ಹೀಗೊಂದು ಬೆಂಕಿ ಹಚ್ಚುವ ಪ್ರೇತಾತ್ಮ!

Update: 2017-08-12 12:03 GMT

ಭಾಗ 8

ಈಪ್ರೇತಾತ್ಮಗಳಿಗೆ ಧರ್ಮ, ಜಾತಿಗಳ ಕಟ್ಟಳೆಯಿಲ್ಲ. ಹೆಣ್ಣು ಗಂಡೆಂಬ ಭೇದವಿಲ್ಲ ಎಂಬುದು ನಮಗೆ ಈ ಪ್ರಕರಣವೊಂದರಿಂದ ಸ್ಪಷ್ಟವಾಯಿತು. ತನಗೆ ಅಗತ್ಯವಿದೆ ಎಂದಾಗ ಈ ಪ್ರೇತಾತ್ಮಗಳು ಹೇಗೆ, ಎಲ್ಲಿ ಬೇಕಾದರೂ ಪ್ರತ್ಯಕ್ಷವಾಗಿ ಬಿಡುತ್ತವೆ. ತಮ್ಮ ಸುತ್ತಮುತ್ತಲಿದ್ದವರ ಕಣ್ಣಿಗೆ ಮಣ್ಣೆರೆಚುವ ರೀತಿಯಲ್ಲಿ ತಮ್ಮ ಕೀಟಲೆಗಳನ್ನು ಮಾಡುತ್ತಾ, ಅವರಲ್ಲಿ ಭಯವನ್ನು ಹುಟ್ಟಿಸಿ ತಮ್ಮ ಬೇಳೆ ಬೇಯಿಸಿಕೊಳ್ಳುವುದು ಈ ಪ್ರೇತಾತ್ಮಗಳಿಗೆ ಚೆನ್ನಾಗಿ ಗೊತ್ತಿರುತ್ತದೆ!

ಹೌದು, ಈ ಪ್ರಕರಣದಿಂದ ನನಗನ್ನಿಸಿದ್ದು ಹೀಗೆ. 1989ರ ಸೆಪ್ಟಂಬರ್ ತಿಂಗಳು ಸ್ಥಳೀಯ ಕಾಲೇಜಿನ ಕೆಲ ವಿದ್ಯಾರ್ಥಿಗಳು ನಮ್ಮಲ್ಲಿಗೆ ಅಂದರೆ ವಿಚಾರವಾದಿಗಳ ಬಳಿ ಸಮಸ್ಯೆಯೊಂದನ್ನು ಹೊತ್ತು ತಂದಿದ್ದರು. ಸಮಸ್ಯೆಯನ್ನು ಕೇಳಿದಾಗ ನನಗೂ ಕೊಂಚ ಕಸಿವಿಸಿಯಾಗಿತ್ತು. ಯಾಕೆಂದರೆ ಈ ಬಾರಿ ಪ್ರೇತಾತ್ಮ ಕಾಡಿದ್ದು, ಕ್ರೈಸ್ತ ಕುಟುಂಬವೊಂದಕ್ಕೆ. ಕ್ರೈಸ್ತ ಧರ್ಮೀಯರು ಮೂಢನಂಬಿಕೆ, ಪ್ರೇತಾತ್ಮಗಳ ಬಗ್ಗೆ ನಂಬಿಕೆ ಹೊಂದಿರುವುದಿಲ್ಲ ಎಂಬುದು ನನ್ನ ಅನಿಸಿಕೆಯಾಗಿತ್ತು. ಹಾಗಾಗಿ ಈ ಪ್ರಕರಣ ನನಗೆ ಕೊಂಚ ವಿಚಿತ್ರದ ಜತೆಗೆ ಕುತೂಹಲಕಾರಿಯಾಗಿ ಕಂಡಿತ್ತು.

ಅಂದ ಹಾಗೆ, ಆ ಮಕ್ಕಳನ್ನು ಕ್ರೈಸ್ತ ಧರ್ಮಗುರುಗಳೊಬ್ಬರು ನಮ್ಮ ಬಳಿ ಕಳುಹಿಸಿ ದ್ದರು. ಮನೆಯೊಂದರಲ್ಲಿ ಪ್ರೇತಾತ್ಮದ ಕಾಟ ಮನೆಯವರನ್ನು ಮಾತ್ರವಲ್ಲ ಸುತ್ತಮುತ್ತಲಿನವರನ್ನೂ ಕಂಗೆಡಿಸಿತ್ತು. ಮನೆಯ ವಸ್ತುಗಳು ಚೆಲ್ಲಾಪಿಲ್ಲಿಯಾಗಿರುವುದು. ಮನೆಯ ಮೇಲೆ ಕಲ್ಲು ಬೀಳುವುದು. ಅಷ್ಟೇ ಅಲ್ಲ ಮನೆಯ ಸದಸ್ಯನೊ ಬ್ಬನಿಗೆ ಪ್ರೇತಾತ್ಮ ಕೊಲೆಯಾಗುವ ಬೆದರಿಕೆ ಪತ್ರವನ್ನು ಬರೆಯುವುದು!

ಕ್ರೈಸ್ತ ಧರ್ಮೀಯರ ಮನೆಗಳಲ್ಲಿ ಅದ್ಯಾವುದೇ ನಕಾರಾತ್ಮಕ ಶಕ್ತಿಗಳು ಸುಳಿಯದಂತೆ ಕ್ರೈಸ್ತ ಧರ್ಮಗುರುಗಳು ಮನೆಗಳಿಗೆ ಪವಿತ್ರ ಜಲವನ್ನು ಸಿಂಪಡಿಸುವ ಕ್ರಮವಿದೆ. ಇದೀಗ ಪ್ರೇತಾತ್ಮಗಳ ಸಮಸ್ಯೆ ಎದುರಿಸುತ್ತಿರುವ ಮನೆಯಲ್ಲೂ ಕ್ರೈಸ್ತ ಧರ್ಮಗುರುಗಳು ಈ ಪ್ರಯೋಗವನ್ನು ಮಾಡಿದ್ದರು. ಪವಿತ್ರ ಜಲ ಚಿಮುಕಿಸಿ ಮನೆಯನ್ನು ಶುದ್ಧ ಮಾಡಿದ್ದು ಮಾತ್ರವಲ್ಲದೆ, ಪವಿತ್ರ ಜಲದ ಬಾಟಲಿಯನ್ನೂ ಆ ಮನೆಯಲ್ಲಿ ಇರಿಸಲಾಯಿತು!

ಆದರೆ, ಪ್ರೇತಾತ್ಮದ ಕಾಟ ಮಾತ್ರ ನಿಂತಿರಲಿಲ್ಲ. ಆದ್ದರಿಂದ ಇದು ಹಿಂದೂ ಪ್ರೇತಾತ್ಮದ ಕಾಟವಿರಬಹುದು ಎಂದು ತಿಳಿದು ಮಾಂತ್ರಿಕರ ಮೊರೆ ಹೋಗಿಯೂ ಆಗಿತ್ತು. ಆದರೆ ಪ್ರಯೋಜನ ಮಾತ್ರ ಶೂನ್ಯವಾಗಿತ್ತು. ಪ್ರೇತಾತ್ಮ ತನ್ನ ಚೇಷ್ಟೆಗಳನ್ನು ಮುಂದುವರಿಸಿತ್ತು. ಮನೆಯವರ ನೆಮ್ಮದಿ ಹಾಳುಗೆಡವಿತ್ತು. ಸುತ್ತಮುತ್ತಲಿನವರನ್ನು ಆತಂಕಕ್ಕೆ ಗುರಿ ಮಾಡಿತ್ತು. ಇಷ್ಟೆಲ್ಲಾ ತೊಂದರೆಗಳ ಬಳಿಕ ವಿಚಾರವಾದಿಗಳ ಮೂಲಕ ಈ ಪ್ರೇತಾತ್ಮಕ್ಕೊಂದು ಪರಿಹಾರ ಸಿಗಬಹುದೆಂಬ ನೆಲೆಯಲ್ಲಿ ನಮಗೆ ಬುಲಾವ್ ಬಂದಿತ್ತು.

ನಮ್ಮ ತಂಡ ಸ್ಥಳಕ್ಕೆ ಭೇಟಿ ತನಿಖೆ ಆರಂಭಿಸಿದಾಗ, ಆ ಮನೆಯಲ್ಲಿ ವಿಸ್ಮಯಕಾರಿ ಘಟನೆಗಳು ಕಲ್ಲು ಎಸೆತದಿಂದ ಆರಂಭಗೊಂಡಿತು ಎಂಬ ಮಾಹಿತಿ ನಮಗೆ ಲಭ್ಯ ವಾಯಿತು. ಮನೆಯಲ್ಲಿನ ವಸ್ತುಗಳು ನಿಗೂಢವಾಗಿ ಕಣ್ಮರೆಯಾಗುವುದು ಮತ್ತು ಕಾಣಿಸಿಕೊಳ್ಳುವುದು. ಕೊನೆಗೆ ಆ ವಸ್ತುಗಳು ಬೆಂಕಿಗಾಹುತಿಯಾಗುವುದು. ಅಂದರೆ ಪ್ರೇತಾತ್ಮದಿಂದ ಆ ವಸ್ತುಗಳು ಬೆಂಕಿ ಹತ್ತಿಕೊಂಡು ಸುಟ್ಟುಹೋಗುವುದು!

ನಮ್ಮ ತಂಡಕ್ಕೆ ಮನೆಯ ಸುತ್ತಮುತ್ತ ಸುಟ್ಟ ಬಟ್ಟೆಗಳ ರಾಶಿ, ಸುಟ್ಟ ಹಾಸಿಗೆಗಳು, ಮುರಿದ ಬಾಟಲಿಗಳು ಹಾಗೂ ಖಾಲಿಯಾದ ಮನೆ. ಪ್ರೇತಾತ್ಮದ ಕಾಟದಿಂದ ಹೆದರಿದ ಮನೆಯಲ್ಲಿದ್ದ ಕುಟುಂಬವನ್ನು ಸಮೀಪದ ಚರ್ಚ್ ಮತ್ತು ವಿವಾಹ ಸಭಾಂಗಣಕ್ಕೆ ವರ್ಗಾಯಿಸಲಾಗಿತ್ತು. ಆ ಮನೆಯಲ್ಲಿ ಸೇರಿದ್ದ ಪ್ರೇತಾತ್ಮವನ್ನು ಹೊರಗಟ್ಟಲು ಅದಾಗಲೇ ಹಲವಾರು ತಾಂತ್ರಿಕರು, ಮಾಂತ್ರಿಕರು ಭೇಟಿ ನೀಡಿ ತಮ್ಮ ಪ್ರಯತ್ನಗಳನ್ನು ಮಾಡಿದ್ದರು. ಅದಕ್ಕಾಗಿ ಶುಲ್ಕವನ್ನೂ ಪಡೆದುಕೊಂಡಿದ್ದರು. ನಮ್ಮ ಭೇಟಿಯ ವೇಳೆ ಆ ಕಾಲದಲ್ಲಿ, ಆ ಕುಟುಂಬ ಸುಮಾರು 25,000 ರೂ.ಗಳನ್ನು ಅದಾಗಲೇ ಪ್ರೇತಾತ್ಮದ ಕಾಟದಿಂದ ತಪ್ಪಿಸಲು ಕಳೆದುಕೊಂಡಿರುವುದಾಗಿಯೂ ತಿಳಿದು ಬಂತು. ಮನೆಗೆ ತಾಗಿಕೊಂಡೇ ಅಂದರೆ ಮನೆಯ ಒಡೆತನದ ಅಂಗಡಿಗೆ ನಾವು ಭೇಟಿ ನೀಡಿದ ಸಂದರ್ಭ ತೆರೆದಿತ್ತು. ಕೆಲವೊಂದು ಗ್ರಾಹಕರೂ ಅಲ್ಲಿದ್ದರು. ಮನೆಯಲ್ಲಿದ್ದ ಪೀಠೋಪಕರಣಗಳನ್ನು ಹೊರಹಾಕಲಾಗಿತ್ತು. ಮನೆಯೊಳಗೆ ಕಾಗದ ಪತ್ರಗಳು. ಅಲ್ಲಲ್ಲಿ ನಿಗೂಢ ಕಾರ್ಯಗಳು ನಡೆದ ಕುರುಹುಗಳು. ಕುಂಕುಮ, ತೆಂಗಿನಕಾಯಿ ಅಲ್ಲಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದ ಸ್ಥಿತಿಯಲಿತ್ತು. ಅವೆಲ್ಲವನ್ನೂ ಹೊರಗೆಸೆಯುವಂತೆ ಆ ಮನೆಯ ಮಾಲಕಿಗೆ ನಾವು ತಿಳಿಸಿದೆವು. ಯಾಕೆಂದರೆ, ನಮ್ಮ ತನಿಖಾ ತಂಡವು ಪ್ರೇತಾತ್ಮ ಸಮಸ್ಯೆಗೆ ಕಂಡುಕೊಳ್ಳುವ ಪರಿಹಾರವನ್ನು ಯಾವುದೇ ತಾಂತ್ರಿಕರು, ಮಾಂತ್ರಿಕರು ಅದು ನಮ್ಮಿಂದ ಆಗಿರುವುದು ಎಂದು ಮತ್ತೆ ಮುಗ್ಧ ಜನರನ್ನು ನಂಬಿಸಬಾರದಲ್ಲವೇ. ಇಂತಹ ಅಸಂಗತ ಪರಿಸ್ಥಿತಿಗಳನ್ನು ನಾವು ಎದುರಿಸಿದ್ದೇವೆ. ನಮ್ಮಿಂದಾಗಿಯೇ ಪ್ರೇತೋಚ್ಚಾಟನೆ ಆಯಿತೆಂದು ಮತ್ತೆ ಅಂಧಶ್ರದ್ಧೆಯನ್ನು ಬಿತ್ತುವ ಕೆಲಸಕ್ಕೆ ನಮ್ಮ ಪ್ರಬಲವಾದ ವಿರೋಧವೂ ಇತ್ತು. ಇದಾದ ಬಳಿಕ ನಮ್ಮ ತಂಡ ಪ್ರಕರಣದ ಬೆನ್ನು ಹತ್ತಿತು. ವಿಸ್ತೃತವಾದ ವಿವರಗಳನ್ನು ಕಲೆ ಹಾಕಲು ಆರಂಭಿಸಿತು. ನಿಗೂಢತೆಯ ಹಿಂದಿನ ಸತ್ಯವನ್ನು ಬಯಲಿಗೆಳೆಯಲು ನಾವು ನಮ್ಮದೇ ಆದ ರೀತಿಯಲ್ಲಿ ಮುಂದುವರಿದೆವು.

ಅದೊಂದು ಅವಿಭಕ್ತ ಕ್ರೈಸ್ತ ಕುಟುಂಬ. ವೃದ್ಧ ತಂದೆ- ತಾಯಿ ಹಾಗೂ ನಾಲ್ವರು ಮಕ್ಕಳು. ಹಿರಿಯ ಮಗ ವಿವಾಹವಾಗಿ ತನ್ನ ಪತ್ನಿಹಾಗೂ ಮಕ್ಕಳೊಂದಿಗೆ ಪ್ರತ್ಯೇಕವಾಗಿ ವಾಸವಾಗಿದ್ದ. ಎರಡನೆ ಮಗ ವಿವಾಹವಾಗಿ ವಿದೇಶದಲ್ಲಿ ಕೆಲಸದಲ್ಲಿದ್ದ. ಆತನ ಪತ್ನಿ 10 ತಿಂಗಳ ಮಗುವಿನೊಂದಿಗೆ ಅತ್ತೆ ಮಾವಂದಿರ ಜತೆಗಿದ್ದಳು. ಮೂರನೆಯವಳು ಮಗಳು. ಆಕೆ ಕೂಡಾ ವಿವಾಹವಾಗಿ ತನ್ನ ಪತಿ ಮನೆಯಲ್ಲಿ ನೆಲೆಸಿದ್ದಳು. ಹಾಗಿದ್ದರೂ ಮಗಳ ಪತಿ ಅತ್ತೆ- ಮಾವಂದಿರ ಮನೆಯಲ್ಲಿ ಸಂಭವಿಸುತ್ತಿದ್ದ ಅತಿಮಾನುಷ ಘಟನೆಗಳಿಗೆ ಸಂಬಂಧಿಸಿ ನೆರವಾಗಲು ಬರುತ್ತಿದ್ದ. ತನ್ನಿಂದ ನೆರವನ್ನೂ ಮಾಡುತ್ತಿದ್ದ. ಕೊನೆಯ ಮಗ. ಆತನನ್ನು ನಾವು ರಾಬರ್ಟ್ ಎಂದು ಹೆಸರಿಸಿದ್ದೇವೆ (ಇದು ಆತನ ನಿಜ ಹೆಸರಲ್ಲ) ವಿಶೇಷವೆಂದರೆ ಪ್ರೇತಾತ್ಮ ಮುಖ್ಯವಾಗಿ ಈತನನ್ನೇ ತನ್ನ ಗುರಿಯಾಗಿಸಿತ್ತು. ಆತನಿಗೆ ಪ್ರೇತಾತ್ಮದಿಂದ ಎರಡು ಪತ್ರಗಳೂ ಬಂದಿದ್ದವು! ಆ ಪತ್ರದಲ್ಲಿ ಆತ ಮನೆ ಬಿಟ್ಟು ಹೋಗುವಂತೆ ಸೂಚಿಸಲಾಗಿತ್ತು. ಇಲ್ಲವಾದಲ್ಲಿ ನಿನಗೆ ಉಳಿಗಾಲವಿಲ್ಲ ಎಂಬ ರೀತಿಯ ಒಕ್ಕಣೆಯ ಬರಹಗಳು ಬೇರೆ! ಇವೆಲ್ಲದರ ನಡುವೆ ಸ್ಥಳೀಯ ರಾಜಕಾರಣಿಯೊಬ್ಬ ಆ ಮನೆಯ ಆಸುಪಾಸಿನಲ್ಲಿ ಆಗಾಗ್ಗೆ ಕಂಡು ಬರುತ್ತಿದ್ದ. ಕೇಳಿದಾಗ ಆತ, ಆ ಕುಟುಂಬದ ಹಿತಚಿಂತಕನೆಂಬ ಉತ್ತರ ನಮಗೆ ದೊರಕಿತ್ತು. ಆತ ನಮಗೆ ಉಪದೇಶವನ್ನೂ ಮಾಡಿದ್ದ. ಅದು ಕುಟುಂಬಕ್ಕೆ ಬಂದಿರುವ ಪ್ರೇತಾತ್ಮದ ಸಮಸ್ಯೆ. ನಿಮ್ಮ ತಂಡ ಅದಕ್ಕೆ ಕಂಡುಕೊಳ್ಳುತ್ತಿರುವ ತನಿಖೆಯಿಂದ ಯಾವುದೇ ಪ್ರಯೋಜನವಿಲ್ಲ. ಬದಲಾಗಿ ಆ ಮನೆಯಲ್ಲಿ ಪ್ರೇತಾತ್ಮವಿರುವುದನ್ನು ನಂಬಿಕೊಂಡು ಆದರ ಸಮಸ್ಯೆಯಿಂದ ಆ ಕುಟುಂಬವನ್ನು ರಕ್ಷಿಸಲು ಮುಂದಾಗಿ ಎಂದಿದ್ದ. ಆತನ ಉಪದೇಶಕ್ಕೆ ನಾವು ಧನ್ಯವಾದ ಸಲ್ಲಿಸಿ ನಮ್ಮ ರೀತಿಯಲ್ಲಿ ನಾವು ಪ್ರೇತಾತ್ಮಕ್ಕೆ ಒಂದು ಗತಿ ಕಾಣಿಸಲು ಸಿದ್ಧತೆ ನಡೆಸಿದ್ದೆವು.

ನಮ್ಮ ತನಿಖಾ ತಂಡವು ಎಲ್ಲಾ ರೀತಿಯ ವಿಚಾರಣೆ, ಪರಿಶೀಲನೆ, ಮನೆಯವರ ಮಾತುಗಳನ್ನು ಆಲಿಸಿದ ನಂತರ ಸ್ಪಷ್ಟವಾದ ಚಿತ್ರಣವೊಂದನ್ನು ಪಡೆದಿತ್ತು. ಪ್ರೇತಾತ್ಮವನ್ನು ಹುಡುಕುವಲ್ಲಿ ಯಶಸ್ವಿಯಾಗಿತ್ತು. ಆದರೆ ನಾವು ಮತ್ತಷ್ಟು ಮಾಹಿತಿಯನ್ನು ಕಲೆ ಹಾಕಲು ಬಯಸಿದ್ದೆವು. ನಮ್ಮ ಸ್ಪಷ್ಟತೆಯನ್ನು ಮತ್ತಷ್ಟು ನಿಖರಗೊಳಿಸಲು ನಾವು ಸಮಾಜ ಸೇವಕರೊಬ್ಬರಿಗೆ ಮಾಹಿತಿಯನ್ನು ನೀಡಿದೆವು. ಆದರೆ ಅವರು ಮಾತ್ರ ಯಾವುದೇ ಪ್ರಗತಿಯನ್ನು ಕಾಣಲು ವಿಫಲರಾದರು. ಕೊನೆಗೆ ನಮ್ಮ ತಂಡದವರೇ ಪ್ರೇತಾತ್ಮದ ಜತೆ ಪಂಥಾಹ್ವಾನಕ್ಕೆ ಮುಂದಾದೆವು. ನಾವು ನೇರವಾಗಿ ಮನೆಯವರಲ್ಲಿ ಮಾತನಾ ಡುತ್ತಾ, ಪ್ರೇತಾತ್ಮವನ್ನು ಸೃಷ್ಟಿಸಿರುವವರು ನಿಮ್ಮಲ್ಲಿರುವವರೇ. ಅದನ್ನು ನಿಲ್ಲಿಸಿ ಇಲ್ಲವಾದಲ್ಲಿ ನಾವು ನಾವೇ ಆ ಪ್ರೇತಾತ್ಮದ ಸೃಷ್ಟಿಕರ್ತರನ್ನು ಎಲ್ಲರೆದುರು ಬಹರಂಗಪಡಿಸುವುದಾಗಿ ತಿಳಿಸಿದೆವು. ಇದು ಮನೆಯವರನ್ನು ಗಲಿಬಿಲಿಗೊಳಿಸಿತು. ಆ ಮನೆಯ ಯುವಕ ರಾಬರ್ಟ್ ಕ್ರೋಧಿತನಾಗಿದ್ದ. ಆತ ಯಾರೆಂಬುದನ್ನು ಬಹಿರಂಗಪಡಿಸುವಂತೆ ನಮ್ಮನ್ನು ಒತ್ತಾಯಿಸಿದ. ಆದರೆ ನಾವು ಹಾಗೆ ಮಾಡಲಿಲ್ಲ. ಇದು ಆ ಮನೆಯಲ್ಲಿ ಗಲಾಟೆ, ಬೈಗುಳ, ಪರಸ್ಪರ ಮೇಲೆ ಆಪಾದನೆಗೆ ಕಾರಣವಾಯಿತು. ನಮ್ಮ ಮೇಲೆಯೇ ಆಪಾದನೆಗಳ ಸುರಿಮಳೆಯೂ ನಡೆಯಿತು. ಆದರೆ ನಾವು ಇದ್ಯಾವುದಕ್ಕೂ ತಲೆಕೆಡಿಸಿಕೊಳ್ಳಲಿಲ್ಲ. ನಾವು ಆ ದಿನ ಸ್ಥಳೀಯ ಕೆಲವು ಯುವಕರನ್ನು ಆ ಮನೆಯವರ ಜತೆ ಇರುವಂತೆ ಹೇಳಿ ಅಲ್ಲಿಂದ ಹೊರಟೆವು. ಸೇವಕರ ನೆರವನ್ನು ಪಡೆಯಲು ಮುಂದಾದೆವು. ನಾವು ಹೊರಟ ಒಂದು ಗಂಟೆಯಲ್ಲೇ ದೂರವಾಣಿ ಕರೆಯೊಂದು ನಮಗೆ ಬಂದಿತ್ತು. ಆ ಮನೆಯಲ್ಲಿ ಮತ್ತೆ ಪ್ರೇತಾತ್ಮದ ಕಾಟ ಆರಂಭವಾಗಿರುವುದಾಗಿ ಯುವಕನೊಬ್ಬ ನಮಗೆ ಸುದ್ದಿ ಮುಟ್ಟಿಸಿದ್ದ. ನಾವು ಸ್ಥಳಕ್ಕೆ ತಲುಪುವ ವೇಳೆ ಮನೆಯ ಹೊರಗಡೆ ಜನಸ್ತೋಮವೇ ನೆರೆದಿತ್ತು. ಮನೆಯೊಳಗೂ ಜನ ಸೇರಿದ್ದರು. ಧರ್ಮಗುರುಗಳು ಪವಿತ್ರ ಜಲವನ್ನು ಪ್ರೋಕ್ಷಣೆ ಮಾಡುತ್ತಿದ್ದರು. ಅಲ್ಲಿ ನಡೆದ ಘಟನೆಯ ಬಗ್ಗೆ ವಿವರ ಕೇಳಿದಾಗ, ಮನೆಯ ಹೊರಗಿದ್ದ ಬಾಟಲಿಯೊಂದು ಇನ್ನೊಂದು ಜಾಗಕ್ಕೆ ತನ್ನ ಸ್ಥಾನವನ್ನು ಬದಲಿಸಿತ್ತು. ಗಾಜಿನ ಟಂಬ್ಲರೊಂದು ಒಂದು ಕೋಣೆಯಿಂದ ಮತ್ತೊಂದು ಕೋಣೆಗೆ ಸ್ಥಾನಪಲ್ಲಟಗೊಂಡಿತ್ತು!

ನಮಗೆ ಕರೆ ಮಾಡಿದ್ದ ವ್ಯಕ್ತಿ ಅದನ್ನೆಲ್ಲಾ ಒಂದು ಕಡೆ ಜೋಡಿಸಿಟ್ಟಿದ್ದ. ರಾಬರ್ಟ್ ತೀರಾ ಆತಂಕಕ್ಕೀಡಾಗಿದ್ದ. ಆತನಿಗೆ ನಾವು ಧೈರ್ಯ ತುಂಬಿದೆವು. ಅಂತಹ ಯಾವುದೇ ಅತಿಮಾನುಷ ಶಕ್ತಿ ನಮ್ಮ ಕಣ್ಣಿನಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ನೀನು ಧೈರ್ಯ ವಾಗಿರು. ನಿನ್ನ ಕಣ್ಣಾರೆ ಅಂತಹ ಶಕ್ತಿಯನ್ನ ಕಂಡರೆ ನೀನು ಅಧೀರನಾಗದೆ ನಮಗೆ ಕರೆ ಮಾಡು ಎಂದು ಹೇಳಿ ಹೊರಟೆವು. ಕೆಲ ಯುವಕರಿಗೆ ಆ ಮನೆಯ ಮೇಲೆ ಯಾರಿಗೂ ಅರಿವಿಲ್ಲದಂತೆ ಗಮನವಿರಿಸಲು ಹೇಳಿ ತೆರಳಿದ್ದೆವು. ಅಂತೂ ಆ ಪ್ರೇತಾತ್ಮ ವನ್ನು ಬಹಿರಂಗವಾಗಿ ಹಿಡಿಯಬೇಕೆಂದು ನಾವು ನಿರ್ಧರಿಸಿಬಿಟ್ಟೆವು. ಆ ಭೂತದ ಮನೆ ಹಾಗೂ ಆ ಮನೆಯರ ಮೇಲೆ ರಾತ್ರಿ ನಿಗಾ ಇರಿಸಲು ಸೂಚಿಸಿದ್ದ ಯುವಕರ ತಂಡವೊಂದು ವ್ಯೆಹಾತ್ಮಕ ತಂತ್ರವೊಂದನ್ನು ಹೆಣೆಯಿತು. ಮನೆಯವರ ಬಳಿ ಆ ತಂಡವು ನಾವು ಊಟಕ್ಕೆ ಹೋಗಿ ಬರುವುದಾಗಿ ತಿಳಿಸಿ ಹೊರಟಿತು. ಅವರಲ್ಲಿ ಒಬ್ಬಾತ ಕತ್ತಲೆಯಲ್ಲಿ ಅಡಗಿ ಮನೆಯಲ್ಲಿ ಘಟಿಸುತ್ತಿದ್ದ ಚಲನವಲನಗಳ ಬಗ್ಗೆ ನಿಗಾ ಇರಿಸಿದ್ದ. ಕೆಲ ಸಮಯದ ನಂತರ ಇಬ್ಬರು ಮಹಿಳೆಯರು ಅದೇ ಅತ್ತೆ ಮತ್ತೆ ಸೊಸೆ ಮನೆಯ ಸುತ್ತಮುತ್ತ ಸುತ್ತಾಡಲಾರಂಭಿಸಿದರು. ಯಾರಾದರೂ ತಮ್ಮನ್ನು ಗಮನಿಸುತ್ತಿದ್ದಾರೆಯೇ ಎಂಬುದು ಅವರ ಗುಮಾನಿಯಾಗಿತ್ತು. ಯಾರೂ ಕಾಣಿಸದ್ದನ್ನು ಕಂಡು ಸೊಸೆ ತನ್ನ ಸೀರೆಯ ಅಂಚಿನಲ್ಲಿ ಕಟ್ಟಿಕೊಂಡಿದ್ದ ಮೊಟ್ಟೆಯನ್ನು ಹೊರತೆಗೆದು ಗೋಡೆಗೆ ಅದನ್ನು ಒಡೆದು ಒಳ ಹೋದಳು. ಕೆಲ ಹೊತ್ತಿನ ಬಳಿಕ ಆ ಯುವಕರ ತಂಡ ಮನೆಯೊಳಗೆ ಪ್ರವೇಶಿಸಿತು. ತಕ್ಷಣ ಮನೆಯವರು ಪ್ರೇತಾತ್ಮ ಮೊಟ್ಟೆ ಒಡೆದು ಹೋದದ್ದನ್ನು ಅವರಿಗೆ ತೋರಿಸಿತು. ಅದು ಯಾರು ಮಾಡಿದ್ದೆಂದು ಆ ತಂಡಕ್ಕೆ ಸ್ಪಷ್ಟವಾಗಿದ್ದರಿಂದ ಅವರು ಮಾತನಾಡದೆ, ಕರ್ಚೀಫಿನಲ್ಲಿ ಆ ಒಡೆದು ಹೋಗಿದ್ದ ಮೊಟ್ಟೆಯ ತುಂಡುಗಳನ್ನು ಎತ್ತಿಕೊಂಡು ಪ್ಲಾಸ್ಟಿಕ್ ಚೀಲಕ್ಕೆ ತುಂಬಿದರು. ಕುಟುಂಬದ ಸದಸ್ಯರಲ್ಲಿ ಅವರು, ಇದನ್ನು ನಾವು ಪೊಲೀಸರಿಗೆ ನೀಡುತ್ತಿದ್ದು, ಬೆರಳಚ್ಚಿನ ಮೂಲಕ ಈ ಕೃತ್ಯ ಯಾರು ನಡೆಸಿದ್ದೆಂಬುದು ಸಾಬೀತಾಗಲಿದೆ ಎಂದು ಹೇಳಿಬಿಟ್ಟರು. ಅದಾಗ ಮೊಟ್ಟೆ ಒಡೆದಿದ್ದ ಮಹಿಳೆ ಅಂದರೆ ಸೊಸೆಯ ಮುಖ ಸಂಪೂರ್ಣ ಬಿಳುಚಿಕೊಂಡಿತ್ತು. ಒಟ್ಟಿನಲ್ಲಿ ಮಹಿಳೆಯರಿಬ್ಬರ ಕುತಂತ್ರ ಈ ಪ್ರೇತಾತ್ಮದ ಬೆಂಕಿಯ ಪ್ರಹಸನ ಎಂಬುದು ಅಷ್ಟು ಹೊತ್ತಿಗಾಗಲೇ ಸ್ಪಷ್ಟಗೊಂಡಿತ್ತು.

ಈ ಬಗ್ಗೆ ಮುಂದಿನ ವಿಚಾರಣೆಯ ವೇಳೆ ಸಂಪೂರ್ಣ ಸತ್ಯ ಹೊರಬಿದ್ದಿತ್ತು. ಆ ಮನೆ ಮತ್ತು ಅಂಗಡಿಯನ್ನು ಮನೆ ಮಹಿಳೆಯರಿಬ್ಬರು ಮನೆಯ ಅಕ್ಕಪಕ್ಕ ಆಗಾಗ್ಗೆ ಕಂಡು ಬರುತ್ತಿದ್ದ ಜನಪ್ರತಿನಿಧಿಗೆ ಮಾರಲು ನಿರ್ಧರಿಸಿದ್ದರು. ಆತ ಅದನ್ನು ಬೇರೆಯವರಿಗೆ ಮಾರಿ ಅದರಿಂದ ಬಂದ ಹಣವನ್ನು ಹಂಚಿಕೊಳ್ಳಲು ನಿರ್ಧಾರವಾಗಿತ್ತು. ಭೂತ ಸೇರಿದ ಮನೆಯಾದ್ದರಿಂದ ಅದಕ್ಕೆ ಸಿಗುವ ಬೆಲೆಯ ಬಗ್ಗೆ ಯಾರೂ ತಲೆಕೆಡಿಸಿಕೊಳ್ಳಬೇಕಾಗಿರಲಿಲ್ಲ. ಆದರೆ ಮನೆಯ ಕೊನೆಯ ಮಗ ರಾಬರ್ಟ್ ಇದಕ್ಕೆ ವಿರೋಧವಾಗಿದ್ದ. ಆದ ಕಾರಣ ಆತನನ್ನೇ ಗುರಿಯಾಗಿಸಿ ಕುಚೇಷ್ಟೆಗಳು ಆರಂಭವಾಗಿದ್ದವು. ಇಂತಹ ಪ್ರೇತಾತ್ಮದ ಕಟ್ಟು ಕಥೆಯ ಮೂಲಕ ಮನೆಯಲ್ಲಿದ್ದವರು ಆ ಮನೆ ಬಿಟ್ಟು ಹೋಗುವಂತೆ ಮತ್ತು ಬೇರೆ ಯಾರೂ ಆ ಮನೆಯನ್ನು ಖರೀದಿಸದಂತೆ ನಡೆಸಿದ ಒಟ್ಟು ಪ್ಲಾನ್ ಇದಾಗಿತ್ತು.

ಅಂತೂ ಕೊನೆಗೆ ಮನೆಯಿಂದ ಪ್ರೇತ ಉಚ್ಚಾಟನೆಗೊಂಡಿತ್ತು. ಜತೆಗೆ ರಾಬರ್ಟ್ ಮತ್ತು ಆತನ ತಂದೆ ಎಂದಿಗೂ ಆ ಮನೆಯನ್ನು ಮಾರದಿರಲು ನಿರ್ಧರಿಸಿದರು. ಸೊಸೆ ತನ್ನ ತಾಯಿ ಮನೆಗೆ ತೆರಳಿದಳು.

ನಮ್ಮ ತಂಡ ಸ್ಥಳಕ್ಕೆ ಭೇಟಿ ತನಿಖೆ ಆರಂಭಿಸಿದಾಗ, ಆ ಮನೆಯಲ್ಲಿ ವಿಸ್ಮಯಕಾರಿ ಘಟನೆಗಳು ಕಲ್ಲು ಎಸೆತದಿಂದ ಆರಂಭಗೊಂಡಿತು ಎಂಬ ಮಾಹಿತಿ ನಮಗೆ ಲಭ್ಯ ವಾಯಿತು. ಮನೆಯಲ್ಲಿನ ವಸ್ತುಗಳು ನಿಗೂಢವಾಗಿ ಕಣ್ಮರೆಯಾಗುವುದು ಮತ್ತು ಕಾಣಿಸಿಕೊಳ್ಳುವುದು. ಕೊನೆಗೆ ಆ ವಸ್ತುಗಳು ಬೆಂಕಿಗಾಹುತಿಯಾಗುವುದು. ಅಂದರೆ ಪ್ರೇತಾತ್ಮದಿಂದ ಆ ವಸ್ತುಗಳು ಬೆಂಕಿ ಹತ್ತಿಕೊಂಡು ಸುಟ್ಟುಹೋಗುವುದು!

ಮುಂದುವರಿಯುವುದು

Writer - ನಿರೂಪಣೆ: ಸತ್ಯಾ ಕೆ.

contributor

Editor - ನಿರೂಪಣೆ: ಸತ್ಯಾ ಕೆ.

contributor

Similar News