ಪ್ರಧಾನಿ ಮೋದಿ ಸುಳ್ಳುಗಾರ : ರಾಹುಲ್‌ ಗಾಂಧಿ

Update: 2017-08-12 16:17 GMT

ರಾಯಚೂರು/ಬೆಂಗಳೂರು, ಆ.12: ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಪ್ರತಿ ವರ್ಷ 2 ಕೋಟಿ ಉದ್ಯೋಗಗಳನ್ನು ಸೃಷ್ಟಿಸುವುದಾಗಿ ಪ್ರಧಾನಿ ನರೇಂದ್ರಮೋದಿ ಆಶ್ವಾಸನೆ ನೀಡಿದ್ದರು. ಆದರೆ, ದೇಶದ ಯುವಕರಿಗೆ ಉದ್ಯೋಗ ಕಲ್ಪಿಸಿಕೊಡುವಲ್ಲಿ ವಿಫಲರಾಗಿದ್ದಾರೆ, ಪ್ರಧಾನಿ ದೇಶದ ಜನರಿಗೆ ಸುಳ್ಳು ಹೇಳಿದ್ದಾರೆ ಎಂದು ಎಐಸಿಸಿ ಉಪಾಧ್ಯಕ್ಷ ರಾಹುಲ್‌ಗಾಂಧಿ ವಾಗ್ದಾಳಿ ನಡೆಸಿದ್ದಾರೆ.

ಶನಿವಾರ ರಾಯಚೂರಿನ ಕೃಷಿ ವಿಶ್ವವಿದ್ಯಾಲಯದ ಆವರಣದಲ್ಲಿ ಆಯೋಜಿಸಲಾಗಿದ್ದ ಹೈದರಾಬಾದ್ ಕರ್ನಾಟಕ ಭಾಗದ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ 30 ಸಾವಿರ ಸರಕಾರಿ ಉದ್ಯೋಗಗಳನ್ನು ಒದಗಿಸಿದೆ. ನುಡಿದಂತೆ ನಡೆಯುವುದು ಕಾಂಗ್ರೆಸ್ ಪಕ್ಷದ ಹೆಗ್ಗಳಿಕೆ. ನರೇಂದ್ರಮೋದಿ ಉದ್ಯೋಗ ನೀಡುವುದಿಲ್ಲ ಎಂಬುದು ದೇಶದ ಯುವ ಸಮೂಹಕ್ಕೆ ಮನವರಿಕೆಯಾಗಿದೆ ಎಂದು ರಾಹುಲ್‌ಗಾಂಧಿ ಟೀಕಿಸಿದರು.

ಮೇಕ್ ಇನ್ ಇಂಡಿಯಾ ಬಗ್ಗೆ ಬೃಹತ್ ಪ್ರಚಾರಗಳನ್ನು ಮಾಡಲಾಗಿತ್ತು. ಈ ಯೋಜನೆಯಡಿ ಎಷ್ಟು ಜನರಿಗೆ ಉದ್ಯೋಗಗಳು ಸಿಕ್ಕಿದೆ ಎಂದು ಪ್ರಶ್ನಿಸಿದ ಅವರು, 10, 20 ಸಾವಿರ ಜನರಿರಲಿ, ಒಬ್ಬರಿಗೂ ಉದ್ಯೋಗ ಸಿಕ್ಕಿಲ್ಲ. ಕರ್ನಾಟಕದಲ್ಲಿಯೂ ಈ ಯೋಜನೆಯಡಿ ಒಬ್ಬರಿಗೂ ಕೆಲಸ ಸಿಕ್ಕಿಲ್ಲ. ಆದರೆ, ರಾಜ್ಯ ಸರಕಾರ ಯುವಕರಿಗೆ ಉದ್ಯೋಗ ಅವಕಾಶಗಳನ್ನು ಕಲ್ಪಿಸಿಕೊಟ್ಟಿದೆ. ನಮಗೂ ಬಿಜೆಪಿಗೂ ಇರುವ ವ್ಯತ್ಯಾಸ ಇದೆ ಎಂದು ಅವರು ಹೇಳಿದರು.

 ಹಿಂದುಳಿದಿದ್ದ ಹೈದರಾಬಾದ್ ಕರ್ನಾಟಕ ಪ್ರದೇಶಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸಿದ್ದು ಕಾಂಗ್ರೆಸ್ ನೇತೃತ್ವದ ಕೇಂದ್ರ ಸರಕಾರ. ಈ ಭಾಗದ ಸರ್ವಾಂಗೀಣ ಅಭಿವೃದ್ಧಿಗಾಗಿ ಹೆಚ್ಚಿನ ಅನುದಾನವನ್ನು ನಮ್ಮ ಪಕ್ಷದ ಸರಕಾರ ನೀಡಿದೆ. 371(ಜೆ) ಸಿಗಲು ನಡೆಸಿದ ಹೋರಾಟದ ಹಾದಿ ದೊಡ್ಡದು. ವಾಜಪೇಯಿ ಸರಕಾರದಲ್ಲಿ ಗೃಹ ಸಚಿವರಾಗಿದ್ದ ಎಲ್.ಕೆ.ಅಡ್ವಾಣಿ, ವಿಶೇಷ ಸ್ಥಾನಮಾನ ನೀಡುವ ಪ್ರಸ್ತಾವನೆಗೆ ವಿರೋಧ ವ್ಯಕ್ತಪಡಿಸಿದ್ದರು ಎಂದು ರಾಹುಲ್‌ಗಾಂಧಿ ತಿಳಿಸಿದರು.

ಪ್ರಧಾನಿ ನರೇಂದ್ರಮೋದಿ ತಮ್ಮನ್ನು ರೈತರ ಪರ ಎಂದಿದ್ದರು. ಆದರೆ, ರೈತರ ಧ್ವನಿಯಾಗಿ ಕಾಂಗ್ರೆಸ್ ಮಾತ್ರ ನಿಂತಿದೆ. ರೈತರು ಸಬಲರಾದರೆ ಮಾತ್ರ ದೇಶ ಸಬಲವಾಗುತ್ತದೆ. ಕೇಂದ್ರ ಹಣಕಾಸು ಸಚಿವ ಅರುಣ್‌ಜೇಟ್ಲಿ ರೈತರ ಸಾಲ ಮನ್ನಾ ಅಸಾಧ್ಯ ಎನ್ನುತ್ತಾರೆ. ಆದರೆ, ಶ್ರೀಮಂತರ ಸಾವಿರಾರು ಕೋಟಿ ರೂ.ಸಾಲ ಮನ್ನಾ ಮಾಡುತ್ತಾರೆ. ರೈತರ ಸಂಕಷ್ಟ ಅವರಿಗೆ ಕಾಣಿಸುತ್ತಿಲ್ಲ ಎಂದು ಅವರು ಕಿಡಿಗಾರಿದರು.

ಕಳೆದ ಐದು ವರ್ಷಗಳಿಂದ ರಾಜ್ಯ ಸರಕಾರವು ಅವಕಾಶ ವಂಚಿತ, ಬಡವರು, ದುರ್ಬಲರು, ಹಿಂದುಳಿದವರ ಕಲ್ಯಾಣಕ್ಕೆ ಶ್ರಮಿಸುತ್ತಿದೆ. ಮುಂಬರುವ ಐದು ವರ್ಷಗಳಲ್ಲೂ ಅಭಿವೃದ್ಧಿಗೆ ಪೂರಕವಾದ ಆಡಳಿತವನ್ನು ಕಾಂಗ್ರೆಸ್ ಪಕ್ಷದ ಸರಕಾರ ನೀಡಲಿದೆ ಎಂದು ರಾಹುಲ್‌ಗಾಂಧಿ ಆಶ್ವಾಸನೆ ನೀಡಿದರು.

ನರೇಂದ್ರಮೋದಿ ತಮಾಷೆಯ ರೀತಿಯಲ್ಲಿ ಕಳೆದ ಸಾಲಿನ ನವೆಂಬರ್ 8ರಂದು ದೂರದರ್ಶನದಲ್ಲಿ ಬಂದು 500, 1000 ರೂ.ಮುಖಬೆಲೆಯ ನೋಟುಗಳ ಮಾನ್ಯತೆ ರದ್ದು ಮಾಡಿದರು. ಆದರೆ, ಅವರ ಈ ನಿರ್ಧಾರ ದೇಶದ ಆರ್ಥಿಕ ಪರಿಸ್ಥಿತಿ ಮೇಲೆ ಏನು ಪರಿಣಾಮ ಬೀರಲಿದೆ ಎಂಬ ಕನಿಷ್ಠ ಪರಿಜ್ಞಾನವು ಅವರಿಗೆ ಇರಲಿಲ್ಲ ಎಂದು ಅವರು ಕಿಡಿಗಾರಿದರು.

 ರಾಷ್ಟ್ರಪಿತ ಮಹಾತ್ಮಗಾಂಧಿ ಬಡವರಿಗೆ ಸಹಾಯ ಮಾಡಿ ಎಂದಿದ್ದರು. ಕಾಂಗ್ರೆಸ್ ಪಕ್ಷದ ನಿಲುವು ಅದೇ ಆಗಿದೆ. ಆದರೆ, ಆರೆಸೆಸ್ಸ್ ಹಾಗೂ ಬಿಜೆಪಿ ನಿಲುವು ಬಡವರ ಪರವಾಗಿಲ್ಲ. ಕಾಂಗ್ರೆಸ್ ಮಾತ್ರ ಜನರಿಗೆ ಸಹಕಾರ ಮಾಡುತ್ತದೆ ಎಂದು ನರೇಂದ್ರ ಮೋದಿ ವಿರುದ್ಧ ರಾಹುಲ್‌ಗಾಂಧಿ ವಾಗ್ದಾಳಿ ನಡೆಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News