ದಿಲ್ಲಿ ದರ್ಬಾರ್

Update: 2017-08-12 18:51 GMT

ಕಾಂಗ್ರೆಸ್‌ಗೆ ಹೊಸ ಹೀರೊ ಗೋಹಿಲ್
ಹೈಡ್ರಾಮಾ ಬಳಿಕ ಅಹ್ಮದ್ ಪಟೇಲ್ ರಾಜ್ಯಸಭೆಗೆ ಆಯ್ಕೆಯಾಗುವ ಮೂಲಕ ಕಳೆಗುಂದಿದ ಕಾಂಗ್ರೆಸ್‌ನಲ್ಲಿ ಮತ್ತೆ ಜೀವಕಳೆ ಮರುಕಳಿಸಿದೆ. ಇದರ ಜತೆಗೆ ಗುಜರಾತ್‌ನಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಹೊಸ ಹೀರೊವನ್ನು ಕೂಡಾ ಸೃಷ್ಟಿಸಿದೆ. ಅತ್ಯುನ್ನತ ನಾಯಕ ಶಂಕರ್ ಸಿನ್ಹ ವಘೇಲಾ ಅವರಂಥ ನಾಯಕರು ಪಕ್ಷದಿಂದ ನಿರ್ಗಮಿಸಿರುವ ಕಾಲಘಟ್ಟದಲ್ಲಿ ಶಕ್ತಿಸಿನ್ಹ ಗೋಹಿಲ್ ಎಂಬ ಹೊಸ ಹೀರೊ ಸೃಷ್ಟಿಯಾಗಿದ್ದಾರೆ. ಬೆಂಗಳೂರು ಸಮೀಪದ ರೆಸಾರ್ಟ್‌ನಲ್ಲಿ ಕಾಂಗ್ರೆಸ್ ಶಾಸಕರು ಬೀಡುಬಿಟ್ಟಿದ್ದಾಗ ಅವರನ್ನು ಹಿಡಿದಿಟ್ಟುಕೊಂಡದ್ದು ಅವರ ಹಿರಿಮೆ. ಇದರ ಜತೆಗೆ ರಾಜ್ಯಸಭೆ ಚುನಾವಣೆ ಮತದಾನ ವೇಳೆ ಕಾಂಗ್ರೆಸ್‌ನ ಅಧಿಕೃತ ಏಜೆಂಟ್ ಆಗಿದ್ದ ಗೋಹಿಲ್, ಇಬ್ಬರು ಕಾಂಗ್ರೆಸ್ ಶಾಸಕರನ್ನು ರೆಡ್‌ಹ್ಯಾಂಡ್ ಆಗಿ ಹಿಡಿದರು. ಮತ ಚಲಾಯಿಸುವ ವೇಳೆ ತಮ್ಮ ಮತಪತ್ರದಲ್ಲಿ ಮತ ಹಾಕಿ ಅಲ್ಲಿ ಕುಳಿತಿದ್ದ ಬಿಜೆಪಿ ಮುಖಂಡರಿಗೆ ನಿಯಮಬಾಹಿರವಾಗಿ ಅದನ್ನು ತೋರಿಸುತ್ತಿದ್ದ ಕಾಂಗ್ರೆಸ್ ಶಾಸಕರನ್ನು ಗೋಹಿಲ್ ಹಿಡಿದರು. ಈ ಇಬ್ಬರು ಶಾಸಕರ ಮತದ ವಿರುದ್ಧ ತಕ್ಷಣ ಆಕ್ಷೇಪವನ್ನೂ ದಾಖಲಿಸಿದರು. ಚುನಾವಣಾ ಆಯೋಗ ಆ ಬಳಿಕ ಈ ಇಬ್ಬರು ಶಾಸಕರ ಮತವನ್ನು ಅಸಿಂಧು ಎಂದು ಪರಿಗಣಿಸಿತು. ಹೇಗೆ ಮತ ಚಲಾಯಿಸಬೇಕು ಹಾಗೂ ಯಾವ ನಿಯಮಗಳನ್ನು ಪಾಲಿಸಬೇಕು ಎಂಬ ಬಗ್ಗೆ ಗೋಹಿಲ್ ತಮ್ಮ ಶಾಸಕರನ್ನು ಹೇಗೆ ಸಜ್ಜುಗೊಳಿಸಿದ್ದರು ಎಂದರೆ, ಬಿಜೆಪಿ ಮುಖಂಡರಿಗೆ ಆಕ್ಷೇಪ ಎತ್ತುವ ಅವಕಾಶವೇ ಸಿಗಲಿಲ್ಲ. ಪಕ್ಷದ ದಿಲ್ಲಿ ಮುಖಂಡರು ಈಗಾಗಲೇ ಇವರನ್ನು ಸಹಾಯಹಸ್ತ ಚಾಚಬಲ್ಲ ವ್ಯಕ್ತಿ ಎಂದು ಪರಿಗಣಿಸಿದೆ. ವಿಧಾನಸಭಾ ಚುನಾವಣೆ ಸದ್ಯದಲ್ಲೇ ಬರುತ್ತಿರುವ ಹಿನ್ನೆಲೆಯಲ್ಲಿ, ಗೋಹಿಲ್ ತಮ್ಮ ಕೌಶಲ ತೋರಿಸಬಲ್ಲರೇ ಎನ್ನುವುದು ಇನ್ನೂ ಪ್ರಶ್ನಾರ್ಥಕವಾಗಿಯೇ ಉಳಿದಿದೆ.


ವಿಶೇಷ ಪ್ರತಿಭೆ
ಲೋಕಜನಶಕ್ತಿ ಪಕ್ಷದ ಮುಖಂಡ ಹಾಗೂ ಕೇಂದ್ರ ಗ್ರಾಹಕ ವ್ಯವಹಾರಗಳ ಮತ್ತು ಸಾರ್ವಜನಿಕ ವಿತರಣೆ ಖಾತೆ ಸಚಿವ ರಾಮ್‌ವಿಲಾಸ್ ಪಾಸ್ವಾನ್, ರಾಜಕೀಯ ಗಾಳಿ ಯಾವ ಕಡೆಗೆ ಬೀಸುತ್ತದೆ ಎನ್ನುವುದನ್ನು ಪತ್ತೆ ಮಾಡುವ ವಿಶೇಷ ಪ್ರತಿಭೆ. ಬಹುತೇಕ ಎಲ್ಲ ಸಂದರ್ಭಗಳಲ್ಲೂ ಅವರು ಗೆಲ್ಲುವ ಕಡೆ ಇರುತ್ತಾರೆ. 1996ರ ಬಳಿಕ ಬಂದ ಎಲ್ಲ ಪ್ರಧಾನಿಗಳ ಅಧೀನದಲ್ಲಿ ಅವರು ಸಚಿವರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಅಲ್ಪಾಯುಷಿ ಎಚ್.ಡಿ.ದೇವೇಗೌಡ ಸರಕಾರ, ಐ.ಕೆ.ಗುಜ್ರಾಲ್ ಸರಕಾರಗಳ ಅಧಿಕಾರಾವಧಿಯಲ್ಲಿ ಅವರು ರೈಲ್ವೆ ಸಚಿವರೂ ಆಗಿದ್ದರು. ಬಳಿಕ ತಮ್ಮ ಪಥ ಬದಲಿಸಿ ಬಿಜೆಪಿ ಜತೆ ಮೈತ್ರಿ ಸಾಧಿಸಿದರು. ಅಟಲ್ ಬಿಹಾರಿ ವಾಜಪೇಯಿ ಸಂಪುಟದಲ್ಲಿ ಸಚಿವರೂ ಆದರು. ಅದಾದ ಬಳಿಕ ಕೇಸರಿ ಪಾಳಯವನ್ನು ತೊರೆದು ಕಾಂಗ್ರೆಸ್ ಜತೆ ತಾಲೀಮು ನಡೆಸಿದರು. ಕಳೆದ ಸಾರ್ವತ್ರಿಕ ಚುನಾವಣೆಗೆ ಮುನ್ನ, ಮ್ಯಾಜಿಕ್ ಎಂಬಂತೆ ನರೇಂದ್ರ ಮೋದಿಯವರತ್ತ ಆಕರ್ಷಿತರಾದರು. ಆದರೆ ಈ ಬಾರಿ ನಿತೀಶ್ ಕುಮಾರ್ ಕ್ಯಾಂಪ್ ಬದಲಿಸಿ ಎನ್‌ಡಿಎ ಜತೆ ಕೈಜೋಡಿಸಿದಾಗ ಪಾಸ್ವಾನ್ ಅವರಿಗೆ ಯಾವ ಸುಳಿವೂ ಇರಲಿಲ್ಲ. ಪಾಸ್ವಾನ್ ಇದೀಗ ತಮ್ಮ ಪುತ್ರ ಹಾಗೂ ಎನ್‌ಡಿಎ ಸಂಸದ ಚಿರಾಗ್ ಪಾಸ್ವಾನ್ ಪಾತ್ರದ ಬಗ್ಗೆ ಚಿಂತಿತರಾಗಿದ್ದಾರೆ.


ರಾವತ್ ಹೊಸ ಉತ್ಸಾಹ
ಉತ್ತರಾಖಂಡದ ಮಾಜಿ ಮುಖ್ಯಮಂತ್ರಿ ಹಾಗೂ ಕಾಂಗ್ರೆಸ್ ಮುಖಂಡ ಹರೀಶ್ ರಾವತ್ ಇತ್ತೀಚಿನ ದಿನಗಳಲ್ಲಿ ಅತೀ ಸಕ್ರಿಯರಾಗಿದ್ದಾರೆ. ಬಹುತೇಕ ಪ್ರತಿದಿನ ರಾಜ್ಯದ ಬಿಜೆಪಿ ಆಡಳಿತದ ನಿರ್ಧಾರಗಳ ವಿರುದ್ಧದ ಪ್ರತಿಭಟನೆಗಾಗಿ ಬೀದಿಗೆ ಇಳಿಯುತ್ತಿದ್ದಾರೆ. ಇದರ ಜತೆಗೆ ನಿಯತವಾಗಿ ರಾವತ್ ಪಕ್ಷದ ಸಭೆಗಳನ್ನೂ ನಡೆಸುತ್ತಿದ್ದಾರೆ. ಪಕ್ಷದ ವಿವಿಧ ಸಮಾರಂಭಗಳಿಗೂ ಕಳೆ ತುಂಬುತ್ತಿದ್ದಾರೆ. ರಾವತ್ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಏಕೆ ಇಷ್ಟು ಪರಿಶ್ರಮ ವಹಿಸಲಿಲ್ಲ ಎಂಬ ಬಗ್ಗೆ ಪಕ್ಷದಲ್ಲೇ ಕೆಲವರಿಗೆ ಅಚ್ಚರಿಯಾಗಿದೆ. ರಾವತ್ ಅವರ ಅತ್ಯುತ್ಸಾಹ ಪಕ್ಷದ ಹೈಕಮಾಂಡ್‌ನ ಕೆಲಸವನ್ನು ಕಠಿಣಗೊಳಿಸಿದೆ. ಮುದಿ ಕುದುರೆಯನ್ನು ಬದಲಿಸುವುದು ಪಕ್ಷದ ಮುಖಂಡರಿಗೆ ಕಷ್ಟಸಾಧ್ಯವಾಗಿದೆ. ಪಕ್ಷದ ಉನ್ನತ ಹುದ್ದೆಗಳಿಗೆ ಯುವಕರನ್ನು ತರುವ ರಾಹುಲ್‌ಗಾಂಧಿ ಕನಸಿಗೂ ಇದು ಪೆಟ್ಟುಕೊಟ್ಟಿದೆ.


ಕುತೂಹಲಕರ ಗೈರು
ರಾಹುಲ್ ಗಾಂಧಿ ಮತ್ತೆ ಮತ್ತೆ ತಪ್ಪು ಕಾರಣಗಳಿಗಾಗಿ ಸುದ್ದಿಯಾಗುತ್ತಿದ್ದಾರೆ. ಪಂಜಾಬ್ ಮುಖ್ಯಮಂತ್ರಿಯವರ ತಾಯಿ ಮೊಹಿಂದರ್ ಕೌರ್ ಅವರ ಉತ್ತರಕ್ರಿಯೆ ಸಂಬಂಧ ನಡೆದ ಧಾರ್ಮಿಕ ಸಮಾರಂಭಕ್ಕೆ ರಾಹುಲ್ ಗೈರುಹಾಜರಾಗಿದ್ದರು. ಮಾಜಿ ಪ್ರಧಾನಿ ಮನಮೋಹನ್ ಸಿಂಗ್, ಬಾದಲ್‌ಗಳು ಸೇರಿದಂತೆ ಹಲವು ಮಂದಿ ರಾಜಕೀಯ ಮುಖಂಡರು ಭೋಗ್ ಸಮಾರಂಭದ ಸಂದರ್ಭ ಹಾಜರಿದ್ದರು. ಆದರೆ ಗಾಂಧಿ ಕುಟುಂಬ ಗೈರುಹಾಜರಿಯೊಂದಿಗೆ ಸಂಶಯಕ್ಕೆ ಎಡೆಮಾಡಿಕೊಟ್ಟಿದೆ. ಮುಖ್ಯಮಂತ್ರಿ ಕ್ಯಾಪ್ಟನ್ ಅಮರೀಂದರ್ ಸಿಂಗ್ ಅವರ ಬೇಸರದ ಸಂದರ್ಭದಲ್ಲಿ ರಾಹುಲ್‌ಗಾಂಧಿಯವರ ಹಾಜರಿ, ಧನಾತ್ಮಕ ಸಂದೇಶವನ್ನು ರವಾನಿಸುತ್ತಿತ್ತು ಎಂಬ ಅಭಿಪ್ರಾಯ ಹಲವು ಮಂದಿ ಕಾಂಗ್ರೆಸ್ಸಿಗರದ್ದು. 2014ರ ಲೋಕಸಭಾ ಚುನಾವಣೆ ಬಳಿಕ ನಡೆದ ವಿಧಾನಸಭಾ ಚುನಾವಣೆಗಳ ಪೈಕಿ ಕಾಂಗ್ರೆಸ್ ಜಯ ಸಾಧಿಸಿದ ಏಕೈಕ ದೊಡ್ಡ ರಾಜ್ಯ ಪಂಜಾಬ್. ಆದರೆ ಈ ಧಾರ್ಮಿಕ ಕಾರ್ಯಕ್ರಮದಲ್ಲಿ ರಾಹುಲ್ ಗೈರುಹಾಜರಾಗಲು ಪ್ರಬಲವಾದ ಕಾರಣ ಇರಬೇಕು ಎನ್ನುವುದು ಅವರ ಕಟ್ಟಾ ಬೆಂಬಲಿಗರ ವಾದ. ಅದು ಏನೇ ಇರಲಿ; ಅಮರೀಂದರ್ ಸಿಂಗ್ ಅವರಿಗೆ ಓಕೆ ಆದರೆ ರಾಹುಲ್‌ಗೆ ಕೂಡಾ ಯಾವ ಸಮಸ್ಯೆಯೂ ಇಲ್ಲ.


ಕೈಲಾಶ್ ಕೈಗೆ ಬಂದ ತುತ್ತು ಬಾಯಿಗಿಲ್ಲ
ಕೈಲಾಶ್ ವಿಜಯವರ್ಗಿಯಾ ಬಿಜೆಪಿಯ ಸಕ್ರಿಯ ಪ್ರಧಾನ ಕಾರ್ಯದರ್ಶಿಗಳಲ್ಲಿ ಉನ್ನತ ಸಾಲಿನಲ್ಲಿ ನಿಲ್ಲುವವರು. ಪಶ್ಚಿಮ ಬಂಗಾಳ ಬಿಜೆಪಿ ಉಸ್ತುವಾರಿ ಹೊಣೆ ಹೊಂದಿರುವ ಇವರು, ರಾಜ್ಯ ಹಾಗೂ ದಿಲ್ಲಿಯಲ್ಲಿ ಕೂಡಾ ಸದಾ ಸುದ್ದಿಯಲ್ಲಿರುತ್ತಾರೆ. ಆದರೆ ಶತಪ್ರಯತ್ನದ ನಡುವೆಯೂ ಅವರ ರಾಜ್ಯಸಭೆ ಪ್ರವೇಶಿಸುವ ಕನಸು ನನಸಾಗಿಲ್ಲ. ಬಿಜೆಪಿ ಅಧ್ಯಕ್ಷ ಅಮಿತ್ ಶಾ ಮತ್ತು ರಾಷ್ಟ್ರೀಯ ಸ್ವಯಂಸೇವಕ ಸಂಘಕ್ಕೂ ಅತ್ಯಂತ ನಿಕಟವಾಗಿರುವವರು. ಇತ್ತೀಚೆಗೆ ಮಧ್ಯಪ್ರದೇಶದಿಂದ ರಾಜ್ಯಸಭೆಗೆ ನಡೆದ ಉಪಚುನಾವಣೆಯಲ್ಲಿ, ವಿಜಯವರ್ಗಿಯಾ ಬಿಜೆಪಿ ಟಿಕೆಟ್ ಪಡೆಯುತ್ತಾರೆ ಎಂಬ ಬಲವಾದ ನಂಬಿಕೆ ಅವರ ಬೆಂಬಲಿಗರಲ್ಲಿತ್ತು. ಆದರೆ ಆ ಸ್ಥಾನಕ್ಕೆ ಟಿಕೆಟ್ ಗಿಟ್ಟಿಸಿಕೊಂಡವರು ಬುಡಕಟ್ಟು ಸಮುದಾಯದ ಮುಖಂಡ ಹಾಗೂ ಮಧ್ಯಪ್ರದೇಶದ ಜಿಲ್ಲಾಮಟ್ಟದ ಪದಾಧಿಕಾರಿ. ಮುಖ್ಯಮಂತ್ರಿ ಶಿವರಾಜ್‌ಸಿಂಗ್ ಚೌಹಾಣ್ ಅವರು ವಿಜಯ್‌ವರ್ಗಿಯಾ ಅವರನ್ನು ಅಷ್ಟಾಗಿ ಇಷ್ಟಪಡದಿರುವುದು ಇದಕ್ಕೆ ಕಾರಣ ಎಂಬ ವದಂತಿ ದಟ್ಟವಾಗಿ ಹಬ್ಬಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News