ಜಿಹ್ವೇಶ್ವರ ವಿದ್ಯಾಭಿವೃದ್ಧಿ ಟ್ರಸ್ಟ್‌ನ ದಾನಿಗಳು ಸಮಾಜಕ್ಕೆ ಮಾದರಿ: ಈಶ್ವರ್ ರಾವ್
ಬೆಂಗಳೂರು, ಆ.13: ಜಿಹ್ವೇಶ್ವರ ವಿದ್ಯಾಭಿವೃದ್ಧಿ ಟ್ರಸ್ಟ್ ನಲ್ಲಿ ನೋಂದಾಣಿಯಾಗಿರುವ ದಾನಿಗಳು ಸಮಾಜಕ್ಕೆ ಮಾದರಿಯಾಗಿದ್ದಾರೆ ಎಂದು ಟ್ರಸ್ಟ್‌ನ ಅಧ್ಯಕ್ಷ ಈಶ್ವರ್ ರಾವ್ ತಿಳಿಸಿದ್ದಾರೆ.
ರವಿವಾರ ಜಿಹ್ವೇಶ್ವರ ವಿದ್ಯಾಭಿವೃದ್ಧಿ ಟ್ರಸ್ಟ್ ನಗರದ ಸಚಿವಾಲಯ ಕ್ಲಬ್‌ನಲ್ಲಿ ಆಯೋಜಿಸಿದ್ದ ವಿದ್ಯಾರ್ಥಿಗಳಿಗೆ ಸನ್ಮಾನ ಹಾಗೂ ವಿದ್ಯಾರ್ಥಿ ವೇತನ ವಿತರಣಾ ಸಭಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸಮಾಜದಲ್ಲಿ ನಾನಾ ಕಾರಣಗಳಿಂದ ಉಳ್ಳವರು ಹಾಗೂ ಇಲ್ಲದವರು ಇಬ್ಬರೂ ಇದ್ದಾರೆ. ಹೀಗಾಗಿ ಸಮಾಜದ ಏಳ್ಗೆಗಾಗಿ ಹಣವಂತರು ಉದಾರವಾಗಿ ಸಹಾಯ ಮಾಡಬೇಕಾಗಿದೆ. ಆ ಮೂಲಕ ನಿಗರ್ತಿಕ ಸಮುದಾಯದ ಸಮಾಜದ ಮುನ್ನೆಲೆಗೆ ತರಲು ಶ್ರಮಿಸಬೇಕಾಗಿದೆ ಎಂದು ಅವರು ಹೇಳಿದರು.
ಜಿಹ್ವೇಶ್ವರ ವಿದ್ಯಾಭಿವೃದ್ಧಿ ಟ್ರಸ್ಟ್ ಅನೇಕ ವಿದ್ಯಾರ್ಥಿಗಳ ಬದುಕನ್ನು ರೂಪಿಸುತ್ತಿದೆ. ಇದಕ್ಕೆ ಪೂರಕವಾಗಿ ಟ್ರಸ್ಟ್ ದಾನಿಗಳು ಸಾಕಷ್ಟು ಆರ್ಥಿಕ ಸಹಾಯ ಮಾಡುತ್ತಿದ್ದಾರೆ. ಇವರ ಸ್ಫೂರ್ತಿಯೊಂದಿಗೆ ಯುವ ಜನತೆ ಸಮಾಜ ಸೇವೆಯಲ್ಲಿ ತಮ್ಮನ್ನು ಸಕ್ರೀಯವಾಗಿ ತೊಡಗಿಸಿಕೊಳ್ಳಬೇಕು ಎಂದು ಅವರು ಆಶಿಸಿದರು.