ಪ್ರತಿಭಾನ್ವಿತ ಸಾಹಿತಿಗಳ ಮೂಲೆ ಗುಂಪು: ಜಯಂತ್ ಕಾಯ್ಕಿಣಿ ಬೇಸರ

Update: 2017-08-13 14:17 GMT

ಬೆಂಗಳೂರು, ಆ. 13: ನಗರದಲ್ಲಿ ವಾಸವಿರುವ, ಮಾಧ್ಯಮಗಳೊಂದಿಗೆ ನಿರಂತರ ಸಂಪರ್ಕ ಹೊಂದಿರುವ ಲೇಖಕಕರನ್ನು ದೊಡ್ಡ ಸಾಹಿತಿಗಳೆಂದು ಸಮಾಜ ನಂಬಿರುವುದರಿಂದ ಪ್ರತಿಭಾನ್ವಿತ ಸಾಹಿತಿಗಳು ಮೂಲೆಗುಂಪಾಗುತ್ತಿದ್ದಾರೆ ಎಂದು ಸಾಹಿತಿ ಜಯಂತ ಕಾಯ್ಕಿಣಿ ಬೇಸರ ವ್ಯಕ್ತಪಡಿಸಿದ್ದಾರೆ.

ರವಿವಾರ ನಗರದ ತರಳಬಾಳು ಗ್ರಂಥಾಲಯದಲ್ಲಿ ಶಿವರಾಮ ಕಾರಂತ ವೇದಿಕೆ ಮತ್ತು ತರಳಬಾಳು ಕೇಂದ್ರ ಆಯೋಜಿಸಿದ್ದ ‘ಸಾಹಿತ್ಯ ಸಲ್ಲಾಪ’ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಶ್ರೇಷ್ಟ ಸಾಹಿತ್ಯಗಳ ಸಾಲಿನಲ್ಲಿ ಗುರುತಿಸಿಕೊಳ್ಳವಂತ ಸಾಕಷ್ಟು ಮಂದಿ ಲೇಖಕರು ನಮ್ಮ ನಡುವೆ ಇದ್ದಾರೆ. ಆದರೆ ಬೆಂಗಳೂರು ನಗರ ಹಾಗೂ ಮಾಧ್ಯಮಗಳೊಂದಿಗೆ ಸದಾ ಸಂಪರ್ಕದಲ್ಲಿರುವ ಸಾಹಿತಿಗಳಿಂದ ಪ್ರತಿಭಾನ್ವಿತ ಸಾಹಿತಿಗಳಿಗೆ ಪ್ರಾಶಸ್ತ್ಯ ಸಿಗುತ್ತಿಲ್ಲ ಎಂದು ಹೇಳಿದರು. ಮಾಧ್ಯಮ, ಜಾಲತಾಣಗಳಲ್ಲಿ ಸಣ್ಣ ಸಣ್ಣ ವಿಷಯಗಳನ್ನು ಸಮಾಜದಲ್ಲಿ ದೊಡ್ಡ ದುರಂತ ಸಂಭವಿಸಿದ ರೀತಿಯಲ್ಲಿ ಪ್ರತಿಬಿಂಬಿಸುತ್ತಿವೆ. ಆದರೆ ಇಂತಹ ಹುನ್ನಾರಗಳಿಗೆ ಕಿವಿಗೊಡುವಷ್ಟು ಅಪ್ರಬುದ್ಧ ಜನರು ಕಡಿಮೆ. ಸಮಾಜದ ಒಳಿತಿಗಾಗಿ ಜಾತೀಯತೆ ಮತ್ತು ಕೋಮುವಾದದ ಸೀಮಿತ ದೃಷ್ಟಿಕೋನದಿಂದ ಜನರು ಹೊರಬರಬೇಕಿದೆ ಎಂದು ಹೇಳಿದರು.

ಮಾನವನ ವಿಕಾಸಕ್ಕೆ ಅಂಬೇಡ್ಕರ್, ಗಾಂಧೀಜಿ, ಬಸವಣ್ಣ, ಕುವೆಂಪು ಅವರ ಚಿಂತನೆಗಳು ಪೂರಕವಾಗಿವೆ. ಈ ಚಿಂತನೆಗಳು ಮತ್ತು ಜಾತಿಯತೆ, ಕೋಮು ದುಳ್ಳೂರಿ ಎಂಬ ಹಾವು ಏಣಿ ಆಟದಲ್ಲಿ ಸಮಾಜ ಸಿಲುಕಿದೆ. ಈ ಆಟದಲ್ಲಿನ ಜಾತಿ-ಮೂಢನಂಬಿಕೆ ಎಂಬ ದೊಡ್ಡ ಹಾವಿನಿಂದ ಸಮಾಜ ಪಾರಾಗಬೇಕಿದೆ ಎಂದು ತಿಳಿಸಿದರು.

ಸಿನೆಮಾ ಸಾಹಿತ್ಯ ಕೃಷಿಗೆ ಕೈ ಹಾಕುವ ಮುನ್ನ ಸಿನೆಮಾ ಸಾಹಿತ್ಯ ಸಾಹಿತ್ಯವೇ ಅಲ್ಲ. ಅದನ್ನು ಯಾರು ಬೇಕಾದರೂ ಬರೆಯಬಹುದು ಎಂದು ಕೊಂಡವರ ಸಾಲಿನಲ್ಲಿ ನಾನೂ ಒಬ್ಬ. ಆದರೆ ಸಿನೆಮಾ ಗೀತೆ ರಚನೆಗೆ ಕೈ ಹಾಕಿದಾಗಲೇ ಅದರ ಸತ್ವ ಗೊತ್ತಾಗಿದ್ದು. ಕಲೆಯ ರಸಾನುಭವ ಇರುವವರಿಂದ ಮಾತ್ರ ಸಿನೆಮಾ ಸಾಹಿತ್ಯ ರಚಿಸಲು ಸಾಧ್ಯ ಎಂದು ಅವರು ತಿಳಿಸಿದರು.

ಕಾರ್ಯಕ್ರಮದಲ್ಲಿ ವಿಮರ್ಶಕ ಕೆದಿಲಾಯ, ಶಿವರಾಮ ಕಾರಂತ ವೇದಿಕೆಯ ಅಧ್ಯಕ್ಷ ವಿಜಯ್ ಶಂಕರ್ ಸೇರಿದಂತೆ ಇತರರು ಇದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News