ಭಾರೀ ಮಳೆಗೆ ಕೊಚ್ಚಿ ಹೋಯ್ತಂತೆ ಮಂಗಳೂರು-ಮಡಿಕೇರಿ ಹೆದ್ದಾರಿ!

Update: 2017-08-09 14:59 GMT

ಬೆಂಗಳೂರು, ಆ.9: ಭಾರೀ ಮಳೆ ಸುರಿದ ಪರಿಣಾಮ ಮಂಗಳೂರು-ಮಡಿಕೇರಿ ಹೆದ್ದಾರಿಯ ರಸ್ತೆ ಕುಸಿದು, ಕೊಚ್ಚಿ ಹೋಗಿದೆ ಎನ್ನುವ ತಲೆಬರಹದೊಂದಿಗೆ ಫೋಟೊಗಳೆರಡು ಕೆಲ ದಿನಗಳ ಹಿಂದೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಭಾರೀ ಮಳೆಯಿಂದಾಗಿ ರಸ್ತೆ ಡಾಮರು ಕಿತ್ತು ಬಂದು ರಸ್ತೆಯೇ ಕೊಚ್ಚಿ ಹೋಗಿರುವ ಈ ಚಿತ್ರಗಳು ಸಾವಿರಾರು ಬಾರಿ ಶೇರ್ ಕೂಡ ಆಗಿತ್ತು.

ಈ ವಿಚಾರ ಸತ್ಯವೋ ಅಥವಾ ಸುಳ್ಳೋ ಎಂಬುದನ್ನು ತಿಳಿಯದ ಮಂದಿ ಸಾಮಾಜಿಕ ಜಾಲತಾಣಗಳಲ್ಲಿ ಫೋಟೊಗಳನ್ನು ಹರಿಯಬಿಟ್ಟಿದ್ದರು. ಆದರೆ ಸತ್ಯಾಂಶವೆಂದರೆ ಇಂತಹ ಘಟನೆ ಈ ವರ್ಷ ಮೈಸೂರಿನಲ್ಲಿ ನಡೆದಿಲ್ಲ. ವಾಸ್ತವವಾಗಿ ಈ ಘಟನೆ ನಡೆದಿರುವುದು 2013ರಲ್ಲಿ ಮಡಿಕೇರಿ-ಸಂಪಾಜೆ ಮಧ್ಯದ ಕೊಯಿನಾಡಿನಲ್ಲಿ. ಆದರೆ ಈ ಬಗೆಗಿನ ಅರಿವೂ ಇಲ್ಲದ ಮಂದಿ ಸುಳ್ಳನ್ನೇ ಸತ್ಯವೆಂದು ನಂಬಿ ಈ ಫೋಟೊಗಳನ್ನು ಇನ್ನೂ ಶೇರ್ ಮಾಡುತ್ತಲೇ ಇದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ಇಂತಹ ಫೋಟೊಗಳು, ತಿರುಚಿದ ವಿಡಿಯೋಗಳು ವೈರಲ್ ಆಗುತ್ತಲೇ ಇವೆ. ಕೆಲ ಫೋಟೊ ಹಾಗೂ ವಿಡಿಯೋಗಳ ಹಿಂದೆ ನಿರ್ದಿಷ್ಟ ಯೋಜನೆಗಳು ಹಾಗು ಸಂಘಟನೆಗಳು ಇರುವುದು ಈಗಾಗಲೇ ಬಯಲಾಗಿದ್ದರೆ, ಕೆಲವರು ಮೋಜಿಗಾಗಿ ಇಂತಹ ಕೃತ್ಯಗಳನ್ನು ಎಸಗುತ್ತಾರೆ. ಒಟ್ಟಿನಲ್ಲಿ ಇಂತಹ ಫೋಟೊ ಅಥವಾ ವಿಡಿಯೋಗಳನ್ನು ಶೇರ್ ಮಾಡುವ ಮೊದಲು ಸಾಮಾಜಿಕ ಜಾಲತಾಣಗಳ ಬಳಕೆದಾರರು ಈ ಬಗೆಗಿನ ಸತ್ಯಾಸತ್ಯತೆ ಅರಿಯುವುದು ಒಳಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News