×
Ad

ತನ್ನ ಸೊಸೆಗೆ ಮಗನಿಂದ ನಾಲ್ಕು ಕೋ.ರೂ.ಗಳ ಜೀವನಾಂಶ ಕೊಡಿಸಲು ನೆರವಾದ ಮಾಜಿ ಸಚಿವ ದಿ.ಕಾಶಪ್ಪನವರ್ ಪತ್ನಿ!

Update: 2017-08-09 23:54 IST

ಬೆಂಗಳೂರು,ಆ.9: ಸೊಸೆಯ ಪಾಲಿಗೆ ಅತ್ತೆ ಎಂದಿಗೂ ಕೆಟ್ಟವಳೇ ಎಂಬ ಇಂದಿನ ಆಧುನಿಕ ಯುಗದ ಹೆಚ್ಚಿನವರ ಗ್ರಹಿಕೆ ನಿಜಕ್ಕೂ ತಪ್ಪು ಎಂದು ರಾಜ್ಯದ ಮಾಜಿ ಸಚಿವ ದಿ.ಎಸ್.ಆರ್.ಕಾಶಪ್ಪನವರ್ ಅವರ ಪತ್ನಿ ಸಾಬೀತುಗೊಳಿಸಿದ್ದಾರೆ. ಪತಿಯಿಂದ ವಿಚ್ಛೇದನ ಕೋರಿ ನ್ಯಾಯಾಲಯದ ಮೆಟ್ಟಿಲೇರಿದ್ದ ಸೊಸೆಯ ಪರವಾಗಿ ಹೇಳಿಕೆ ನೀಡಿ ತನ್ನ ಮಗನಿಂದ ಆಕೆಗೆ ನಾಲ್ಕು ಕೋಟಿ ರೂ.ಜೀವನಾಂಶ ಕೊಡಿಸುವಲ್ಲಿ ನೆರವಾಗಿದ್ದಾರೆ.

ವಿಚ್ಛೇದನ ಪ್ರಕರಣವನ್ನು ಇತ್ಯರ್ಥಗೊಳಿಸಿರುವ ಬೆಂಗಳೂರಿನ ಐದನೇ ಹೆಚ್ಚುವರಿ ಪ್ರಧಾನ ಕುಟುಂಬ ನ್ಯಾಯಾಲಯವು ತನ್ನ ಮಾಜಿ ಪತ್ನಿಗೆ 4.85 ಕೋ.ರೂ.ಜೀವನಾಂಶ ನೀಡುವಂತೆ ಕಾಶಪ್ಪನವರ್ ಅವರ ಪುತ್ರ ದೇವಾನಂದ ಕಾಶಪ್ಪನವರ್ ಅವರಿಗೆ ಆದೇಶಿಸಿದೆ. ಕಳೆದ ನಾಲ್ಕೂವರೆ ವರ್ಷಗಳಿಂದ ದಂಪತಿ ಪ್ರತ್ಯೇಕವಾಗಿ ವಾಸವಾಗಿರುವ ಹಿನ್ನೆಲೆಯಲ್ಲಿ ಅರ್ಜಿದಾರರಾದ ಪತ್ನಿ ವಿಚ್ಛೇದನ ಪಡೆಯಲು ಅರ್ಹರಾಗಿದ್ದಾರೆ ಎಂದು ತನ್ನ ತೀರ್ಪಿನಲ್ಲಿ ಹೇಳಿದೆ.

2011,ಮೇ 22ರಂದು ದೇವಾನಂದ ತನ್ನ ಅಕ್ಕನ ಮಗಳನ್ನು ಬಾಗಲಕೋಟ ಜಿಲ್ಲೆಯ ಹುನಗುಂದ ತಾಲೂಕಿನಲ್ಲಿ ನಡೆದಿದ್ದ ಸಮಾರಂಭದಲ್ಲಿ ವಿವಾಹವಾಗಿದ್ದರು.

ತನ್ನ ದಿವಂಗತ ತಂದೆ ಕಾಶಪ್ಪನವರ್ ಅವರ ಆಸೆಯನ್ನು ಈಡೇರಿಸುವ ಏಕಮಾತ್ರ ಉದ್ದೇಶದಿಂದ ದೇವಾನಂದ ತನ್ನನ್ನು ಮದುವೆಯಾಗಿದ್ದರು ಮತ್ತು ಅವರು ವಿವಾಹೇತರ ಸಂಬಂಧವನ್ನು ಹೊಂದಿದ್ದರು ಎಂದು ಪತ್ನಿ ಅರ್ಜಿಯಲ್ಲಿ ದೂರಿದ್ದರು. ಹೆಚ್ಚಿನ ಕಾಲ ತನ್ನ ಪತಿ ಆಕೆಯ ಮನೆಯಲ್ಲಿಯೇ ಇರುತ್ತಿದ್ದರು, ತಾನದನ್ನು ಪ್ರಶ್ನಿಸಿದಾಗ ತನ್ನೊಂದಿಗೆ ಹಿಂಸಾತ್ಮಕವಾಗಿ ವರ್ತಿಸಿದ್ದರು ಮತ್ತು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದರು ಎಂದೂ ಅವರು ಆಪಾದಿಸಿದ್ದರು.

ಮದುವೆಗೆ ಮುನ್ನ ಪತಿ ತನ್ನೊಂದಿಗೆ ಸೌಹಾರ್ದದಿಂದ ಇದ್ದರಾದರೂ ಮದುವೆಯ ಬಳಿಕ ತನ್ನನ್ನು ಅಪರಿಚಿತಳಂತೆ ನಡೆಸಿಕೊಳ್ಳುತ್ತಿದ್ದರು ಎಂದೂ ಆಕೆ ಅರ್ಜಿಯಲ್ಲಿ ತಿಳಿಸಿದ್ದರು.

ದೇವಾನಂದ ಕುಟುಂಬದ ವಿರೋಧದ ನಡುವೆಯೂ ಬೇರೊಬ್ಬ ಮಹಿಳೆಯನ್ನು ಮದುವೆಯಾಗಿದ್ದಾರೆ ಮತ್ತು ಆಕೆಯಿಂದ ಒಂದು ಮಗುವನ್ನೂ ಪಡೆದಿದ್ದಾರೆ ಎಂದು ಪತ್ನಿ ಮತ್ತು ತಾಯಿ ನ್ಯಾಯಾಲಯಕ್ಕೆ ನಿವೇದಿಸಿದ್ದರು.

 ದೇವಾನಂದ ಎಕರೆಗಟ್ಟಲೆ ಭೂಮಿಯ ಒಡೆತನ ಹೊಂದಿದ್ದಾರೆ, ಕೋಟಿ ರೂ.ಗೂ ಅಧಿಕ ವೌಲ್ಯದ ಮಸಿಡಿಸ್ ಬೆಂಝ್ ಎಸ್‌ಯುವಿಯಲ್ಲಿ ಸಂಚರಿಸುತ್ತಾರೆ. ಕಲ್ಲು ಕ್ವಾರಿ ಉದ್ಯಮವನ್ನೂ ಹೊಂದಿದ್ದು ಆರ್ಥಿಕವಾಗಿ ಸದೃಢರಾಗಿದ್ದಾರೆ. ತನ್ನ ವೈವಾಹಿಕ ಬದ್ಧತೆಗಳನ್ನು ಈಡೇರಿಸದೇ ಪತ್ನಿಯನ್ನು ತೊರೆದಿದ್ದಾರೆ ಎಂದು ತನ್ನ ಸೊಸೆಯ ಅಜ್ಜಿಯೂ ಆಗಿರುವ ಕಾಶಪ್ಪನವರ್ ಅವರ ಪತ್ನಿ ನ್ಯಾಯಾಲಯದಲ್ಲಿ ಹೇಳಿಕೆ ನೀಡಿದ್ದರು.

ದೇವಾನಂದ ನ್ಯಾಯಾಲಯದ ನೋಟಿಸಿಗೆ ಉತ್ತರಿಸಿರಲಿಲ್ಲ,ಅಲ್ಲದೆ ವಿಚಾರಣೆಗೆ ಹಾಜರಾಗಲೂ ವಿಫಲರಾಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News