ಏಕ ರೀತಿಯ ಶಿಕ್ಷಣ, ವೇತನ ಜಾರಿಗೆ ಒತ್ತಾಯ

Update: 2017-08-13 14:51 GMT

ಬೆಂಗಳೂರು, ಆ.13: ಏಕ ರೂಪದ ಶಿಕ್ಷಣ ಹಾಗೂ ಏಕ ರೀತಿಯ ವೇತನ ಜಾರಿಗೆ ರಾಜ್ಯ ಮಾಧ್ಯಮಿಕ, ಪ್ರಾಥಮಿಕ, ಪ್ರೌಢ ಶಾಲೆಗಳ ಹಾಗೂ ಅನುದಾನಿತ ಶಾಲೆಗಳ ಶಿಕ್ಷಕರ ಮತ್ತು ಪದವಿ ಪೂರ್ವ ಉಪನ್ಯಾಸಕರ, ಪ್ರಾಂಶುಪಾಲರ ಸಂಘಗಳ ಒಕ್ಕೂಟಗಳು ಒಕ್ಕೊರಲಿನಿಂದ ಆಗ್ರಹಿಸಿವೆ.

ರವಿವಾರ ನಗರದ ಶಾಸಕರ ಭವನದಲ್ಲಿ ಕರ್ನಾಟಕ ರಾಜ್ಯ ಮಾಧ್ಯಮಿಕ ಶಿಕ್ಷಕ ಸಂಘದಿಂದ ಆಯೋಜಿಸಿದ್ದ ಒಂದು ರಾಷ್ಟ್ರ, ಒಂದು ಶಿಕ್ಷಣ, ಒಂದು ವೇತನ ಕುರಿತು ಚರ್ಚಿಸುವ ದುಂಡು ಮೇಜಿನ ಸಭೆಯಲ್ಲಿ ಮಾತನಾಡಿದ ವಿವಿಧ ಸಂಘಟನೆಗಳ ಪದಾಧಿಕಾರಿಗಳು, ಕೇಂದ್ರ ಮತ್ತು ರಾಜ್ಯದ ಶಿಕ್ಷಣ ವ್ಯವಸ್ಥೆಯಲ್ಲಿ ಅಜಗಜಾಂತರ ವ್ಯತ್ಯಾಸವಿದೆ. ಶೈಕ್ಷಣಿಕವಾಗಿ ಕರ್ನಾಟಕ ರಾಷ್ಟ್ರ ಮಟ್ಟದಲ್ಲಿ ಗಮನ ಸೆಳೆದಿದ್ದರೂ ಏಕರೂಪ ವೇತನದಲ್ಲಿ ಅನ್ಯಾಯವಾಗಿದೆ ಎಂದು ಪ್ರತಿಪಾದಿಸಿದರು.

ವಿಧಾನಪರಿಷತ್ ಸದಸ್ಯ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಮಾತನಾಡಿ, ವೇತನ ಹಾಗೂ ಶೈಕ್ಷಣಿಕ ವ್ಯವಸ್ಥೆಗೆ ಸಂಬಂಧಿಸಿದಂತೆ ರಾಜ್ಯದ ಎಲ್ಲ ಶಿಕ್ಷಕ, ಉಪನ್ಯಾಸಕರ ಮತ್ತು ಪ್ರಾಂಶುಪಾಲರ ಒಕ್ಕೂಟಗಳಿಂದ ಕೇಂದ್ರದ ಸಿಎನ್‌ಡಿಆರ್ ರೀತಿಯಲ್ಲಿ ಕರಡು ಪ್ರತಿಯನ್ನು ಸರಕಾರಕ್ಕೆ ಶಿಫಾರಸ್ಸು ಮಾಡಲು ಮುಂದಾಗಬೇಕು ಎಂದು ಸಲಹೆ ನೀಡಿದರು.

ಒಂದು ದೇಶ ಹಾಗೂ ಒಂದು ಶಿಕ್ಷಣ ವ್ಯವಸ್ಥೆಗಾಗಿ ಹೋರಾಟ ಮಾಡಲು ಮುಂದಾಗುತ್ತಿರುವ ಶಿಕ್ಷಕರು ಹಾಗೂ ಉಪನ್ಯಾಸಕರು ಪಠ್ಯಕ್ರಮದ ಬದಲಾವಣೆಗೆ ತಕ್ಕಂತೆ ಹೊಂದಿಕೊಳ್ಳುವ ಹಾಗೂ ಯಾವ ರೀತಿಯ ಪಠ್ಯಕ್ರಮ ಬೇಕು ಎಂದು ಪ್ರತಿಪಾದಿಸುವ ಸಾಮರ್ಥ್ಯ ಬೆಳೆಸಿಕೊಳ್ಳಬೇಕು. ಆದರೆ, ನಮ್ಮಲ್ಲಿರುವ ಯಾವುದೇ ಶಿಕ್ಷಕರಿಗೆ ಸಮಗ್ರವಾದ ಭೌದ್ಧಿಕ ಸಾಮರ್ಥ್ಯವಿಲ್ಲ ಎಂದು ಅವರು ಹೇಳಿದರು.

ಶೈಕ್ಷಣಿಕ ಗುಣಮಟ್ಟದ ಕುರಿತು ಹೋರಾಡುವ ಮೊದಲು ನಮ್ಮ ಸಾಮರ್ಥ್ಯವನ್ನು ಬೆಳೆಸಿಕೊಳ್ಳಬೇಕು. ಅಧ್ಯಾಪಕರು ಪಠ್ಯದ ಶಿಕ್ಷಣದ ಜೊತೆಗೆ ವೌಲ್ಯಗಳುಳ್ಳ ಸಾಮಾಜಿಕ, ನೈತಿಕ, ಸಮಯ ಪ್ರಜ್ಞೆ ಪಾಠಗಳನ್ನು ವಿದ್ಯಾರ್ಥಿಗಳಿಗೆ ಕಲಿಸಬೇಕು ಎಂದು ಅವರು ಹೇಳಿದರು.

ರಾಜ್ಯದಲ್ಲಿನ ಎಜಿಟಿ ಶಿಕ್ಷಕರಿಗೆ 21 ಸಾವಿರ, ಪ್ರೌಢ ಶಾಲಾ ಶಿಕ್ಷಕರಿಗೆ 27 ಸಾವಿರ, ಪದವಿಪೂರ್ವ ಕಾಲೇಜು ಉಪನ್ಯಾಸಕರಿಗೆ 35 ಸಾವಿರ( ಎಲ್ಲ ಸೌಲಭ್ಯಗಳು ಸೇರಿ) ವೇತನ ಸಿಗುತ್ತಿದೆ. ಆದರೆ, ಕೇಂದ್ರ ಸರಕಾರದ ಅಡಿಯಲ್ಲಿರುವ ಪ್ರಾಥಮಿಕ ಶಾಲೆಗಳ ಶಿಕ್ಷಕರಿಗೆ 39 ಸಾವಿರ, ಟಿಜಿಟಿ ಶಿಕ್ಷಕರಿಗೆ 49 ಸಾವಿರ ಹಾಗೂ ಪಿಜಿಸಿ ಯವರಿಗೆ 52 ಸಾವಿರ(ಎಲ್ಲ ಸೌಲಭ್ಯಗಳು ಸೇರಿ) ವೇತನ ನೀಡಲಾಗುತ್ತಿದೆ. ಹೀಗಾಗಿ ಎಲ್ಲರಿಗೂ ಸಮಾನವಾದ ವೇತನ ಮತ್ತು ಸಮಾನವಾದ ಶಿಕ್ಷಣ ವ್ಯವಸ್ಥೆ ಜಾರಿ ಮಾಡಬೇಕು ಎಂದು ಶಿಕ್ಷಕರ ಸಂಘದ ಪ್ರಧಾನ ಕಾರ್ಯದರ್ಶಿ ಚಿದಾನಂದ ಪಾಟೀಲ್ ಒತ್ತಾಯಿಸಿದರು.

ನಿರ್ಣಯಗಳು: ಯುಜಿಸಿ ಮಾದರಿನಲ್ಲಿ ಶಾಲಾ ಅನುದಾನ ಆಯೋಗ(ಎಸ್‌ಜಿಸಿ) ರಚನೆ ಮಾಡಬೇಕು ಎಂದು ಕೇಂದ್ರ ಸರಕಾರಕ್ಕೆ ಮನವಿ ಸಲ್ಲಿಸುವುದು ಹಾಗೂ ಕೇಂದ್ರ ಮಾದರಿಯಲ್ಲಿ ನೀಡುವ ವೇತನವನ್ನು ರಾಜ್ಯದಲ್ಲಿಯೂ ನೀಡುವ ಕುರಿತು ಒಂದೇ ಶಿಕ್ಷಣ, ಒಂದೇ ವೇತನ ಎಂಬ ಬೇಡಿಕೆಯನ್ನು ಆ.28 ರಂದು ನಡೆಯುವ 6 ನೆ ವೇತನ ಆಯೋಗದ ಸಭೆಯಲ್ಲಿ ಮಂಡನೆ ಮಾಡಬೇಕು ಎಂದು ಒಕ್ಕೊರಲಿನ ನಿರ್ಣಯ ಅಂಗೀಕರಿಸಲಾಯಿತು.

ಸಭೆಯಲ್ಲಿ ವಿಧಾನಪರಿಷತ್ ಸದಸ್ಯರಾದ ರಾಮಚಂದ್ರಗೌಡ, ಅರುಣ್ ಶಹಪುರ, ಅಮರನಾಥ ಪಾಟೀಲ್, ಎಸ್.ವಿ.ಸಂಕನೂರು, ಸಂಘದ ಅಧ್ಯಕ್ಷ ಶಿವಾನಂದ ಸಿಂಧನಕೇರಾ, ಒಕ್ಕೂಟದ ಸದಸ್ಯ ಡಿ.ಕೆ.ಶಿವರಾಂ, ಪ್ರಾಂಶುಪಾಲರ ಸಂಘದ ಕಾರ್ಯದರ್ಶಿ ಪ್ರಕಾಶ್, ಖಾಸಗಿ ಅನುದಾನಿತ ಶಾಲೆಗಳ ಸಂಘದ ಗೋಪಿನಾಥ್, ಅನುದಾನ ರಹಿತ ಶಾಲೆಗಳ ಸಂಘದ ಸಂಚಾಲಕ ಜಾಲಮಂಗಲ ನಾಗರಾಜ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News