ಇಂದು ನೀರಜ್ ಚೋಪ್ರಾ ಅಭಿಯಾನ ಆರಂಭ

Update: 2017-08-09 18:54 GMT

ಲಂಡನ್, ಆ.9: ಭಾರತದ ಉದಯೋನ್ಮುಖ ಜಾವೆಲಿನ್ ಎಸೆತಗಾರ ನೀರಜ್ ಚೋಪ್ರಾ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಗುರುವಾರ ತನ್ನ ಅಭಿಯಾನ ಆರಂಭಿಸಲಿದ್ದಾರೆ. ಟೂರ್ನಿಯಲ್ಲಿ ಭಾರತದ ಕಳಾಹೀನ ಪ್ರದರ್ಶನಕ್ಕೆ ಜೀವ ತುಂಬುವ ವಿಶ್ವಾಸ ಮೂಡಿಸಿದ್ದಾರೆ.
 19ರ ಹರೆಯದ ವಿಶ್ವ ಜೂನಿಯರ್ ದಾಖಲೆ ವೀರ ಚೋಪ್ರಾ ಗುರುವಾರ ಅರ್ಹತಾ ಸುತ್ತಿನಲ್ಲಿ ಭಾಗವಹಿಸಲಿದ್ದಾರೆ.

ಪುರುಷರ ಜಾವೆಲಿನ್ ಎಸೆತದಲ್ಲಿ ದೇವಿಂದರ್ ಸಿಂಗ್ ಕಾಂಗ್ ಅದೃಷ್ಟ ಪರೀಕ್ಷೆಗೆ ಇಳಿಯಲಿದ್ದಾರೆ.
ಭಾರತ ಚೋಪ್ರಾರ ಪ್ರದರ್ಶನದ ಮೇಲೆ ಭಾರೀ ವಿಶ್ವಾಸವಿರಿಸಿದೆ. ಈ ವರ್ಷ 85.63 ಮೀ. ದೂರಕ್ಕೆ ಜಾವೆಲಿನ್ ಎಸೆದಿರುವ ಚೋಪ್ರಾ ಐಎಎಎಫ್ ರ್ಯಾಂಕಿಂಗ್‌ನಲ್ಲಿ 14ನೆ ಸ್ಥಾನದಲ್ಲಿದ್ದಾರೆ.

86.48 ಮೀ. ಚೋಪ್ರಾರ ವೈಯಕ್ತಿಕ ಶ್ರೇಷ್ಠ ಪ್ರದರ್ಶನವಾಗಿದೆ. ಪದಕಕ್ಕಾಗಿ ಸ್ಪರ್ಧೆ ನೀಡಬೇಕಾದರೆ ಇನ್ನೂ ಹೆಚ್ಚು ದೂರ ಜಾವೆಲಿನ್ ಎಸೆಯಬೇಕಾಗುತ್ತದೆ.

ಇಬ್ಬರು ಜಾವೆಲಿನ್ ಎಸೆತಗಾರರಾದ-ಜೊಹನ್ನಾ ವೆಟ್ಟೆರ್ ಹಾಗೂ ಹಾಲಿ ಒಲಿಂಪಿಕ್ಸ್ ಹಾಗೂ ವಿಶ್ವ ಚಾಂಪಿಯನ್ ಥಾಮಸ್ ರೊಹ್ಲೆರ್ ಈ ವರ್ಷ 90 ಮೀ.ನ್ನು ಕ್ರಮಿಸಿದ್ದಾರೆ. 8 ಅಥ್ಲೀಟ್‌ಗಳು 87.64 ಮೀ.ಕ್ಕೂ ಅಧಿಕ ದೂರ ಜಾವೆಲಿನ್ ಎಸೆದಿದ್ದಾರೆ.

ಚೋಪ್ರಾ ಈ ವರ್ಷ ಮೂರು ಬಾರಿ 85 ಮೀ. ದೂರ ಜಾವೆಲಿನ್ ಎಸೆದಿದ್ದಾರೆ. ಕಳೆದ ತಿಂಗಳು ಪ್ಯಾರಿಸ್ ಹಾಗೂ ಮೊನಾಕೊದಲ್ಲಿ ನಡೆದ ಡೈಮಂಡ್ ಲೀಗ್‌ನಲ್ಲಿ ಈ ಸಾಧನೆ ಮಾಡಿದ್ದಾರೆ. ಈ ಎರಡು ಲೀಗ್‌ಗಳಲ್ಲಿ ಕ್ರಮವಾಗಿ 5 ಹಾಗೂ 7ನೆ ಸ್ಥಾನ ಪಡೆದಿದ್ದಾರೆ.

‘‘ನಾನು ಕಳೆದ 10 ದಿನಗಳಿಂದ ಇಲ್ಲಿ ಅಭ್ಯಾಸ ನಡೆಸುತ್ತಿರುವೆ. ವಿಶ್ವ ಚಾಂಪಿಯನ್‌ಶಿಪ್‌ಗೆ ಉತ್ತಮ ತಯಾರಿ ನಡೆಸಿದ್ದೇನೆ. ಮೊದಲ ಕೆಲವು ದಿನ ಸ್ವಲ್ಪ ಕಷ್ಟವಾಯಿತು. ಇದೀಗ ಇಲ್ಲಿನ ವಾತಾವರಣಕ್ಕೆ ಹೊಂದಿಕೊಂಡಿದ್ದೇನೆ. ನಾನು ಶೇ.100ರಷ್ಟು ಸಜ್ಜಾಗಿದ್ದೇನೆ’’ ಎಂದು ಚೋಪ್ರಾ ಹೇಳಿದ್ದಾರೆ.

ಟ್ರಾಕ್ ಸ್ಪರ್ಧೆಗಳಲ್ಲಿ ದ್ಯುತಿ ಚಂದ್(ಮಹಿಳೆಯರ 100 ಮೀ. ಓಟ), ಮುಹಮ್ಮದ್ ಅನಾಸ್(ಪುರುಷರ 400 ಮೀ.) ಹಾಗೂ ಸಿದ್ಧ್ದಾರ್ಥ್ ತಿಂಗಳಾಯ(ಪುರುಷರ 110 ಮೀ. ಹರ್ಡಲ್ಸ್) ಮೊದಲ ಸುತ್ತಿನ ಹೀಟ್ಸ್‌ನಲ್ಲಿ ಸೋತು ಹೊರ ನಡೆದಿದ್ದಾರೆ. ಮಹಿಳೆಯರ 400 ಮೀ. ಓಟದಲ್ಲಿ ನಿರ್ಮಲಾ ಶರೋನ್ ಸೆಮಿಫೈನಲ್‌ಗೆ ತಲುಪಿದ್ದರು. ಆದರೆ ಫೈನಲ್ ತಲುಪಲು ವಿಫಲರಾಗಿದ್ದರು.

 ಫೀಲ್ಡ್ ಸ್ಪರ್ಧೆಗಳಲ್ಲಿ ಅನ್ನು ರಾಣಿ ಮಹಿಳೆಯರ ಜಾವೆಲಿನ್ ಎಸೆತದಲ್ಲಿ ಫೈನಲ್ ಸುತ್ತಿಗೇರಲು ವಿಫಲರಾಗಿ 20ನೆ ಸ್ಥಾನ ಪಡೆದರು. ಹೆಪ್ಟಾಥ್ಲಾನ್‌ನಲ್ಲಿ ಸ್ವಪ್ನಾ ಬರ್ಮನ್ 26ನೆ ಸ್ಥಾನ ಪಡೆದಿದ್ದಾರೆ. ಟಿ. ಗೋಪಿ ಹಾಗೂ ಮೋನಿಕಾ ಅಥಾರೆ ಪುರುಷರ ಹಾಗೂ ಮಹಿಳೆಯರ ಮ್ಯಾರಥಾನ್‌ನಲ್ಲಿ ಕ್ರಮವಾಗಿ 28ನೆ ಹಾಗೂ 64ನೆ ಸ್ಥಾನ ಪಡೆದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News