವುಗಳನ್ನು ಏಕಗವಾಕ್ಷಿ ಮೂಲಕ ಸರಳೀಕೃತಗೊಳಿಸಿ ನೀಡಬೇಕೆಂದ ಅವರು, ಗಣಪತಿ ಆಕಾರ, ಬಣ್ಣ ಇತ್ಯಾದಿಗಳ ಮೇಲೆ ರಾಜ್ಯ ಪರಿಸರ ನಿಯಂತ್ರಣ ಮಂಡಳಿ ಹೇರಿರುವ ಆದೇಶ ಹಿಂಪಡೆಯಬೇಕೆಂದು ಒತ್ತಾಯಿಸಿದರು.
‘ಗಣಪತಿ ಪ್ರತಿಷ್ಠಾಪನೆಗೆ 10 ಲಕ್ಷ ಡೆಪಾಸಿಟ್ ಇಟ್ಟು ಅನುಮತಿ ಪಡೆಯಲು ಕಡ್ಡಾಯ ಮಾಡಿರುವುದು ಸರಿಯಲ್ಲ. ಇದನ್ನು ಹಿಂದಕ್ಕೆ ಪಡೆಯಬೇಕು. ಇಲ್ಲದಿದ್ದಲ್ಲಿ ತೀವ್ರ ಹೋರಾಟ ನಡೆಸಲಾಗುವುದು’
-ಗೋಪಾಲ್, ವಿಎಚ್‌ಪಿ ಮುಖಂಡ