ಮತದಾನದಲ್ಲಿ 'ನೋಟಾ' ವ್ಯವಸ್ಥೆ ಬೇಕೇ?

Update: 2017-08-09 18:38 GMT

ಮಾನ್ಯರೆ

ಮತದಾನದಲ್ಲಿ 'ನೋಟಾ' ಮತಗಳಿಗೆ ಏನಾದರೂ ಅರ್ಥವಿದೆಯೇ? ಅಥವಾ ಇದಕ್ಕೇನಾದರೂ ಬೆಲೆ ಇದೆಯೇ? ಓರ್ವ ಮತದಾರ 'ನೋಟಾ'ವನ್ನು ಆಯ್ಕೆ ಮಾಡುತ್ತಾನೆ ಎಂದರೆ ಅವನ ಪ್ರಕಾರ ಆ ಕ್ಷೇತ್ರದಲ್ಲಿ ಸ್ಪರ್ಧಿಸುವ ಎಲ್ಲಾ ಸ್ಪರ್ಧಿಗಳು ಅಥವಾ ಅಭ್ಯರ್ಥಿಗಳು ಅಯೋಗ್ಯರು ಎಂದರ್ಥ. ಅಂದರೆ ಇದು ಅಭ್ಯರ್ಥಿಗಳನ್ನು ಅವಮಾನಿಸಲು ಇಚ್ಛಿಸುವವರಿಗೆ ಅವರ ಉದ್ದೇಶ ಈಡೇರಿಸಲು ಕಲ್ಪಿಸಿರುವ ಒಂದು ವ್ಯವಸ್ಥೆ ಅಷ್ಟೆ.
ಈ 'ನೋಟಾ' ಮತಗಳಿಗೆ ಏನಾದರೂ ಅರ್ಥ ಬರುವಂತಾಗಬೇಕೆಂದರೆ ಈ 'ನೋಟಾ' ಮತಗಳು ಚಲಾಯಿತ ಮತಗಳ ಸುಮಾರು ಶೇ. 16.5ರಷ್ಟು ತಲುಪಿದ್ದೇ ಆದಲ್ಲಿ ಆ ಚುನಾವಣೆಯನ್ನು ರದ್ದುಪಡಿಸಿ ಹೊಸ ಅಭ್ಯರ್ಥಿಗಳಿಗೆ ಅವಕಾಶ ಮಾಡಿ ಕೊಡಬೇಕು. ಕಳೆದ ಲೋಕಸಭಾ ಚುನಾವಣೆಯಲ್ಲಿ ನಮ್ಮ ಈಗಿನ ಪ್ರಧಾನಿ ಸ್ಪರ್ಧಿಸಿರುವ ಬರೋಡಾದಲ್ಲಿ ಸುಮಾರು 18,000ದಷ್ಟು 'ನೋಟಾ' ಮತಗಳು ಚಲಾವಣೆಯಾಗಿದ್ದವು. ಆದರೆ ಏನು ಪ್ರಯೋಜನ? ಹೆಚ್ಚು ಮತ ಗಳಿಸಿದ ನರೇಂದ್ರ ಮೋದಿಯವರು ವಿಜಯೀ ಅಭ್ಯರ್ಥಿಯಾದರು. ಅಲ್ಲದೆ ಪ್ರಧಾನಿಯೂ ಆದರು. ಸುಮಾರು 18,000 ಮಂದಿ ಮತಕೊಡಲು ಯೋಗ್ಯರಲ್ಲ ಎಂದು ಪರಿಗಣಿಸಿದ ವ್ಯಕ್ತಿ ಪ್ರಧಾನಿಯಾಗಬಲ್ಲರಾದರೆ ಈ 'ನೋಟಾ' ಯಾಕೆ ಬೇಕು? ಒಂದು ವೇಳೆ ಮತದಾನ ಕಡ್ಡಾಯವೆಂದಾದರೆ ಮಾತ್ರ ಈ 'ನೋಟಾ'ವನ್ನು ಅಳವಡಿಸಬಹುದಾಗಿದೆ. ಮತದಾನವನ್ನು ಕಡ್ಡಾಯ ಮಾಡಿಸಲಾಗುವುದಿಲ್ಲ. ಕಡ್ಡಾಯ ಮಾಡಿದ್ದೇ ಆದಲ್ಲಿ ಮತದಾನ ಮಾಡದವರಿಗೆ ಶಿಕ್ಷೆ ಏನೆಂಬುದನ್ನು ಕೂಡಾ ನಿಗದಿಪಡಿಸಬೇಕಾಗುತ್ತದೆ. ಇದು ಸಾಧ್ಯವಿಲ್ಲ. ಇದು ಯಾವುದನ್ನೂ ಯೋಚಿಸದೆ ನಮ್ಮ ಚುನಾವಣಾ ಆಯೋಗ ಈ 'ನೋಟಾ'ವನ್ನು ರಾಜ್ಯ ಸಭಾ ಚುನಾವಣೆಯಲ್ಲೂ ಅಳವಡಿಸಿದೆ. ಇದಕ್ಕೆ ಏನನ್ನಬೇಕು?

Writer - -ತುಕರಾಮ ಕೊಂಚಾಡಿ, ಮಂಗಳೂರು

contributor

Editor - -ತುಕರಾಮ ಕೊಂಚಾಡಿ, ಮಂಗಳೂರು

contributor

Similar News