‘ಗೋ ರಕ್ಷಣೆ ಹೆಸರಲ್ಲಿ ಕೊಲೆ’ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲು ಕೇಂದ್ರ ಹಿಂದೇಟು: ಸಿದ್ದರಾಮಯ್ಯ

Update: 2017-08-09 17:33 GMT

ಬೆಂಗಳೂರು, ಆ.9: ಗೋ ರಕ್ಷಣೆಯ ಹೆಸರಿನಲ್ಲಿ ದೇಶದ ವಿವಿಧ ಭಾಗಗಳಲ್ಲಿ ಒಂದು ಕಡೆ ದಲಿತರು ಹಾಗೂ ಮತ್ತೊಂದೆಡೆ ಮುಸ್ಲಿಮರ ಕೊಲೆಗಳು ಆಗುತ್ತಿವೆ. ಆದರೂ, ಇಂತಹ ಪ್ರಕರಣಗಳಲ್ಲಿ ಕೇಂದ್ರ ಸರಕಾರ ಯಾವುದೆ ಕ್ರಮ ಕೈಗೊಂಡಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.

ಬುಧವಾರ ನಗರದ ಸ್ವಾತಂತ್ರ ಉದ್ಯಾನವನದಲ್ಲಿ ಕೆಪಿಸಿಸಿ ವತಿಯಿಂದ ಕ್ವಿಟ್ ಇಂಡಿಯಾ ಚಳವಳಿಯ 75ನೆ ವರ್ಷಾಚರಣೆ ಹಿನ್ನೆಲೆಯಲ್ಲಿ ಆಯೋಜಿಸಲಾಗಿದ್ದ ಸಮಾವೇಶವನ್ನು ಉದ್ದೇಶಿಸಿ ಅವರು ಮಾತನಾಡಿದರು.

ಭಾರತೀಯ ಜನತಾ ಪಕ್ಷ(ಬಿಜೆಪಿ)ವೆಂದರೆ ಢೋಂಗಿತನದ ಪಕ್ಷ. ಅವರ ಢೋಂಗಿತನವನ್ನು ನಾವು ಕಳಚಬೇಕಿದೆ. ಹಿಂದೂ ರಾಷ್ಟ್ರ ನಿರ್ಮಾಣ ಮಾಡುವುದೊಂದೆ ಬಿಜೆಪಿ ಅಜೆಂಡಾ. ಕಾಂಗ್ರೆಸ್ ಪಾಲಿಗೆ ಇಂದು ಒಳ್ಳೆಯ ದಿನ, ಬಿಜೆಪಿ ಪಾಲಿಗಲ್ಲ ಎಂದು ಅವರು ಹೇಳಿದರು.

ಯಾವುದೆ ಆದರ್ಶವಾದ ಬಿಜೆಪಿಯವರಿಗಿಲ್ಲ. ಹಿಂದೂ ರಾಷ್ಟ್ರ, ರಾಮಮಂದಿರ ನಿರ್ಮಾಣ ಇವೆಲ್ಲವನ್ನೂ ಹಿಂದಿನಿಂದಲೂ ಹೇಳುತ್ತಲೆ ಬಂದಿದ್ದಾರೆ. ಆದರೆ, ನರೇಂದ್ರಮೋದಿ ನುಡಿದಂತೆ ನಡೆಯುವವರಲ್ಲ ಎಂಬುದನ್ನು ದೇಶದ ಜನತೆ ಅರ್ಥ ಮಾಡಿಕೊಳ್ಳಬೇು ಎಂದು ಮುಖ್ಯಮಂತ್ರಿ ತಿಳಿಸಿದರು.

 ಬಡ ಅಲ್ಪಸಂಖ್ಯಾತರಿಗಾಗಿ ನಾವು ಶಾದಿಭಾಗ್ಯ ಯೋಜನೆಯನ್ನು ಜಾರಿಗೆ ತಂದಾಗ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ, ಶೋಭಾ ಕರಂದ್ಲಾಜೆ ಗಾಂಧಿ ಪುತ್ಥಳಿ ಎದುರು ಅಹೋರಾತ್ರಿ ಪ್ರತಿಭಟನೆ ಮಾಡಿದರು. ಈಗ ಕೇಂದ್ರ ಸರಕಾರವೆ ನಮ್ಮನ್ನು ಅನುಸರಿಸಿ ‘ಶಾದಿ ಶಗುನ್’ ಯೋಜನೆ ಜಾರಿಗೆ ತರಲು ಮುಂದಾಗಿದೆ. ಈಗ ಅವರು ಏನು ಮಾಡುತ್ತಾರೋ ಕಾದು ನೋಡೋಣ ಎಂದು ಸಿದ್ದರಾಮಯ್ಯ ಹೇಳಿದರು.

ಯಡಿಯೂರಪ್ಪ ಹಾಗೂ ಅವರ ತಂಡ ಇತ್ತೀಚೆಗೆ ‘ಬಿಜೆಪಿ ನಡಿಗೆ ದಲಿತರ ಕಡೆಗೆ’ ಎಂಬ ನಾಟಕ ಶುರು ಮಾಡಿಕೊಂಡಿದ್ದರು. ಹೊಟೇಲ್‌ನಿಂದ ತಿಂಡಿ ತಂದು ದಲಿತರ ಮನೆಯಲ್ಲಿ ತಿಂದರು. ಅದರ ಬದಲು ನಿಮ್ಮ ಮನೆಯ ಹೆಣ್ಣು ಮಕ್ಕಳನ್ನು ದಲಿತರಿಗೆ ನೀಡಿ, ಅವರ ಮನೆಯ ಹೆಣ್ಣು ಮಕ್ಕಳನ್ನು ನಿಮ್ಮ ಮನೆಗೆ ಮದುವೆ ಮಾಡಿಕೊಂಡು ತನ್ನಿ ಎಂದು ಸಲಹೆ ನೀಡಿದೆ ಅಷ್ಟೇ, ಆನಂತರ ದಲಿತರ ಮನೆಗಳ ಕಡೆ ಅವರ ಸುಳಿವೇ ಇಲ್ಲ ಎಂದು ಸಿದ್ದರಾಮಯ್ಯ ವ್ಯಂಗ್ಯವಾಡಿದರು.

ಎಐಸಿಸಿ ಉಪಾಧ್ಯಕ್ಷ ರಾಹುಲ್‌ಗಾಂಧಿ ಗುಜರಾತ್‌ನಲ್ಲಿ ಪ್ರವಾಹ ಸಂತ್ರಸ್ಥರನ್ನು ಭೇಟಿ ಮಾಡಲು ತೆರಳಿದರೆ ಬಿಜೆಪಿಯವರು ನಾಚಿಕೆಯಿಲ್ಲದೆ ಅವರ ವಾಹನದ ಮೇಲೆ ಕಲ್ಲು ಹೊಡೆದಿದ್ದಾರೆ. ಆದರೆ, ನಮ್ಮ ರಾಜ್ಯಕ್ಕೆ ಬರುತ್ತಿರುವ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾಗೆ ನಮ್ಮ ಕಾರ್ಯಕರ್ತರು ಕಲ್ಲು ಹೊಡೆಯುವುದಿಲ್ಲ. ಆ ಸಂಸ್ಕೃತಿ ನಮ್ಮದಲ್ಲ ಎಂದು ಮುಖ್ಯಮಂತ್ರಿ ಹೇಳಿದರು.

ಕರ್ನಾಟಕದಲ್ಲಿ ಮತ್ತೊಮ್ಮೆ ಬಿಜೆಪಿ ಅಧಿಕಾರಕ್ಕೆ ಬರಲು ಸಾಧ್ಯವಿಲ್ಲ ಎಂಬ ಸತ್ಯ ಅವರಿಗೆ ಗೊತ್ತಾಗಿದೆ. ಈಗಾಗಲೆ ಅವರಿಗೆ ಸೋಲಿನ ಭೀತಿ ಕಾಡುತ್ತಿದೆ. ನಾವು ಈ ಹಿಂದೆ ಮಾಡಿದ್ದ ಪಾದಯಾತ್ರೆಯಂತೆ ಈಗ ‘ಬಿಜೆಪಿಯವರೆ ದಿಲ್ಲಿಯಲ್ಲಿ ಸರಕಾರ ಬಿಟ್ಟು ತೊಲಗಿ’ ಎಂದು ಮತ್ತೊಂದು ಪಾದಯಾತ್ರೆಗೆ ಕರೆ ನೀಡಬೇಕಾಗಿದೆ ಎಂದು ಸಿದ್ದರಾಮಯ್ಯ ತಿಳಿಸಿದರು.

ಬಿಜೆಪಿ ಹಾಗೂ ಜೆಡಿಎಸ್ ತಿಪ್ಪರಲಾಗ ಹಾಕಿದರೂ ಅವರ ಅಪ್ಪನಾಣೆಗೂ ನಮ್ಮ ರಾಜ್ಯದಲ್ಲಿ ಅಧಿಕಾರಕ್ಕೆ ಬರಲು ಸಾಧ್ಯವಿಲ್ಲ. ಯಡಿಯೂರಪ್ಪ ಅಧಿಕಾರವಧಿಯಲ್ಲಿ ಆಪರೇಷನ್ ಕಮಲ ಮೂಲಕ ಕೋಟ್ಯಂತರ ರೂ.ಲಂಚ ನೀಡಿ ಶಾಸಕರನ್ನು ಖರೀದಿಸಿದರು. ಅದೇ ಪ್ರವೃತ್ತಿಯನ್ನು ಗುಜರಾತ್ ರಾಜ್ಯಸಭಾ ಚುನಾವಣೆ ಸಂದರ್ಭದಲ್ಲೂ ಮರುಕಳಿಸಲು ಯತ್ನಿಸಿದರು ಎಂದು ಅವರು ಆರೋಪಿಸಿದರು.

ನರೇಂದ್ರಮೋದಿ ನೇತೃತ್ವದ ಮೂರು ವರ್ಷಗಳ ಕೇಂದ್ರ ಸರಕಾರದ ಸಾಧನೆಗಳು ಹಾಗೂ ನಮ್ಮ ರಾಜ್ಯದ ನಾಲ್ಕು ವರ್ಷಗಳ ಸಾಧನೆಗಳ ಬಗ್ಗೆ ಬಹಿರಂಗವಾಗಿ ಚರ್ಚೆಗೆ ಬರಲಿ ಎಂದು ಬಿಜೆಪಿ ಮುಖಂಡರಿಗೆ ಸವಾಲು ಹಾಕಿದ ಸಿದ್ದರಾಮಯ್ಯ, ಕೇವಲ ಮನ್ ಕಿ ಬಾತ್‌ನಿಂದ ಬಡವರ ಹೊಟ್ಟೆ ತುಂಬುವುದಿಲ್ಲ. ದೇಶ ಬದಲಾವಣೆಯಾಗುವುದಿಲ್ಲ ಎಂದು ತಿರುಗೇಟು ನೀಡಿದರು.

ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಮಾತನಾಡಿ, ಸ್ವಾತಂತ್ರಪೂರ್ವದಲ್ಲಿ ಬ್ರಿಟಿಷರ ಜೊತೆ ಕೈ ಜೋಡಿಸಿದವರೇ ಇಂದು ದೇಶವನ್ನು ಆಳುತ್ತಿರುವುದು ವಿಪರ್ಯಾಸ. ಉತ್ತರಪ್ರದೇಶ ಸೇರಿದಂತೆ ದೇಶದ ಇತರೆಡೆ ದಲಿತರು ಹಾಗೂ ಮುಸ್ಲಿಮರ ಕೊಲೆ, ಹಲ್ಲೆಗಳು ನಡೆಯುತ್ತಿವೆ. ಈ ಪರಿಸ್ಥಿತಿಯನ್ನು ನಾವು ಅರ್ಥ ಮಾಡಿಕೊಳ್ಳಬೇಕಿದೆ ಎಂದರು.

ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಉಳಿಸಲು ನಾವೆಲ್ಲ ಶಿಸ್ತಿನಿಂದ ಹೋರಾಟ ಮಾಡಬೇಕಿದೆ. ನಮ್ಮ ಪಕ್ಷದ ರಾಷ್ಟ್ರೀಯ ಉಪಾಧ್ಯಕ್ಷರ ಮೇಲೆ ಕಲ್ಲಿನ ದಾಳಿ ನಡೆಸಿದರೆ ನಾವು ಸುಮ್ಮನಿರಬೇಕಾ? ನಮ್ಮ ಪಕ್ಷದ ಕಾರ್ಯಕರ್ತರ ಹತ್ಯೆಗಳಾಗುತ್ತಿದ್ದರೆ ಸುಮ್ಮನಿರಬೇಕಾ? ಈ ಎಲ್ಲ ಬೆಳವಣಿಗೆಗಳಿಗೆ ಚುನಾವಣೆ ಮೂಲಕ ಸೂಕ್ತ ಉತ್ತರ ನೀಡಬೇಕಿದೆ ಎಂದು ಅವರು ಹೇಳಿದರು.

ಸಮಾವೇಶದಲ್ಲಿ ಎಐಸಿಸಿ ಕಾರ್ಯದರ್ಶಿ ಮಧುಯಕ್ಷಿಗೌಡ, ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್‌ಗುಂಡೂರಾವ್, ಸಚಿವರಾದ ಡಿ.ಕೆ.ಶಿವಕುಮಾರ್, ಎಚ್.ಆಂಜನೇಯ, ಶಾಸಕರಾದ ಎಸ್.ಟಿ.ಸೋಮಶೇಖರ್, ಬಿ.ಎ.ಬಸವರಾಜ, ವಿಧಾನಪರಿಷತ್ ಸದಸ್ಯರಾದ ವಿ.ಎಸ್.ಉಗ್ರಪ್ಪ, ಎಚ್.ಎಂ.ರೇವಣ್ಣ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಆ.12ರಂದು ಕರ್ನಾಟಕಕ್ಕೆ ರಾಹುಲ್

ಎಐಸಿಸಿ ಉಪಾಧ್ಯಕ್ಷ ರಾಹುಲ್‌ಗಾಂಧಿ ಆ.12ರಂದು ರಾಯಚೂರಿನಲ್ಲಿ ನಡೆಯಲಿರುವ ಕಾಂಗ್ರೆಸ್ ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ. ಆ.16ರಂದು ಬೆಂಗಳೂರಿನ ಬಸವನಗುಡಿ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಜರುಗಲಿರುವ ಇಂದಿರಾ ಕ್ಯಾಂಟೀನ್‌ಗಳಿಗೆ ಚಾಲನೆ ನೀಡುವ ಕಾರ್ಯಕ್ರಮದಲ್ಲಿಯೂ ಭಾಗವಹಿಸಲಿದ್ದಾರೆ.

-ಡಾ.ಜಿ.ಪರಮೇಶ್ವರ್, ಕೆಪಿಸಿಸಿ ಅಧ್ಯಕ್ಷ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News