ಆಲೋಚನಾ ವಿಧಾನ ಪೂರ್ವ ಸಿದ್ಧತೆ

Update: 2017-08-12 18:48 GMT

ನಮ್ಮ ಮಕ್ಕಳ ಆಲೋಚನಾ ವಿಧಾನ ಹೇಗಿದೆ?

1.ಹೇಗೆ ಬದಲು ಏನು: ನಮ್ಮ ದೇಶದಲ್ಲಿ ಬಹುಪಾಲು ಜನರು, ಅವರು ಪೋಷಕರಾಗಲಿ ಅಥವಾ ಶಿಕ್ಷಕರಾಗಲಿ ತಮ್ಮ ಸುಪರ್ದಿನಲ್ಲಿರುವ ಮಕ್ಕಳಿಗೆ ಹೇಗೆ ಆಲೋಚಿಸುವುದೆಂದು ಹೇಳಿಕೊಡುವ ಬದಲು ಏನು ಆಲೋಚಿಸಬೇಕೆಂದು ತಿಳಿಸುವುದರಲ್ಲಿ ಆಸಕ್ತರಾಗುತ್ತಾರೆ.

2. ಸೂಚಿತ ವಿಷಯ ವಸ್ತುಗಳು: ಮಕ್ಕಳ ಆಲೋಚನೆಗೆ ವಸ್ತುಗಳನ್ನು ಮತ್ತು ವಿಷಯಗಳನ್ನು ತಾವಷ್ಟೇ ಒದಗಿಸಬೇಕೆಂದು ನೋಡುತ್ತಾರೆ ಮತ್ತು ಆ ವಸ್ತು ವಿಷಯಗಳ ಬಗ್ಗೆ ಏನನ್ನು ಯೋಚಿಸಬೇಕೆಂದೂ ಸೂಚಿಸುತ್ತಾರೆ.

3.ಅಭಿಪ್ರಾಯ ಹೇರುವಿಕೆ: ಮಕ್ಕಳಿಗೆ ಕಾಣುವ ವಸ್ತುಗಳ ಮತ್ತು ವಿಷಯಗಳ ಬಗ್ಗೆ ತಮ್ಮ ಅಭಿಪ್ರಾಯವನ್ನು ಅವರದಾಗಿಸುತ್ತಾರೆ.

4.ವೌಲ್ಯ ನಿರ್ಣಯ: ಯಾವ ವಸ್ತು ಶ್ರೇಷ್ಠ ಯಾವುದು ಕನಿಷ್ಠ ಯಾವುದು ಬೇಕು ಯಾವುದು ಬೇಡ ಎಲ್ಲವನ್ನೂ ಹಿರಿಯರು ನಿರ್ಧರಿಸಿ ಅದನ್ನು ಪಠ್ಯಗಳಲ್ಲಿಯೂ ಕೂಡ ನಿರ್ದೇಶಿಸುತ್ತಾರೆ. 5.ಹಟಮಾರಿ ಧೋರಣೆ: ಮಾಡೂಂದ್ರೆ ಮಾಡಬೇಕು, ಬೇಡಾಂದ್ರೆ ಬೇಡ, ಅದನ್ನು ಬಿಟ್ಟುಬಿಡಬೇಕು ಎನ್ನುವುದು ನಮ್ಮ ಹಿರಿಯರ ಸಾಮಾನ್ಯ ಹಟಮಾರಿ ಧೋರಣೆ.

6.ನಿರ್ದೇಶಿತ ರುಚಿ ಮತ್ತು ಅಭಿರುಚಿಗಳು: ತಿನ್ನುವ ಆಹಾರದ ರುಚಿಯನ್ನೂ ಕೂಡ ತಾನೇ ನಿರ್ದೇಶಿಸುತ್ತಾರೆ. ಈ ತಿನ್ನಿಸು ಚೆನ್ನಾಗಿರುತ್ತದೆ. ಇದು ರುಚಿ ಯಾಗಿರುತ್ತದೆ. ತಿನಿಸುಗಳ ಕಾಂಬಿನೇಶನ್‌ಗಳಲ್ಲಿ ಹಾಗೆ ತಿನ್ನಬಾರದು. ಹೀಗೆಯೇ ತಿನ್ನಬೇಕು, ಇತ್ಯಾದಿ. ಈ ರೀತಿಯಾಗಿ ಅವರದೇ ಆದಂತಹ ರುಚಿಗಳನ್ನು ಕಂಡುಕೊಳ್ಳಲೂ ಅವರನ್ನು ಬಿಡುವುದಿಲ್ಲ.

7.ಪ್ರಲೋಭನೆಗಳು: ತಾವು ಆಲೋಚಿಸುವ ವಿಧಾನಗಳಲ್ಲಿ ಆಲೋಚಿಸಿದರೆ ಅಥವಾ ತಾವು ತೆಗೆದುಕೊಳ್ಳುವ ನಿರ್ಣಯಗಳನ್ನು ಗೌರವಿಸಿದರೆ ಮಕ್ಕಳನ್ನು ಬಹುಮಾನಿಸುವುದರಿಂದ, ಪ್ರಶಂಸಿಸುವುದರಿಂದ ಅಥವಾ ಹತ್ತಿರಕ್ಕೆ ಸೆಳೆದುಕೊಳ್ಳುವುದರಿಂದ ಮಕ್ಕಳೂ ಕೂಡ ತಾವು ಪ್ರಶಂಸೆಗೊಳಗಾಗುವುದಕ್ಕೆ, ಬಹುಮಾನಗಳನ್ನು ಪಡೆಯುವುದಕ್ಕೆ ಹಿರಿಯರನ್ನು ಓಲೈಸುವುದಕ್ಕೆ ಅವರಂತೆಯೇ ಚಿಂತಿಸಲು ಯತ್ನಿಸುತ್ತಾರೆ.

8.ನಿರ್ದಿಷ್ಟ ಅಳತೆಗೋಲು: ಪರೀಕ್ಷಾ ಪದ್ಧತಿಯು ಸ್ವತಂತ್ರ ಮತ್ತು ಸೃಜನಾತ್ಮಕ ಚಿಂತನಾಕ್ರಮವನ್ನು ಧ್ವಂಸ ಮಾಡುವಲ್ಲಿ ತನ್ನ ಕಾಣ್ಕೆಯನ್ನು ಸಲ್ಲಿಸುತ್ತದೆ. ಮಕ್ಕಳು ಪರೀಕ್ಷಕರನ್ನು ಮೆಚ್ಚಿಸುವಂತಹ ಉತ್ತರಗಳನ್ನು ಬರೆಯುವುದಕ್ಕಿಂತ ಮಕ್ಕಳು ಸ್ವತಂತ್ರ ಆಲೋಚನಾ ಕ್ರಮದಿಂದ ಮತ್ತು ಸೃಜನಶೀಲ ಚಿಂತನೆ ಗಳಿಂದ ಉತ್ತರಿಸುವುದನ್ನು ಗೌರವಿಸುವಂತ ಮಾನದಂಡಗಳು ನಮ್ಮಲ್ಲಿ ಇಲ್ಲ. ಇದೆಲ್ಲದರ ಫಲವಾಗಿ ಮಕ್ಕಳು ಸ್ವತಂತ್ರವಾಗಿ ನಡೆದುಕೊಳ್ಳುವುದಿರಲಿ, ಚಿಂತಿಸುವುದೂ ಇಲ್ಲ. ಪ್ರತಿಯೊಂದು ಚಿಂತನೆಯ ಅಭಿವ್ಯಕ್ತಿಗೆ ಮಾನದಂಡ ಗಳನ್ನು ಅಥವಾ ಅಳತೆಗೋಲುಗಳನ್ನು ಇಟ್ಟುಕೊಂಡಿರುವುದರಿಂದ ನಿರಾಕರಣೆಗೆ ಒಳಗಾಗದಿರುವಂತೆ ತಮ್ಮನ್ನು ತಾವು ರಕ್ಷಿಸಿಕೊಳ್ಳಲು ದೊಡ್ಡವರಿಂದ ಹಿಡಿದು ಸಣ್ಣವರವರೆಗೂ ಹೆಣಗಾಡುತ್ತಿರುತ್ತಾರೆ.

ತಿರಸ್ಕೃತರಾಗುವ ಅಥವಾ ನಿರಾಕರಣೆಯ ಭಯವನ್ನು ತೊರೆದರೆ ಈ ಎಲ್ಲಾ ನಿರುತ್ಸಾಹದ ವಾತಾವರಣದಲ್ಲಿಯೂ ಕೂಡ ಸ್ವತಂತ್ರವಾಗಿ ಆಲೋ ಚಿಸಬಹುದು ಮತ್ತು ಸೃಜನಶೀಲವಾಗಿ ವರ್ತಿಸಬಹುದು. ಆದರೆ ಅಂತಹ ಸಾಹಸಗಳನ್ನು ಮಾಡುವುದಕ್ಕೆ ಮುಂದಾಗುವವರು ಬಹಳ ಕಡಿಮೆ.

ಸ್ವತಂತ್ರ ಚಿಂತನೆಗಳ ವ್ಯಾಪ್ತಿ

ಮಕ್ಕಳು ಸ್ವತಂತ್ರವಾಗಿ ಮತ್ತು ಸೃಜನಶೀಲವಾಗಿ ಚಿಂತಿಸುವುದರಿಂದ ಸಮಾಜಕ್ಕೆ ಆಗುವ ಲಾಭವಾದರೂ ಏನು ಎಂಬುದನ್ನು ನಾವು ಅರಿತುಕೊಳ್ಳಬೇಕು.

1.ವಸ್ತುನಿಷ್ಠ ವಿಮರ್ಶೆಗಳು.

2.ಮುಂದುವರಿದ ಪೀಳಿಗೆಗಳು ಹೊಂದಿರುವಂತಹ ದೃಷ್ಟಿಕೋನಗಳ ಬಗ್ಗೆ ಅರಿವು.

3.ಹೊಸ ಮಾದರಿಯ ಚಿಂತನಾ ಕ್ರಮಗಳ ಪರಿಚಯ.

4.ಹಳೆಯ ವಿಚಾರಗಳಿಗೆ ಹೊಸ ಉಪಚಾರ.

5.ಪ್ರಸ್ತುತ ಕಾಲಘಟ್ಟಕ್ಕೆ ಅಗತ್ಯವಿರುವುದರ ಬಗ್ಗೆ ತಿಳುವಳಿಕೆ.

6.ವೈಚಾರಿಕ ಮತ್ತು ವೈಜ್ಞಾನಿಕ ವಿಚಾರಗಳ ವಿಕಾಸ ಮತ್ತು ಬೆಳವಣಿಗೆ.

7.ಸಂಶೋಧನೆ ಮತ್ತು ವಿಶ್ಲೇಷಣೆಗಳಿಗೆ ಹೊಸ ಹೊಸ ಆಯಾಮಗಳು.

8.ರಾಜಕೀಯ, ಸಾಮಾಜಿಕ, ಸಾಂಸ್ಕೃತಿಕ, ವೈಜ್ಞಾನಿಕ; ಹೀಗೆ ಸಮಾಜದ ಪ್ರತಿಯೊಂದು ಕ್ಷೇತ್ರದಲ್ಲೂ ಹೊಸ ಬಗೆಯ ಪ್ರಯೋಗಗಳನ್ನು ಮತ್ತು ಆವಿಷ್ಕಾರಗಳನ್ನು ಕಾಣಬಹುದಾಗಿರುತ್ತದೆ.

ಮಕ್ಕಳು ಸ್ವತಂತ್ರವಾಗಿ ಮತ್ತು ಸೃಜನಶೀಲವಾಗಿ ಚಿಂತನೆಗಳನ್ನು ನಡೆಸುವುದರಿಂದ ಮಾತ್ರವೇ ಇವು ಸಾಧ್ಯವಾಗುವುದು. ನಮ್ಮ ದೇಶದ ದೊಡ್ಡ ದುರಂತವೆಂದರೆ ಸ್ವತಂತ್ರವಾಗಿ ಚಿಂತಿಸುವ, ಹೊಸ ಪ್ರಯೋಗಗಳಿಗೆ ಒಡ್ಡಿಕೊಳ್ಳುವಂತಹ, ಅಥವಾ ಸೃಜನಶೀಲಾತ್ಮಕವಾದಂತಹ ಪ್ರಯೋಗಗಳನ್ನು ಮಾಡುವಂತಹ ಅವಕಾಶಗಳನ್ನು ಕಲ್ಪಿಸುವುದು ಕೂಡ ಅತ್ಯಂತ ದೊಡ್ಡ ದೊಡ್ಡ ಅಥವಾ ಮುಂದುವರಿದಂತಹ ಶಾಲೆಗಳಲ್ಲಿ ಮತ್ತು ಮನೆಗಳಲ್ಲಿ. ಹಾಗಾಗಿ ಹೆಚ್ಚಿನ ಸಂಖ್ಯೆಯಲ್ಲಿರುವ ಮಧ್ಯಮವರ್ಗದ ಶಾಲೆಗಳು ಮತ್ತು ಕುಟುಂಬಗಳು ಸ್ವತಂತ್ರ ಮತ್ತು ಸೃಜನಶೀಲ ವಿಷಯಗಳಿಂದ ಬಹುಪಾಲು ವಂಚಿತರಾಗುತ್ತಾರೆ. ಸರಕಾರಿ ಶಾಲೆಗಳಾಗಲಿ, ಇತರೇ ಮಧ್ಯಮವರ್ಗದ ಖಾಸಗೀ ಶಾಲೆಗಳಾಗಲಿ, ಇವರೊಟ್ಟಿಗೆ ಎಲ್ಲಾ ವರ್ಗಗಳ, ಜೀವನ ಶೈಲಿಗಳ ಕುಟುಂಬಗಳಾಗಲಿ ಇದರ ಬಗ್ಗೆ ಆಲೋಚಿಸುವುದು ಮಾತ್ರವಲ್ಲದೇ ಈ ದಿಕ್ಕಿನಲ್ಲಿ ಕೆಲಸ ಮಾಡಲು ಪ್ರಾರಂಭಿಸಿದರೆ ಮುಂದಿನ ಪೀಳಿಗೆಗಳ ಬಗ್ಗೆ ಒಂದಿಷ್ಟು ಭರವಸೆಯನ್ನು ಹೊಂದಬಹುದು.

ದಾಖಲುಗಳ ಸಿದ್ಧತೆ

ಮಕ್ಕಳಿಗೆ ಹೇಗೆ ಆಲೋಚಿಸುವುದೆಂದು ಹೇಳಿಕೊಡುವುದು ಬಹಳ ಮುಖ್ಯ. ಏನು ಆಲೋಚಿಸಬೇಕೆಂದು ಹೇಳಿಕೊಡುವುದರಲ್ಲಿ ಏಕಮುಖ ಅಭಿಪ್ರಾಯವನ್ನು ರವಾನಿಸಿದಂತಾಗುತ್ತದೆಯೇ ಹೊರತು, ಸ್ವತಂತ್ರವಾಗಿ ಸೃಜನಶೀಲವಾಗಿ ಏನನ್ನೂ ಮಕ್ಕಳಲ್ಲಿ ಕಾಣಲಾಗುವುದಿಲ್ಲ.

ಹೇಗೆ ಆಲೋಚಿಸುವುದೆಂದು ಮಕ್ಕಳಿಗೆ ಪ್ರಾಥಮಿಕ ಹಂತದಲ್ಲಿಯೇ ಹೇಳಿಕೊಡಬೇಕಾಗುತ್ತದೆ. ಅದಕ್ಕಾಗಿ ಮಾದರಿಗಳನ್ನು ನಿರ್ಮಿಸಬೇಕಾಗುತ್ತದೆ. ಉದಾಹರಣೆಗಳನ್ನು ಕೊಡಬೇಕಾಗುತ್ತದೆ. ಅದಕ್ಕೆ ಮೊದಲು ಪೋಷಕರಲ್ಲಿ ಮತ್ತು ಶಿಕ್ಷಕರಲ್ಲಿ ಒಂದು ಸಿದ್ಧತೆ ಬೇಕಾಗುತ್ತದೆ. ಆ ಸಿದ್ಧತೆಯಲ್ಲಿ ಮಾನಸಿಕ ಸಿದ್ಧತೆ, ತಾಂತ್ರಿಕ (ಚಟುವಟಿಕೆಗಳಿಗೆ ಪರಿಕರಗಳು ಮತ್ತು ಯೋಜನೆಗಳು) ಸಿದ್ಧತೆ, ಪಠ್ಯ (ವಿಷಯ) ಸಿದ್ಧತೆ ಮತ್ತು ಅಧ್ಯಯನ (ಮಕ್ಕಳ ವರ್ತನೆ ಮತ್ತು ಪ್ರತಿಕ್ರಿಯೆಗಳ ಬಗ್ಗೆ, ಬೋಧನಾ ವಿಧಾನಗಳ ಬಗ್ಗೆ ಮನೋವೈಜ್ಞಾನಿಕ ತಿಳುವಳಿಕೆ). ಈ ಎಲ್ಲಾ ಸಿದ್ಧತೆಗಳ ಜೊತೆಗೆ ಮಕ್ಕಳ ಪ್ರಗತಿಯ ಬಗ್ಗೆ ದಾಖ ಲಾತಿ ಮಾಡುವಂತಹ ವ್ಯವಧಾನ ಹೊಂದಿರಬೇಕು. ಅದು ಬರಹದ ಮೂಲಕ, ಛಾಯಾಚಿತ್ರ ಮತ್ತು ಚಲನ ಚಿತ್ರಗಳ ಮೂಲಕ ಹಾಗೂ ವಸ್ತುಗಳ ಮೂಲಕವೂ ಆಗಿರಬಹುದು.

ಪೋಷಕರಾಗಲಿ ಅಥವಾ ಶಿಕ್ಷಕರಾಗಲಿ ಕಲಿಸುವುದಕ್ಕೆ ಆತುರಪಡುವ ಮೊದಲು ಗಮನಿಸುವುದನ್ನು ಕಲಿಯಬೇಕು. ವ್ಯವಸ್ಥಿತವಾಗಿ ಆಲೋಚನಾ ಕ್ರಮವನ್ನು ಕಲಿಸುವ ಮೊದಲು ಮಕ್ಕಳನ್ನು ಸಾಧಾರಣ ಚಟುವಟಿಕೆಗಳಲ್ಲಿ ತೊಡಗಿರುವಾಗ ಹಲವಾರು ವಿಷಯಗಳನ್ನು ಗಮನಿಸಬೇಕು.

ಏನೇನನ್ನು ಗಮನಿಸಬೇಕು?

1.ಸಾಧಾರಣ ಕ್ರಿಯೆಗಳು: ಮಗುವಿನ ಎಲ್ಲಾ ಚಲನವಲನಗಳು.

2.ಕ್ರಿಯಾತ್ಮಕ ಅಭಿವ್ಯಕ್ತಿ: ಮಗುವಿನ ಎಲ್ಲಾ ಬಗೆಯ ಕ್ರಿಯೆ ಪ್ರತಿಕ್ರಿಯೆಗಳು.

3.ಒಲವು: ಮಗುವಿನ ಆಸಕ್ತಿ ಮತ್ತು ನಿರಾಸಕ್ತಿಗಳು.

4.ಸ್ಪಂದನಾ ಮೂಲ: ಮಗುವು ಸೃಜನಶೀಲವಾಗಿ ಸ್ಪಂದಿಸುವುದೋ ಅಥವಾ ಮನೆಯವರ, ಇತರೇ ಪರಿಸರದ ಪ್ರಭಾವದ ಪ್ರತಿಬಿಂಬವಾಗಿ ಸ್ಪಂದಿಸುವುದೋ ನೋಡಬೇಕು.

5.ಸಾಮರ್ಥ್ಯ: ಮಗುವಿಗೆ ಗಮನಿಸುವ ಸಾಮರ್ಥ್ಯ, ಏಕಾಗ್ರತೆಯ ಸಾಮರ್ಥ್ಯ, ವಿವೇಚನೆಯಿಂದ ಚಟುವಟಿಕೆಗಳಲ್ಲಿ ಭಾಗವಹಿಸುವ ಸಾಮರ್ಥ್ಯ ಇದೆಯೋ ಇಲ್ಲವೋ ತಿಳಿಯಬೇಕು.

6.ಕ್ರಿಯಾಶಕ್ತಿ: ಮಗುವು ಯಾವುದೇ ಚಟುವಟಿಕೆಗಳಿಗೆ ತೊಡಗುವ ಸಂದರ್ಭ ಬಂದಾಗ ಚುರುಕಾಗಿರುವುದೋ, ಮಂದವಾಗಿರುವುದೋ ಅಥವಾ ಸಂಪೂರ್ಣ ಜಡವಾಗಿರುವುದೋ, ಇತರರನ್ನು ಅನುಸರಿಸಲು ಅಥವಾ ಅನುಕರಿಸಲು ಆಸಕ್ತಿ ತೋರುವುದೋ; ಇತ್ಯಾದಿ.

7.ನೈಪುಣ್ಯತೆ: ಚಟುವಟಿಕೆಗಳಲ್ಲಿ ತೊಡಗುವಾಗ ವಸ್ತುಗಳನ್ನು ಅಪೇಕ್ಷಿಸು ವುದೋ, ಇರುವ ಪರಿಕರಗಳನ್ನು ಉಪಯೋಗಿಸಿಕೊಳ್ಳುವ ಜಾಣ್ಮೆ ತೋರುವುದೋ, ವಸ್ತುಗಳೇ ಇಲ್ಲದೇ ಚಟುವಟಿಕೆಗಳನ್ನು ಮಾಡುವುದೋ; ಇತ್ಯಾದಿ.

8.ಕ್ರಿಯಾ ನಿರ್ವಹಣೆ: ಚಟುವಟಿಕೆಗಳ ಆರಂಭವನ್ನು ಮಾಡಿ ಕೊನೆಯವರೆಗೂ ಆ ಚುರುಕುತನ ಮತ್ತು ಉತ್ಸಾಹವನ್ನು ಉಳಿಸಿಕೊ ಳ್ಳುವುದೋ, ಆರಂಭ ಮಾಡಿದ ಮೇಲೆ ಮಧ್ಯಕ್ಕೆ ನಿಲ್ಲಿಸುವುದೋ, ತಾನು ಪ್ರಾರಂಭ ಮಾಡಿದ್ದನ್ನು ಹೇಗೆ ಮುಂದುವರಿಸುವುದೆಂದು ತಿಳಿಯದೇ ಸುಮ್ಮನಾಗುವುದೋ ಅಥವಾ ಸಹಾಯ ಕೇಳುವುದೋ; ಇತ್ಯಾದಿ.

9.ಕ್ರಿಯಾಧಾರ: ಚಟುವಟಿಕೆಗಳನ್ನು ಒಂಟಿಯಾಗಿ ಮಾಡಲು ಇಚ್ಛಿಸು ವುದೋ, ಇತರರ ಸಹಾಯದಿಂದ ಮಾಡಲು ಇಷ್ಟಪಡುವುದೋ, ಪರಸ್ಪರ ಸಹಕಾರವನ್ನು ಬಯಸುವುದೋ, ಪೈಪೋಟಿಯಲ್ಲಿ ತಾನು ಕೆಲಸ ಮಾಡುವುದಕ್ಕೆ ಆತುರಿಸುವುದೋ, ಮೊದಲು ತಾನೇ ಉತ್ಸಾಹ ದಲ್ಲಿ ಯಾರೂ ಬೇಡವೆಂದು ಪ್ರಾರಂಭಿಸಿ ನಂತರ ಸಹಾಯವನ್ನು ಅಪೇಕ್ಷಿಸುವುದೋ, ಅಥವಾ ಮೊದಲು ಇತರರ ಸಹಕಾರ ಅಥವಾ ಸಮೂಹ ಚಟುವಟಿಕೆಯಾಗಿ ಪ್ರಾರಂಭಿಸಿ ಆ ವಸ್ತುವಿನ ತಯಾರಿಕೆ ಅಥವಾ ಯಾವುದೇ ಚಟುವಟಿಕೆ ಉತ್ತಮ ಹಂತಕ್ಕೆ ಬರುವಾಗ ತಾನೊಬ್ಬನೇ ಅಥವಾ ಒಬ್ಬಳೇ ಮಾಡುವುದಕ್ಕೆ ಹಾತೊರೆಯುವುದೋ; ಇತ್ಯಾದಿ.

10.ಕ್ರೀಡಾಮನೋಭಾವ: ಆಟಗಳನ್ನು ಆಡುವಾಗ ಆಕ್ರಮಣಕಾರಿಯಾಗಿ ವರ್ತಿಸುವುದೋ, ತಾನು ಶಕ್ತಿಶಾಲಿ ಎಂದು ಪ್ರದರ್ಶಿಸುವುದೋ, ದುರ್ಬಲನೆಂದು ತೋರಿಸಿಕೊಂಡು ಅನುಕಂಪದ ಆಧಾರದ ಮೇಲೆ ಗಮನ ಸೆಳೆಯುವುದೋ, ಗೆಲ್ಲುವುದರಲ್ಲೇ ತನ್ನ ಸಂತೋಷವಿದ್ದು, ಸೋತರೆ ವ್ಯಥೆ ಪಡುವುದು ಶೋಕಿಸುವುದು, ಅಥವಾ ಆಟವನ್ನೇ ತಿರಸ್ಕರಿಸುವುದೋ; ಇತ್ಯಾದಿ.

11.ಗುಣಮಟ್ಟ: ಸಂಯಮದ ಮಟ್ಟ, ಏಕಾಗ್ರತೆಯ ಮಟ್ಟ, ಚುರುಕಿನ ಮಟ್ಟ, ಪ್ರತಿಕ್ರಿಯಿಸುವ ವೇಗದ ಮಟ್ಟ, ಇತ್ಯಾದಿಗಳನ್ನು ಗಮನಿಸಬೇಕು.

12.ವರ್ತನಾಶೈಲಿ: ಭಯ, ನಿರ್ಭಯ, ಹಿಂಜರಿಯುವಿಕೆ, ಮುಖೇಡಿತನ, ಮೊಂಡುತನ, ಹಿಂದುಮುಂದು ನೋಡದೇ ನುಗ್ಗುವಿಕೆ; ಇತ್ಯಾದಿಗಳನ್ನು ಗಮನಿಸಬೇಕು.

13.ವಿಷಯಾಸಕ್ತಿ: ಗಣಿತ, ಭಾಷೆ, ವಿಜ್ಞಾನ, ಪರಿಸರ, ಕಲೆ, ನೃತ್ಯ, ಸಂಗೀತ ಇತ್ಯಾದಿಗಳಲ್ಲಿ ಇರುವಂತಹ ಆಸಕ್ತಿಗಳನ್ನು ಗುರುತಿಸಬೇಕು.

14.ಅಭಿರುಚಿ: ಲಲಿತ ಕಲೆಗಳಾಗಲಿ, ಹೋರಾಟದ ಕಲೆಗಳಲ್ಲಾಗಲಿ ಅವರ ಆಸಕ್ತಿ ಬರಿಯ ನೋಡಿ ಆನಂದಿಸುವುದೋ ಅಥವಾ ತಾವೂ ಅದರ ಭಾಗವಾಗಿ ಕಲಿಯಲು ಆಸಕ್ತಿ ತೋರುವರೋ ತಿಳಿಯಬೇಕು. 15.ಸಾಮಾನ್ಯ ಗುಣಗಳು: ಮಗುವಿಗೆ ಇರುವಂತಹ ಅಸೂಯೆ, ದುರಾಸೆ, ಕರುಣೆ, ಸಹಕಾರ, ಕ್ರೌರ್ಯ, ಸುಳ್ಳು, ಕಳ್ಳತನ ಇತ್ಯಾದಿ ಗುಣಗಳನ್ನೂ ಗಮನಿಸಬೇಕು.

ಇಷ್ಟೆಲ್ಲಾ ಗಮನಿಸಿರುವುದನ್ನು ದಾಖಲು ಮಾಡಿಕೊಳ್ಳಬೇಕು. ಈ ದಾಖಲೆಗಳು ಮಗುವಿನ ಸೃಜನಶೀಲತೆ ಮತ್ತು ಸ್ವತಂತ್ರ ಚಿಂತನೆಗಳನ್ನು ರೂಢಿಸುವಲ್ಲಿ ಮಹತ್ತರ ಪಾತ್ರವಹಿಸುತ್ತವೆ.

ಪರಿಚಯ

ಇಷ್ಟಾದ ಮೇಲೆ ಸ್ವತಂತ್ರ ಚಿಂತನಾ ಕ್ರಮವನ್ನು ಯಾವ ಯಾವ ಕ್ಷೇತ್ರಗಳಲ್ಲಿ ರೂಢಿಗೊಳಿಸುವಂತಹ ಸಾಧ್ಯತೆಗಳು ಮಕ್ಕಳ ಮಟ್ಟದಲ್ಲಿ ಸಾಧ್ಯ ಎಂಬುದನ್ನೂ ಕೂಡ ಗಮನಿಸಬೇಕು. ಏಕೆಂದರೆ ಮಕ್ಕಳು ಕೆಲವು ವಸ್ತುಗಳ ಪರಿಣಾಮಗಳನ್ನು ಸಾಕ್ಷೀಕರಿಸಿರುವುದಿಲ್ಲ ಅಥವಾ ಅನುಭವಿಸಿರುವುದಿಲ್ಲ. ಮತ್ತೆ ಕೆಲವು ವಸ್ತುಗಳ ಗುಣಸ್ವಭಾವಗಳ ಸಂಪೂರ್ಣ ಪರಿಚಯವಿರುವುದಿಲ್ಲ. ಉದಾಹರಣೆಗೆ ವಿದ್ಯುದ್ವಸ್ತುಗಳು, ರಾಸಾಯನಿಕ ವಸ್ತುಗಳು, ಇತರ ಪ್ರತಿಕೂಲ ಪರಿಣಾಮ ಬೀರುವಂತಹ ವಸ್ತುಗಳ ಕುರಿತಾಗಿ ಮಕ್ಕಳಿಗೆ ತಿಳಿದಿರುವುದಿಲ್ಲ. ಹಾಗಾಗಿ ಸ್ವತಂತ್ರವಾಗಿ ಚಿಂತಿಸುವುದಕ್ಕೂ, ಸೃಜನಾತ್ಮಕವಾಗಿ ಚಟುವಟಿಕೆಗೆ ತೊಡಗುವುದಕ್ಕೂ ಮೊದಲು ಮಕ್ಕಳಿಗೆ ವಸ್ತುಗಳ ಪರಿಚಯವು ಆಗಿರಬೇಕು. ಪರಿಚಯ ಮಾಡಿಸುವುದೆಂದರೆ ಅದು ಅಭಿಪ್ರಾಯಗಳನ್ನು ಹೇಳುವುದೇನಲ್ಲವಲ್ಲ. ಬದಲಾಗಿ ನೈಸರ್ಗಿಕವಾಗಿ ಮತ್ತು ವೈಜ್ಞಾನಿಕವಾಗಿ ಪ್ರತಿಯೊಂದು ವಸ್ತುವು ತನ್ನದೇ ಆದ ಕ್ರಿಯೆ ಮತ್ತು ಪ್ರಭಾವವನ್ನು ಹೊಂದಿರುತ್ತದೆ. ಅದೇ ರೀತಿ ಇತರ ವಸ್ತುಗಳೊಂದಿಗೆ ಅಥವಾ ವಿಷಯಗಳೊಂದಿಗೆ ವಿವಿಧ ರೀತಿಯ ಪ್ರತಿಕ್ರಿಯೆಗಳನ್ನು ಕೊಡುತ್ತವೆ ಮತ್ತು ಜೀವಿಗಳಾದರೆ ಅವುಗಳು ಸ್ಪಂದಿಸುವ ರೀತಿಗಳಲ್ಲಿ ಭಿನ್ನತೆಗಳಿರುತ್ತವೆ. ಇವುಗಳೆಲ್ಲವನ್ನೂ ಸರಳ ವೈಜ್ಞಾನಿಕ ವಿಧಾನಗಳಲ್ಲಿ ಪರಿಚಯಿಸಬೇಕು. ಸ್ವತಂತ್ರ ಚಿಂತನೆಯಾಗಲಿ, ಸೃಜನಾತ್ಮಕ ಪ್ರಯೋಗಗಳಾಗಲಿ ಸರಿಯಾದ ಪರಿಚಯವಿಲ್ಲದೇ ತೊಡಗಿದ್ದಲ್ಲಿ ಅಪಘಾತಗಳಾಗಬಹುದು, ಅನರ್ಥಗಳಾಗಬಹುದು. ಇದರ ಬಗ್ಗೆ ಎಚ್ಚರವಿರಲಿ.(ಮುಂದುವರಿಯುವುದು)

ಪೋಷಕರಾಗಲಿ ಅಥವಾ ಶಿಕ್ಷಕರಾಗಲಿ ಕಲಿಸುವುದಕ್ಕೆ ಆತುರಪಡುವ ಮೊದಲು ಗಮನಿಸುವುದನ್ನು ಕಲಿಯಬೇಕು. ವ್ಯವಸ್ಥಿತವಾಗಿ ಆಲೋಚನಾ ಕ್ರಮವನ್ನು ಕಲಿಸುವ ಮೊದಲು ಮಕ್ಕಳನ್ನು ಸಾಧಾರಣ ಚಟುವಟಿಕೆಗಳಲ್ಲಿ ತೊಡಗಿರುವಾಗ ಹಲವಾರು ವಿಷಯಗಳನ್ನು ಗಮನಿಸಬೇಕು.

Writer - ಯೋಗೇಶ್ ಮಾಸ್ಟರ್

contributor

Editor - ಯೋಗೇಶ್ ಮಾಸ್ಟರ್

contributor

Similar News