ಕಾಂಗ್ರೆಸ್ ವಿರುದ್ಧ ಅಹಿಂದ ಅಸ್ತ್ರ ಬಳಸಲು ಅಮಿತ್ ಶಾ ಸೂಚನೆ

Update: 2017-08-12 16:19 GMT

ಬೆಂಗಳೂರು, ಆ.12: ರಾಜ್ಯದಲ್ಲಿ ಆಡಳಿತರೂಢ ಕಾಂಗ್ರೆಸ್ ಸರಕಾರದ ವಿರುದ್ಧ ‘ಅಹಿಂದ’ ಅಸ್ತ್ರವನ್ನೆ ಪ್ರಬಲವಾಗಿ ಬಳಸುವಂತೆ ಬಿಜೆಪಿ ಶಾಸಕರು, ವಿಧಾನಪರಿಷತ್ ಸದಸ್ಯರು, ಸಂಸದರಿಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಸೂಚನೆ ನೀಡಿದ್ದಾರೆ.

ಶನಿವಾರ ನಗರದ ಮಲ್ಲೇಶ್ವರಂನಲ್ಲಿರುವ ಬಿಜೆಪಿ ಕಚೇರಿಯಲ್ಲಿ ನಡೆದ ಕೋರ್ ಕಮಿಟಿ ಸಭೆಯಲ್ಲಿ ಮಾತನಾಡಿದ ಅವರು, ಲಿಂಗಾಯತ-ವೀರಶೈವ, ಬ್ರಾಹ್ಮಣರ ವಿಚಾರವನ್ನು ಚರ್ಚೆ ಮಾಡಬೇಡಿ. ದಲಿತರು, ಹಿಂದುಳಿದವರು, ಅಲ್ಪಸಂಖ್ಯಾತರ ಬಗ್ಗೆ ಮಾತನಾಡಿ. ಅವರೊಂದಿಗೆ ಬೆರೆತು ಅವರ ಬೆಂಬಲದೊಂದಿಗೆ ಮುಂದುವರೆಯಿರಿ ಎಂದು ಸೂಚನೆ ನೀಡಿದ್ದಾರೆ.

ಉತ್ತರಪ್ರದೇಶ ಮಾದರಿಯಲ್ಲೇ ರಾಜ್ಯದಲ್ಲಿಯೂ ಚುನಾವಣೆ ಎದುರಿಸಬೇಕು. ಕರ್ನಾಟಕದಲ್ಲಿ ಚುನಾವಣೆ ಸಂದರ್ಭದಲ್ಲಿ ನಾನೇ ಬಂದು ತಂತ್ರಗಾರಿಕೆಯನ್ನು ರೂಪಿಸುತ್ತೇನೆ. ಹಿಂದೂಗಳ ಮತಗಳ ಕ್ರೋಡೀಕರಣಕ್ಕೆ ಆದ್ಯತೆ ನೀಡಬೇಕು ಎಂದು ಅಮಿತ್ ಶಾ ಹೇಳಿದ್ದಾರೆ.

ಶಾಸಕರು ಹಾಗೂ ಸಂಸದರು ನಾವು ನೀಡುವಂತಹ ಎಲ್ಲ ಸೂಚನೆಗಳನ್ನು ಬರೆದುಕೊಂಡು ಚಾಚೂ ತಪ್ಪದೇ ಪಾಲಿಸಬೇಕು ಎಂದು ಕಟ್ಟಪ್ಪಣೆ ಮಾಡಿದ ಅವರು, ಯಾರ ಬಳಿ ಪೆನ್ನು, ನೋಟ್‌ಪ್ಯಾಡ್ ಇಲ್ಲವೋ ಅವರು ತೆಗೆದುಕೊಂಡು ಬಂದು, ನಾವು ಹೇಳುವುದನ್ನು ಗಮನವಿಟ್ಟು ಕೇಳಿಸಿಕೊಂಡು ಬರೆದಿಟ್ಟುಕೊಳ್ಳಿ ಎಂದು ಸೂಚನೆ ನೀಡಿದರು.

ರಾಜ್ಯದಲ್ಲಿ ಪಕ್ಷ ಸಂಘಟನೆಗೆ ಶಾಸಕರು, ವಿಧಾನಪರಿಷತ್ ಸದಸ್ಯರು ಹಾಗೂ ಸಂಸದರು ಆದ್ಯತೆ ನೀಡಬೇಕು. ಬೂತ್‌ಮಟ್ಟದಲ್ಲಿ ಪಕ್ಷವನ್ನು ಬಲಗೊಳಿಸಬೇಕು. ಬೂತ್‌ಮಟ್ಟದಲ್ಲಿ ಪಕ್ಷದ ಆಗುಹೋಗುಗಳನ್ನು ಶಾಸಕರು, ಸಂಸದರು ನೋಡಿಕೊಳ್ಳಬೇಕು ಎಂದು ಅವರು ಆದೇಶಿಸಿದ್ದಾರೆ. ಬೂತ್‌ಮಟ್ಟದ ತಲಾ 50 ಕಾರ್ಯಕರ್ತರ ಹೊಣೆಯನ್ನು ಶಾಸಕರು, ಸಂಸದರು ಹೊರಬೇಕು. ತಮ್ಮ ಕ್ಷೇತ್ರದೊಂದಿಗೆ ಇತರ ಕ್ಷೇತ್ರಗಳ ಜವಾಬ್ದಾರಿಯನ್ನು ಹೊರಬೇಕು. ಹೊಸದಾಗಿ ಪಕ್ಷಕ್ಕೆ ಸದಸ್ಯರಾಗಿರುವವರ ಮನೆಗಳಿಗೆ ಭೇಟಿ ನೀಡಿ, ಪಕ್ಷ ಹಾಗೂ ಕೇಂದ್ರ ಸರಕಾರದ ಸಾಧನೆಗಳನ್ನು ಸ್ಥಳೀಯವಾಗಿ ಪ್ರಚಾರ ಮಾಡಲು ಪ್ರೇರೇಪಿಸಬೇಕು ಎಂದು ಅಮಿತ್ ಶಾ ಸೂಚನೆ ನೀಡಿದ್ದಾರೆ.

ಮೂರು ದಿನಗಳ ಕಾಲ ಬೆಂಗಳೂರಿನಲ್ಲೆ ಇರುತ್ತೇನೆ. ಎಲ್ಲ ಮುಖಂಡರೊಂದಿಗೂ ಚರ್ಚೆ ನಡೆಸುತ್ತೇನೆ. ಬಿಜೆಪಿ ಪಾಲಿಗೆ ದಕ್ಷಿಣ ಭಾರತದ ಹೆಬ್ಬಾಗಿಲು ಆಗಿರುವ ಕರ್ನಾಟಕದಲ್ಲಿ ಮತ್ತೆ ಪಕ್ಷ ಅಧಿಕಾರಕ್ಕೆ ಬರಬೇಕು. ಈ ನಿಟ್ಟಿನಲ್ಲಿ ಎಲ್ಲರೂ ಪ್ರಯತ್ನ ಮುಂದುವರೆಸಿ ಎಂದು ಅಮಿತ್ ಶಾ ಸೂಚನೆ ನೀಡಿದ್ದಾರೆ.

ಟಿಕೆಟ್ ಹೈಮಾಂಡ್ ತೀರ್ಮಾನಿಸಲಿದೆ: ಟಿಕೆಟ್ ಬಗ್ಗೆ ಚಿಂತಿಸದೆ ಪಕ್ಷದ ಪರವಾಗಿ ಕೆಲಸ ಮಾಡಬೇಕು. ಯಾವ ಕ್ಷೇತ್ರದಿಂದ ಯಾರನ್ನು ಅಭ್ಯರ್ಥಿಯನ್ನಾಗಿ ಕಣಕ್ಕಿಳಿಸಬೇಕು ಎಂಬುದನ್ನು ಹೈಕಮಾಂಡ್ ತೀರ್ಮಾನಿಸುತ್ತದೆ. ಯಡಿಯೂರಪ್ಪ ನೇತೃತ್ವದಲ್ಲೆ ಚುನಾವಣೆ ಎದುರಿಸುತ್ತೇವೆ. ಎಲ್ಲರೂ ಒಗ್ಗಟ್ಟಾಗಿ, ಭಿನ್ನಮತೀಯ ಚಟುವಟಿಕೆಗಳಿಗೆ ಆಸ್ಪದವಿಲ್ಲದಂತೆ ಮುಂದುವರೆಯಬೇಕು.

-ಅಮಿತ್ ಶಾ, ರಾಷ್ಟ್ರೀಯ ಬಿಜೆಪಿ ಅಧ್ಯಕ್ಷ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News