ಕೊಡಗಿನಲ್ಲಿ ಸಾಂಕ್ರಾಮಿಕ ರೋಗಗಳ ಭೀತಿ

Update: 2017-08-10 18:11 GMT

ಮಡಿಕೇರಿ, ಆ.10: ರಾಜ್ಯದೆಲ್ಲೆಡೆ ಬರದ ಛಾಯೆ ಮೂಡಿರುವಂತೆ ಕಾವೇರಿ ನಾಡು ಕೊಡಗು ಜಿಲ್ಲೆಯಲ್ಲೂ ಮಳೆ ಕೊರತೆ ಎದುರಾಗಿದ್ದು, ನಿರೀಕ್ಷಿತ ಮುಂಗಾರಿನ ಆಗಮನವಾಗದೆ ಕೃಷಿ ಚಟುವಟಿಕೆಗಳಿಗೆ ಹಿನ್ನಡೆಯಾಗಿದೆ. ಇದರೊಂದಿಗೆ ಜಿಲ್ಲೆಯಲ್ಲಿ ಸಾಂಕ್ರಾಮಿಕ ರೋಗಗಳ ಭೀತಿಯೂ ಕಾಡುತ್ತಿದೆ.

ಡೆಂಗ್ ಸೇರಿದಂತೆ ವಿವಿಧ ಸಾಂಕ್ರಾಮಿಕ ರೋಗಗಳು ವೈರಾಣುವಿನಿಂದ ಬರುವ ಕಾಯಿಲೆಗಳಾಗಿದ್ದು, ಇವುಗಳು ಈಡಿಸ್ ಜಾತಿಯ ಸೊಳ್ಳೆಗಳಿಂದ ಒಬ್ಬರಿಂದ ಮತ್ತೊ ಬ್ಬರಿಗೆ ಹರಡುತ್ತದೆ. ಕೊಡಗಿನಲ್ಲಿ ವಾಡಿಕೆಯಂತೆ ಧಾರಾಕಾರ ಮಳೆಯಾಗಿದ್ದರೆ ಅಶುಚಿತ್ವದ ವಾತಾವರಣಕ್ಕೆ ಅವಕಾಶವಿ ರುತ್ತಿರಲಿಲ್ಲ. ಅಲ್ಲದೆ ಕೊಳಚೆ ನೀರು ಕೊಚ್ಚಿ ಹೋಗುವುದರಿಂದ ಸಾಂಕ್ರಾಮಿಕ ರೋಗ ಕಾಣಿಸಿಕೊಳ್ಳುತ್ತಿರಲಿಲ್ಲ.

 ಆದರೆ, ಕಳೆದ ವರ್ಷದಂತೆ ಈ ಬಾರಿಯೂ ಮಳೆಯ ಕೊರತೆ ಉಂಟಾಗಿದೆ. ಅಲ್ಲದೆ ಪ್ರಸಕ್ತ ಸಾಲಿನಲ್ಲಿ ಕಸ ವಿಲೇವಾರಿಯ ಸಮಸ್ಯೆಯೂ ಕಾಡುತ್ತಿದ್ದು, ಜಿಲ್ಲಾ ಕೇಂದ್ರ ಸ್ಥಾನ ಮಡಿಕೇರಿ ನಗರ ಪ್ರದೇಶದಲ್ಲಿ ಅಲ್ಲಲ್ಲಿ ಅಶುಚಿತ್ವದ ವಾತಾವರಣ ಕಂಡು ಬಂದಿದೆ. ಕೊಳೆತು ನಾರುತ್ತಿರುವ ತ್ಯಾಜ್ಯದಿಂದ ಸೊಳ್ಳೆಗಳ ಹಾವಳಿ ಹೆಚ್ಚಾಗಿದೆ. ಮಳೆಯ ಪ್ರಮಾಣ ಕಡಿಮೆಯಾಗಿರುವುದು ಮತ್ತು ಬಿಸಿಲಿನ ವಾತಾವರಣ ಸೊಳ್ಳೆಗಳ ವಂಶಾಭಿವೃದ್ಧಿಗೆ ಸಹಕಾರಿಯಾಗುತ್ತಿರುವುದರಿಂದ ಜಿಲ್ಲೆಯಲ್ಲಿ ಸಾಂಕ್ರಾಮಿಕ ರೋಗಗಳು ಕಂಡು ಬರಲು ಕಾರಣವಾಗಿದೆ.

ಈ ವರ್ಷ ಜನವರಿ 1 ರಿಂದ ಜುಲೈ 31 ರವರೆಗೆ 619 ಶಂಕಿತ ಡೆಂಗ್ ಪ್ರಕರಣಗಳಲ್ಲಿ 155 ಪ್ರಕರಣಗಳು ರಕ್ತದ ಮಾದರಿ ಪರೀಕ್ಷೆಯಿಂದ ದೃಢಪಟ್ಟಿದೆ. ಇವುಗಳಿಗೆ ಅಗತ್ಯ ಚಿಕಿತ್ಸೆ ನೀಡುವ ಮೂಲಕ ರೋಗಿಗಳು ಗುಣಮುಖರಾಗಿದ್ದಾರೆ ಎಂದು ಜಿಲ್ಲಾ ಆರೋಗ್ಯ ಇಲಾಖಾ ಪ್ರಭಾರ ಅಧಿಕಾರಿ ಡಾ.ಎಂ.ಶಿವಕುಮಾರ್ ಪತ್ರಿಕೆಗೆ ಮಾಹಿತಿ ನೀಡಿದ್ದಾರೆ. ವರ್ಷದ ಆರಂಭದಿಂದ ಜುಲೈ ಅಂತ್ಯದವರೆಗೆ ಜಿಲ್ಲಾ ವ್ಯಾಪ್ತಿಯಲ್ಲಿ 124 ಶಂಕಿತ ಚಿಕುನ್ ಗುನ್ಯ ರೋಗಿಗಳ ರಕ್ತ ಪರೀಕ್ಷೆ ಮಾಡಲಾಗಿದೆ. ಆದರೆ ಯಾವುದೇ ಪ್ರಕರಣಗಳು ದೃಢಪಟ್ಟಿಲ್ಲ. ಮಡಿಕೇರಿ ತಾಲೂಕು ಒಂದರಲ್ಲಿಯೆ ಒಟ್ಟು 18 ಇಲಿ ಜ್ವರ ಮತ್ತು 83 ಹೆಪಟೈಟಿಸ್-ಎ ಪ್ರಕರಣಗಳು ಪತ್ತೆಯಾಗಿವೆ. ಮಲೇರಿಯ ಕೇವಲ ಒಂದು ಪ್ರಕರಣವಷ್ಟೆ ದಾಖಲಾಗಿದ್ದರೂ ಜಿಲ್ಲೆಯ ಅನೇಕ ಭಾಗಗಳಲ್ಲಿ ಸಾಮಾನ್ಯ ಜ್ವರದಿಂದ ಬಳಲುತ್ತಿರುವವರ ಸಂಖ್ಯೆ ಹೆಚ್ಚಾಗಿದೆ.

ಜಿಲ್ಲೆಯ ಹೆಬ್ಬಾಗಿಲು ಎನಿಸಿಕೊಂಡಿರುವ ಸೋಮವಾರಪೇಟೆ ತಾಲೂಕಿನ ಕುಶಾಲ ನಗರದಲ್ಲಿ ಡೆಂಗ್ ಸೇರಿದಂತೆ ಸಾಂಕ್ರಾಮಿಕ ರೋಗ ಬಾಧೆ ಒಂದಷ್ಟು ಹೆಚ್ಚಿನ ಪ್ರಮಾಣದಲ್ಲಿ ಕಾಣಿಸಿಕೊಳ್ಳುತ್ತಿದೆ. ಈ ಹಿನ್ನೆಲೆಯಲ್ಲಿ ಜನಜಾಗೃತಿ ಕಾರ್ಯಕ್ರಮಗಳೊಂದಿಗೆ ಸೊಳ್ಳೆಗಳ ವಂಶಾಭಿವೃದ್ಧಿಯನ್ನು ತಡೆಗಟ್ಟುವ ಫಾಗಿಂಗ್ ಕಾರ್ಯವನ್ನು ವ್ಯಾಪಕವಾಗಿ ನಡೆಸುತ್ತಿರುವುದಾಗಿ ಡಾ. ಶಿವಕುಮಾರ್ ತಿಳಿಸಿದ್ದಾರೆ.

 ಪ್ಲೇಟ್‌ಲೆಟ್‌ಗಳ ಕೊರತೆ: ಡೆಂಗ್‌ನಲ್ಲಿ ಡೆಂಗಿ ಜ್ವರ(ಸಾಮಾನ್ಯ), ಡೆಂಗ್‌ರಕ್ತಸ್ರಾವ ಜ್ವರ(ಡಿಎಚ್‌ಎಸ್) ಮತ್ತು ಡೆಂಗ್ ಆಘಾತಕರ ಸ್ವರೂಪ(ಡಿಎಸ್ಸೆಸ್ಸೆ) ಎನ್ನುವ ಮೂರು ವಿಧಗಳಿವೆ. ಗಂಭೀರ ಸ್ವರೂಪದ ಡೆಂಗ್ಯವಿನಲ್ಲಿ ರೋಗಿಯ ರಕ್ತದ ಪ್ಲೇಟ್‌ಲೆಟ್‌ಗಳ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಕುಸಿಯುತ್ತದೆ. ಈ ಸಂದರ್ಭ ರೋಗಿಗೆ ಪ್ಲೇಟ್ ಲೆಟ್‌ಗಳನ್ನು ಒದಗಿಸುವುದು ಅನಿವಾರ್ಯ.

ಆದರೆ, ಕೊಡಗು ಜಿಲ್ಲಾ ಕೇಂದ್ರದಲ್ಲಿ ರಕ್ತ ನಿಧಿ ಕೇಂದ್ರವಿದೆಯೇ ಹೊರತು. ಪ್ರತ್ಯೇಕವಾಗಿ ಪ್ಲೇಟ್ ಲೆಟ್‌ಗಳನ್ನು ನೀಡುವುದಕ್ಕೆ ಅನುಕೂಲವಾಗುವ ಬ್ಲಡ್ ಕಾಂಪೋನೆಂಟ್ ಕೇಂದ್ರ ಇಲ್ಲದಿರುವುದು ದೊಡ್ಡ ಕೊರತೆಯಾಗಿ ಕಾಡಿದೆ. ಯಾವುದೇ ರೋಗಿಗೆ ಪ್ಲೇಟ್ ಲೆಟ್‌ಗಳು ಬೇಕೆಂದಾದಲ್ಲಿ ಅಂದಾಜು 3 ಗಂಟೆ ಪ್ರಯಾಣದ ದೂರವಿರುವ ಮೈಸೂರು ಇಲ್ಲವೆ ನಾಲ್ಕು ಗಂಟೆ ಪ್ರಯಾಣದ ಮಂಗಳೂರಿಗೆ ತೆರಳುವುದು ಅನಿವಾರ್ಯವಾಗಿದೆ.

ನಗರದ ಜಿಲ್ಲಾಸ್ಪತ್ರೆಯಲ್ಲಿ ಎಲ್ಲಾ ಹೈಟೆಕ್ ವ್ಯವಸ್ಥೆಗಳಿದ್ದರೂ ತಾಂತ್ರಿಕ ಸಿಬ್ಬಂದಿಯ ಕೊರತೆ ಇದೆ. ರೋಗಿಗಳು ಯಾವ ರೋಗದಿಂದ ಬಳಲುತ್ತಿದ್ದಾರೆ ಎನ್ನುವ ಮಾಹಿತಿ ಸಕಾಲದಲ್ಲಿ ಖಾತ್ರಿಯಾಗದೆ ರೋಗ ಉಲ್ಬಣಗೊಂಡ ನಂತರ ೆಚ್ಚಿನ ಚಿಕಿತ್ಸೆಗಾಗಿ ಹೊರ ಜಿಲ್ಲೆಗಳಿಗೆ ತೆರಳಬೇಕಾದ ದುಸ್ಥಿತಿ ಇದೆ.

‘ಪ್ರವಾಸಿಗರ ಬಗ್ಗೆಯೂ ಜಾಗೃತಿ ಅಗತ್ಯ’

ಮಳೆಯ ಕೊರತೆಯಿಂದಾಗಿ ರಾಜ್ಯದ ವಿವಿಧೆಡೆ ಸಾಂಕ್ರಾಮಿಕ ರೋಗಗಳು ಹರಡುತ್ತಿದ್ದು, ಡೆಂಗ್‌ನಿಂದಾಗಿ ಸಾವುಗಳೂ ಸಂಭವಿಸುತ್ತಿವೆ. ಇತ್ತೀಚೆಗೆ ಚೆನ್ನೈಗೆ ತೆರಳಿದ್ದ ಮಡಿಕೇರಿಯ ವರ್ತಕರೊಬ್ಬರು ಮರಳಿದ ನಂತರ ಡೆಂಗ್ ಜ್ವರಕ್ಕೆ ತುತಾ್ತಗಿ ಮೃತ ಪಟ್ಟಿದ್ದಾರೆ. ಪರ ಊರುಗಳಿಗೆ ತೆರಳುವವರಿಗೆ ಅನಾರೋಗ್ಯ ಕಾಡಿದರೆ ನಿರ್ಲಕ್ಷ್ಯ ತೋರದೆ ತಕ್ಷಣ ಚಿಕಿತ್ಸೆ ಪಡೆಯುವುದು ಸೂಕ್ತವೆಂದು ಆರೋಗ್ಯ ಅಧಿಕಾರಿಗಳು ಸಲಹೆ ನೀಡಿದ್ದಾರೆ.

Writer - ಲಕ್ಷ್ಮೀಶ್

contributor

Editor - ಲಕ್ಷ್ಮೀಶ್

contributor

Similar News