ದುಷ್ಕರ್ಮಿಗಳಿಂದ ಅಪಹರಣಕ್ಕೊಳಗಾಗಿದ್ದ ಯುವತಿಯನ್ನು ರಕ್ಷಿಸಿದ ಆಟೊ ಚಾಲಕ ಅಸ್ಗರ್ ಪಾಶಾ

Update: 2017-08-11 16:05 GMT

ಬೆಂಗಳೂರು, ಆ.11: ಮಧ್ಯರಾತ್ರಿ ಯುವತಿಯೊಬ್ಬಳನ್ನು ಮೂವರು ದುಷ್ಕರ್ಮಿಗಳು ಅಪಹರಿಸಿ ಅತ್ಯಾಚಾರಕ್ಕೆ ಯತ್ನಿಸಿದಾಗ ಆಕೆಯನ್ನು ಅವರಿಂದ ರಕ್ಷಿಸಲು ನೆರವಾದ ಆಟೊ ಚಾಲಕ ಅಸ್ಗರ್ ಪಾಶಾ ಅವರನ್ನು ನಗರ ಪೊಲೀಸ್ ಆಯುಕ್ತ ಟಿ.ಸುನೀಲ್‌ಕುಮಾರ್ ಸನ್ಮಾನಿಸಿದರು.

ಶುಕ್ರವಾರ ನಗರದ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಆಟೊ ಚಾಲಕ ಅಸ್ಗರ್ ಪಾಶಾ ಅವರನ್ನು ಪೊಲೀಸರು ಸನ್ಮಾನಿಸಿ 5 ಸಾವಿರ ರೂ. ಬಹುಮಾನ ನೀಡಿದರು. ಗುರುವಾರ ರಾತ್ರಿ ನಗರದ ಯಶವಂತಪುರದಲ್ಲಿ ಅಪಹರಣಕ್ಕೊಳಗಾದ ಯುವತಿಯನ್ನು ರಕ್ಷಿಸಲು ಅಸ್ಗರ್ ಪಾಶಾ ನೆರವಾಗಿದ್ದರು.

ಈ ಬಗ್ಗೆ ಪತ್ರಿಕೆಯೊಂದಿಗೆ ಮಾತನಾಡಿದ ಅಸ್ಗರ್‌ ಪಾಶಾ, "ತನ್ನ ಸೋದರನೊಂದಿಗೆ ಬಂದಿದ್ದ ಯುವತಿಯನ್ನು ಇಬ್ಬರು ಬಲವಂತವಾಗಿ ಎಳೆದುಕೊಂಡು ಹೋದರು. ಸೋದರನಿಗೆ ಥಳಿಸಿ ಆಕೆಯನ್ನು ಕರೆದುಕೊಂಡು ಹೋಗುತ್ತಿದ್ದುದು ನನಗೆ ಕಾಣಿಸಿತು. ಕೂಡಲೇ ನನ್ನ ಸ್ನೇಹಿತರಿಗೆ ಮೊಬೈಲ್‌ನಲ್ಲಿ ಮಾಹಿತಿ ನೀಡಿ, ಕಿಡಿಗೇಡಿಗಳು ಯುವತಿಯನ್ನು ಅಪಹರಣ ಮಾಡಿದರು ಎಂದು ಹೇಳಿದೆ. ಕೂಡಲೇ ಪೊಲೀಸರಿಗೆ ತಿಳಿಸಿದೆವು".

"ಬಳಿಕ ರಾತ್ರಿ ಗಸ್ತಿನಲ್ಲಿದ್ದ ಪೊಲೀಸರಾದ ಮುದ್ದರಾಜು, ನಟರಾಜು, ಪ್ರಸನ್ನ, ರಮೇಶ್ ಯುವತಿಯನ್ನು ಹುಡುಕಲು ಪ್ರಾರಂಭಿಸಿದರು. ಅಲ್ಲೇ 200 ಮೀಟರ್ ದೂರದಲ್ಲಿದ್ದ ಗೋದಾಮಿನಲ್ಲಿ ಒಬ್ಬ ಸಿಕ್ಕಿದ. ಆತನನ್ನು ಹಿಡಿದು ವಿಚಾರಿಸಿದಾಗ ಆ ಯುವತಿಯನ್ನು ಗೋದಾಮಿನಲ್ಲಿ ಕಟ್ಟಿಹಾಕಿದ್ದು ಗೊತ್ತಾಯಿತು" ಎಂದರು.

"ಕೂಡಲೇ ಪೊಲೀಸರು ಆ ಯುವತಿಯನ್ನು ರಕ್ಷಿಸಿದರು. ಆಗ ನಮಗೆ ಸಮಾಧಾನವಾಯಿತು. ಅವರು ಬಹಳ ಆತಂಕದಲ್ಲಿದ್ದರು. ನಾವು ಒಬ್ಬರನ್ನು ರಕ್ಷಿಸಿದರೆ ನಮ್ಮ ಮನೆಯ ಹೆಣ್ಣು ಮಕ್ಕಳನ್ನು ಮತ್ತೊಬ್ಬರು ರಕ್ಷಿಸುತ್ತಾರೆ" ಎಂದು ಅಸ್ಗರ್ ಪಾಶಾ ನುಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News