ಈಶ್ವರಪ್ಪರಿಗೆ ಸೇರಿದ ‘ಸಿಡಿ’ ಕಸಿಯಲು ಅಪಹರಣ?

Update: 2017-08-13 17:10 GMT

ಬೆಂಗಳೂರು, ಆ.10: ವಿಧಾನ ಪರಿಷತ್‌ನ ವಿಪಕ್ಷ ನಾಯಕ ಕೆ.ಎಸ್. ಈಶ್ವರಪ್ಪ ಆಪ್ತ ಸಹಾಯಕ ವಿನಯ್ ಅಪಹರಣ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಚುರುಕುಗೊಂಡಿದ್ದು, ಈಶ್ವರಪ್ಪ ಅವರಿಗೆ ಸೇರಿದ ಸಿಡಿಗಾಗಿ ವಿನಯ್‌ನನ್ನು ಅಪಹರಣ ಮಾಡಿರುವುದಾಗಿ ವಿಚಾರಣೆ ವೇಳೆ ಆರೋಪಿಗಳು ತಿಳಿಸಿದ್ದಾರೆ ಎನ್ನಲಾಗಿದೆ.

ರವಿವಾರ ಮಲ್ಲೇಶ್ವರಂನಲ್ಲಿ ಪ್ರಕರಣದಲ್ಲಿ ಭಾಗಿಯಾಗಿರುವ ಆರೋಪದ ಮೇಲೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರ ಸಂಬಂಧಿ ಎನ್.ಆರ್. ಸಂತೋಷ್ ಹಾಗೂ ಆರೋಪಿ ರೌಡಿಶೀಟರ್ ಪ್ರಶಾಂತ್ ಹಾಗೂ ಬೆಂಗಳೂರು ನಗರ ಬಿಜೆಪಿ ಯುವ ಮೋರ್ಚಾ ಕಾರ್ಯದರ್ಶಿ ರಾಜೇಂದ್ರ ಅರಸ್‌ನನ್ನು ಪೊಲೀಸರು ವಿಚಾರಣೆಗೊಳಪಡಿಸಿದರು.

ಕೆ.ಎಸ್.ಈಶ್ವರಪ್ಪ ಅವರಿಗೆ ಸೇರಿದ ಸಿಡಿಗಾಗಿ ಅವರ ಆಪ್ತ ಸಹಾಯಕ ವಿನಯ್‌ನನ್ನು ಅಪಹರಿಸಲು ಯತ್ನಿಸಲಾಗಿತ್ತು. ರಾಜಕೀಯವಾಗಿ ಲಾಭ ಪಡೆಯುವ ಉದ್ದೇಶದಿಂದ ಈ ಅಪಹರಣ ಯತ್ನ ನಡೆದಿತ್ತು ಎಂದು ಪೊಲೀಸರ ವಿಚಾರಣೆಯಲ್ಲಿ ಇಬ್ಬರು ಬಾಯ್ಬಿಟ್ಟಿದ್ದಾರೆ ಎಂದು ತಿಳಿದುಬಂದಿದೆ. ವಿನಯ್‌ರನ್ನ ಅಪಹರಣ ಮಾಡಿ ಆತನ ಬಳಿ ಇದ್ದ ಪೆನ್ ಡ್ರೈವ್ ಮತ್ತು ಸಿಡಿ ಕಿತ್ತುಕೊಳ್ಳುವಂತೆ ನನಗೆ ಹೇಳಲಾಗಿತ್ತು. ಇದರಿಂದ ಮುಂದೆ ರಾಜಕೀಯ ಲಾಭವಾಗಬಹುದು ಅನ್ನೋ ಕಾರಣಕ್ಕಾಗಿ ಅಪಹರಣಕ್ಕೆ ಒಪ್ಪಿಕೊಂಡಿದ್ದೆ. ಅಂತೆಯೇ ತಾನು ರೌಡಿಶೀಟರ್ ಪ್ರಶಾಂತನಿಗೆ ಅಪಹರಣದ ಡೀಲ್ ವಹಿಸಿದ್ದೆ ಎಂದು ಆರೋಪಿ ರಾಜೇಂದ್ರ ಅರಸ್ ವಿಚಾರಣೆಯಲ್ಲಿ ಹೇಳಿದ್ದಾನೆ ಎನ್ನಲಾಗಿದೆ.

ಇನ್ನು ಅಪಹರಣದ ಉಸ್ತುವರಿ ಪಡೆದುಕೊಂಡಿದ್ದ ಎಚ್‌ಎಎಲ್ ಪೊಲೀಸ್ ಠಾಣೆಯ ರೌಡಿಶೀಟರ್ ಪ್ರಶಾಂತ್ ಕೂಡ ವಿಚಾರಣೆಯಲ್ಲಿ ತಪ್ಪೊಪ್ಪಿಕೊಂಡಿದ್ದಾನಂತೆ. ಈ ಕೆಲಸ ಮಾಡಿಕೊಟ್ಟರೆ ತನ್ನ ಮೇಲೆ ಠಾಣೆಯಲ್ಲಿರುವ ರೌಡಿಶೀಟರ್ ಪಟ್ಟಿಯಿಂದ ತೆಗೆಸುವುದಾಗಿ ಭರವಸೆ ನೀಡಲಾಗಿತ್ತು. ಅದಕ್ಕಾಗಿ ಈ ಕೃತ್ಯ ಒಪ್ಪಿಕೊಂಡಿದ್ದೆ. ಮೇ.11 ರಂದು ಅಪಹರಣ ಯತ್ನಕ್ಕೆ ನಡೆಸಿದ ಕತ್ಯದ ಬಗ್ಗೆಯೂ ಪ್ರಶಾಂತ್ ತಿಳಿಸಿದ್ದು, ಪೊಲೀಸರು ಹೇಳಿಕೆ ದಾಖಲಿಸಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News