×
Ad

ಅಮಿತ್ ಶಾ ರಾಜ್ಯಕ್ಕೆ ಆಗಮನ: ಬಿಜೆಪಿಯಲ್ಲೀಗ ರಾಜಕೀಯ ಉತ್ಸಾಹ

Update: 2017-08-11 22:07 IST

ಬೆಂಗಳೂರು, ಆ. 11: ಮುಂಬರುವ ವಿಧಾನಸಭೆ ಚುನಾವಣೆ ದೃಷ್ಟಿಯಿಂದ ಪಕ್ಷ ಸಂಘಟನೆ, ಮುಖಂಡರ ಮಧ್ಯೆ ಸಮನ್ವಯ ಮೂಡಿಸಲು ಬಿಜೆಪಿ ರಾಷ್ಟ್ರೀಯಾಧ್ಯಕ್ಷ ಅಮಿತ್ ಶಾ ನಾಳೆ(ಆ.12)ಯಿಂದ ಮೂರ ದಿನಗಳ ಕಾಲ ರಾಜ್ಯದಲ್ಲೆ ಠಿಕಾಣಿ ಹೂಡಲಿದ್ದಾರೆ.

ಶನಿವಾರ ಬೆಳಗ್ಗೆ 10:45ರ ಸುಮಾರಿಗೆ ಹೊಸದಿಲ್ಲಿಯಿಂದ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿಯಲಿರುವ ಅಮಿತ್ ಶಾ ಅವರಿಗೆ ಬಿಜೆಪಿ ಕಾರ್ಯಕರ್ತರು ಹಾಗೂ ಮುಖಂಡರು ಅದ್ದೂರಿ ಸ್ವಾಗತ ಕೋರಲಿದ್ದಾರೆ.

ಟೋಲ್‌ಗೇಟ್ ಸಮೀಪ 11.30ಕ್ಕೆ ಸಾರ್ವಜನಿಕ ಸಮಾವೇಶ ನಡೆಯಲಿದೆ. ಮಧ್ಯಾಹ್ನ 1ಗಂಟೆಗೆ ಮಲ್ಲೇಶ್ವರಂನಲ್ಲಿರುವ ಬಿಜೆಪಿ ಕೇಂದ್ರ ಕಚೇರಿಯಲ್ಲಿನ ಗ್ರಂಥಾಲಯ ಉದ್ಘಾಟನೆ ನೆರವೇರಿಸಲಿದ್ದಾರೆ. ಆ ಬಳಿಕ ಮಧ್ಯಾಹ್ನ 2ರಿಂದ 3:30ರ ವರೆಗೆ ಶಾಸಕರು ಹಾಗೂ ಮೇಲ್ಮನೆ ಸದಸ್ಯರೊಂದಿಗೆ ಸಮಾಲೋಚನೆ ನಡೆಸಲಿದ್ದಾರೆ. ಅನಂತರ ಪಕ್ಷದ ಜಿಲ್ಲಾಧ್ಯಕ್ಷರು, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳೊಂದಿಗೆ ಚರ್ಚಿಸಲಿದ್ದು, ಸಂಜೆ 6:30ರಿಂದ ನಗರದ ಖಾಸಗಿ ಹೊಟೇಲ್‌ನಲ್ಲಿ ಲೇಖಕರು, ಚಿಂತಕರು, ಕೈಗಾರಿಕೋದ್ಯಮಿಗಳು ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿನ ಗಣ್ಯರೊಂದಿಗೆ ಮಾತುಕತೆ ನಡೆಸಲಿದ್ದು, ರಾತ್ರಿ ಕುಮಾರಕೃಪ ಅತಿಥಿ ಗೃಹದಲ್ಲಿ ವಿಶ್ರಾಂತಿ ಪಡೆಯಲಿದ್ದಾರೆ.

ರವಿವಾರ ಬೆಳಗ್ಗೆ 11.30ಕ್ಕೆ ಮಂಡ್ಯ ಜಿಲ್ಲೆ ನಾಗಮಂಗಲ ತಾಲೂಕಿನಲ್ಲಿರುವ ಆದಿಚುಂಚನಗಿರಿ ಪೀಠಕ್ಕೆ ಭೇಟಿ ನೀಡಲಿದ್ದು, ಶ್ರೀ ಬಾಲಗಂಗಾಧರನಾಥ ಸ್ವಾಮೀಜಿಗಳ ‘ಸ್ಟೋರಿ ಆಫ್ ಗುರು’ ಕೃತಿ ಲೋಕಾರ್ಪಣೆ ಮಾಡಲಿದ್ದಾರೆ. ಅನಂತರ ಆದಿಚುಂಚನಗಿರಿ ಮಠದ ನಿರ್ಮಲಾನಂದನಾಥ ಸ್ವಾಮಿಯೊಂದಿಗೆ ಚರ್ಚಿಸಲಿದ್ದಾರೆ.

ಸಂಜೆ 4.30ಕ್ಕೆ ಜಿಂದಾಲ್‌ನಲ್ಲಿ ಪಕ್ಷದ ಜಿಲ್ಲಾ ಮುಖಂಡರ ಭೇಟಿ, ಸಂಜೆ 7 ಗಂಟೆಗೆ ಕನಕಪುರ ರಸ್ತೆಯಲ್ಲಿರುವ ಆರ್ಟ್ ಆಫ್ ಲಿವಿಂಗ್‌ನ ಶ್ರೀ ರವಿಶಂಕರ್ ಗುರೂಜಿ ಆಶೀರ್ವಾದ ಪಡೆದುಕೊಳ್ಳಲಿದ್ದಾರೆ. ಆ.14ರ ಸೋಮವಾರ 10ಗಂಟೆಗೆ ಆರೆಸೆಸ್ಸ್ ಮುಖಂಡರ ಭೇಟಿ ಮಾಡಲಿದ್ದಾರೆ.
ಮಧ್ಯಾಹ್ನ 1.30 ನಗರದ ಖಾಸಗಿ ಹೊಟೇಲ್‌ನಲ್ಲಿ ಮಾಧ್ಯಮಗೋಷ್ಠಿ ನಡೆಸಲಿದ್ದು, ಮಧ್ಯಾಹ್ನ 3ರಿಂದ ಸಂಜೆ 5ಗಂಟೆಯ ವರೆಗೆ ಬಿಜೆಪಿ ಎಸ್ಸಿ-ಎಸ್ಟಿ, ಹಿಂದುಳಿದ ವರ್ಗಗಳ ಮೋರ್ಚಾ ಮುಖಂಡರೊಂದಿಗೆ ಸಮಾಲೋಚನೆ ನಡೆಸಲಿದ್ದಾರೆ. ಅದೇ ದಿನ ಸಂಜೆ 7:30ಕ್ಕೆ ಹೊಸದಿಲ್ಲಿಗೆ ನಿರ್ಗಮಿಸಲಿದ್ದಾರೆ.

ಕಟ್ಟಪ್ಪಣೆ: ಗುಜರಾತ್ ರಾಜ್ಯಸಭೆ ಚುನಾವಣೆಯಲ್ಲಿ ಮೂರನೆ ಅಭ್ಯರ್ಥಿ ಸೋಲು ಹಾಗೂ ಅಹ್ಮದ್ ಪಟೇಲ್ ಗೆಲುವಿನಿಂದ ಪಕ್ಷಕ್ಕೆ ತೀವ್ರ ಮುಖಭಂಗವಾಗಿದೆ. ಹೀಗಾಗಿ ಮೂರು ದಿನಗಳ ರಾಜ್ಯ ಭೇಟಿ ಸಂದರ್ಭದಲ್ಲಿ ಯಾವುದೇ ಭಿನ್ನಮತ, ಗೊಂದಲ ಸೃಷ್ಟಿಸಬೇಡಿ ಎಂದು ಪಕ್ಷದ ಮುಖಂಡರಿಗೆ ಶಾ ಕಟ್ಟಪ್ಪಣೆ ಮಾಡಿದ್ದಾರೆಂದು ಗೊತ್ತಾಗಿದೆ.

‘ವಿಧಾನಸಭೆ ಚುನಾವಣೆಗೆ ಇನ್ನೂ 9 ತಿಂಗಳು ಬಾಕಿ ಇರುವ ಹಿನ್ನೆಲೆಯಲ್ಲಿ ಪಕ್ಷವನ್ನು ಚುನಾವಣೆಗೆ ಸನ್ನದ್ದುಗೊಳಿಸುವ ನಿಟ್ಟಿನಲ್ಲಿ ಮೂರು ದಿನಗಳ ಕಾಲ ಒಟ್ಟು 25ಕ್ಕೂ ಹೆಚ್ಚು ಸಭೆಗಳನ್ನು ನಡೆಸಲಿರುವ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ, ಆರೆಸೆಸ್ಸ್ ಹಾಗೂ ಬಿಜೆಪಿ ಮುಖಂಡರ ಮಧ್ಯೆ ಸಮನ್ವಯ ಮೂಡಿಸಿ, ಚುನಾವಣೆ ಗೆಲುವಿಗೆ ರಣತಂತ್ರ ಹೆಣೆಯಲಿದ್ದಾರೆ’

‘ನಟ ಉಪೇಂದ್ರ ಓರ್ವ ಚಿಂತನಾಶೀಲ ಕಲಾವಿದ. ಅವರು ರಾಜಕೀಯ ಸೇರ್ಪಡೆ ಅಚ್ಚರಿಯ ಸಂಗತಿಯೇನಲ್ಲ. ಆದರೆ, ಅವರು ಬಿಜೆಪಿ ಸೇರ್ಪಡೆ ಸಂಬಂಧ ಪಕ್ಷದ ಮಟ್ಟದಲ್ಲಿ ಯಾವುದೇ ಚರ್ಚೆ ನಡೆದಿಲ್ಲ. ರಾಜ್ಯಾಧ್ಯಕ್ಷರೊಂದಿಗೆ ಚರ್ಚಿಸಿದ್ದಾರೋ ಇಲ್ಲವೋ ನನಗೆ ಗೊತ್ತಿಲ್ಲ.’

-ಎಸ್.ಸುರೇಶ್ ಕುಮಾರ್ ಬಿಜೆಪಿ ವಕ್ತಾರ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News