ಕ್ರಿಮಿನಲ್‌ಗಳಿಂದ ಚುನಾವಣೆ ತಂತ್ರಗಾರಿಕೆ ಅಸಾಧ್ಯ: ಸಿದ್ದರಾಮಯ್ಯ

Update: 2017-08-13 14:57 GMT

ಬೀದರ್/ಬೆಂಗಳೂರು, ಆ.13: ಕಾರಾಗೃಹಕ್ಕೆ ಹೋಗಿ ಬಂದವರು ಕ್ರಿಮಿನಲ್ ಚಟುವಟಿಕೆಗಳನ್ನು ಮಾಡಬಹುದೇ ಹೊರತು, ಚುನಾವಣಾ ತಂತ್ರಗಾರಿಕೆಯನ್ನು ಮಾಡಲು ಯಾವುದೇ ಕಾರಣಕ್ಕೂ ಸಾಧ್ಯವಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಬಿಜೆಪಿ ರಾಷ್ಟ್ರೀಯಾಧ್ಯಕ್ಷ ಅಮಿತ್ ಶಾ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ರವಿವಾರ ಇಲ್ಲಿನ ಬೀದರ್ ನಗರದ ನೆಹರೂ ಕ್ರೀಡಾಂಗಣದಲ್ಲಿ ಏರ್ಪಡಿಸಿದ್ದ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಬಸವಣ್ಣ, ಕುವೆಂಪು, ಕನಕದಾಸ ಹುಟ್ಟಿದ ಜಾತ್ಯತೀಯ ಕರ್ನಾಟಕದಲ್ಲಿ ಜಾತಿ ಮತ್ತು ಕೋಮುವಾದದ ಬಿಜೆಪಿ ರಾಜಕೀಯ ನಡೆಯುವುದಿಲ್ಲ. ಒಗ್ಗಟ್ಟಿನ ಸಮಾಜವನ್ನು ಒಡೆಯಲು ಸಾಧ್ಯವಿಲ್ಲ ಎಂದು ಗುಡುಗಿದರು.

ಅಮಿತ್ ಶಾ ಅವರ, ಉತ್ತರ ಪ್ರದೇಶದ ಚುನಾವಣೆ ತಂತ್ರಗಾರಿಕೆ, ಕರ್ನಾಟಕ ರಾಜ್ಯದಲ್ಲಿ ಯಾವುದೇ ಕಾರಣಕ್ಕೂ ನಡೆಯುವುದಿಲ್ಲ. ಶಾ, ಚುನಾವಣಾ ರಣತಂತ್ರ ಪಂಜಾಬ್, ಗೋವಾ, ಮಣಿಪುರದಲ್ಲಿ ಏಕೆ ನಡೆಯಲಿಲ್ಲ ಎಂದ ಸಿದ್ದರಾಮಯ್ಯ, ಕರ್ನಾಟಕ ರಾಜ್ಯ, ಉತ್ತರ ಪ್ರದೇಶವಲ್ಲ ಎಂದು ಎಚ್ಚರಿಕೆ ನೀಡಿದರು.

ಬಿಜೆಪಿ 50 ಸ್ಥಾನ ಗೆಲ್ಲಲು ಸಾಧ್ಯವಿಲ್ಲ: ಬಿಜೆಪಿ ಮುಖಂಡರು ಮತದಾರರನ್ನು ತಮ್ಮ ಜೇಬಿನಲ್ಲಿ ಇಟ್ಟುಕೊಂಡಿರುವವರಂತೆ ಮಿಷನ್-150 ಮಾತುಗಳನ್ನು ಆಡುತ್ತಿದ್ದಾರೆ. ಆದರೆ, ರಾಜ್ಯದಲ್ಲಿ ಬಿಜೆಪಿ ಕೇವಲ 50 ಸ್ಥಾನಗಳನ್ನು ಗೆಲುವುದಿಲ್ಲ ಎಂದು ಸಿದ್ದರಾಮಯ್ಯ ಇದೇ ವೇಳೆ ಭವಿಷ್ಯ ನುಡಿದರು.
ಕಾಂಗ್ರೆಸ್ ಸರಕಾರ ಭ್ರಷ್ಟ ಸರಕಾರ ಎಂದು ಅಮಿತ್ ಶಾ, ಯಡಿಯೂರಪ್ಪ ಅವರನ್ನು ಪಕ್ಕದಲ್ಲಿ ಕೂರಿಸಿಕೊಂಡು ಆರೋಪ ಮಾಡಿದ್ದಾರೆ. ಆದರೆ, ಜನತೆ ಜೈಲಿಗೆ ಹೋಗಿ ಬಂದವರನ್ನು ಮರೆಯಬಹುದು. ಆದರೆ, ಅನ್ನ, ನೀರನ್ನು ಕೊಟ್ಟ ಜನರನ್ನು ಎಂದೂ ಮರೆಯಲು ಸಾಧ್ಯವಿಲ್ಲ ಎಂದ ಸಿದ್ದರಾಮಯ್ಯ, ಅಮಿತ್ ಶಾ, ಬಿಎಸ್‌ವೈ, ಜನಾರ್ಧನ ರೆಡ್ಡಿ, ಕಟ್ಟಾಸುಬ್ರಹ್ಮಣ್ಯ ನಾಯ್ಡು, ಕೃಷ್ಣಯ್ಯಶೆಟ್ಟಿ, ಹಾಲಪ್ಪ ಸೇರಿದಂತೆ ಹಲವು ಮಂದಿ ಜೈಲಿಗೆ ಹೋಗಿ ಬಂದಿದ್ದಾರೆಂದು ಟೀಕಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News