ಸೌರಾಷ್ಟ್ರ ತಂಡ ಸೇರಿದ ಉತ್ತಪ್ಪ

Update: 2017-08-10 18:57 GMT

ಬೆಂಗಳೂರು, ಆ.10: ಕರ್ನಾಟಕದ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ರಾಬಿನ್ ಉತ್ತಪ್ಪ ಸೌರಾಷ್ಟ್ರ ತಂಡಕ್ಕೆ ಸೇರ್ಪಡೆಗೊಂಡಿದ್ದಾರೆ. ಇದರೊಂದಿಗೆ ಉತ್ತಪ್ಪ ಕರ್ನಾಟಕದ ತಂಡದೊಂದಿಗಿನ 15 ವರ್ಷಗಳ ಸಂಬಂಧವನ್ನು ಕಡಿದುಕೊಂಡಿದ್ದಾರೆ.
 
2017-18ನೆ ಸಾಲಿನ ದೇಶೀಯ ಟೂರ್ನಿಗಳಲ್ಲಿ ಉತ್ತಪ್ಪ ಜೈದೇವ್ ಶಾ ನಾಯಕತ್ವದ ಸೌರಾಷ್ಟ್ರ ತಂಡದಲ್ಲಿ ಆಡಲಿದ್ದಾರೆ. ಚೇತೇಶ್ವರ ಪೂಜಾರ ಮತ್ತು ರವೀಂದ್ರ ಜಡೇಜ ಅವರು ರಾಷ್ಟ್ರೀಯ ತಂಡದಲ್ಲಿ ಬ್ಯುಸಿಯಾಗಿರುವ ಹಿನ್ನೆಲೆಯಲ್ಲಿ ಉತ್ತಪ್ಪ ಸೌರಾಷ್ಟ್ರ ತಂಡದಲ್ಲಿ ತಳವೂರಲು ಉತ್ತಮ ಅವಕಾಶ ದೊರೆಯಬಹುದೆಂಬ ನಿರೀಕ್ಷೆಯಲ್ಲಿದ್ದಾರೆ. ಉತ್ತಪ್ಪ ಕಳೆದ ಜೂನ್‌ನಲ್ಲಿ ಕರ್ನಾಟಕ ತಂಡದಿಂದ ದೂರ ಸರಿಯುವ ನಿರ್ಧಾರ ಕೈಗೊಂಡಿದ್ದರು. ಸೌರಾಷ್ಟ್ರ, ಕೇರಳ ಮತ್ತು ವಿದರ್ಭ ರಾಜ್ಯ ಕ್ರಿಕೆಟ್ ಸಂಸ್ಥೆಗಳು ಉತ್ತಪ್ಪ ಅವರನ್ನು ತಮ್ಮತ್ತ ಸೆಳೆಯಲು ಆಸಕ್ತಿ ವಹಿಸಿತ್ತು. ಆದರೆ ಉತ್ತಪ್ಪ ಅವರು ಅಂತಿಮವಾಗಿ ಸೌರಾಷ್ಟ್ರ ಸೇರುವ ತೀರ್ಮಾನ ಕೈಗೊಂಡಿದ್ದಾರೆ.

 ಉತ್ತಪ್ಪ ಇದೀಗ ಸೌರಾಷ್ಟ್ರ ಸೇರಲು ಬಿಸಿಸಿಐ ವಿಧಿವಿಧಾನವನ್ನು ಪೂರೈಸಿದ್ದಾರೆ. ‘‘ಅನುಭವಿ ಆಟಗಾರ ರಾಬಿನ್ ಉತ್ತಪ್ಪ ಸೇರ್ಪಡೆಯಿಂದಾಗಿ ರಣಜಿಯಲ್ಲಿ ಸೌರಾಷ್ಟ್ರ ತಂಡ ಇನ್ನಷ್ಟು ಬಲಿಷ್ಠವಾಗಲಿದೆ’’ ಎಂದು ಸೌರಾಷ್ಟ್ರ ತಂಡದ ಮಾಧ್ಯಮ ಮ್ಯಾನೇಜರ್ ಹಿಮಾಂಶು ಶಾ ಹೇಳಿದ್ದಾರೆ.

ಕೊಡಗಿನ ಆಟಗಾರ ಉತ್ತಪ್ಪ 2002-03ರಲ್ಲಿ ಕರ್ನಾಟಕ ತಂಡದ ಪರ ರಣಜಿ ಟ್ರೋಫಿಯಲ್ಲಿ ಚೊಚ್ಚಲ ಪಂದ್ಯವನ್ನಾಡಿದ್ದರು. 15 ವರ್ಷಗಳಿಂದ ಕರ್ನಾಟಕ ರಣಜಿ ತಂಡದಲ್ಲಿದ್ದ ಉತ್ತಪ್ಪ 130 ರಣಜಿ ಪಂದ್ಯಗಳಲ್ಲಿ 21 ಶತಕ ಮತ್ತು 48 ಅರ್ಧಶತಕಗಳನ್ನು ಒಳಗೊಂಡ 8,793 ರನ್ ಸಂಪಾದಿಸಿದ್ದಾರೆ. ಗರಿಷ್ಠ ಸ್ಕೋರ್ 162 ರನ್.

2016-17ನೆ ಆವೃತ್ತಿಯಲ್ಲಿ ಉತ್ತಪ್ಪ ಕೊನೆಯ ಲೀಗ್ ಮತ್ತು ಕ್ವಾರ್ಟರ್ ಫೈನಲ್‌ನಲ್ಲಿ ಆಡಿರಲಿಲ್ಲ. ಅವರ ಪ್ರದರ್ಶನ ಸಾಧಾರಣವಾಗಿತ್ತು. ಹೀಗಿದ್ದರೂ ಅವರಿಗೆ ಕರ್ನಾಟಕ ತಂಡದಲ್ಲಿ ಮತ್ತೆ ಸ್ಥಾನ ಸಿಗುವ ಸಾಧ್ಯತೆ ಇತ್ತು. ಉತ್ತಪ್ಪ ಅವರು ಕರ್ನಾಟಕ ತಂಡ ತೊರೆಯಲು ತೀರ್ಮಾನ ಕೈಗೊಂಡ ವಿಚಾರ ಗೊತ್ತಾದ ಬಳಿಕ ಕರ್ನಾಟಕ ಕ್ರಿಕೆಟ್ ಸಂಸ್ಥೆಯ ಕಾರ್ಯದರ್ಶಿ ಆರ್.ಸುಧಾಕರ್ ಅವರು ಉತ್ತಪ್ಪರನ್ನು ಕರ್ನಾಟಕ ತಂಡದಲ್ಲೇ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಪ್ರಯತ್ನ ನಡೆಸಿದ್ದರು ಎನ್ನಲಾಗಿದೆ. ಆದರೆ ಉತ್ತಪ್ಪ ತನ್ನ ನಿರ್ಧಾರದಿಂದ ಹಿಂದೆ ಸರಿಯಲಿಲ್ಲ.

ಉತ್ತಪ್ಪ ಟೀಮ್ ಇಂಡಿಯಾ ಪರ 46 ಏಕದಿನ ಪಂದ್ಯವನ್ನಾಡಿದ್ದಾರೆ. 6 ಅರ್ಧಶತಕಗಳನ್ನು ಒಳಗೊಂಡ 936 ರನ್ ಗಳಿಸಿದ್ದಾರೆ. ಗರಿಷ್ಠ ವೈಯಕ್ತಿಕ ಸ್ಕೋರ್ 86 ರನ್. 13 ಟ್ವೆಂಟಿ- 20 ಪಂದ್ಯಗಳಲ್ಲಿ 249 ರನ್, ಅರ್ಧಶತಕ 1, ಗರಿಷ್ಠ ಸ್ಕೋರ್ 50.

 2007ರಲ್ಲಿ ಚೊಚ್ಚಲ ಟ್ವೆಂಟಿ-20 ವಿಶ್ವಕಪ್ ಜಯಿಸಿದ ಮಹೇಂದ್ರ ಸಿಂಗ್ ಧೋನಿ ನಾಯಕತ್ವದ ಟೀಮ್ ಇಂಡಿಯಾದ ಸದಸ್ಯರಾಗಿದ್ದರು. 2015 ಜುಲೈ 19ರಂದು ಕೊನೆಯ ಬಾರಿ ಟೀಮ್ ಇಂಡಿಯಾ ಪರ ಆಡಿದ್ದರು. ಝಿಂಬಾಬ್ವೆ ವಿರುದ್ದದ ಈ ಪಂದ್ಯದಲ್ಲಿ ಉತ್ತಪ್ಪ 42 ರನ್ ಗಳಿಸಿದ್ದರು. ಆದರೆ ಬಳಿಕ ಅವರಿಗೆ ಟೀಮ್ ಇಂಡಿಯಾದಲ್ಲಿ ಅವಕಾಶ ಸಿಗಲಿಲ್ಲ. 2014ರಲ್ಲಿ ಐಪಿಎಲ್‌ನಲ್ಲಿ ಕೋಲ್ಕತಾ ನೈಟ್ ರೈಡರ್ಸ್‌ ತಂಡ ಸೇರಿದ್ದ ಉತ್ತಪ್ಪ ಕೋಲ್ಕತಾ ತಂಡ ಆ ವರ್ಷ ಐಪಿಎಲ್ ಚಾಂಪಿಯನ್ ಆಗಿ ಹೊರಹೊಮ್ಮುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News