ಪುರುಷರ 200 ಮೀ. ಓಟ: ಗುಲಿಯೆವ್‌ಗೆ ಚಿನ್ನ

Update: 2017-08-11 18:41 GMT

ಲಂಡನ್, ಆ.11: ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಪುರುಷರ 200 ಮೀ. ಓಟದ ಫೈನಲ್‌ನಲ್ಲಿ ಟರ್ಕಿಯ ರಾಮಿಲ್ ಗುಲಿಯೆವ್ ಮೊದಲ ಸ್ಥಾನ ಪಡೆದು ಅಚ್ಚರಿ ಫಲಿತಾಂಶ ದಾಖಲಿಸಿದರು. 200 ಮೀ. ಹಾಗೂ 400 ಮೀ. ಓಟದಲ್ಲಿ ಚಾಂಪಿಯನ್ ಆಗಿ ಲೆಜೆಂಡ್ ಮೈಕಲ್ ಜಾನ್ಸನ್ ದಾಖಲೆಯನ್ನು ಸರಿಗಟ್ಟಬೇಕೆಂಬ ದಕ್ಷಿಣ ಆಫ್ರಿಕದ ವೇಯ್ಡಿ ವ್ಯಾನ್ ನೀಕೆರ್ಕ್ ಕನಸು ಕೈಗೂಡಲಿಲ್ಲ. ಅವರು ಎರಡನೆ ಸ್ಥಾನಕ್ಕೆ ತೃಪ್ತಿಪಟ್ಟರು.

ಗುಲಿಯೆವ್ 20.09 ಸೆಕೆಂಡ್‌ನಲ್ಲಿ ಗುರಿ ತಲುಪುವ ಮೂಲಕ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಟರ್ಕಿಯ ಖಾತೆಗೆ ಮೊದಲ ಚಿನ್ನ ಜಮೆ ಮಾಡಿದರು. 400 ಮೀ. ಚಾಂಪಿಯನ್ ನೀಕೆರ್ಕ್(2.11 ಸೆ.) ಹಾಗೂ ಟ್ರಿನಿಡಾಡ್ ಹಾಗೂ ಟೊಬಾಗೊದ ಜರೀಮ್ ರಿಚರ್ಡ್ಸ್(2.11 ಸೆ.) ಕ್ರಮವಾಗಿ ಬೆಳ್ಳಿ ಹಾಗೂ ಕಂಚು ಜಯಿಸಿದರು. ಅಸೌಖ್ಯದ ನಡುವೆಯೂ ಸ್ಪರ್ಧಿಸಿದ್ದ ಬೋಟ್ಸ್‌ವಾನಾದ ಇಸಾಕ್ ಮಕ್ವಾಲಾ 6ನೆ ಸ್ಥಾನ ಪಡೆದಿದ್ದಾರೆ.

ಉಳಿದೆರಡು ಫೈನಲ್ ಸ್ಪರ್ಧೆಗಳಲ್ಲಿ ಅಮೆರಿಕದ ಅಥ್ಲೀಟ್‌ಗಳು ಮೊದಲ ಹಾಗೂ ಎರಡನೆ ಸ್ಥಾನ ಪಡೆದಿದ್ದಾರೆ. ಕ್ರಿಸ್ಟಿಯನ್ ಟೇಲರ್ ಟ್ರಿಪಲ್ ಜಂಪ್‌ನಲ್ಲಿ ಮೂರನೆ ಬಾರಿ ವಿಶ್ವ ಪ್ರಶಸ್ತಿಯನ್ನು ಜಯಿಸಿದರು. ಟೇಲರ್‌ರ ಪ್ರತಿಸ್ಪರ್ಧಿ ವಿಲ್ ಕ್ಲೇ ಬೆಳ್ಳಿ ಜಯಿಸಿದ್ದಾರೆ. ಒಲಿಂಪಿಕ್ಸ್‌ನಲ್ಲಿ 400 ಮೀ. ಹರ್ಡಲ್ಸ್ ಚಾಂಪಿಯನ್ ಡಲಿಲ್ಹಾ ಮುಹಮ್ಮದ್ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನ ಜಯಿಸಲು ಸಾಧ್ಯವಾಗಲಿಲ್ಲ.

 ಅಝರ್‌ಬೈಜಾನ್ ಸಂಜಾತ 27ರ ಹರೆಯದ ಗುಲಿಯೆವ್ 2011ರಲ್ಲಿ ಟರ್ಕಿಯ ಪೌರತ್ವ ಪಡೆದಿದ್ದರು.

‘‘200 ಮೀ. ಓಟದಲ್ಲಿ ಜಯ ಸಾಧಿಸಿರುವುದಕ್ಕೆ ನನಗೆ ಅಚ್ಚರಿಯಾಗಲಿಲ್ಲ. ಈ ವರ್ಷ ಪದಕ ಜಯಿಸಲು ಬಯ ಸಿದ್ದೆ. ಇದು ನನ್ನಿಂದ ಸಾಧ್ಯವೆಂದು ದೃಢ ವಾದ ನಂಬಿಕೆಯಿತ್ತು. ನನ್ನ ಮೇಲೆ ವಿಶ್ವಾಸ ಇಟ್ಟುಕೊಂಡಿದ್ದೆ’’ ಎಂದು ಗುಲಿಯೆವ್ ಹೇಳಿದ್ದಾರೆ.

 2007ರ ಬಳಿಕ ಇದೇ ಮೊದಲ ಬಾರಿ ಉಸೇನ್ ಬೋಲ್ಟ್ ವಿಶ್ವ ಚಾಂಪಿಯನ್‌ಶಿಪ್‌ನ 200 ಮೀ. ಓಟದ ಸ್ಪರ್ಧೆಯಲ್ಲಿ ಭಾಗವಹಿಸಲಿಲ್ಲ. 2007ರ ಮೊದಲ ರೇಸ್‌ನಲ್ಲಿ ಬೆಳ್ಳಿ ಪದಕ ಜಯಿಸಿದ್ದ ಬೋಲ್ಟ್ ಆ ನಂತರ ನಡೆದ ಒಲಿಂಪಿಕ್ಸ್ ಹಾಗೂ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನದ ಪದಕ ಜಯಿಸುತ್ತಾ ಬಂದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News