ಪದವಿ ವಿದ್ಯಾರ್ಥಿಗಳಿಗೆ ‘ಲ್ಯಾಪ್‌ಟಾಪ್’ಭಾಗ್ಯ: ಬಸವರಾಜ ರಾಯರಡ್ಡಿ
ಬೆಂಗಳೂರು, ಆ.9: ಸರಕಾರಿ ಹಾಗೂ ಅನುದಾನಿತ ಶಿಕ್ಷಣ ಸಂಸ್ಥೆಗಳಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ಮೊದಲನೆ ವರ್ಷದ ಪದವಿ ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್‌ಟಾಪ್‌ಗಳನ್ನು ವಿತರಿಸಲಾಗುವುದು ಎಂದು ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರಡ್ಡಿ ತಿಳಿಸಿದ್ದಾರೆ.
ಬುಧವಾರ ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ವರ್ಷದಿಂದಲೇ ನೂತನ ಯೋಜನೆ ಜಾರಿಗೆ ಬರುತ್ತಿದೆ. ವಾರ್ಷಿಕ ಆದಾಯ 2.50 ಲಕ್ಷ ರೂ.ವರೆಗೆ ಇರುವ ಕುಟುಂಬದ ವಿದ್ಯಾರ್ಥಿಗಳಿಗೆ ಮಾತ್ರ ಈ ಯೋಜನೆ ಅನ್ವಯವಾಗಲಿದೆ. ಅಂದಾಜು 1.50 ಲಕ್ಷ ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್‌ಗಳನ್ನು ವಿತರಿಸಲಾಗುವುದು ಎಂದರು.
ಎಲ್ಲ ಜಾತಿ, ವರ್ಗಗಳ ವಿದ್ಯಾರ್ಥಿಗಳಿಗೂ ಈ ಯೋಜನೆಯ ಸೌಲಭ್ಯ ಲಭ್ಯವಾಗಲಿದೆ. ಲ್ಯಾಪ್‌ಟಾಪ್‌ಗಳನ್ನು ಪೂರೈಸಲು ಈಗಾಗಲೆ ಜಾಗತಿಕ ಟೆಂಡರ್ ಪ್ರಕ್ರಿಯೆಯನ್ನು ಆರಂಭಿಸಲಾಗಿದ್ದು, ವಿದ್ಯಾರ್ಥಿಗಳಿಗೆ ಉತ್ತಮ ದರ್ಜೆಯ ಕಂಪೆನಿಯ ಲ್ಯಾಪ್‌ಟಾಪ್‌ಗಳನ್ನೆ ವಿತರಣೆ ಮಾಡಲಾಗುವುದು. ಇದಕ್ಕಾಗಿ 300 ಕೋಟಿ ರೂ.ಗಳನ್ನು ಮೀಸಲಿಡಲಾಗಿದೆ ಎಂದು ಅವರು ಹೇಳಿದರು.
ರಾಯಚೂರು ವಿಶ್ವವಿದ್ಯಾಲಯ ಸ್ಥಾಪನೆಗೆ ಸುಗ್ರೀವಾಜ್ಞೆ ಹೊರಡಿಸಲಾಗುವುದು. ಕಳೆದ ಅಧಿವೇಶನದಲ್ಲಿ ಈ ವಿಧೇಯಕಕ್ಕೆ ಅಂಕಿತ ಸಿಕ್ಕಿರಲಿಲ್ಲ. ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಿ ಸುಗ್ರೀವಾಜ್ಞೆ ಹೊರಡಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಬಸವರಾಜ ರಾಯರಡ್ಡಿ ತಿಳಿಸಿದರು.
ಬೆಂಗಳೂರಿನಲ್ಲಿ ಬಾಬಾ ಸಾಹೇಬ್ ಅಂಬೇಡ್ಕರ್ ಸ್ಕೂಲ್ ಆಫ್ ಎಕನಾಮಿಕ್ಸ್ ಪ್ರಸಕ್ತ ಸಾಲಿನಲ್ಲೆ ಆರಂಭವಾಗಲಿದ್ದು, ಮೊದಲ ತರಗತಿಯನ್ನು ಮಾಜಿ ಪ್ರಧಾನಿ ಡಾ.ಮನಮೋಹನ್‌ಸಿಂಗ್ ತೆಗೆದುಕೊಳ್ಳಲಿದ್ದಾರೆ. ಈ ಸಂಬಂಧ ಅವರಿಗೆ ಮನವಿ ಮಾಡಲಾಗಿದೆ ಎಂದು ಬಸವರಾಜ ರಾಯರಡ್ಡಿ ಹೇಳಿದರು.
ಬೀದರ್, ಕಲಬುರ್ಗಿ, ಯಾದಗಿರಿ, ಕೊಪ್ಪಳ, ರಾಯಚೂರು, ಹಾವೇರಿ, ಚಿತ್ರದುರ್ಗ, ಕೋಲಾರ ಹಾಗೂ ಚಾಮರಾಜನಗರದಲ್ಲಿ ತಲಾ 25 ಕೋಟಿ ರೂ.ವೆಚ್ಚದಲ್ಲಿ ಪದವಿ ವಸತಿ ಶಾಲೆಗಳನ್ನು ತೆರೆಯಲಾಗುವುದು. ಅಲ್ಲದೆ, ರಾಜ್ಯದ 25 ಕಡೆ ಸರಕಾರಿ ಪಾಲಿಟೆಕ್ನಿಕ್‌ಗಳನ್ನು ಆರಂಭಿಸಲಾಗುವುದು ಎಂದು ಅವರು ಹೇಳಿದರು.
ವೀರಶೈವ-ಲಿಂಗಾಯತ ಬಡಿದಾಟ ಬೇಡ: ವೀರಶೈವ-ಲಿಂಗಾಯತ ಪ್ರತ್ಯೇಕ ಧರ್ಮದ ವಿಚಾರದಲ್ಲಿ ಬಡಿದಾಟ ಬೇಡ. ಸೌಹಾರ್ದಯುತವಾಗಿ ಸಮಸ್ಯೆಯನ್ನು ಬಗೆಹರಿಸಿಕೊಳ್ಳಲು ಮುಂದಾಗಬೇಕು. ಬೀದಿಯಲ್ಲಿ ಮರ್ಯಾದೆ ಕಳೆದುಕೊಳ್ಳುವಂತಾಗಬಾರದು ಎಂದು ಬಸವರಾಜ ರಾಯರಡ್ಡಿ ತಿಳಿಸಿದರು.
ನಾನು ಸಮುದಾಯದ ಸದಸ್ಯನಾಗಿ ನನ್ನ ಸಹೋದ್ಯೋಗಿ ಸಮುದಾಯದ ಮಿತ್ರರ ಜೊತೆ ಪ್ರವಾಸ ಮಾಡಲು ಉದ್ದೇಶಿಸಿದ್ದೆ. ಇದು ಸರಕಾರದ ಕಾರ್ಯಕ್ರಮವಲ್ಲ, ನಮ್ಮ ವೈಯಕ್ತಿಕ ನಿರ್ಧಾರ. ಸಾಂವಿಧಾನಿಕ ಲಾಭ ಪಡೆಯುವ ಸಲುವಾಗಿ ಧರ್ಮ ಮಾಡುವುದಾದರೆ ನಾನು ಅದಕ್ಕೆ ಬೆಂಬಲ ನೀಡುತ್ತೇನೆ. ನಾಳೆ ಈ ಸಂಬಂಧ ನಡೆಯಲಿರುವ ಸಭೆಯಲ್ಲೂ ಭಾಗವಹಿಸುತ್ತೇನೆ ಎಂದು ಅವರು ಹೇಳಿದರು. ಕಾಲು ನೋವಿನ ಕಾರಣದಿಂದ ಉದ್ದೇಶಿತ ಪ್ರವಾಸ ಕೈಗೊಳ್ಳಲು ಸಾಧ್ಯವಾಗಿಲ್ಲ. ನಮಗೆ ಪ್ರತ್ಯೇಕ ಧರ್ಮಬೇಕು. ಆದರೆ, ವೀರಶೈವರು ಲಿಂಗಾಯತರು ಬೇರಾಗಬಾರದು. ಒಗ್ಗಟ್ಟಾಗಿ ಮುನ್ನಡೆದು ಸಾಂವಿಧಾನಿಕ ಲಾಭ ಪಡೆಯುವಂತಾಗಬೇಕು ಎಂದು ಬಸವರಾಜ ರಾಯರಡ್ಡಿ ತಿಳಿಸಿದರು.