ದಂಡುಪಾಳ್ಯದ ಐವರು ಸದಸ್ಯರಿಗೆ ವಿಧಿಸಿದ್ದ ಗಲ್ಲು ಶಿಕ್ಷೆ ರದ್ದು

Update: 2017-08-09 15:27 GMT

ಬೆಂಗಳೂರು, ಆ.9: ಚಾಮರಾಜಪೇಟೆ ನಿವಾಸಿ ಜಯಲಕ್ಷಮ್ಮ ಅವರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ದಂಡುಪಾಳ್ಯ ತಂಡದ ಐವರು ಸದಸ್ಯರಿಗೆ ಅಧೀನ ನ್ಯಾಯಾಲಯವು ವಿಧಿಸಿದ್ದ ಗಲ್ಲು ಶಿಕ್ಷೆಯನ್ನು ಹೈಕೋರ್ಟ್ ರದ್ದುಪಡಿಸಿದೆ.

ಪ್ರಕರಣದಲ್ಲಿ ದಂಡುಪಾಳ್ಯ ತಂಡದ ಸದಸ್ಯರಾದ ದೊಡ್ಡ ಹನುಮ, ವೆಂಕಟೇಶ, ನಲ್ಲತಿಮ್ಮ, ಮುನಿಕೃಷ್ಣ ಮತ್ತು ಲಕ್ಷ್ಮಮ್ಮ ಅವರಿಗೆ ಅಧೀನ ನ್ಯಾಯಾಲಯ ವಿಧಿಸಿದ್ದ ಮರಣ ದಂಡನೆಯನ್ನು ಖಾಯಂಗೊಳಿಸುವಂತೆ ಕೋರಿ ರಿಜಿಸ್ಟ್ರಾರ್ ಜನರಲ್ ಸಲ್ಲಿಸಿದ್ದ ಕ್ರಿಮಿನಲ್ ರೆಫರ್ಡ್ ಕೇಸ್ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ರವಿ ಮಳೀಮಠ ಮತ್ತು ನ್ಯಾಯಮೂರ್ತಿ ಜಾನ್ ಮೈಕಲ್ ಕುನ್ಹಾ ಅವರಿದ್ದ ವಿಭಾಗೀಯ ಪೀಠವು, ಈ ಐವರಿಗೆ ವಿಧಿಸಲಾಗಿದ್ದ ಗಲ್ಲು ಶಿಕ್ಷೆ ರದ್ದುಪಡಿಸಿತ್ತು.
    
ಈ ಪ್ರಕರಣದಲ್ಲಿ ಜಯಲಕ್ಷ್ಮಮ್ಮ ಅವರನ್ನು ಕೊಲೆ ಮಾಡಿರುವುದಕ್ಕೆ ಈ ಐವರ ವಿರುದ್ಧ ಯಾವುದೇ ಬಲವಾದ ಸಾಕ್ಷವಿಲ್ಲ ಎಂದು ಅಭಿಪ್ರಾಯಪಟ್ಟ ನ್ಯಾಯಪೀಠ ಈ ಆದೇಶ ಮಾಡಿದೆ.

ಚಾಮರಾಜಪೇಟೆ ನಿವಾಸಿ ಜಯಲಕ್ಷಮ್ಮ ಅವರನ್ನು 2000ರಲ್ಲಿ ಅವರ ಮನೆಯಲ್ಲಿ ಕೊಲೆ ಮಾಡಲಾಗಿತ್ತು. ಹಾಗೆಯೇ, ಆಕೆಯ ಮೈ ಮೇಲಿದ್ದ ಮತ್ತು ಮನೆಯಲ್ಲಿದ್ದ ಚಿನ್ನಾಭರಣಗಳನ್ನು ದರೋಡೆ ಮಾಡಲಾಗಿತ್ತು. ಪ್ರಕರಣ ಸಂಬಂಧ ಚಾಮರಾಜಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಪ್ರಕರಣದ ವಿಚಾರಣೆ ನಡೆಸಿದ್ದ ಅಧೀನ ನ್ಯಾಯಾಲಯವು ದಂಡುಪಾಳ್ಯ ತಂಡದ ದೊಡ್ಡ ಹನುಮ, ವೆಂಕಟೇಶ, ನಲ್ಲತಿಮ್ಮ, ಮುನಿಕೃಷ್ಣ ಮತ್ತು ಲಕ್ಷ್ಮಮ್ಮ ಅವರನ್ನು ದೋಷಿಗಳು ಎಂದು ತೀರ್ಮಾನಿಸಿ ಗಲ್ಲು ಶಿಕ್ಷೆ ವಿಧಿಸಿತ್ತು.

ವಿಚಾರಣೆಗೆ ಹಾಜರಿದ್ದ ಚಲಪತಿ: ವಿಚಾರಣೆಗೆ ಹಾಜರಿದ್ದ ಪೊಲೀಸ್ ಅಧಿಕಾರಿ ಚಲಪತಿ ಅವರು, ದಂಡುಪಾಳ್ಯ ಆರೋಪಿಗಳಿಂದ ಜಪ್ತಿ ಮಾಡಿದ ಚಿನ್ನಾಭರಣಗಳನ್ನು ದೂರುದಾರರು ಗುರುತಿಸಿದ್ದಾರೆ. ಕೊಲೆ ಮಾಡಿರುವ ಬಗ್ಗೆ ಆರೋಪಿಗಳೇ ಹೇಳಿಕೆ ನೀಡಿದ್ದಾರೆ. ಅವರಿಗೆ ನೆನಪಿನ ಶಕ್ತಿ ಹೆಚ್ಚಿತ್ತು. ಇಂತಹ ಮನೆಯಲ್ಲಿ ಇದೇ ವ್ಯಕ್ತಿಯನ್ನು ಕೊಲೆ ಮಾಡಿದ್ದೆವು, ಕೊಲೆ ವೇೀಳೆ ಮೃತರ ಧರಿಸಿದ ಉಡುಪಿನ ಬಗ್ಗೆ ಖಚಿತವಾಗಿ ಹೇಳುತ್ತಿದ್ದರು. ಒಂದು ಜಿಲ್ಲೆಯಲ್ಲಿ ಕೊಲೆ ಮಾಡಿದರೆ, 3 ಗಂಟೆಯೊಳಗೆ ಬೇರೆ ಜಿಲ್ಲೆಗೆ ಹೋಗುತ್ತಿದ್ದರು. ದರೋಡೆ ಮಾಡಿದ ಆಭರಣಗಳನ್ನು ಅಡಮಾನ ಇಡುತ್ತಿದ್ದರು ಎಂದರು.

ಇದಕ್ಕೆ ಪ್ರತಿಕ್ರಿಯಿಸಿದ ಪೀಠ ಕೇವಲ ಆರೋಪಿಗಳ ಹೇಳಿಕೆ ಮತ್ತು ಜಪ್ತಿ ಮಾಡಿದ ವಸ್ತುಗಳನ್ನು ಆಧರಿಸಿ ಶಿಕ್ಷೆ ವಿಧಿಸಲು ಕಾನೂನಿನಲ್ಲಿ ಅವಕಾಶವಿದೆಯೇ? ಎಂದು ಪ್ರಶ್ನಿಸಿದರು. ಇದಕ್ಕೆ ಚಲಪತಿ ನಿರುತ್ತರರಾದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News