ಗಣೇಶ ಹಬ್ಬ ಆಚರಣೆಗೆ ನಿರ್ಬಂಧವಿಲ್ಲ: ದತ್ತ

Update: 2017-08-12 15:31 GMT

ಬೆಂಗಳೂರು, ಆ.12: ರಾಜ್ಯದಲ್ಲಿ ಗಣೇಶ ಹಬ್ಬ ಆಚರಣೆಗೆ ಸರಕಾರವಾಗಲಿ, ಪೊಲೀಸ್ ಇಲಾಖೆಯಾಗಲಿ ಯಾವುದೇ ನಿರ್ಬಂಧಗಳನ್ನು ವಿಧಿಸಿಲ್ಲ ಎಂದು ರಾಜ್ಯ ಪೊಲೀಸ್ ಮಹಾನಿರ್ದೇಶಕ ಮತ್ತು ಆರಕ್ಷಕ ಮಹಾನಿರೀಕ್ಷಕ ರೂಪ್‌ಕುಮಾರ್ ದತ್ತ ಸ್ಪಷ್ಟಪಡಿಸಿದ್ದಾರೆ.

ಶನಿವಾರ ರಾಜ್ಯ ಪೊಲೀಸ್ ಮುಖ್ಯ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಹಿಂದೂ ಸಂಘಟನೆಯೊಂದು ಗಣೇಶ ಹಬ್ಬ ಆಚರಣೆಗೆ ಕೆಲವು ನಿಬಂಧನೆ ವಿಧಿಸಿದೆ, ಡೆಪಾಸಿಟ್ ಇಟ್ಟು ಗಣೇಶ ಕೂರಿಸುವಂತೆ ಸೂಚಿಸಿದೆ ಎಂಬ ಹೇಳಿಕೆ ನೀಡಿದೆ, ಅದು ಸುದ್ದಿಮಾಧ್ಯಮಗಳಲ್ಲೂ ಸುದ್ದಿ ಬಿತ್ತರಗೊಂಡಿದೆ. ಇದು ಅಪಪ್ರಚಾರ, ಯಾರೇ ಆಗಲಿ ಅಪಪ್ರಚಾರ ಮಾಡುವುದನ್ನು ನಿಲ್ಲಿಸಬೇಕು. ಮುಂದುವರಿಸಿದ್ದೇ ಆದರೆ ಕಾನೂನು ರೀತಿ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.

  ಪ್ರತಿ ವರ್ಷದಂತೆ ಗಣೇಶಹಬ್ಬದ ಆಚರಣೆ ಸಂದರ್ಭದಲ್ಲಿ ಬಂದೋಬಸ್ತ್ ಒದಗಿಸುವ ಜವಾಬ್ದಾರಿ ಜಿಲ್ಲಾಡಳಿತದ್ದಾಗಿದ್ದು, ಜಿಲ್ಲಾ ಪೊಲೀಸ್ ಅಧೀಕ್ಷಕರು ಅಥವಾ ಪೊಲೀಸ್ ಆಯುಕ್ತರು ಸ್ಥಳೀಯ ಪರಿಸ್ಥಿತಿಗೆ ಅನುಗುಣವಾಗಿ ಬಂದೋಬಸ್ತ್ ವ್ಯವಸ್ಥೆ ಮಾಡುತ್ತಾರೆ ಎಂದು ತಿಳಿಸಿದರು.

  ಆ.25ರಿಂದ ಗಣೇಶ ಮೂರ್ತಿ ವಿಸರ್ಜನೆ ಆಗುವವರೆಗೂ ಸೂಕ್ತ ಬಂದೋಬಸ್ತ್ ಮಾಡಲಾಗುವುದು, ಸೂಕ್ಷ್ಮ ಪ್ರದೇಶಗಳಲ್ಲಿ ತೀವ್ರ ನಿಗಾ ವಹಿಸಲಾಗುತ್ತದೆ. ಗಣೇಶ ಉತ್ಸವ ಸಂದರ್ಭದಲ್ಲಿ ಕೆಲವೊಂದು ಸಾಮಾನ್ಯ ಮಾರ್ಗಸೂಚಿಗಳನ್ನು ನೀಡಿದ್ದು, ಅದರಂತೆ ಸ್ಥಳೀಯ ಪೊಲೀಸರು ಕ್ರಮ ಕೈಗೊಳ್ಳಲಿದ್ದಾರೆ ಎಂದು ಹೇಳಿದರು.

  ಸ್ಥಳೀಯ ನಾಯಕರೊಂದಿಗೆ ಶಾಂತಿ ಸಭೆ ನಡೆಸುವುದು, ಮೆರವಣಿಗೆ ಹೋಗುವ ಮುನ್ನವೇ ಮಾರ್ಗ ನಿರ್ಧರಿಸುವುದು, ಪೊಲೀಸರೊಂದಿಗೆ ಸ್ವಯಂ ಸೇವಕರ ಬಳಕೆ, ಸೂಕ್ಷ್ಮ ಪ್ರದೇಶಗಳಲ್ಲಿ ಪಟಾಕಿ ಸಿಡಿಸಲು ಅವಕಾಶ ನೀಡದಿರುವುದು ಮಾರ್ಗಸೂಚಿಯಲ್ಲಿ ಹೇಳಿದೆ. ಧ್ವನಿವರ್ಧಕ ಬಳಕೆ ಮತ್ತು ಪಟಾಕಿ ಸಿಡಿಸುವುದಕ್ಕೆ ಕಾನೂನು ರೀತಿ ಕ್ರಮ ವಹಿಸುವುದಾಗಿ ತಿಳಿಸಿದರು.

 ನಮ್ಮದು ಜಾತ್ಯತೀತ ರಾಷ್ಟ್ರವಾಗಿದ್ದು, ಎಲ್ಲ ಧರ್ಮಿಯರು ತಮ್ಮ ಹಬ್ಬಗಳು, ಉತ್ಸವಗಳನ್ನು ಆಚರಿಸಲು ಅವಕಾಶವಿದ್ದು, ಆಯಾ ಸಂದರ್ಭದಲ್ಲಿ ಪೊಲೀಸ್ ಇಲಾಖೆ ಸೂಕ್ತ ವ್ಯವಸ್ಥೆ ಕಲ್ಪಿಸಲಿದೆ ಎಂದು ದತ್ತ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News