‘ರಾಸಲೀಲೆ’ ಪ್ರಕರಣದ ಸಂತ್ರಸ್ತ ಮಹಿಳೆಯಿಂದ ಆತ್ಮಹತ್ಯೆಗೆ ವಿಫಲ ಯತ್ನ

Update: 2017-08-13 14:08 GMT

ಬಾಗಲಕೋಟೆ, ಆ. 13: ರಾಜ್ಯ ರಾಜಕಾರಣದಲ್ಲಿ ತೀವ್ರ ಸಂಚಲನ ಸೃಷ್ಟಿಸಿದ್ದ ರಾಸಲೀಲೆ ಸಿಡಿ ಪ್ರಕರಣದಲ್ಲಿ ಹೆಸರು ಕೇಳಿ ಬಂದಿದ್ದ ಮಹಿಳೆ ಅತಿಯಾದ ನಿದ್ರೆ ಮಾತ್ರೆ ಸೇವಿಸಿ ಆತ್ಮಹತ್ಯೆಗೆ ವಿಫಲಯತ್ನ ನಡೆಸಿ ಆಸ್ಪತ್ರೆಗೆ ದಾಖಲಾಗಿರುವ ಘಟನೆ ಬೆಳಕಿಗೆ ಬಂದಿದೆ.

ರಾಸಲೀಲೆ ಪ್ರಕರಣ ಸಂಬಂಧ ರಾಜ್ಯದ ಪ್ರಮುಖ ರಾಜಕೀಯ ಪಕ್ಷದವೊಂದರ ಮುಖಂಡರೊಬ್ಬರ ಸಂಬಂಧಿ ಸಂತೋಷ್ ಎಂಬವನನ್ನು ಪೊಲೀಸರು ವಿಚಾರಣೆ ನಡೆಯುತ್ತಿರುವ ಸಂದರ್ಭದಲ್ಲೆ ಮಹಿಳೆ ಆತ್ಮಹತ್ಯೆಗೆ ವಿಫಲಯತ್ನ ನಡೆಸಿರುವುದು ತೀವ್ರ ಕುತೂಹಲ ಸೃಷ್ಟಿಸಿದೆ. ಸಂತ್ರಸ್ತೆ ಎನ್ನಲಾದ ಮಹಿಳೆ ತನ್ನ ಮನೆಯಲ್ಲಿರುವ ವೇಳೆ ವಿಪರೀತ ನಿದ್ರೆ ಮಾತ್ರೆ ಸೇವಿಸಿ ಅಸ್ವಸ್ಥಳಾಗಿದ್ದಾಳೆ. ಕೂಡಲೇ ಇದನ್ನು ಗಮನಿಸಿದ ಅಕ್ಕಪಕ್ಕದ ನಿವಾಸಿಗಳು ಆಕೆಯನ್ನು ಆ್ಯಂಬುಲೆನ್ಸ್ ಮೂಲಕ ಬಾಗಲಕೋಟೆ ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದು, ಮಹಿಳೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.

ನಾನೇ ಸಾಯಲು ನಿರ್ಧರಿಸಿದ್ದೇನೆ: ‘ಪದೇ ಪದೇ ನನಗೆ ಕೊಲೆ ಬೆದರಿಕೆ ಕರೆಗಳು ಬರುತ್ತಿರುವ ಹಿನ್ನೆಲೆಯಲ್ಲಿ ‘ಅವರು’ ಕೊಲ್ಲುವ ಮೊದಲು ನಾನೇ ಸಾಯಲು ನಿರ್ಧರಿಸಿ, ನಿದ್ರೆ ಮಾತ್ರೆ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದೆ. ಬೆದರಿಕೆ ಹಿನ್ನೆಲೆಯಲ್ಲಿ ತೀವ್ರವಾಗಿ ನೊಂದಿದ್ದೇನೆ’ ಎಂದು ಸಂತ್ರಸ್ತ ಮಹಿಳೆ ಹೇಳಿದ್ದಾರೆ.

ಚಿಕಿತ್ಸೆಗೆ ಸ್ಪಂದಿಸುತ್ತಿರುವ ಸಂತ್ರಸ್ತ ಮಹಿಳೆಯ ಆರೋಗ್ಯ ಸ್ಥಿರವಾಗಿದೆ. ಅವರು ವಿಪರೀತ ನಿದ್ರೆ ಮಾತ್ರೆ ಸೇವಿಸಿದ್ದು, ಅಸ್ವಸ್ಥರಾಗಿದ್ದಾರೆ. ಈ ಸಂಬಂಧ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡಿದ್ದು, ಯಾರು ಮತ್ತು ಯಾವ ಕಾರಣಕ್ಕಾಗಿ ಮಹಿಳೆಗೆ ಬೆದರಿಕೆ ಹಾಕಿದ್ದಾರೆಂಬ ಬಗ್ಗೆ ತನಿಖೆ ಕೈಗೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News