ಗೊಂದಲ ಸೃಷ್ಟಿಸಿದರೆ ಸಹಿಸುವುದಿಲ್ಲ: ರಾಜ್ಯ ಬಿಜೆಪಿ ಮುಖಂಡರಿಗೆ ಅಮಿತ್ ಶಾ ಎಚ್ಚರಿಕೆ

Update: 2017-08-13 14:05 GMT

ಬೆಂಗಳೂರು, ಆ. 13: ಪಕ್ಷದಲ್ಲಿ ಒಂದಿಲ್ಲೊಂದು ಗೊಂದಲ ಸೃಷ್ಟಿಸಿ, ಬಿಜೆಪಿ ಗೆಲುವಿನ ಓಟಕ್ಕೆ ಹಿನ್ನೆಡೆಯನ್ನುಂಟು ಮಾಡಿದರೆ ಅವರು ಎಷ್ಟೇ ದೊಡ್ಡವರಿದ್ದರೂ ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ ಎಂದು ಬಿಜೆಪಿ ರಾಷ್ಟ್ರೀಯಾಧ್ಯಕ್ಷ ಅಮಿತ್ ಶಾ, ಪಕ್ಷದ ಮುಖಂಡರಿಗೆ ಇಂದಿಲ್ಲಿ ಎಚ್ಚರಿಕೆ ನೀಡಿದ್ದಾರೆ.

ರವಿವಾರ ಪಕ್ಷದ ಮುಖಂಡರೊಂದಿಗೆ ರಾಜಕೀಯ ವ್ಯವಹಾರಗಳ ಸಭೆಯಲಿ ಮಾತನಾಡಿದ ಅವರು, ಪಕ್ಷದಲ್ಲಿ ಗೊಂದಲಕ್ಕೆ ಅವಕಾಶ ಆಗದಂತೆ ಎಲ್ಲ ಮುಖಂಡರು ಎಚ್ಚರಿಕೆ ವಹಿಸಬೇಕೆಂದು ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಹಾಗೂ ಮೇಲ್ಮನೆ ವಿಪಕ್ಷ ನಾಯಕ ಕೆ.ಎಸ್.ಈಶ್ವರಪ್ಪ ಅವರಿಗೆ ಸೂಚನೆ ನೀಡಿದರು.

ಟಿಕೆಟ್ ಹಂಚಿಕೆಯ ಬಗ್ಗೆ ಚಿಂತಿಸಬೇಡಿ, ಟಿಕೆಟ್ ಹಂಚಿಕೆಯನ್ನು ಇಲ್ಲಿ ಯಾರೂ ಮಾಡುವುದಿಲ್ಲ. ತಳಮಟ್ಟದಲ್ಲಿ ಪಕ್ಷ ಸಂಘಟನೆಗೆ ಶ್ರಮಿಸುವ ಕಾರ್ಯಕರ್ತರು, ನಾಯಕರಿಗೆ ಟಿಕೆಟ್ ನೀಡಲಾಗುವುದು. ಯಾವ ವ್ಯಕ್ತಿಗೆ ಟಿಕೆಟ್ ನೀಡಬೇಕು ಎಂದು ಪಕ್ಷದ ಹೈಕಮಾಂಡ್ ನಿರ್ಧರಿಸಲಿದೆ ಎಂದು ಸ್ಪಷ್ಟಪಡಿಸಿದರು.

ಕರ್ನಾಟಕದಲ್ಲೆ ವಾಸ್ತವ್ಯ:  ಕರ್ನಾಟಕ ರಾಜ್ಯದಲಲಿ ಅವಧಿಗೆ ಮೊದಲೆ ಚುನಾವಣೆ ಘೋಷಣೆಯಾದರೆ ಅಕ್ಟೋಬರ್ ನಿಂದಲೇ ಕರ್ನಾಟಕ ರಾಜ್ಯದಲ್ಲ್ಲೆ ವಾಸ್ತವ್ಯ ಹೂಡಲಿದ್ದೇನೆ. ಎಲ್ಲರೂ ಒಗ್ಗಟ್ಟಿನಿಂದ ಪಕ್ಷದ ಗೆಲುವಿಗೆ ರಣತಂತ್ರ ರೂಪಿಸಬೇಕು ಎಂದು ಅವರು ಸಲಹೆ ಮಾಡಿದರು.

ಯಾವುದೇ ಸಮಸ್ಯೆಗಳಿಗೂ ಚಿಂತಿಸದಂತೆ ಪಕ್ಷವನ್ನು ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಗೆಲ್ಲಿಸಿ ಅಧಿಕಾರಕ್ಕೆ ತರಬೇಕು. ಬಿಜೆಪಿ ಶತಾಯಗತಾಯ ಗೆಲ್ಲಲೇಬೇಕು ಎಂದ ಅಮಿತ್ ಶಾ, ಕಾಂಗ್ರೆಸ್ ಮುಕ್ತ ಕರ್ನಾಟಕ ನಿರ್ಮಾಣ ಆಗಲೇಬೇಕು.

ಆ ನಿಟ್ಟಿನಲ್ಲಿ ರಾಜ್ಯದ ಪ್ರತಿಯೊಬ್ಬ ನಾಯಕರೂ ಯಡಿಯೂರಪ್ಪ ಅವರ ಜೊತೆಗಿದ್ದು ಕೆಲಸ ಮಾಡಬೇಕು. ಯಾವುದೇ ಸಂದರ್ಭದಲ್ಲಿಯೂ ಪಕ್ಷದಲ್ಲಿ ಅನಗತ್ಯ ಗೊಂದಲ ಸೃಷ್ಠಿಸಿದರೆ ಸಹಿಸುವುದಿಲ್ಲ. ಚುನಾವಣೆ ಸಮೀಪಿಸುತ್ತಿರುವುದರಿಂದ ಹತ್ತಿರ ಅನಗತ್ಯ ಗೊಂದಲ ಸೃಷ್ಟಿಸಿದರೆ ನಿರ್ಧಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News