ರಾಜ್ಯದಲ್ಲಿ ಬಿಜೆಪಿ ನೆಲಕಚ್ಚಿದೆ: ದಿನೇಶ್ ಗುಂಡೂರಾವ್
ಬೆಂಗಳೂರು, ಆ.13: ರಾಜ್ಯದಲ್ಲಿ ಬಿಜೆಪಿ ನೆಲಕಚ್ಚಿರುವುದನ್ನು ಮೇಲಕ್ಕೆತ್ತಲು ಖುದ್ದಾಗಿ ಅಮಿತ್ ಷಾ ಅವರು ರಾಜ್ಯಕ್ಕೆ ಆಗಮಿಸಿದ್ದಾರೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ಲೇವಡಿ ಮಾಡಿದ್ದಾರೆ.
ರವಿವಾರ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಅವರು 150 ಮಿಷನ್ ಎಂದು ಹೇಳಿಕೊಳ್ಳುತ್ತಿದ್ದಾರೆ. ಅದರ ಬದಲಾಗಿ ಮಿಷನ್ 50 ಆದರೂ ಆಶ್ಚರ್ಯವಿಲ್ಲ. ಅಲ್ಲದೆ, ಕಾಂಗ್ರೆಸ್ ಮುಕ್ತ ರಾಜ್ಯ ಮಾಡಲು ಬಿಜೆಪಿಯವರಿಂದ ಸಾಧ್ಯವಿಲ್ಲ ಎಂದು ಹೇಳಿದರು. ಷಾ ಅವರು ಕರ್ನಾಟಕ ಸರಕಾರವನ್ನು ಅತ್ಯಂತ ಭ್ರಷ್ಟ ಸರಕಾರ ಎಂದು ಟೀಕಿಸಿದ್ದಾರೆ. ವಿಚಿತ್ರ ಎಂದರೆ ಈ ಹೇಳಿಕೆ ನೀಡುವಾಗ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಅಮಿತ್ ಷಾ ಪಕ್ಕದಲ್ಲಿಯೇ ಕೂರಿಸಿಕೊಂಡಿದ್ದರು. ಬಿಜೆಪಿ ಅವಧಿಯಲ್ಲಿನ ಭ್ರಷ್ಟಾಚಾರವನ್ನು ಜನ ಇನ್ನೂ ಮರೆತಿಲ್ಲ, ನಿಷ್ಕಳಂಕವಾಗಿ ನಡೆಯುತ್ತಿರುವ ನಮ್ಮ ಸರಕಾರದ ಬಗ್ಗೆ ಬಿಜೆಪಿ ಅಪಪ್ರಚಾರ ಮಾಡಲು ಹೊಸ ತಂಡವನ್ನೇ ಕಟ್ಟಿಕೊಂಡಿದೆ. ಆದರೆ ಇದ್ಯಾವುದೂ ಯಶಸ್ವಿಯಾಗುವುದಿಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಬಿಜೆಪಿಯ ಎಲ್ಲ ಆರೋಪ, ಟೀಕೆಗಳಿಗೆ ತಕ್ಕ ಉತ್ತರ ನೀಡುವುದು ಕಾಂಗ್ರೆಸ್‌ಗೆ ಗೊತ್ತಿದೆ. ಸಾಮಾಜಿಕ ಜಾಲತಾಣಗಳಲ್ಲಿ ರಾಜ್ಯ ಸರಕಾರದ ಬಗ್ಗೆ ಸುಳ್ಳು ಪ್ರಚಾರ ಮಾಡಲಾಗುತ್ತಿದೆ. ಕೋಮುಗಲಭೆ ಸೃಷ್ಟಿಸಲಾಗುತ್ತಿದೆ. ಅನ್ಯ ಗ್ರಹಗಳ ಚಿತ್ರಗಳನ್ನು ಹಾಕಿ ಬೆಂಗಳೂರಿನ ರಸ್ತೆಗಳಿವು, ಹಾಳಾಗಿವೆ ಎಂದು ಬಿಂಬಿಸುವುದು, ಗಣೇಶ ಹಬ್ಬಕ್ಕೆ 10ಲಕ್ಷ ರೂ. ಠೇವಣಿ ಕಟ್ಟಬೇಕು ಎಂಬ ಸುಳ್ಳು ಸುದ್ದಿ ಹಬ್ಬಿಸಿ ಹಿಂದೂ ಧರ್ಮದವರ ಭಾವನೆಗಳನ್ನು ಕೆರಳಿಸುವುದು. ಆಲೂರು ವೆಂಕಟರಾಯರ ಹೆಸರಿನ ರಸ್ತೆಗೆ ಟಿಪ್ಪುಸುಲ್ತಾನ್ ರಸ್ತೆ ಎಂದು ಹೆಸರಿಡಲು ಹುನ್ನಾರ ನಡೆದಿದೆ. ಇದಕ್ಕಾಗಿ ಸಾಮಾಜಿಕ ಜಾಲ ತಾಣದಲ್ಲಿ ಕೆಲಸ ಮಾಡುವ ಯುವಕರ ತಂಡವನ್ನು ಸಜ್ಜುಗೊಳಿಸಲಾಗಿದೆ ಎಂದು ಕಿಡಿಕಾರಿದರು.
ಒಟ್ಟಾರೆ ರಾಜ್ಯ ಸರಕಾರಕ್ಕೆ ಕೆಟ್ಟ ಹೆಸರು ತರಲು ಬಿಜೆಪಿ ಪ್ರಯತ್ನಿಸುತ್ತಿದೆ. ಆದರೆ, ನಮ್ಮ ಸರಕಾರ ಜಗ್ಗುವುದಿಲ್ಲ. ಜನರಿಗೆ ಕಾಂಗ್ರೆಸ್‌ನ ಬಗ್ಗೆ ಚೆನ್ನಾಗಿ ಗೊತ್ತಿದೆ. ಬಿಜೆಪಿಯವರ ಕೊಡುಗೆ ಏನು ಎಂಬುದನ್ನು ಜನ ಅರ್ಥ ಮಾಡಿಕೊಂಡಿದ್ದಾರೆ. ಮಹದಾಯಿ ವಿಷಯದಲ್ಲಿ ರಾಜ್ಯಕ್ಕೆ ನ್ಯಾಯ ಕೊಡಿಸುವ ಬದಲು ರಾಜಕೀಯ ಆರೋಪಗಳನ್ನು ಮಾಡಿಕೊಂಡು ಜನರ ದಿಕ್ಕು ತಪ್ಪಿಸುವ ಕೆಲಸವನ್ನು ಬಿಜೆಪಿ ಮಾಡುತ್ತಿದೆ ಎಂದು ಆರೋಪಿಸಿದರು. ಬರ ನಿರ್ವಹಣೆಗೆ ಕೇಂದ್ರ ಸರಕಾರ ಗುಜರಾತ್‌ಗೆ 3800 ಕೋಟಿ ಕೊಟ್ಟಿದೆ. ಮಹಾರಾಷ್ಟ್ರಕ್ಕೆ 8 ಸಾವಿರ ಕೋಟಿ ಕೊಟ್ಟಿದೆ. ಆದರೆ, ಕರ್ನಾಟಕಕ್ಕೆ 1500ಕೋಟಿ ಮಾತ್ರ ಕೊಟ್ಟಿದೆ, ಈ ತಾರತಮ್ಯವನ್ನು ಪ್ರಶ್ನಿಸಲು ರಾಜ್ಯದ ಬಿಜೆಪಿ ನಾಯಕರಿಗೆ ಧೈರ್ಯ ಇಲ್ಲ ಎಂದು ಲೇವಡಿ ಮಾಡಿದರು.
ಕೇಂದ್ರದಿಂದ ಕರ್ನಾಟಕಕ್ಕೆ ಯಾವುದೇ ಕೊಡುಗೆಗಳು ಬಂದಿಲ್ಲ. ಈ ವಿಷಯವನ್ನು ಮರೆ ಮಾಚಲು ಬಿಜೆಪಿ ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿಗಳನ್ನು ಹೆಚ್ಚು ಪ್ರಚಾರ ಮಾಡುತ್ತಿದೆ ಎಂದು ಟೀಕಿಸಿದರು.
‘ನಟ ಉಪೇಂದ್ರ ಅವರ ನಿರ್ಧಾರವನ್ನು ಸ್ವಾಗತಿಸುತ್ತೇನೆ. ಅವರನ್ನು ಕಾಂಗ್ರೆಸ್‌ಗೆ ಕರೆತರುವ ಅಗತ್ಯವಿಲ್ಲ. ಹೊಸ ಪಕ್ಷ ಕಟ್ಟುವ ಪ್ರಯತ್ನಕ್ಕೆ ಶುಭ ಹಾರೈಸುತ್ತೇನೆ. ಈ ಹಿಂದೆ ರಾಜ್ಯದಲ್ಲಿ ಬಂಗಾರಪ್ಪ, ವಿಜಯ್‌ಮಲ್ಯ, ವಿಜಯಸಂಕೇಶ್ವರ್ ಮತ್ತಿತರರು ಹೊಸ ಪಕ್ಷ ಕಟ್ಟುವ ಪ್ರಯತ್ನದಲ್ಲಿ ಯಶಸ್ವಿಯಾಗಿಲ್ಲ. ಉಪೇಂದ್ರ ಅವರು ಇದನ್ನು ಗಮನದಲ್ಲಿಟ್ಟುಕೊಳ್ಳಲಿ.’
-ದಿನೇಶ್ ಗುಂಡೂರಾವ್