ಬಾರ್ಬೊರಾ ಸ್ಪಾಟಾಕೊವಾಗೆ ಒಲಿದ ಸ್ವರ್ಣ

Update: 2017-08-09 18:47 GMT

ಲಂಡನ್, ಆ.9: ಝೆಕ್ ಗಣರಾಜ್ಯದ ಬಾರ್ಬೊರಾ ಸ್ಪಾಟಾಕೊವಾ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ 10 ವರ್ಷಗಳ ಬಳಿಕ ಜಾವೆಲಿನ್ ಎಸೆತದಲ್ಲಿ ಚಿನ್ನದ ಪದಕ ಜಯಿಸಿದ್ದಾರೆ. ಜಾವೆಲಿನ್ ಎಸೆತದಲ್ಲಿ ವಿಶ್ವ ದಾಖಲೆ ನಿರ್ಮಿಸಿರುವ 36ರ ಹರೆಯದ ಬಾರ್ಬೊರಾ ಮಂಗಳವಾರ ನಡೆದ ಫೈನಲ್‌ನಲ್ಲಿ ಎರಡನೆ ಯತ್ನದಲ್ಲಿ 66.76 ಮೀ. ದೂರ ಜಾವೆಲಿನ್ ಎಸೆದು ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ 2ನೆ ಬಾರಿ ಸ್ವರ್ಣಕ್ಕೆ ಮುತ್ತಿಟ್ಟರು. ಲಂಡನ್ ಸ್ಟೇಡಿಯಂನಲ್ಲಿ ಐದು ವರ್ಷಗಳ ಹಿಂದೆ ನಡೆದಿದ್ದ ಒಲಿಂಪಿಕ್ ಗೇಮ್ಸ್‌ನಲ್ಲಿ ಬಾರ್ಬೊರಾ ಚಿನ್ನದ ಪದಕ ಜಯಿಸಿದ್ದರು.

‘‘ಲಂಡನ್ ಸ್ಟೇಡಿಯಂನಲ್ಲಿ ನನ್ನನ್ನು ಸೋಲಿಸುವವರು ಯಾರೂ ಇಲ್ಲ. ಈ ಸ್ಟೇಡಿಯಂಗೆ ಪ್ರವೇಶಿಸಿದ ತಕ್ಷಣ ನನಗೆ ನಿರಾಳವಾದಂತಹ ಅನುಭವವಾಗುತ್ತದೆ. ನನಗೆ ಪದಕ ಗೆಲ್ಲುವ ವಿಶ್ವಾಸವಿತ್ತು’’ ಎಂದು ಬಾರ್ಬೊರಾ ತಿಳಿಸಿದ್ದಾರೆ. 72.28 ಮೀ. ದೂರ ಜಾವೆಲಿನ್ ಎಸೆದು ವಿಶ್ವ ದಾಖಲೆ ನಿರ್ಮಿಸಿದ್ದ ಬಾರ್ಬೊರಾ ಕಳೆದ ವರ್ಷ ರಿಯೋ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ಜಯಿಸಿದ್ದರು. ಎರಡು ಬಾರಿ ಏಷ್ಯನ್ ಚಾಂಪಿಯನ್ ಚೀನಾದ ಲೀ ಲಿಂಗ್‌ವೀ 66.25 ಮೀ. ದೂರ ಜಾವೆಲಿನ್ ಎಸೆದು ಬೆಳ್ಳಿ ಜಯಿಸಿದರು. ಚೀನಾದ ಇನ್ನೋರ್ವ ಅಥ್ಲೀಟ್ ಲಿಯು ಹ್ಯುಹುಯಿ(65.26 ಮೀ.) ಕಂಚು ಜಯಿಸಿದರು. ಲಿಯು 2 ವರ್ಷಗಳ ಹಿಂದೆ ಬೀಜಿಂಗ್‌ನಲ್ಲಿ ನಡೆದ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಬೆಳ್ಳಿ ಜಯಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News