ಅಂತರ್ಜಲ ವೃದ್ಧಿಗೆ ಯೋಜನೆ ಸಿದ್ಧ: ಮುಖ್ಯಮಂತ್ರಿ
ಬೆಂಗಳೂರು, ಆ.11: ತ್ಯಾಜ್ಯ ನೀರು ಸಂಸ್ಕರಿಸಿ ಕೆರೆಗಳನ್ನು ತುಂಬಿಸುವ ಮೂಲಕ ಅಂತರ್ಜಲ ಮಟ್ಟ ಏರಿಸಲು ರಾಜ್ಯ ಸರಕಾರವು ಯೋಜನೆ ರೂಪಿಸಿದ್ದು, ಇದು ದೇಶದಲ್ಲೆ ಮೊದಲ ಪ್ರಯತ್ನವಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಶುಕ್ರವಾರ ‘ಹೆಬ್ಬಾಳ-ನಾಗವಾರ’ ಕಣಿವೆಯ ತ್ಯಾಜ್ಯ ನೀರು ಸಂಸ್ಕರಿಸಿ ಬೆಂಗಳೂರು ನಗರ, ಗ್ರಾಮಾಂತರ ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಯ ಕೆರೆಗಳನ್ನು ತುಂಬಿಸುವ ದೇಶದಲ್ಲೆ ಪ್ರಥಮವಾದ ಏತ ನೀರಾವರಿ ಯೋಜನೆಗೆ ದೇವನಹಳ್ಳಿಯ ಹಿರೇಅಮಾನಿ ಕೆರೆಯಲ್ಲಿ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು.
ಕೋಲಾರ, ರಾಮನಗರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ತುಮಕೂರು ಜಿಲ್ಲೆಗಳಿಗೆ ಕುಡಿಯುವ ನೀರು ಒದಗಿಸಲು 13 ಸಾವಿರ ಕೋಟಿ ರೂ.ವೆಚ್ಚದ ಎತ್ತಿನಹೊಳೆ ಯೋಜನೆ ಆರಂಭಿಸಲಾಗಿದೆ. ಆದರೆ, ಈ ಯೋಜನೆಗೆ ಕೆಲವರು ವಿರೋಧ ಮಾಡಿದರು ಎಂದು ಮುಖ್ಯಮಂತ್ರಿ ತಿಳಿಸಿದರು.
ಕೆರೆಗಳನ್ನು ರಾಜ್ಯ ಸರಕಾರ ಡಿನೋಟಿಫೈ ಮಾಡುವುದಿಲ್ಲ. ಅಂತಹ ಯಾವುದೆ ಪ್ರಸ್ತಾವನೆ ನಮ್ಮ ಮುಂದಿಲ್ಲ. ಆದರೂ, ರಿಯಲ್ ಎಸ್ಟೇಟ್ ಲಾಬಿ, ಬಿಲ್ಡರ್‌ಗಳ ಜೊತೆ ಸೇರಿ ಸರಕಾರ ಡಿನೋಟಿಫೈ ಮಾಡಲು ಹೊರಟಿದೆ ಎಂದು ಸುಳ್ಳು ಆರೋಪ ಮಾಡಲಾಗುತ್ತಿದೆ. ಅಭಿವೃದ್ಧಿ ವಿಚಾರದಲ್ಲಿ ರಾಜಕೀಯ ಮಾಡಬಾರದು ಎಂದು ವಿರೋಧ ಪಕ್ಷಗಳ ವಿರುದ್ಧ ಅವರು ಹಾರಿಹಾಯ್ದರು. ರೈತರು ಆತ್ಮಹತ್ಯೆ ಮಾಡಿಕೊಂಡರೆ, ಕೋಮುಗಲಭೆಯಲ್ಲಿ ಯಾರಾದರೂ ಮೃತಪಟ್ಟರೆ ಅಲ್ಲಿಯೂ ವಿರೋಧ ಪಕ್ಷಗಳು ರಾಜಕೀಯ ಮಾಡುತ್ತಾರೆ. ಹೆಣವನ್ನು ಮುಂದಿಟ್ಟುಕೊಂಡು ರಾಜಕೀಯ ಮಾಡಬಾರದು. ಅಧಿಕಾರದಲ್ಲಿದ್ದಾಗ ಮೂರು ಕಾಸಿನ ಕೆಲಸ ಮಾಡದವರು ಈಗ ಸರಕಾರದ ವಿರುದ್ಧ ಸುಳ್ಳು ಆರೋಪಗಳನ್ನು ಮಾಡಿಕೊಂಡು ತಿರುಗುತ್ತಿದ್ದಾರೆ ಎಂದು ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದರು.
ಬಿಜೆಪಿಯವರು ತಮ್ಮ ಜೇಬಿನಲ್ಲಿ 150 ಸ್ಥಾನಗಳನ್ನು ಇಟ್ಟುಕೊಂಡವರಂತೆ ಮಾತ್ತೆತಿದರೆ ‘ಮಿಷನ್ 150’ ಎನ್ನುತ್ತಾರೆ. ಜನ ಆಶೀರ್ವಾದ ಮಾಡಿದರೆ ತಾನೆ 150 ಸ್ಥಾನ ಗೆಲ್ಲುವುದು. ಇದು ಗುಜರಾತ್ ಹಾಗೂ ಉತ್ತರಪ್ರದೇಶವಲ್ಲ. ಇದು ಬಸವಣ್ಣ, ಕನಕದಾಸರು, ಕೆಂಪೇಗೌಡರು ಹುಟ್ಟಿದ ನಾಡು. ಇಲ್ಲಿಯ ಜನರು ರಾಜಕೀಯವಾಗಿ ಪ್ರಬುದ್ಧರಿದ್ದಾರೆ. ಇಲ್ಲಿ ನರೇಂದ್ರಮೋದಿ ಹಾಗೂ ಅಮಿತ್ ಶಾ ಆಟ ನಡೆಯುವುದಿಲ್ಲ ಮುಖ್ಯಮಂತ್ರಿ ವಾಗ್ದಾಳಿ ನಡೆಸಿದರು.
ನಮ್ಮ ಪಾಲಿಗೆ ಮತದಾರರೆ ದೇವರು. ನಾವು ಮಾಡಿರುವ ಕೆಲಸಗಳನ್ನು ಅವರ ಮುಂದಿಡುತ್ತೇವೆ. ನಮ್ಮ ಸರಕಾರ ನುಡಿದಂತೆ ನಡೆಯುತ್ತಿದೆ. ಮತದಾರರ ಆಶೀರ್ವಾದದಿಂದ ಮತ್ತೆ ಅಧಿಕಾರಕ್ಕೆ ಬರುತ್ತೇವೆ ಎಂದು ಸಿದ್ದರಾಮಯ್ಯ ವಿಶ್ವಾಸ ವ್ಯಕ್ತಪಡಿಸಿದರು.
ಕೋರಮಂಗಲ-ಚಲ್ಲಘಟ್ಟ ಕಣಿವೆಯ ತ್ಯಾಜ್ಯ ನೀರು ಸಂಸ್ಕರಿಸಿ ಕೋಲಾರದ ಕೆರೆಗಳನ್ನು ತುಂಬಿಸುವ ಕಾಮಗಾರಿ ಶೇ.40ರಷ್ಟು ಪೂರ್ಣಗೊಂಡಿದೆ. ನವೆಂಬರ್, ಡಿಸೆಂಬರ್ ವೇಳೆಗೆ ಕೆರೆಗಳಿಗೆ ನೀರು ಹರಿಯಲಿದೆ. 1340 ಕೋಟಿ ರೂ.ಗಳನ್ನು ಇದಕ್ಕಾಗಿ ವೆಚ್ಚ ಮಾಡಲಾಗುತ್ತಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಕೆರೆಗಳನ್ನು ತುಂಬಿಸುವ ಕಾಮಗಾರಿ 18 ತಿಂಗಳಲ್ಲಿ ಪೂರ್ಣಗೊಳ್ಳಲಿದೆ ಎಂದು ಅವರು ಹೇಳಿದರು. ‘ನಮ್ಮ ನಡಿಗೆ ದಲಿತರ ಮನೆಯ ಕಡೆಗೆ’ ಎಂಬ ಬಿಜೆಪಿಯವರ ಮಾತು ಢೋಂಗಿತನದಿಂದ ಕೂಡಿದೆ. ಅಧಿಕಾರದಲ್ಲಿದ್ದಾಗ ದಲಿತರಿಗಾಗಿ ಏನೂ ಮಾಡದೇ ಈಗ ಬಿಜೆಪಿಯವರು ನಾಟಕವಾಡುತ್ತಿದ್ದಾರೆ. ಪರಿಶಿಷ್ಟರ ಕಲ್ಯಾಣಕ್ಕೆ ಹೊಸ ಕಾಯಿದೆ, ಭಡ್ತಿ ಮತ್ತು ಕಾಮಗಾರಿಯಲ್ಲಿ ಮೀಸಲು ಸೌಲಭ್ಯ ತಂದವರು ನಾವು ಎಂದು ಮುಖ್ಯಮಂತ್ರಿ ತಿಳಿಸಿದರು.
ನಿಮಗೆ ನಿಜವಾಗಲೂ ದಲಿತರ ಬಗ್ಗೆ ಕಾಳಜಿಯಿದ್ದರೆ ಬಸವಣ್ಣನವರು ಮಾಡಿದಹಾಗೆ ‘ನಿಮ್ಮ ಹೆಣ್ಣುಮಕ್ಕಳನ್ನ ಅವರಿಗೆ ಕೊಟ್ಟು ಅವರ ಹೆಣ್ಣುಮಕ್ಕಳನ್ನ ನೀವು ತೆಗೆದುಕೊಳ್ಳಿ’ ಅಂದೆ ಅಷ್ಟೇ. ಬಿಜೆಪಿಯವರು ಈಗ ದಲಿತರ ಬಗ್ಗೆ ಮಾತನಾಡುವುದನ್ನೆ ನಿಲ್ಲಿಸಿದ್ದಾರೆ ಎಂದು ಸಿದ್ದರಾಮಯ್ಯ ಟೀಕಾಪ್ರಹಾರ ಮಾಡಿದರು.
ಸಹಕಾರ ಬ್ಯಾಂಕ್‌ಗಳ ಮೂಲಕ ರೈತರು ಮಾಡಿದ್ದ ಸಾಲವನ್ನು 50 ಸಾವಿರ ರೂ.ಗಳವರೆಗೆ ಮನ್ನಾ ಮಾಡಿದ್ದೇವೆ. ಈಗ ಕೇಂದ್ರ ಸರಕಾರ ವಾಣಿಜ್ಯ ಬ್ಯಾಂಕುಗಳಲ್ಲಿ ರೈತರು ಮಾಡಿರುವ ಸಾಲ ಮನ್ನಾ ಮಾಡಲಿ. ರೈತರ ಬಗ್ಗೆ ಮಾತನಾಡಲು ಬಿಜೆಪಿಯವರಿಗೆ ಯಾವುದೆ ನೈತಿಕತೆ ಇಲ್ಲ ಎಂದು ಮುಖ್ಯಮಂತ್ರಿ ಕಿಡಿಗಾರಿದರು.
ರೈತರ ಸಾಲ ಮನ್ನಾ ಮಾಡಿದರೆ ದೇಶದ ಆರ್ಥಿಕ ಪರಿಸ್ಥಿತಿ ಅಲ್ಲೋಲ ಕಲ್ಲೋಲವಾಗುತ್ತದೆ ಎನ್ನುವ ಕೇಂದ್ರ ಸರಕಾರ, ಉದ್ಯಮಿಗಳ 81 ಸಾವಿರ ಕೋಟಿ ರೂ. ಸಾಲ ಮನ್ನಾ ಮಾಡಿದೆ. ಇದು ರೈತರ ಬಗ್ಗೆ ಬಿಜೆಪಿಗೆ ಇರುವ ಅಸಡ್ಡೆಯನ್ನು ಎತ್ತಿ ತೋರಿಸುತ್ತದೆ ಎಂದು ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದರು.
ಇದೇ ಸಂದರ್ಭದಲ್ಲಿ ಸಮಾಜ ಕಲ್ಯಾಣ ಇಲಾಖೆವತಿಯಿಂದ ದೇವನಹಳ್ಳಿಯಲ್ಲಿ ನಿರ್ಮಿಸಲಾಗಿರುವ ಡಾ.ಬಿ.ಆರ್.ಅಂಬೇಡ್ಕರ್ ಭವನವನ್ನು ಮುಖ್ಯಮಂತ್ರಿ ಲೋಕಾರ್ಪಣೆಗೊಳಿಸಿದರು. ಸಚಿವರಾದ ಟಿ.ಬಿ.ಜಯಚಂದ್ರ, ಡಾ.ಎಚ್.ಸಿ. ಮಹದೇವಪ್ಪ, ಎಚ್.ಆಂಜನೇಯ, ಕೃಷ್ಣಭೈರೇಗೌಡ, ಸಂಸದ ಡಾ.ಎಂ.ವೀರಪ್ಪ ಮೊಯ್ಲಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.