×
Ad

ಕನ್ನಡ ಪತ್ರಿಕೆಯಲ್ಲಿ ಆಂಗ್ಲಭಾಷೆ ಜಾಹೀರಾತು: ಕನ್ನಡ ಅಭಿವೃದ್ಧಿ ಪ್ರಾಧಿಕಾರ ಆಕ್ಷೇಪ

Update: 2017-08-11 21:00 IST

ಬೆಂಗಳೂರು, ಆ.11: ಜಲಸಂಪನ್ಮೂಲ ಇಲಾಖೆಯು ಜಾಹೀರಾತು, ಟೆಂಡರ್ ಅಧಿಸೂಚನೆಗಳನ್ನು ಕನ್ನಡ ಪತ್ರಿಕೆಯಲ್ಲಿ ಆಂಗ್ಲಭಾಷೆಯಲ್ಲಿ ನೀಡುತ್ತಿರುವುದಕ್ಕೆ ತೀವ್ರ ಆಕ್ಷೇಪಿಸಿರುವ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಪ್ರೊ.ಎಸ್.ಜಿ.ಸಿದ್ದರಾಮಯ್ಯ, ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳಿಗೆ ಎಚ್ಚರಿಕೆಯ ನೋಟಿಸ್ ನೀಡುವಂತೆ ಇಲಾಖೆ ಪ್ರಧಾನ ಕಾರ್ಯದರ್ಶಿಗೆ ಸೂಚಿಸಿದ್ದಾರೆ.

ಶುಕ್ರವಾರ ವಿಕಾಸಸೌಧದಲ್ಲಿ ಜಲಸಂಪನ್ಮೂಲ ಇಲಾಖೆಯ ಕನ್ನಡ ಅನುಷ್ಠಾನ ಪ್ರಗತಿ ಪರಿಶೀಲನೆ ನಡೆಸಿದ ಬಳಿಕ ಮಾತನಾಡಿದ ಅವರು, ಇಲಾಖೆ ಅಂತರ್ಜಾಲ ತಾಣ, ಟೆಂಡರ್ ಅಧಿಸೂಚನೆಗಳು, ದರಪಟ್ಟಿಗಳು ಆಂಗ್ಲಭಾಷೆಯಲ್ಲಿರುವುದು ಸರಕಾರದ ಆದೇಶ ಉಲ್ಲಂಘನೆ. ಕೂಡಲೇ ಸರಿಪಡಿಸಿಕೊಳ್ಳದಿದ್ದಲ್ಲಿ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮಕ್ಕೆ ಶಿಫಾರಸು ಮಾಡುವುದು ಎಂದು ಎಚ್ಚರಿಸಿದರು.

ಕನ್ನಡದ ಜನರ ನಾಡಿ ಮಿಡಿತವನ್ನು ಅರಿತರೇ ಮಾತ್ರ ಜಲಸಂಪನ್ಮೂಲದಂತಹ ಪ್ರಮುಖ ಇಲಾಖೆ ಜನಮುಖಿಯಾಗಿ ಸರಕಾರದ ಯೋಜನೆಗಳನ್ನು ಸಮರ್ಪಕವಾಗಿ ತಲುಪಿಸಲು ಸಾಧ್ಯ ಎಂದು ಸಿದ್ಧರಾಮಯ್ಯ, ಕನ್ನಡ ಭಾಷೆಯಲ್ಲೆ ಇಲಾಖೆ ಆಡಳಿತ ನಡೆಸಬೇಕೆಂದು ನಿರ್ದೇಶಿಸಿದರು.

ಕನ್ನಡ ಅನುಷ್ಠಾನಕ್ಕೆ ಸಂಬಂಧಿಸಿದಂತೆ 6 ತಿಂಗಳಲ್ಲಿ 16 ಜಿಲ್ಲೆಗಳಲ್ಲಿ ಪ್ರವಾಸ ಕೈಗೊಂಡು ಜಿಲ್ಲಾಡಳಿತದ ಮಟ್ಟದಲ್ಲಿ ಸೂಕ್ತ ಸೂಚನೆಗಳನ್ನು ನೀಡಲಾಗಿದ್ದು, ಸಚಿವಾಲಯ ಮಟ್ಟದ ಮತ್ತು ಇತರ ಪ್ರಮುಖ ಇಲಾಖೆಗಳಿಗೆ ಭೇಟಿ ನೀಡಿ ಕನ್ನಡವನ್ನು ಆಡಳಿತದ ಎಲ್ಲ ಹಂತಗಳಲ್ಲು ಕಡ್ಡಾಯವಾಗಿ ಜಾರಿಗೆ ತರುವಂತೆ ನಿರ್ದಿಷ್ಟ ಸೂಚನೆಗಳನ್ನು ನೀಡಲಾಗಿದೆ ಎಂದರು.

ಪ್ರಾಧಿಕಾರ ಕನ್ನಡದ ಕಾವಲು ಸಮಿತಿಯಾಗಿದ್ದು ಕನ್ನಡವನ್ನು ಕಾವಲು ಕಾಯುವ ರೀತಿಯಲ್ಲಿಯೇ ಕಾರ್ಯನಿರ್ವಹಿಸುತ್ತಿದೆ. ಈಗಾಗಲೇ ಸರಕಾರದ ವತಿಯಿಂದ 317 ಆದೇಶಗಳನ್ನು ಹೊರಡಿಸಿ, ಎಲ್ಲ ಹಂತಗಳಲ್ಲೂ ಕನ್ನಡದ ಅನುಷ್ಠಾನಕ್ಕೆ ಸ್ಪಷ್ಟ ನಿರ್ದೇಶನ ನೀಡಲಾಗಿದೆ.

ಆದರೂ ಹಲವು ಉನ್ನತ ಅಧಿಕಾರಿಗಳು ಮತ್ತು ಕೆಲ ಅಧಿಕಾರಿ, ನೌಕರರ ಇಚ್ಛಾಶಕ್ತಿಯ ಕೊರತೆ, ಉದಾಸೀನ ಮತ್ತು ನಿರ್ಲಕ್ಷ್ಯ ಧೋರಣೆಯಿಂದ ಕನ್ನಡಕ್ಕೆ ಹಿನ್ನಡೆಯಾಗುತ್ತಿರುವುದು ಪರಿಶೀಲನೆ ಅವಧಿಯಲ್ಲಿ ಕಂಡುಬಂದಿದೆ. ಇದರ ಜವಾಬ್ದಾರಿಯನ್ನು ಆಯಾ ಇಲಾಖೆಗಳ ಮುಖ್ಯಸ್ಥರೆ ಹೊರಬೇಕೆಂದು ಸೂಚಿಸಿದರು.

ಲೇಖಕ ಡಾ.ಸಿದ್ಧಲಿಂಗಯ್ಯ ಮಾತನಾಡಿ, ಪರಿಶೀಲನೆಗೆ ಬರುವ ಪೂರ್ವದಲ್ಲಿ ಎಚ್ಚೆತ್ತುಕೊಂಡಂತೆ ಕೆಲವೊಂದು ಕ್ರಮಗಳನ್ನು ಕೈಗೊಂಡಿರುವುದು ಕಂಡುಬಂದಿದ್ದು, ಇಲಾಖೆಯು ಇದನ್ನೇ ಮುಂದುವರಿಸಿ ಕನ್ನಡವನ್ನು ಆಡಳಿತದ ಎಲ್ಲ ಹಂತಗಳಲ್ಲೂ ಪಾಲಿಸುವಂತೆ ಸಲಹೆ ನೀಡಿದರು.

ಕನ್ನಡ ಪತ್ರಿಕೆಗಳಲ್ಲಿ ಆಂಗ್ಲ ಭಾಷೆಯಲ್ಲಿ ಜಾಹೀರಾತು ನೀಡುತ್ತಿರುವುದನ್ನು ಅಕ್ಷಮ್ಯ. ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು. ಪ್ರಧಾನ ಕಾರ್ಯದರ್ಶಿಗಳು ಕೆಲವೊಂದು ಟಿಪ್ಪಣಿಗಳನ್ನು ಆಂಗ್ಲಭಾಷೆಯಲ್ಲಿ ಬರೆಯುತ್ತಿರುವುದು ಕಂಡುಬಂದಿದ್ದು, ಇದನ್ನು ಕೂಡಲೇ ಸರಿಪಡಿಸಿಕೊಂಡು ಇತರರಿಗೂ ಮಾದರಿ ಅಗುವಂತೆ ನಡೆದುಕೊಳ್ಳುವುದು ಸೂಕ್ತ ಎಂದರು.

ನಾಡಿನ ನದಿಗಳೊಂದಿಗೆ, ಅಲ್ಲಿನ ಜನಜೀವನದೊಂದಿಗೆ ಸಂಪರ್ಕ ಹೊಂದಿರುವ ಜಲಸಂಪನ್ಮೂಲ ಇಲಾಖೆ ಕನ್ನಡ ಸಂಸ್ಕೃತಿ ಕಟ್ಟುವ ನಿಟ್ಟಿನಲ್ಲಿ ಕ್ರಮ ವಹಿಸಬೇಕು. ಜನರ ತೆರಿಗೆಯಿಂದ ಸರಕಾರ ನಡೆಯುತ್ತಿದ್ದು, ಅವರ ಸೇವಕರಾದ ನಾವು ಜನ ಮಾತನಾಡುವ ಭಾಷೆಯಲ್ಲಿಯೇ ವ್ಯವಹಾರ ನಡೆಸಬೇಕು. ಇದರ ನಡುವೆ ಬರುವ ಇಂಗ್ಲಿಷ್ ಗೋಡೆಯನ್ನು ಕೆಡವಿ ಕನ್ನಡದಲ್ಲಿಯೇ ಆಡಳಿತ ವ್ಯವಹಾರ ನಡೆಸಬೇಕು ಎಂದು ಕರೆ ನೀಡಿದರು.

 ಇಲಾಖೆಯ ಪ್ರಧಾನ ಕಾರ್ಯದರ್ಶಿಗಳು ಕನ್ನಡಪರ ಒಲವು ಹೊಂದಿದವರಾಗಿದ್ದು, ಅವರು ಇತರರಿಗೂ ಮಾದರಿಯಾಗುವಂತೆ ಆಡಳಿತ ನಡೆಸಬೇಕೆಂದು ಹೇಳಿದರು. ಪ್ರಧಾನ ಕಾರ್ಯದರ್ಶಿ ರಾಖೇಶ್ ಸಿಂಗ್, ಪ್ರಾಧಿಕಾರದ ಕಾರ್ಯದರ್ಶಿ ಡಾ.ಕೆ. ಮುರಳಿಧರ, ಸದಸ್ಯರಾದ ಪ್ರಕಾಶ್ ಜೈನ್, ಪ್ರಭಾಕರ ಪಟೇಲ್, ಗಿರೀಶ್ ಪಟೇಲ್ ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News