ಎಚ್ಚರಿಕೆ....ಇವು ಅಲ್ಸರ್‌ನ ಲಕ್ಷಣಗಳಾಗಿರಬಹುದು!

Update: 2017-08-13 09:52 GMT

ನಿಮಗೆ ಆಗಾಗ್ಗೆ ತೀವ್ರ ಹೊಟ್ಟೆನೋವು ಕಾಡುತ್ತಿದೆಯೇ? ನೋವು ನಿವಾರಕ ಮಾತ್ರೆಗಳಿಗೆ ಶರಣು ಹೋಗಿ ಈ ಹೊಟ್ಟೆನೋವನ್ನು ಅಲಕ್ಷಿಸಬೇಡಿ. ಏಕೆಂದರೆ ಕೆಲವೊಮ್ಮೆ ಇದು ಅಲ್ಸರ್ ಅಥವಾ ಹೊಟ್ಟೆಹುಣ್ಣಿನ ಸಂಭಾವ್ಯ ಸಂಕೇತವಾಗಿರಬಹುದು.

ಅಲ್ಸರ್ ತೀವ್ರ ನೋವನ್ನುಂಟು ಮಾಡುತ್ತದೆ, ಹೀಗಾಗಿ ಅದನ್ನು ನಿರ್ಲಕ್ಷಿಸುವುದು ಸುಲಭವಲ್ಲ. ಇದಕ್ಕೆ ಸೂಕ್ತ ಚಿಕಿತ್ಸೆ ಪಡೆಯದಿದ್ದರೆ ಅದು ಹೊಟ್ಟೆಯನ್ನು ವ್ಯಾಪಿಸಬಹುದು ಮತ್ತು ರಂಧ್ರಗಳನ್ನುಂಟು ಮಾಡಬಹುದು. ರಕ್ತನಾಳಗಳಲ್ಲಿಯೂ ರಂಧ್ರಗಳುಂಟಾಗಿ ವಿಪರೀತ ರಕ್ತಸ್ರಾವಕ್ಕೆ ಕಾರಣವಾಗಬಹುದು.

ಅಲ್ಸರ್ ಆರೋಗ್ಯವನ್ನು ಹಾಳು ಮಾಡುತ್ತದೆ ಮತ್ತು ಸಂಕೀರ್ಣ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು. ಹೀಗಾಗಿ ಅಲ್ಸರ್‌ನ ಲಕ್ಷಣಗಳನ್ನು ತಿಳಿದುಕೊಳ್ಳು ವುದು ಮುಖ್ಯವಾಗುತ್ತದೆ.

ಪಚನಕ್ಕೆ ನೆರವಾಗುವ ರಸಗಳಿಂದ ಹೊಟ್ಟೆಯನ್ನು ರಕ್ಷಿಸುವ ಲೋಳೆಯ ದಪ್ಪ ಪದರದ ಗಾತ್ರ ಕುಗ್ಗಿದರೆ ಅದು ಅಲ್ಸರ್‌ಗೆ ಕಾರಣವಾಗುತ್ತದೆ. ಪಚನ ಕ್ರಿಯೆಯಲ್ಲಿ ಪ್ರಮುಖ ಪಾತ್ರ ವಹಿಸುವ ಆಮ್ಲಗಳು ಹೊಟ್ಟೆಯ ಭಿತ್ತಿಯ ಅಂಗಾಂಶಗಳನ್ನು ತಿಂದು ಹಾಕುತ್ತವೆ ಮತ್ತು ಇದರ ಪರಿಣಾಮವಾಗಿ ಅಲ್ಸರ್ ಉಟಾಗುತ್ತದೆ. ಅಲ್ಸರ್‌ನ ಪ್ರಮುಖ ಲಕ್ಷಣಗಳು ಇಲ್ಲಿವೆ.....

ಹೊಟ್ಟೆನೋವು:

ಇದು ಅಲ್ಸರ್‌ನ ಅತ್ಯಂತ ಸಾಮಾನ್ಯ ಲಕ್ಷಣವಾಗಿದೆ. ವಾಸ್ತವದಲ್ಲಿ ಅಲ್ಸರ್ ಹೊಟ್ಟೆಯೊಳಗಿನ ಹುಣ್ಣು ಆಗಿದ್ದು, ಕರುಳಿನಲ್ಲಿ ಆಮ್ಲ ಸೇರಿಕೊಂಡರೆ ಅದು ನೋವಿಗೆ ಕಾರಣವಾಗುತ್ತದೆ.

ಎದೆಯುರಿ:

ಅಲ್ಸರ್‌ನ ನೋವಿನ ಜೊತೆಗೆ ಎದೆಯುರಿಯೂ ಕಾಣಿಸಿಕೊಳ್ಳುತ್ತದೆ ಮತ್ತು ವಾಂತಿಯೂ ಆಗುತ್ತದೆ.

ಪಿತ್ತೋದ್ರೇಕ/ವಾಂತಿ:

ಪಿತ್ತೋದ್ರೇಕ ಮತ್ತು ವಾಂತಿ ಅಲ್ಸರ್‌ನ ಲಕ್ಷಣಗಳಾಗಿವೆ. ಕೆಲವು ಪ್ರಕರಣಗಳಲ್ಲಿ ಅಲ್ಸರ್ ಹೊಟ್ಟೆಯಲ್ಲಿ ತಡೆಯನ್ನು ನಿರ್ಮಿಸುತ್ತದೆ ಮತ್ತು ಆಹಾರವು ಸಣ್ಣ ಕರುಳಿನ ಮೂಲಕ ಸಾಗಲು ಸಾಧ್ಯವಾಗುವುದಿಲ್ಲ. ಇದು ವಾಕರಿಕೆಯನ್ನು ಉಂಟು ಮಾಡುತ್ತದೆ.

ವಾಂತಿ ಮತ್ತು ಮಲದಲ್ಲಿ ರಕ್ತ: ಅಲ್ಸರ್ ರಕ್ತಸ್ರಾವವನ್ನುಂಟು ಮಾಡುತ್ತದೆ ಮತ್ತು ರಕ್ತವಾಂತಿಯಾಗುತ್ತದೆ. ಮಲವೂ ಕಪ್ಪುಬಣ್ಣದ್ದಾಗಿ ರಕ್ತ ಸೇರಿಕೊಂಡಿದ್ದನ್ನು ಸೂಚಿಸುತ್ತದೆ. ಇದು ಹೊಟ್ಟೆಹುಣ್ಣಿನ ಪ್ರಮುಖ ಲಕ್ಷಣವಾಗಿದೆ.

ಎದೆ ಮತ್ತು ಬೆನ್ನು ನೋವು:

ಅಲ್ಸರ್‌ನ ನೋವು ಬೆನ್ನು ಅಥವಾ ಎದೆಗೂ ವ್ಯಾಪಿಸಬಹುದು. ನೋವು ಕರುಳಿನ ಮೂಲಕ ಸಾಗಿದರೆ ಅದು ತೀವ್ರವಾಗುತ್ತದೆ ಮತ್ತು ಬಹಳ ಹೊತ್ತು ಕಾಡುತ್ತಿರುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News