×
Ad

ಭತ್ತ-ಕಬ್ಬು ಬೆಳೆಯದಿರಲು ರೈತರಲ್ಲಿ ಮುಖ್ಯಮಂತ್ರಿ ಮನವಿ

Update: 2017-08-09 22:38 IST

ಬೆಂಗಳೂರು, ಆ.9: ಕಾವೇರಿ ಕಣಿವೆಯ ಅಚ್ಚುಕಟ್ಟಿನ ನಾಲ್ಕು ಜಲಾಶಯಗಳಿಂದ ಕೆರೆ ಕಟ್ಟೆಗಳಿಗೆ ಬುಧವಾರ ಮಧ್ಯರಾತ್ರಿಯಿಂದ ನೀರು ಹರಿಸಲು ಸರಕಾರ ತೀರ್ಮಾನಿಸಿದೆ.

ಕಾವೇರಿ ನದಿ ನೀರು ನಾಲೆಗಳಿಗೆ ಹರಿಸುವ ಸಂಬಂಧಿಸಿದಂತೆ ಚರ್ಚಿಸಲು ಗೃಹ ಕಚೇರಿ ಕೃಷ್ಣಾದಲ್ಲಿ ಕರೆದಿದ್ದ ಮಂಡ್ಯ ಜಿಲ್ಲೆಯ ಜನಪ್ರತಿನಿಧಿಗಳು, ಜಲ ಸಂಪನ್ಮೂಲ ಇಲಾಖೆ ಅಧಿಕಾರಿಗಳ ಸಭೆಯಲ್ಲಿ ಈ ತೀರ್ಮಾನಕ್ಕೆ ಬರಲಾಗಿದೆ.

  ಸಭೆ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತನಾಡಿ, ಕುಡಿಯುವ ನೀರಿಗಾಗಿ, ಜಾನುವಾರುಗಳಿಗೆ ಮತ್ತು ಅಂತರ್ಜಲ ಮಟ್ಟ ಹೆಚ್ಚಿಸಲು ಮಾತ್ರ ಕೆರೆ, ಕಟ್ಟೆಗಳಿಗೆ ನೀರು ತುಂಬಿಸಲಾಗುತ್ತಿದೆ. ಆದ್ದರಿಂದ ಭತ್ತ, ಕಬ್ಬು ನಾಟಿ ಮಾಡಲು ಮುಂದಾಗಬೇಡಿ ಎಂದು ಮುಖ್ಯಮಂತ್ರಿ ರೈತರಲ್ಲಿ ಮನವಿ ಮಾಡಿದರು.

ರೈತರಿಗೆ ನೀರು ಕೊಡಬಾರದು ಎಂಬುದು ಸರಕಾರದ ಉದ್ದೇಶವಲ್ಲ. ಮುಂಗಾರು ಕ್ಷೀಣಿಸಿದ್ದರಿಂದ ಜಲಾಶಯಗಳಲ್ಲಿ ನೀರಿನ ಹರಿವು ಕಮ್ಮಿಯಿದೆ. ರೈತರ ರಕ್ಷಣೆ ನಮ್ಮ ಆದ್ಯತೆ. ಆದ್ದರಿಂದಲೇ ನೀರು ಬಿಡುಗಡೆ ಮಾಡುವ ನಿರ್ಧಾರ ಕೈಗೊಂಡಿದ್ದೇವೆ. ಎಂದರು.

ಭತ್ತ,ಕಬ್ಬು ಬದಲಾಗಿ ಮಳೆ ಆಧಾರಿತ ಕೃಷಿ ಮಾಡಿದರೆ ನಮ್ಮ ಅಭ್ಯಂತರವಿಲ್ಲ. ಭತ್ತ, ಕಬ್ಬಿಗೆ ನೀರು ಬಳಸದಂತೆ ಕೃಷಿ ಇಲಾಖೆ ಕರಪತ್ರಗಳನ್ನು ಮುದ್ರಿಸಿ ಮನೆ ವುನೆಗೆ ಹಂಚಲಿದೆ ಎಂದು ಹೇಳಿದರು.

 ಈ ವರ್ಷದ ಮುಂಗಾರಿನಲ್ಲಿ ಮಳೆ ಕೊರತೆ ತೀವ್ರವಾಗಿದೆ. ಈ ಪ್ರಮಾಣದ ಕೊರತೆಯನ್ನು ಕಳೆದ 46 ವರ್ಷಗಳಲ್ಲಿ ಕಂಡಿರಲಿಲ್ಲ. ಕಳೆದ ವರ್ಷ ಇದೇ ದಿನ ಕಾವೇರಿ ಕಣಿವೆಯ ನಾಲ್ಕು ಜಲಾಶಯಗಳಲ್ಲಿ 53.52 ಟಿಎಂಸಿ ನೀರು ಇತ್ತು. ಈ ವರ್ಷ 45 ಟಿಎಂಸಿ ಇದೆ. ಒಳ ಹರಿವು ಸಹ ಕಳೆದ ವರ್ಷಕ್ಕಿಂತ ಕಡಿಮೆ ಇದೆ. ಇದರಿಂದಾಗಿ ರೈತರ ಬೇಡಿಕೆ ಈಡೇರಿಸಲು ಸ್ವಲ್ಪಮೀನಾಮೇಷ ಎಣಿಸುವಂತಾಗಿತ್ತು ಎಂದು ಹೇಳಿದರು.

ಆದರೆ ಈಗ ಜನ, ಜಾನುವಾರುಗಳು ಕುಡಿಯುವ ನೀರಿಗೆ ಪರದಾಡುತ್ತಿರುವುದನ್ನು ಮನಗೊಂಡು ಕಬಿನಿ, ಹಾರಂಗಿ, ಕೆಆರ್‌ಎಸ್, ಹೇಮಾವತಿ ಜಲಾಶಯದಿಂದ ನೀರು ಬಿಡುಗಡೆ ಮಾಡಿ ಕೆರೆ, ಕಟ್ಟೆಗಳನ್ನು ತುಂಬಿಸಲು ಇಂದಿನ ಸಭೆಯಲ್ಲಿ ತೀರ್ಮಾನಿಸಲಾಗಿದೆ ಎಂದರು.

ಮುಂದಿನ ವಾರದೊಳಗೆ ಮಳೆ ಸುರಿಯುವ ಆಶಾಭಾವನೆ ಸರಕಾರಕ್ಕಿದೆ. ಮಳೆಯ ಪ್ರಮಾಣ ನೋಡಿಕೊಂಡು ಮುಂದಿನ ನಿರ್ಧಾರವನ್ನು ಪ್ರಕಟಿಸಲಾಗುವುದು. ತಮಿಳುನಾಡಿಗೆ ಹರಿಸಬೇಕಾದ ನೀರಿನ ಪ್ರಮಾಣದಲ್ಲೂ ತಡೆಯಲಾಗಿದೆ ಎಂದು ಪ್ರಶ್ನೆಯೊಂದಕ್ಕೆ ಹೇಳಿದರು.

 ಸಭೆಯಲ್ಲಿ ಜಲ ಸಂಪನ್ಮೂಲ ಸಚಿವ ಎಂ.ಬಿ. ಪಾಟೀಲ್, ಕೃಷಿ ಸಚಿವ ಕೃಷ್ಣ ಬೈರೇಗೌಡ, ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಕೃಷ್ಣಪ್ಪ, ಮಂಡ್ಯ ಸಂಸದ ಪುಟ್ಟರಾಜು, ಮಾಜಿ ಸಚಿವ ಅಂಬರೀಶ್, ಶಾಸಕ ನರೇಂದ್ರಸ್ವಾಮಿ, ಚಲುವರಾಯಸ್ವಾಮಿ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News