ಸಾಫ್ಟ್ ವೇರ್ ಉದ್ಯೋಗದಲ್ಲಿ ಕ್ಷೋಭೆ

Update: 2017-08-12 17:11 GMT

ಭಾರತದ ಸಾಫ್ಟ್‌ವೇರ್ ಉದ್ಯೋಗಾವಕಾಶಗಳ ಸುವರ್ಣ ಯುಗ ಮುಗಿಯುತ್ತಾ ಬಂದಿದೆಯೇ?

ಇಂತಹದ್ದೊಂದು ಪ್ರಶ್ನೆ ಈಗ ದೇಶಾದ್ಯಂತ ಚರ್ಚೆಯಾಗುತ್ತಿದೆ. ಭಾರತದ ಬೃಹತ್ ಐಟಿ ಕಂಪೆನಿಗಳಿಂದ ಕೆಲಸ ಕಳೆದುಕೊಂಡು ಹೊರ ಹಾಕ ಲ್ಪಡುತ್ತಿರುವವರ ಸಂಖ್ಯೆ ಗಾಬರಿಯಾಗುವಷ್ಟು ಸಂಖ್ಯೆಯಲ್ಲಿ ಹೆಚ್ಚುತ್ತಿರು ವುದೇ ಈ ಚರ್ಚೆಗೆ ಕಾರಣವಾಗಿದೆ.

ನ್ಯಾಷನಲ್ ಅಸೋಷಿಯೇಶನ್ ಆಫ್ ಸಾಫ್ಟ್‌ವೇರ್ ಆ್ಯಂಡ್ ಸರ್ವಿಸಸ್ ಕಂಪೆನೀಸ್ (ನ್ಯಾಸ್ಕಾಂ)ನ ಒಂದು ಅಂದಾಜಿನ ಪ್ರಕಾರ ಭಾರತ ದಲ್ಲಿ ಒಟ್ಟಾರೆ ನಲವತ್ತು ಲಕ್ಷ ಮಂದಿ ಐಟಿ ಸಂಬಂಧಿತ ಉದ್ದಿಮೆಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಕಳೆದ ಎರಡು ದಶಕಗಳಿಂದ ಶರವೇಗದಲ್ಲಿ ಬೆಳೆದ ಉದ್ದಿಮೆ ಇದು. ಭಾರತೀಯರ ತಾಂತ್ರಿಕ ಕೌಶಲ್ಯ, ಶ್ರದ್ಧೆ, ಇಂಗ್ಲಿಷ್ ಭಾಷೆಯ ಪರಿಣಿತಿ, ಕಡಿಮೆ ಸಂಬಳಕ್ಕೆ ಕೆಲಸ ಮಾಡುವ ವ್ಯವಸ್ಥೆಗಳಿಂದಾಗಿ ಐಟಿ ಜಗತ್ತಿನ ಪ್ರಿಯವಾದ ನೌಕರರಾಗಿದ್ದರು. ಆದರೆ ಈಗ ಪರಿಸ್ಥಿತಿ ಯಾರೂ ಊಹಿಸಲಾಗದ ವೇಗದಲ್ಲಿ ಬದಲಾಗುತ್ತಿದೆ.

ಇನ್‌ಪೋಸಿಸ್, ವಿಪ್ರೋ, ಟಿಸಿಎಸ್, ಬೆಕ್ ಮಹೀಂದ್ರ ಸೇರಿದಂತೆ ಭಾರತದ ದೈತ್ಯ ಐಟಿ ಕಂಪೆನಿಗಳು ಸದ್ದು ಗದ್ದಲವಿಲ್ಲದೆ ಸಾವಿರಾರು ನೌಕರ ರನ್ನು ಕೆಲಸದಿಂದ ತೆಗೆದು ಹಾಕುತ್ತಿವೆ.

ಅಮೆರಿಕದಲ್ಲಿ ಡೊನಾಲ್ಡ್ ಟ್ರಂಫ್ ಅಧ್ಯಕ್ಷರಾಗಿ ಬಂದ ನಂತರ ಹೊರ ಗುತ್ತಿಗೆ ನಿಯಮಗಳನ್ನು ಬಿಗಿಗೊಳಿಸಿರುವುದು ಹಾಗೂ ವಲಸೆ ನೀತಿಗಳಿಗೆ ಅನೇಕ ನಿರ್ಬಂಧ ವಿಧಿಸುತ್ತಿರುವುದರಿಂದ ಅದರ ಪರಿಣಾಮವು ಭಾರತದ ಐಟಿ ಉದ್ದಿಮೆಯ ಮೇಲೂ ಆಗುತ್ತಿದೆ.

ದುರಂತ ಏನೆಂದರೆ ಭಾರತವು ಜಗತ್ತಿನ ಅತೀ ದೊಡ್ಡ ಆರ್ಥಿಕತೆಗಳಲ್ಲಿ ಒಂದೆಂದು ಪ್ರಚಾರ ನಡೆದಿದ್ದರೂ ಈಗ ಕೆಲಸ ಕಳೆದುಕೊಳ್ಳುತ್ತಿರುವ ಸಹಸ್ರಾರು ಐಟಿ ನೌಕರರನ್ನು ನೆಲೆಗೊಳಿಸುವ ಅಥವಾ ತನ್ನತ್ತ ಸೆಳೆದುಕೊ ಳ್ಳಬಲ್ಲ ಪರ್ಯಾಯ ವ್ಯವಸ್ಥೆಯಾಗಲಿ, ಸಿದ್ಧತೆಯಾಗಲಿ ಭಾರತದೊಳಗೆ ಎಲ್ಲೂ ಕಾಣುತ್ತಿಲ್ಲ. ಪ್ರಧಾನಿ ಮೋದಿಯವರ ಮೇಕ್ ಇನ್ ಇಂಡಿಯಾ ಎಂಬ ಆಲಂಕಾರಿಕ ಘೋಷಣೆಗಳಾಗಲಿ, ಆವೇಶಭರಿತ ಭಾಷಣಗಳಾ ಗಲಿ ಬಿಕ್ಕಟ್ಟಿಗೆ ಪರಿಹಾರ ಸೂಚಿಸುತ್ತಿಲ್ಲ.

ಬಹುತೇಕ ಎಲ್ಲಾ ಕ್ಷೇತ್ರಗಳಿಗೂ ಮಿಂಚಿನ ಸಂಚಾರ ತಂದದ್ದು ಈ ಐಟಿ ಕ್ರಾಂತಿ. ಕೃಷಿಯಿಂದ ವಿಮಾನಯಾನದವರೆಗೆ, ಷೇರು ಮಾರುಕಟ್ಟೆಯಿಂದ ತರಕಾರಿ ಮಾರುಕಟ್ಟೆಯವರೆಗೆ ಪ್ರತಿಯೊಂದು ಕ್ಷೇತ್ರವೂ ಐಟಿಯಿಂದ ಉಪಕೃತಗೊಂಡಿದ್ದು ಅಸಾಧಾರಣ ಬೆಳವಣಿಗೆಯನ್ನು ಕಂಡಿದೆ.

ಪ್ರಸ್ತುತ ಇದ್ದ ಎಲ್ಲಾ ಉದ್ಯಮಗಳಿಗಿಂತ ಐಟಿ ಉದ್ಯಮ ಹೆಚ್ಚು ಲಾಭದಾ ಯಕವಾಗಿತ್ತು. ಸಹಜವಾಗಿ ಐಟಿ ಉದ್ಯೋಗಿಗಳಿಗೆ ಸ್ವಲ್ಪ ಉತ್ಪ್ರೇಕ್ಷೆಯೆನಿ ಸುವಷ್ಟು ಸಂಬಳ ಸಿಗಲಾರಂಭಿಸಿತು. ಸಂಬಳದ ಜೊತೆಗೆ ಬೋನಸ್,ಕೊಡುಗೆಗಳು, ವಿದೇಶಗಳಿಗೆ ಹೋಗಿ ಕೆಲಸ ಮಾಡುವ ಅವಕಾಶಗಳು,ಕಚೆೇರಿಯಲ್ಲಿ ಕೊಟ್ಟ ಸೌಕರ್ಯಗಳು ಇವೆಲ್ಲಾ ಇತರರ ಕಣ್ಣು ಕುಕ್ಕು ವಂತಿತ್ತು. ಸ್ವಾಭಾವಿಕವಾಗಿಯೇ ಎಲ್ಲರೂ ಐಟಿ ಕ್ಷೇತ್ರದೆಡೆಗೆ ಆಕರ್ಷಿತರಾ ದರು. ಅಲ್ಲೂ ಹೇರಳ ಅವಕಾಶಗಳು ಇದ್ದದರಿಂದ ಯಾವುದೇ ವಿಷಯದ ಪದವೀಧರರಿಗೂ ಸುಲಭವಾಗಿ ಕೆಲಸ ಸಿಗಲಾರಂಭಿಸಿತು. ಯಾವುದೇ ಪದವಿ ಇಲ್ಲದೆ ಇಂಗ್ಲಿಷ್ ಭಾಷೆಯಲ್ಲಿ ಸರಾಗವಾಗಿ ಸಂವಹನ ಮಾಡು ವಂಥವರಿಗೆ ಕಾಲ್ ಸೆಂಟರ್, ಬಿಪಿಓಗಳಲ್ಲಿ ಉತ್ತಮ ವೇತನದ ಕೆಲಸ ದೊರಕಿತು. ಇತರೆ ಕ್ಷೇತ್ರದಲ್ಲಿ ಕೆಲವಾರು ವರ್ಷಗಳಿಂದ ಕೆಲಸ ಮಾಡುತ್ತಿರುವವರು ಕೂಡ ಐಟಿಗೆ ಸಂಬಂಧಿಸಿದ ಕೋರ್ಸುಗಳನ್ನು ಮಾಡಿ ಈ ಕ್ಷೇತ್ರಕ್ಕೆ ಬಂದರು. ಅತಿಶಯ ವೆಂದರೆ ಸರಕಾರಿ ಕೆಲಸದಲ್ಲಿದ್ದ ಅಧಿಕಾರಿಗಳು ಕೂಡ ಐಟಿ ಕ್ಷೇತ್ರದ ನೌಕರಿ ಅರಸಿ ಬಂದರು. ಒಟ್ಟಿನಲ್ಲಿ ಇರುವ ಉದ್ಯಮ ಕ್ಷೇತ್ರಗಳಲ್ಲಿ ಐಟಿಯೇ ಮೇಲು ಎಂಬ ಭಾವ ಜನಜನಿತವಾಯಿತು.

ಅಮೆರಿಕಕ್ಕಿಂತ ಅತೀ ಕಡಿಮೆ ವೇತನಕ್ಕೆ ಸಿಗುವ ಮಾನವ ಸಂಪನ್ಮೂಲ ಮತ್ತು ಸರಕಾರದ ಪ್ರೋತ್ಸಾಹದಿಂದ ಸಿಗುವ ವಿಶೇಷ ಆರ್ಥಿಕ ವಲಯದ ಜಾಗ, ಮೂಲಭೂತ ಸೌಕರ್ಯಗಳ ಲಾಭ ಪಡೆಯಲು ಹಲವಾರು ಕಂಪೆನಿಗಳು ಇಂಡಿಯಾಗೆ ಲಗ್ಗೆ ಇಟ್ಟವು. ಸರಕಾರಗಳು ಸ್ಥಳೀಯರಿಗೆ ಉದ್ಯೋಗಾವಕಾಶ ಮಾಡಿಕೊಡುವ ಸಲುವಾಗಿ ತೆರಿಗೆ ವಿನಾಯಿತಿ ಕೂಡ ಕೊಟ್ಟು ಸ್ವಾಗತಿಸಿದವು. ಬೆಂಗಳೂರು ದೇಶದ ಐಟಿ ಕೇಂದ್ರವಾಗಿ ರೂಪಿತವಾಯಿತು. ಹೈದರಾಬಾದ್, ಗುರು ಗ್ರಾಮ, ಚೆನ್ನೈ, ಭುವನೇಶ್ವ ರ, ಪುಣೆ, ಕೊಚ್ಚಿ, ಅಹ್ಮದಾಬಾದ್ ಮುಂತಾದ ನಗರಗಳಲ್ಲಿ ಐಟಿ ಪಾರ್ಕುಗಳು ಹುಟ್ಟಿಕೊಂಡ ವು. ಭಾರತದಲ್ಲಿ ಹೊಸದಾಗಿ ಬಂದ ಜಾಗತೀಕರಣದ ನೀತಿ ಕೂಡ ಐಟಿ ಪ್ರಬಲವಾಗಲು ಕಾರಣವಾಯಿತು.

ಐಟಿ ಉದ್ಯೋಗಿಗಳ ವರಮಾನವು ಅಗತ್ಯಕ್ಕಿಂತ ಹೆಚ್ಚಾಗಿದ್ದರ ಪರಿ ಣಾಮ ಕೊಳ್ಳುಬಾಕತನ ಹೆಚ್ಚಾಯಿತು. ಉಡುಪು, ಹೋಟೆಲ್, ರಿಯಲ್ ಎಸ್ಟೇಟ್, ಆಟೋಮೊಬೈಲ್ ಹೀಗೆ ಹಲವಾರು ಕ್ಷೇತ್ರಗಳಿಗೆ ಇದು ವರದಾನವಾಯಿತು. ವಾರದಲ್ಲಿ ಐದು ದಿನ ಮಾತ್ರ ಕೆಲಸ, ಶಿಫ್ಟ್ ಗಳಲ್ಲಿನ ಕೆಲಸ, ಹೆಣ್ಣು ಮಕ್ಕಳು ಕೂಡ ರಾತ್ರಿ ಪಾಳಿಗಳಲ್ಲಿ ಕೆಲಸ ಹೀಗೆ ಇವೆಲ್ಲವುಗಳಿಂದ ಒಂದು ರೀತಿಯಲ್ಲಿ ಸಾಮಾಜಿಕ ಹಾಗೂ ಆರ್ಥಿಕ ಕ್ರಾಂತಿಯೇ ಆಯಿತು. ಬೆಂಗಳೂರಿನಂತಹ ನಗರದಲ್ಲಿ ನೈಟ್ ಲೈಫ್ ರಂಗೇರತೊಡಗಿತು. ರಸ್ತೆಗಳ ಮೇಲೆ ವಾಹನಗಳ ಸಂಖ್ಯೆ ಮಿತಿ ಮೀರಿ ಹೋಯಿತು. ಮನೆ ಬಾಡಿಗೆ, ಸೈಟು, ಫ್ಲಾಟುಗಳ ರೇಟು ದುಬಾರಿ ಯಾಯಿತು. ವಾತಾವರಣ ಹದಗೆಟ್ಟಿತು.

GDP  ಇವತ್ತಿಗೆ ಭಾರತ ವಿಶ್ವದ ಎರಡನೆ ಅತೀ ದೊಡ್ಡ ಐಟಿ ರಫ್ತುದಾರ ದೇಶ ವಾಗಿ ಹೊಮ್ಮಿದೆ. ನ್ಯಾಸ್‌ಕಾಮ್ ವರದಿಯ ಪ್ರಕಾರ ಭಾರತದ ಗೆ 1998ರಲ್ಲಿ ಸುಮಾರು ಶೇ.1.2ರಷ್ಟಿದ್ದ ಐಟಿ ವಲಯದ ಕೊಡುಗೆಯು ಶೇ.8ಕ್ಕೆ ಏರಿದೆ. 2015ರಲ್ಲಿ ಐಟಿ ಕ್ಷೇತ್ರದ ಆದಾಯ 147 ಬಿಲಿಯನ್ ಅಮೆರಿಕನ್ ಡಾಲರುಗಳಲ್ಲಿದೆ.

ದೇಶಿಯ ಮತ್ತು ರಫ್ತಿನಿಂದಿರುವ ವಾರ್ಷಿಕ ವರಮಾನ:

ಮೊದಲ ಬಾರಿಗೆ 2000 ಇಸವಿಯಲ್ಲಿ ಡಾಟ್‌ಕಾಮ್ ಗುಳ್ಳೆ ಒಡೆದು ಐಟಿ ಕ್ಷೇತ್ರಕ್ಕೆ ದೊಡ್ಡ ಹೊಡೆತ ಬಿದ್ದಿತ್ತು. ಹಲವಾರು ಮಂದಿ ಕೆಲಸ ಕಳೆದು ಕೊಂಡರು. ಕೆಲವೇ ತಿಂಗಳುಗಳಲ್ಲಿ ಸಾವರಿಸಿಕೊಂಡು ಮತ್ತೆ ಮೇಲೆದ್ದಿತು.

ದಿನ ಕಳೆದಂತೆ ಐಟಿಯಲ್ಲಿ ಕೆಲಸ ಮಾಡುವವರಿಗೆ ದೈಹಿಕ ಹಾಗೂ ಮಾನಸಿಕ ಸಮಸ್ಯೆಗಳು ಕಾಣಲಾರಂಭಿಸಿದವು. ವಿದೇಶಿ ಕಂಪೆನಿಗಳಿಗೆ ಕೆಲಸ ಮಾಡುವುದು ಸಾಮಾನ್ಯವಾದ್ದರಿಂದ ಆ ದೇಶಗಳ ಸಮಯಕ್ಕೆ ಅನುಸಾರವಾಗಿ ಶಿಫ್ಟ್‌ಗಳಲ್ಲಿ ಕೆಲಸ ಮಾಡಬೇಕಾ ಯಿತು. ದಿನದ 24 ಗಂಟೆಗಳು ಮತ್ತು ವರ್ಷದ 365 ಕಾರ್ಯ ನಿರ್ವಹಿಸುವ ಜವಾಬ್ದಾರಿ. ದಿನದ ಸುದೀರ್ಘಾವಧಿ ಕುಳಿತೇ ಕೆಲಸ ಮಾಡಬೇ ಕಾದ ಅನಿರ್ವಾಯತೆ ಹೀಗೆ ದೈಹಿಕವಾಗಿ ದುಷ್ಪರಿಣಾಮ ಗಳಾದವು. ಅಲ್ಲದೆ ಭಾರೀ ಒತ್ತಡದ ನಡುವೆ ಕೆಲಸ ನಿರ್ವಹಿಸುವ ಕಾರಣ ಅನೇಕರಿಗೆ ರಕ್ತದೊತ್ತಡ, ಹೃದಯ ಸಂಬಂಧಿ ಸಮಸ್ಯೆಗಳು ಪ್ರಾರಂಭವಾದವು.

ಐಟಿ ಕ್ಷೇತ್ರದಲ್ಲಿ ಕಾರ್ಮಿಕ ಸಂಘ ಸ್ಥಾಪನೆಗೆ ಅಲಿಖತ ನಿಷೇಧವಿದೆ. ಇದರಿಂದ ಉದ್ಯೋಗಿಗಳು ಎಲ್ಲಾ ರೀತಿಯ ಒತ್ತಡ, ತೊಂದರೆಗಳನ್ನು ಮೌನ ವಾಗಿ ಒಪ್ಪಿಕೊಳ್ಳುವಂತಾಯಿತು. ಪ್ರತಿರೋಧ ತೋರಿದವರನ್ನು ನಿರ್ದಾಕ್ಷಣ್ಯವಾಗಿ ಕಿತ್ತೊಗೆಯಲಾಗುತ್ತಿದೆ.

ಕಂಪೆನಿಗಳು ತಮ್ಮ ವ್ಯವಹಾರದ ಅನುಸಾರವಾಗಿ ಉದ್ಯೋಗಿಗಳನ್ನು ಬಳಸಿಕೊಂಡು ಅನಗತ್ಯವೆನಿಸಿದಾಗ ತೆಗೆದುಹಾಕುವುದು, ಕೊಡಮಾಡುತ್ತಿ ರುವ ಸೌಕರ್ಯಗಳನ್ನು ಕಡಿತಗೊಳಿಸುವುದು ಈಗ ಸಾಮಾನ್ಯವಾಗಿದೆ.

ಡೊನಾಲ್ಡ್ ಟ್ರಂಪ್ ಅಮೆರಿಕದ ಅಧ್ಯಕ್ಷರಾಗಿ ‘ಅಮೆರಿಕ ಮೊದಲು’ ಎಂದು ತಮ್ಮ ದೇಶಕ್ಕೆ ರಕ್ಷಣಾತ್ಮಕ ನೀತಿಯನ್ನು ಜಾರಿಗೆ ತಂದ ಮೇಲೆ ಭಾರತದ ಐಟಿ ಕ್ಷೇತ್ರಕ್ಕೆ ದೊಡ್ಡ ಹೊಡೆತ ಬಿದ್ದಿದೆ. ಇಲ್ಲಿಂದ ಅಮೆರಿಕಕ್ಕೆ ಹೋಗಲು ಹೊಸ ವೀಸಾ ನೀತಿಯಿಂದ ತೊಡಕಾಗಿದೆ.

ಎರಡನೆಯದಾಗಿ, ಪ್ರತೀ ಹಂತದ ಕೆಲಸದಲ್ಲೂ ‘ಆಟೋಮೇಷನ್’ ಅಂದರೆ ಮಾನವರಹಿತ ನಿರ್ವಹಣೆಗೆ ಮುಂದಾಗಿರುವುದು ಭಾರೀ ಉದ್ಯೋಗ ಕಡಿತಕ್ಕೆ ಎಡೆ ಮಾಡಿದೆ. ವರದಿಯೊಂದರ ಪ್ರಕಾರ ಈ ವರ್ಷ ದಲ್ಲಿ ಭಾರತದ ಸುಮಾರು 60,000 ಐಟಿ ಉದ್ಯೋಗಿಗಳು ಕೆಲಸ ಕಳೆದುಕೊ ಳ್ಳುವರೆಂದು ಊಹಿಸಲಾಗಿದೆ.

ಐಟಿ ವ್ಯವಹಾರವೂ ಬಲಿಯತೊಡಗಿದಂತೆ ಅದರಿಂ ದಾದ ಅಡ್ಡ ಪರಿಣಾಮಗಳು ಕಣ್ಣಿಗೆ ರಾಚತೊಡಗಿತು. ಭಾರತದ ‘ಸಿಲಿಕಾನ್ ವ್ಯಾಲಿ’ ಎಂದು ಕರೆಸಿಕೊಂಡು ಬೀಗಿದ ನಗರವನ್ನು ದೇಶದ ‘ಆತ್ಮಹತ್ಯಾ ರಾಜಧಾನಿ’ ಎಂದು ಕರೆಯಲಾಯಿತು. ನ್ಯಾಷನಲ್ ಕ್ರೈಮ್ ರೆಕಾರ್ಡ್ಸ್ ಬ್ಯೂರೋದ ಹೇಳಿಕೆಯ ಪ್ರಕಾರ ಬೆಂಗಳೂರಿನ ಪ್ರತೀ ಒಂದು ಲಕ್ಷ ಜನರಲ್ಲಿ 35 ಮಂದಿ ಆತ್ಮಹತ್ಯೆಗೆ ಬಲಿಯಾಗುತ್ತಿದ್ದಾರೆ. ನಗರದ ಮನಃಶಾಸ್ತ್ರಜ್ಞ ಅನೌಷ್ಕ ತ್ರಿಪಾಠಿಯವರ ಅಧ್ಯಯನದಂತೆ ಆತ್ಮಹತ್ಯೆ ಮಾಡಿಕೊಳ್ಳುವವರಲ್ಲಿ ಬಹುತೇಕರು ಐಟಿ ಉದ್ಯೋಗಿಗಳು. ಆತ್ಮಹತ್ಯೆಗೆ ಕಂಡುಬಂದ ಪ್ರಮುಖ ಕಾರಣಗಳು: ನಿಭಾಯಿಸಲಾಗದ ಕಚೇರಿಯ ಕೆಲಸ, ಪ್ರತಿದಿನ ಸಮಯ ಮುಗಿದ ನಂತರವೂ ವಿಸ್ತರಿಸಿ ಕೆಲಸ ಮಾಡಬೇಕಾಗುವ ಅನಿರ್ವಾತೆ, ಸಹೋದ್ಯೋಗಿಗಳೊಂ ದಿಗಿನ ಸ್ಪರ್ಧೆ, ಎಲ್ಲಕ್ಕಿಂತ ಮಿಗಿಲಾಗಿ ಭದ್ರತೆಯಿಲ್ಲದ ಉದ್ಯೋಗ. ಇಷ್ಟಲ್ಲದೆ, ಸದಾ ಹೊಸದಾಗಿ ಬರುವ ತಂತ್ರಜ್ಞಾನವನ್ನು ಕಲಿತು, ಪರೀಕ್ಷೆ ಬರೆದು ದೃಢೀಕರಿಸಿಕೊ ಳ್ಳುತ್ತಿರಬೇಕು.

  ಕೆಲಸದ ಒತ್ತಡದಿಂದ ಮಾನಸಿಕ ಹಾಗೂ ದೈಹಿಕ ಸಮಸ್ಯೆಗಳ ಕಾರಣದಿಂದ ಆಸ್ಪತ್ರೆಗಳಿಗೆ, ಆಯುರ್ವೇದ ಕೇಂದ್ರಗಳಿಗೆ, ವಿಶ್ರಾಂತಿಧಾಮಗಳಿಗೆ ಅತೀ ಹೆಚ್ಚಿನ ಸಂಖ್ಯೆ ಯಲ್ಲಿ ದಾಖಲಾಗುತ್ತಿದ್ದಾರೆ. ಮದ್ಯಪಾನ, ಧೂಮಪಾನ ಚಟಗಳಿಗೆ ದಾಸರಾಗಿರುವ ಪುರುಷ ಮತ್ತು ಮಹಿಳಾ ಉದ್ಯೋಗಿಗಳ ಸಂಖ್ಯೆ ಕೂಡ ಹೆಚ್ಚಾಗಿದೆ. ಐಟಿಯಲ್ಲಾಗುತ್ತಿರುವ ಉದ್ಯೋಗಿಗಳ ಮೇಲಿನ ಅನ್ಯಾಯಕ್ಕೆ, ಅಭದ್ರತೆಗೆ ಅಲ್ಲೊಂದು ಇಲ್ಲೊಂದು ಹೋರಾಟಗಳು ನಡೆದಿವೆ. ಕೋರ್ಟಿನ ಮೆಟ್ಟಿಲು ಹತ್ತಿ ರುವ ಉದಾಹರಣೆಗಳಿವೆ. ಆದರೆ ಯಾವುದೂ ತಾರ್ಕಿಕ ಅಂತ್ಯ ಕಂಡಿಲ್ಲ. ಸರಕಾರ ಈಗಲಾದರೂ ಐಟಿ ಉದ್ಯೋಗಿ ಗಳನ್ನು ಕಾಡುವ ಅಭದ್ರತೆ ಮತ್ತಿತರ ಸಮಸ್ಯೆಗಳಿಗೆ ಸ್ಪಂದಿಸಿ, ಕಾರ್ಪೊರೇಟ್ ಕಂಪೆನಿಗಳನ್ನು ಹತೋಟಿಗೆ ತರಬೇಕಿದೆ.

ಐಟಿ ಕ್ಷೇತ್ರದಲ್ಲಿ ನೌಕರರನ್ನು ಕೆಲಸದಿಂದ ತೆಗೆಯು ವಾಗ ಅವರ ಕಾರ್ಯಕ್ಷಮತೆ ಆಧರಿಸಿ ನಿರ್ಣಯ ಕೈಗೊಳ್ಳಲಾಗುತ್ತದೆ ಎಂದು ಬಿಂಬಿಸಲಾಗುತ್ತಿದೆ. ಆದರೆ ಪಿಂಕ್ ಸ್ಲಿಪ್ ನೀಡುವಾಗ ಕಂಪೆನಿಯ ಖರ್ಚುಗಳನ್ನು ಕಡಿತಗೊಳಿಸುವ ಉದ್ದೇಶವೇ ಪ್ರಧಾನವಾಗಿರುತ್ತದೆ. ಇತ್ತೀಚೆಗೆ ಐಟಿ ಕ್ಷೇತ್ರದಲ್ಲಿ ಡಿಜಿಟೈಜೇಷನ್ ಹಾಗೂ ಆಟೊಮೋಷನ್ ಹೆಚ್ಚಾಗುತ್ತಿದ್ದು ಉದ್ಯೋಗ ಕುಸಿತಕ್ಕೆ ಇದೂ ಕಾರಣವಾಗುತ್ತಿದೆ.

ಸದ್ಯದ ಪರಿಸ್ಥಿತಿ ಗಮನಿಸಿದಾಗ ಐಟಿಯಲ್ಲಿ ಉದ್ಯೋ ಗಾವಕಾಶಗಳ ಸಂಖ್ಯೆ ಇಳಿಮುಖವಾಗುತ್ತಿದೆ. ಹಲವಾರು ವರ್ಷಗಳಿಂದ ಕೆಲಸ ಮಾಡುತ್ತಿರುವವರ ಜಾಗಕ್ಕೆ ಹೊಸಬರನ್ನು ಕೂರಿಸಿ ಹಳಬರನ್ನು ಮನೆಗೆ ಕಳುಹಿಸುತ್ತಿದ್ದಾರೆ. ಈ ಮೂಲಕ ಕಡಿಮೆ ವೇತನ ಕೊಟ್ಟು ಹೆಚ್ಚು ಕೆಲಸ ತೆಗೆಯುವ ಕರಾಮತ್ತು ನಡೆದಿದೆ. ಕಾಲೇಜುಗಳಿಗೆ ಹೋಗಿ ಪ್ರತಿಭಾನ್ವಿತರನ್ನು ಹಾರಿಸಿ ಕೊಂಡು ಬರುತ್ತಿದ್ದ ‘ಕ್ಯಾಂಪಸ್ ಸೆಲೆಕ್ಷನ್’ ಕೂಡ ಡಲ್ಲಾಗಿದೆ. ಒಟ್ಟಿನಲ್ಲಿ ಐಟಿ ಎಂದರೆ ಮಾಯಾಲೋಕ ಎನ್ನುವ ಭ್ರಮಾ ಪರದೆ ಜಾರಿ ವಾಸ್ತವಕ್ಕೆ ಇಳಿಯುತ್ತಿದೆ. ಆದರೆ ಈ ಪರ್ವದ ಕಾಲದಲ್ಲಿ ಅದೆಷ್ಟು ಜನರ ಬದುಕು ಬರಡಾಗುತ್ತದೋ ಗೊತ್ತಿಲ್ಲ.

ಸದ್ಯದ ಪರಿಸ್ಥಿತಿ ಗಮನಿಸಿದಾಗ ಐಟಿಯಲ್ಲಿ ಉದ್ಯೋಗಾವಕಾಶಗಳ ಸಂಖ್ಯೆ ಇಳಿಮುಖವಾಗುತ್ತಿದೆ. ಹಲವಾರು ವರ್ಷಗಳಿಂದ ಕೆಲಸ ಮಾಡುತ್ತಿರುವವರ ಜಾಗಕ್ಕೆ ಹೊಸಬರನ್ನು ಕೂರಿಸಿ ಹಳಬರನ್ನು ಮನೆಗೆ ಕಳುಹಿಸುತ್ತಿದ್ದಾರೆ. ಈ ಮೂಲಕ ಕಡಿಮೆ ವೇತನ ಕೊಟ್ಟು ಹೆಚ್ಚು ಕೆಲಸ ತೆಗೆಯುವ ಕರಾಮತ್ತು ನಡೆದಿದೆ. ಕಾಲೇಜುಗಳಿಗೆ ಹೋಗಿ ಪ್ರತಿಭಾನ್ವಿತರನ್ನು ಹಾರಿಸಿಕೊಂಡು ಬರುತ್ತಿದ್ದ ‘ಕ್ಯಾಂಪಸ್ ಸೆಲೆಕ್ಷನ್’ ಕೂಡ ಡಲ್ಲಾಗಿದೆ. ಒಟ್ಟಿನಲ್ಲಿ ಐಟಿ ಎಂದರೆ ಮಾಯಾಲೋಕ ಎನ್ನುವ ಭ್ರಮಾ ಪರದೆ ಜಾರಿ ವಾಸ್ತವಕ್ಕೆ ಇಳಿಯುತ್ತಿದೆ.

Writer - ಬಸವರಾಜು ದೇ.ಸಿ.

contributor

Editor - ಬಸವರಾಜು ದೇ.ಸಿ.

contributor

Similar News