ಬದುಕಿದ್ದಾಗಲೇ ಯಕೃತ್ತಿನ ದಾನ ಸಾಧ್ಯವೇ....?

Update: 2017-08-11 09:15 GMT

ಅಮೆರಿಕದ ತತ್ವಶಾಸ್ತ್ರಜ್ಞ ಹಾಗೂ ಮನಃಶಾಸ್ತ್ರಜ್ಞ ವಿಲಿಯಂ ಜೇಮ್ಸ್ ‘‘ಬದುಕು ಜೀವಿಸುವುದಕ್ಕೆ ಯೋಗ್ಯವೇ? ಅದು ಸಂಪೂರ್ಣವಾಗಿ ಯಕೃತ್ತನ್ನು ಅವಲಂಬಿಸಿರುತ್ತದೆ’’ ಎಂದು ಹೇಳಿದ್ದರು. ಅವರ ಈ ಮಾತು ಯಕೃತ್ತು ನಮ್ಮ ಶರೀರದಲ್ಲಿಯ ಅತ್ಯಂತ ಮುಖ್ಯ ಅಂಗ, ಅದಿಲ್ಲದೆ ನಾವು ಬದುಕಿರಲು ಸಾಧ್ಯವಿಲ್ಲ ಎನ್ನುವುದನ್ನು ಒತ್ತಿ ಹೇಳುತ್ತದೆ.

ಮುಖ್ಯ ಅಂಗಾಂಗಗಳು ಸೇರಿದಂತೆ ವಿವಿಧ ಅಂಗಗಳು ಮತ್ತು ಅಂಗಾಂಶಗಳಿಂದ ಮಾನವ ಶರೀರ ನಿರ್ಮಾಣಗೊಂಡಿದೆ ಎನ್ನುವುದು ಹೆಚ್ಚಿನವರಿಗೆ ಗೊತ್ತಿರಬಹುದು. ಮಿದುಳು, ಹೃದಯ, ಯಕೃತ್ತು, ಶ್ವಾಸಕೋಶಗಳು ಮತ್ತು ಮೂತ್ರಪಿಂಡಗಳು ನಮ್ಮ ಶರೀರದಲ್ಲಿ ಐದು ಅತ್ಯಂತ ಮುಖ್ಯ ಅಂಗಗಳಾಗಿವೆ. ಇವುಗಳ ಪೈಕಿ ಒಂದೇ ಒಂದು ಅಂಗ ಸರಿಯಾಗಿ ಕಾರ್ಯ ನಿರ್ವಹಿಸದಿದ್ದರೆ ಅದು ವ್ಯಕ್ತಿಯನ್ನು ಮಾರಣಾಂತಿಕ ಕಾಯಿಲೆಗೆ ಗುರಿ ಮಾಡಬಹುದು, ಹೀಗಾಗಿಯೇ ಇವುಗಳನ್ನು ಅತ್ಯಂತ ಮುಖ್ಯ ಅಂಗಗಳು ಎಂದು ಹೇಳಲಾಗುತ್ತದೆ.

ಉದಾಹರಣೆಗೆ ವ್ಯಕ್ತಿಯೋರ್ವನ ಹೃದಯ ಕೆಲವೇ ಕ್ಷಣಗಳ ಕಾಲ ರಕ್ತವನ್ನು ಪಂಪ್ ಮಾಡುವುದನ್ನು ನಿಲ್ಲಿಸಿದರೆ ಅದು ತೀವ್ರ ಹೃದಯಾಘಾತಕ್ಕೆ ಕಾರಣವಾಗುತ್ತದೆ ಮತ್ತು ಆ ವ್ಯಕ್ತಿ ಸಾವನ್ನಪ್ಪಬಹುದು. ಮಿದುಳು ಸಹಜವಾಗಿ ಕಾರ್ಯ ನಿರ್ವಹಿಸದಿದ್ದರೆ ಅದು ಮರೆವು, ಗೊಂದಲ ಇತ್ಯಾದಿಗಳಿಗೆ ಕಾರಣವಾಗಬಹುದು ಮತ್ತು ವ್ಯಕ್ತಿಯ ದೈನಂದಿನ ಚಟುವಟಿಕೆಗಳು ಬಾಧಿತಗೊಳ್ಳುತ್ತವೆ.

ಅತ್ಯಂತ ವಿಷಮ ಪ್ರಕರಣಗಳಲ್ಲಿ ಕಾಯಿಲೆಗಳು ಅಥವಾ ಅಪಘಾತಗಳಿಂದ ವ್ಯಕ್ತಿಯ ಅತ್ಯಂತ ಮುಖ್ಯ ಅಂಗಾಂಗಗಳಿಗೆ ಸರಿಪಡಿಸಲಾಗದಷ್ಟು ಹಾನಿಯುಂಟಾದರೆ ಅದು ಆತನ ಸಾವಿಗೆ ಕಾರಣವಾಗಬಹುದು. ಹೀಗಾಗಿ ವ್ಯಕ್ತಿಯೋರ್ವ ಆರೋಗ್ಯಪೂರ್ಣ ಬದುಕು ಸಾಗಿಸಲು ಮತ್ತು ಜೀವಂತವಾಗಿರುವಲ್ಲಿ ಈ ಅಂಗಾಂಗಗಳು ಮುಖ್ಯ ಪಾತ್ರ ವಹಿಸುತ್ತವೆ.

ಕಾಯಿಲೆಗಳು ಅಥವಾ ಅಪಘಾತದಿಂದಾಗಿ ಮುಖ್ಯ ಅಂಗಾಂಗಗಳು ಸರಿಪಡಿಸಲಾಗ ದಷ್ಟು ಹಾನಿಗೀಡಾದರೆ ಮತ್ತು ಕಾಲ ಮಿಂಚಿರದಿದ್ದರೆ ವ್ಯಕ್ತಿಯ ಜೀವವನ್ನುಳಿಸಲು ಅಂಗಾಂಗ ಕಸಿಯನ್ನು ಮಾಡಬಹುದಾಗಿದೆ.

ಅಂಗಾಂಗ ಕಸಿಯು ಅತ್ಯಂತ ಜಟಿಲ ಮತ್ತು ಮುಂದುವರಿದ ವೈದ್ಯಕೀಯ ವಿಧಾನವಾಗಿದ್ದು, ವೈದ್ಯರು ದಾನಿಯ ಆರೋಗ್ಯವಂತ ಅಂಗವನ್ನು ಹೊರತೆಗೆದು ಬದುಕುಳಿಯಲು ಆ ಅಂಗ ಅತ್ಯಗತ್ಯವಾಗಿರುವ ರೋಗಿಯ ಶರೀರದಲ್ಲಿ ಅಳವಡಿಸು ತ್ತಾರೆ.

 ಮಿದುಳು, ಹೃದಯಗಳಂತಹ ಕೆಲವು ಅಂಗಾಂಗಗಳನ್ನು ದಾನಿಯು ನಿಧನನಾದ ಹೊರತು ಆತನ ಶರೀರದಿಂದ ಹೊರತೆಗೆಯುವಂತಿಲ್ಲ. ಹಾಗಾದರೆ ದಾನಿಯು ಇನ್ನೂ ಬದುಕಿರುವಾಗಲೇ ಆತನ ಯಕೃತ್ತನ್ನು ಇನ್ನೋರ್ವ ವ್ಯಕ್ತಿಗೆ ಕಸಿ ಮಾಡಬಹುದೇ? ವಿಶ್ವ ಅಂಗಾಂಗ ದಾನ ದಿನ(2017,ಆ.13) ಸಮೀಪಿಸುತ್ತಿರುವ ಈ ಸಂದರ್ಭದಲ್ಲಿ ಈ ಬಗ್ಗೆ ತಿಳಿದುಕೊಳ್ಳೋಣ.

ಹೌದು,ವ್ಯಕ್ತಿಯೋರ್ವ ಬದುಕಿರುವಾಗಲೇ ಯಕೃತ್ತನ್ನು ದಾನ ಮಾಡಬಹುದು. ಮೂತ್ರಪಿಂಡ ಮತ್ತು ಯಕೃತ್ತು ಮಾತ್ರ ವ್ಯಕ್ತಿಯೋರ್ವ ತಾನು ಬದುಕಿರುವಾಗಲೇ ಅಗತ್ಯ ವುಳ್ಳವರಿಗೆ ದಾನ ಮಾಡಬಹುದಾದ ಪ್ರಮುಖ ಅಂಗಾಂಗಗಳಾಗಿವೆ.

 ವ್ಯಕ್ತಿಯೋರ್ವ ಆರೋಗ್ಯಪೂರ್ಣ ಜೀವನ ನಡೆಸಲು ಒಂದೇ ಮೂತ್ರಪಿಂಡ ಸಾಕಾಗುತ್ತದೆ. ಎರಡು ಮೂತ್ರಪಿಂಡಗಳಿರುವುದರಿಂದ ಒಂದು ಮೂತ್ರಪಿಂಡವನ್ನು ದಾನ ಮಾಡುವುದು ಸಾಧ್ಯವಾಗುತ್ತದೆ. ಆದರೆ ಮಾನವನ ಶರೀರದಲ್ಲಿ ಇರುವುದು ಒಂದೇ ಯಕೃತ್ತು, ಹೀಗಾಗಿ ಅದನ್ನು ದಾನ ಮಾಡಲು ಹೇಗೆ ಸಾಧ್ಯ ಎಂಬ ಪ್ರಶ್ನೆ ಸಹಜ. ಆದರೆ ವ್ಯಕ್ತಿ ಬದುಕಿರುವಾಗಲೇ ತನ್ನ ಯಕೃತ್ತಿನ ಸಣ್ಣ ಭಾಗವನ್ನು ದಾನ ಮಾಡಬ ಹುದು, ಇಡೀ ಯಕೃತ್ತನ್ನಲ್ಲ. ಯಕೃತ್ತಿನ ಜೀವಕೋಶಗಳು ಪುನರ್‌ಉತ್ಪತ್ತಿಯ ಸಾಮರ್ಥ್ಯವನ್ನು ಹೊಂದಿವೆ. ಹೀಗಾಗಿ ದಾನಿಯ ಯಕೃತ್ತಿನ ಭಾಗವನ್ನು ರೋಗಿಯ ಶರೀರದಲ್ಲಿ ಕಸಿ ಮಾಡಿದರೆ ಅದು ಆರೋಗ್ಯವಂತ ಯಕೃತ್ ಆಗಿ ಬೆಳವಣಿಗೆ ಹೊಂದುತ್ತದೆ.

ಇಷ್ಟೇ ಅಲ್ಲ, ದಾನಿಯು ತನ್ನ ಯಕೃತ್ತಿನ ಭಾಗವನ್ನು ದಾನ ಮಾಡಿದ ಬಳಿಕ ಆತನ ಯಕೃತ್ತು ಸಹ ಮತ್ತೆ ಪೂರ್ಣ ಪ್ರಮಾಣದಲ್ಲಿ ಬೆಳವಣಿಗೆ ಹೊಂದುತ್ತದೆ. ಆದರೆ ದಾನಿಯು ಜೀವಂತವಿರುವಾಗಲೇ ಯಕೃತ್ತನ್ನು ದಾನ ಮಾಡಬೇಕಾದರೆ ಅದಕ್ಕೆ ಕೆಲವು ಪೂರ್ವ ಅಗತ್ಯಗಳೂ ಇವೆ. ದಾನಿಯು ಆರೋಗ್ಯವಂತನಾಗಿರಬೇಕು ಮತ್ತು ಯಾವುದೇ ಸೋಕು ರೋಗವನ್ನು ಹೊಂದಿರಬಾರದು. ಯಕೃತ್ತಿನ ಭಾಗವನ್ನು ದಾನ ಮಾಡುವುದು ಯಾವಾಗಲೂ ಅಪಾಯವನ್ನೊಳಗೊಂಡಿರುತ್ತದೆ ಎನ್ನುವುದನ್ನು ಆತ ತಿಳಿದಿರಬೇಕಾಗುತ್ತದೆ. ಹೀಗಾಗಿ ದಾನಿಯು ರೋಗಿಗೆ ಯಕೃತ್ತನ್ನು ದಾನ ಮಾಡುವ ನಿರ್ಧಾರ ಕೈಗೊಳ್ಳುವ ಮುನ್ನ ವೈದ್ಯರೊಂದಿಗೆ ಸಮಾಲೋಚಿಸಿ, ಕಸಿಗೆ ಅನುಸರಿಸಲಾಗುವ ವಿಧಾನ ಮತ್ತು ಸಂಭಾವ್ಯ ಅಪಾಯಗಳ ಬಗ್ಗೆ ಅರಿತುಕೊಳ್ಳಬೇಕು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News