ರಾಜಕೀಯ ಬಿಟ್ಟು ರೈತರ ಸಮಸ್ಯೆ ಆಲಿಸಿ: ಪ್ರಮೋದ್ ಮುತಾಲಿಕ್
ಧಾರವಾಡ, ಆ.13: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಮತ್ತು ಕಾಂಗ್ರೆಸ್ ರಾಷ್ಟ್ರೀಯ ಉಪಾಧ್ಯಕ್ಷ ರಾಹುಲ್ ಗಾಂಧಿ ರಾಜ್ಯದಲ್ಲಿ ಪ್ರವಾಸ ಕೈಗೊಂಡಿದ್ದಾರೆ. ರಾಜ್ಯದ ಬರಗಾಲ, ರೈತರ ಸಂಕಷ್ಟ, ಮಹದಾಯಿ ಸಮಸ್ಯೆ ಸಂಬಂಧಪಟ್ಟಂತೆ ಎರಡೂ ರಾಜಕೀಯ ಪಕ್ಷಗಳು ಆ ನೇತಾರರ ಮೂಲಕ ಏನೂ ಉಲ್ಲೇಖ ಮಾಡಿಲ್ಲ ಎಂದು ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಆರೋಪಿಸಿದ್ದಾರೆ.
ರವಿವಾರ ಧಾರವಾಡದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಇವರು ಚುನಾವಣೆ ಲಾಭಕ್ಕಾಗಿ ಪ್ರವಾಸ ಮಾಡಿದ್ದಾರೆ ಹೊರತು ರೈತರ ಸ್ಥಿತಿ, ಬರ, ಮಹದಾಯಿ ವಿಷಯಕ್ಕಲ್ಲ ಎಂದು ಎರಡೂ ಪಕ್ಷಗಳ ಮುಖಂಡರ ವಿರುದ್ಧ ವಾಗ್ದಾಳಿ ನಡೆಸಿದರು. ನೀವು ರೈತರಿಗಾಗಿ ಈ ಹಿಂದೆ ಗುಜರಾತ್‌ನಲ್ಲಿ ಒಳ್ಳೆಯ ಕಾರ್ಯ ಮಾಡಿದ್ದೀರಿ. ನಾಳೆ ಸಂಜೆಯೊಳಗೆ ಮಹದಾಯಿ ಬಗ್ಗೆ ಬಿಜೆಪಿ ನಿಲುವು ಸ್ಪಷ್ಟಪಡಿಸಬೇಕು. ಮಹಾರಾಷ್ಟ್ರ, ಗೋವಾದಲ್ಲಿ ಬಿಜೆಪಿ ಸರಕಾರ ಇದೆ. ಗೋವಾದಿಂದ ಇದಕ್ಕೆ ವಿರೋಧ ಆಗುತ್ತಿದೆ. ಇದನ್ನು ಬಿಜೆಪಿಯೇ ಪರಿಹರಿಸಬೇಕೆಂದು ಒತ್ತಾಯಿಸಿದರು.
ಗೋವಾದ ಚುನಾವಣೆ ಮುಂಚೆ ಬಿಜೆಪಿ ಮಾತನಾಡುವ ಶೈಲಿ ಬೇರೆ ಇತ್ತು. ಚುನಾವಣೆ ಬಳಿಕ ಅದು ಬದಲಾಗಿದೆ. ಇದಕ್ಕೆ ಅಮಿತ ಶಾ ಜವಾಬ್ದಾರಿಯಾಗಿದ್ದು, ಅವರೆ ಮಹದಾಯಿ ಬಗ್ಗೆ ಪರಿಹಾರ ಸೂತ್ರ ತಿಳಿಸಬೇಕು. ಸೋಮವಾರ ಸಂಜೆಯೊಳಗೆ ಅಮಿತ್ ಶಾ ಉತ್ತರ ಬರಬೇಕು. ರೈತರಿಗೆ ಆಶಾದಾಯಕ ಭರವಸೆ ನೀಡಬೇಕು. ಈಗಾಗಲೇ ಅಮಿತ್ ಶಾ ಅವರಿಗೆ ರಾಜ್ಯಕ್ಕೆ ಬರುವ ಮುಂಚೆಯೇ ಪತ್ರ ಬರೆದಿದ್ದೆ. ಆದರೆ, ಅವರು ಈ ಬಗ್ಗೆ ನಿನ್ನೆ ಮತ್ತು ಇವತ್ತು ಯಾವುದೇ ಉಲ್ಲೇಖ ಮಾಡಿಲ್ಲ. ಇತ್ತ ರಾಹುಲ್ ಗಾಂಧಿ ಸಹ ಮಹದಾಯಿ ವಿಷಯ ಪ್ರಸ್ತಾಪ ಮಾಡಿಲ್ಲ.
ಹೀಗಾಗಿ, ಈ ಎರಡೂ ಪಕ್ಷಗಳು ಸಹ ರೈತ ವಿರೋಧಿಯಾಗಿವೆ. ಬಿಜೆಪಿ ಮೈದಾನದಲ್ಲಿ ಈಗ ಚೆಂಡು ಇದೆ. ಈಗ ನಾಟಕ ಆಡುವುದನ್ನು ನಿಲ್ಲಿಸಬೇಕು. ಬಿಜೆಪಿ ನಾಯಕರಿಗೆ ಜವಾಬ್ದಾರಿ ಇಲ್ಲವೇ? ಮಾತನಾಡದೇ ನೇರವಾಗಿ ಕಾರ್ಯಕ್ಕೆ ಇಳಿಯಬೇಕು. ಇಲ್ಲದೆ ಹೋದರೆ ಬಿಜೆಪಿಗೂ ಪಾಠ ಕಲಿಸುತ್ತೇವೆ. 4 ಜಿಲ್ಲೆಗಳ 11 ತಾಲೂಕುಗಳಿಗೆ ನೀರು ತಂದು ಕೊಡದೇ ಹೋದರೆ ಚುನಾವಣೆ ಬಹಿಷ್ಕಾರ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದರು.