ನಾವೆಷ್ಟು ಸ್ವತಂತ್ರರು?

Update: 2017-08-11 18:36 GMT

ಮಾನ್ಯರೆ,

ನಾವೀಗ ಇನ್ನೊಂದು ಸ್ವಾತಂತ್ರ್ಯ ದಿನಾಚರಣೆಯ ಹೊಸ್ತಿಲಲ್ಲಿದ್ದೇವೆ. ಆದರೆ ಬ್ರಿಟಿಷರ ಕಪಿ ಮುಷ್ಟಿಯಿಂದ ಭಾರತ ಬಿಡುಗಡೆ ಪಡೆದು, ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿ 70 ದಶಕಗಳು ಕಳೆದರೂ ದೇಶದ ಜನಸಾಮಾನ್ಯರಿಗಿನ್ನೂ ಸ್ವಾತಂತ್ರ್ಯವೆನ್ನುವುದು ಕನಸಿನ ಮಾತಾಗಿದೆ.

ಎಲ್ಲೆಲ್ಲೂ ನಡೆಯುತ್ತಿರುವ ಭ್ರಷ್ಟಾಚಾರ, ಭಯೋತ್ಪಾದನೆ, ಚಿಕ್ಕಮಕ್ಕಳು ಹಾಗೂ ಮಹಿಳೆಯರ ಮೇಲೆ ಅತ್ಯಾಚಾರ, ದೌರ್ಜನ್ಯ ದಿನನಿತ್ಯ ನಡೆಯುತ್ತಿದೆ. ನಮ್ಮ ದೇಶದ ಬೆನ್ನೆಲುಬಾದ ರೈತರ ಸಾಮೂಹಿಕ ಆತ್ಮಹತ್ಯೆಗಳು ಒಂದೆಡೆಯಾದರೆ, ಇನ್ನೊಂದೆಡೆ ಹೊಟ್ಟೆಗೆ ಆಹಾರವಿಲ್ಲದೆ, ವಾಸಿಸಲು ಮನೆಗಳಿಲ್ಲದೆ ಬಡವರು ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ. ಭ್ರಷ್ಟಾಚಾರವನ್ನು ನಿಗ್ರಹಿಸುವವರಿಂದಲೇ ಭ್ರಷ್ಟಾಚಾರ, ಪ್ರಜೆಗಳಿಗೆ ರಕ್ಷಣೆ ನೀಡುವ ಆರಕ್ಷಕರೇ ಭಕ್ಷಕರಾದರೆ ಸ್ವಾತಂತ್ರವೆಂಬುದು ಕನಸಿನ ಮಾತು. ದೇಶಕ್ಕಾಗಿ ತಮ್ಮ ಪ್ರಾಣವನ್ನೆ ಮುಡಿಪಾಗಿಟ್ಟ ಸೈನಿಕರ ಶವಪೆಟ್ಟಿಗೆಯಲ್ಲಿಯೂ ಭ್ರಷ್ಟಾಚಾರ, ಸೈನಿಕರಿಗೆ ನೀಡುವ ಆಹಾರದಲ್ಲಿಯೂ ಭ್ರಷ್ಟಾಚಾರ. ಆಡು ಮುಟ್ಟದ ಸೊಪ್ಪಿಲ್ಲದ ಹಾಗೆ ನಮ್ಮ ದೇಶದಲ್ಲಿ ಲಂಚ ಸ್ವೀಕರಿಸದೆ ಇರುವ ಇಲಾಖೆಗಳೇ ಇಲ್ಲದಂತಾಗಿದೆ.

ಪ್ರಜಾಪ್ರಭುತ್ವದಲ್ಲಿ ಜನಸೇವೆ ಮಾಡಲು ಜನಪ್ರತಿನಿಧಿಗಳಿರಬೇಕೆಂಬುದು ನಿಜ. ಆದರೆ ಇಂದು ಈ ವ್ಯವಸ್ಥೆಯನ್ನು ಸ್ವಾರ್ಥಿಗಳು ಹೈಜಾಕ್ ಮಾಡಿದ್ದಾರೆ ಮತ್ತು ಆ ಮೂಲಕ ಜನರ ಸ್ವಾತಂತ್ರ್ಯ ಹೇಗೆ ಹರಣವಾಗಿದೆ ಎಂಬುದನ್ನು ವಿವರಿಸಿ ಹೇಳಬೇಕಾಗಿಲ್ಲ. ಧರ್ಮವಿರುವುದು ಜನರನ್ನು ಸನ್ಮಾರ್ಗದಲ್ಲಿ ನಡೆಸುವುದಕ್ಕೆ. ಆದರೆ ಧಾರ್ಮಿಕ ನಾಯಕರೆನಿಸಿಕೊಂಡವರು ತಮ್ಮ ಅಸ್ತಿತ್ವ ಉಳಿಸಿಕೊಳ್ಳುವ ಸಲುವಾಗಿ ಅನುಯಾಯಿಗಳ ಸ್ವಾತಂತ್ರ್ಯ ಹರಣ ಮಾಡುತ್ತಿದ್ದಾರೆ. ಇಂದಿನ ವ್ಯವಸ್ಥೆಯಲ್ಲಿ ಪ್ರಾಮಾಣಿಕರಾಗಿ, ನ್ಯಾಯಯುತ ಮಾರ್ಗದಲ್ಲಿ ಬದುಕುವುದೆಂದರೆ ಸವಾಲಿನ ಸ್ಥಿತಿಯಾಗಿದೆ. ಇವನ್ನೆಲ್ಲ ನೋಡಿದ ಬಳಿಕ ನಾವು ಸ್ವತಂತ್ರವಾಗಿದ್ದೇವೆ ಎಂದು ಅನಿಸಲು ಸಾಧ್ಯವೇೀ? ಸತ್ಯಕ್ಕೆ ಸಂಪೂರ್ಣ ಸ್ವಾತಂತ್ರ್ಯ ಸಿಗದ ಹೊರತು ಸ್ವಾತಂತ್ರ್ಯ ಸಂಪೂರ್ಣವಲ್ಲ. ಈ ಹಿನ್ನೆಲೆಯಲ್ಲಿ ಯೋಚಿಸಿದಾಗ ನಾವು ಸ್ವತಂತ್ರ ಭಾರತದ ಪ್ರಜೆಗಳೇ ಎಂದು ಸಂಶಯ ಮೂಡುತ್ತದೆ.

Similar News