ಮೂರನೇ ಟೆಸ್ಟ್‌: ಕ್ಲೀನ್ ಸ್ವೀಪ್ ಹಾದಿಯಲ್ಲಿ ಟೀಮ್ ಇಂಡಿಯಾ

Update: 2017-08-14 09:29 GMT

ಪಲ್ಲೆಕೆಲೆ, ಆ.13: ಇಲ್ಲಿ ನಡೆಯುತ್ತಿರುವ ಮೂರನೆ ಹಾಗೂ ಅಂತಿಮ ಕ್ರಿಕೆಟ್ ಟೆಸ್ಟ್‌ನಲ್ಲಿ ಇಂದು ಹಾರ್ದಿಕ್ ಪಾಂಡ್ಯರ ಚೊಚ್ಚಲ ಶತಕ ಮತ್ತು ಕುಲ್‌ದೀಪ್ ಯಾದವ್ ಅವರ ಶಿಸ್ತಿನ ದಾಳಿಯ ನೆರವಿನಲ್ಲಿ ಶ್ರೀಲಂಕಾದ ವಿರುದ್ಧ ಮೇಲುಗೈ ಸಾಧಿಸಿದ್ದು, ಭಾರತ ಮತ್ತೆ ಇನಿಂಗ್ಸ್ ಗೆಲುವಿನ ಹಾದಿಯಲ್ಲಿದೆ.

   ಪಲ್ಲೆಕೆಲೆ ಇಂಟರ್‌ನ್ಯಾಶನಲ್ ಕ್ರಿಕೆಟ್ ಸ್ಟೇಡಿಯಂನಲ್ಲಿ ಟೆಸ್ಟ್‌ನ ಎರಡನೆ ದಿನವಾಗಿರುವ ರವಿವಾರ ಶ್ರೀಲಂಕಾ ತಂಡ ಮೊದಲ ಇನಿಂಗ್ಸ್‌ನಲ್ಲಿ 352 ರನ್‌ಗಳ ಹಿನ್ನಡೆ ಯೊಂದಿಗೆ ಫಾಲೋಆನ್ ಪಡೆದಿದೆ.

 ಶ್ರೀಲಂಕಾ ದಿನದಾಟದಂತ್ಯಕ್ಕೆ ಎರಡನೆ ಇನಿಂಗ್ಸ್ ನಲ್ಲಿ 13 ಓವರ್‌ಗಳಲ್ಲಿ 1 ವಿಕೆಟ್ ನಷ್ಟದಲ್ಲಿ 19 ರನ್ ಗಳಿಸಿದೆ. ಇನಿಂಗ್ಸ್ ಸೋಲು ತಪ್ಪಿಸಲು ಇನ್ನೂ 334 ರನ್ ಗಳಿಸಬೇಕಾಗಿದೆ.

ಉಪುಲ್ ತರಂಗ (7) ಔಟಾಗಿದ್ದಾರೆ. 12 ರನ್ ಗಳಿಸಿರುವ ಡಿ. ಕರುಣರತ್ನೆ ಮತ್ತು ಇನ್ನೂ ಖಾತೆ ತೆರೆಯದೆ ಮಲಿಂದಾ ಪುಷ್ಪಕುಮಾರ್ ಕ್ರೀಸ್‌ನಲ್ಲಿದ್ದಾರೆ.

135ಕ್ಕೆ ಶ್ರೀಲಂಕಾ ಆಲೌಟ್: ಭಾರತದ ಕುಲ್‌ದೀಪ್ ಯಾದವ್ (40ಕ್ಕೆ4) , ಮುಹಮ್ಮದ್ ಶಮಿ(17ಕ್ಕೆ 2) , ಆರ್.ಅಶ್ವಿನ್ (22ಕ್ಕೆ 2) ಮತ್ತು ಹಾರ್ದಿಕ್ ಪಾಂಡ್ಯ(28ಕ್ಕೆ 1) ದಾಳಿಗೆ ಸಿಲುಕಿ 37.4 ಓವರ್‌ಗಳಲ್ಲಿ 135 ರನ್‌ಗಳಿಗೆ ಆಲೌಟಾಗಿತ್ತು.

  ಶ್ರೀಲಂಕಾದ ನಾಯಕ ದಿನೇಶ್ ಚಾಂಡಿಮಾಲ್ 48 ರನ್ ಗಳಿಸಿರುವುದು ತಂಡದ ಪರ ದಾಖಲಾದ ಗರಿಷ್ಠ ವೈಯಕ್ತಿಕ ಸ್ಕೋರ್ ಆಗಿದೆ. ಡಿಕ್ವೆಲ್ಲಾ (29), ಕುಶಾಲ್ ಮೆಂಡಿಸ್(18), ಪುಷ್ಪಕುಮಾರ್(10) ಮತ್ತು ಸಂಡಕನ್(10) ಎರಡಂಕೆಯ ಸ್ಕೋರ್ ದಾಖಲಿಸಿದರು. ಆ್ಯಂಜೆಲೊ ಮ್ಯಾಥ್ಯೂಸ್ (0), ದಿಲ್ರುವಾನ್ ಪೆರೆರಾ(0), ವಿಶ್ವ ಫೆರ್ನಾಂಡೊ (0) ಸೊನ್ನೆ ಸುತ್ತಿದರು.

ಟೆಸ್ಟ್‌ನಲ್ಲಿ ಚೊಚ್ಚಲ ಶತಕ ದಾಖಲಿಸಿದ ಪಾಂಡ್ಯ

 ಇದಕ್ಕೂ ಮೊದಲು ಭಾರತ ಮೊದಲ ಇನಿಂಗ್ಸ್‌ನಲ್ಲಿ 122.3 ಓವರ್‌ಗಳಲ್ಲಿ 487 ರನ್‌ಗಳಿಗೆ ಆಲೌಟಾಗಿತ್ತು.ಭಾರತದ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಚೊಚ್ಚಲ ಶತಕ ದಾಖಲಿಸಿದ್ದರು.

 ಗುಜರಾತ್‌ನ 23ರ ಹರೆಯದ ಪಾಂಡ್ಯ 86 ಎಸೆತಗಳಲ್ಲಿ 7 ಬೌಂಡರಿ ಮತ್ತು 7 ಸಿಕ್ಸರ್ ನೆರವಿನಲ್ಲಿ ಶತಕ ದಾಖಲಿಸಿದರು.

ಗಾಲೆಯಲ್ಲಿ ಲಂಕಾ ವಿರುದ್ಧದ ಮೊದಲ ಟೆಸ್ಟ್‌ನಲ್ಲಿ ಪಾಂಡ್ಯ ಚೊಚ್ಚಲ ಅರ್ಧಶತಕ (50) ದಾಖಲಿಸಿದ್ದರು. ಕೊಲಂಬೊದಲ್ಲಿ ಎರಡನೆ ಟೆಸ್ಟ್‌ನಲ್ಲಿ 20 ರನ್ ಗಳಿಸಿದ್ದ ಪಾಂಡ್ಯ ಇದೀಗ ತನ್ನ ಮೂರನೆ ಟೆಸ್ಟ್‌ನಲ್ಲಿ ಶತಕ ದಾಖಲಿಸುವಲ್ಲಿ ಯಶಸ್ವಿಯಾದರು.

 ಭಾರತ ಮೊದಲ ದಿನದಾಟದಂತ್ಯಕ್ಕೆ ಪ್ರಥಮ ಇನಿಂಗ್ಸ್‌ನಲ್ಲಿ 90 ಓವರ್‌ಗಳಲ್ಲಿ 6ವಿಕೆಟ್ ನಷ್ಟದಲ್ಲಿ 329 ರನ್ ಗಳಿಸಿತ್ತು.

    13 ರನ್ ಗಳಿಸಿರುವ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ವೃದ್ಧಿಮಾನ್ ಸಹಾ ಮತ್ತು 1 ರನ್ ಗಳಿಸಿರುವ ಹಾರ್ದಿಕ್ ಪಾಂಡ್ಯ ಔಟಾಗದೆ ಕ್ರೀಸ್‌ನಲ್ಲಿದ್ದರು. ಬ್ಯಾಟಿಂಗ್ ಮುಂದುವರಿಸಿದ ಸಹಾ ಮತ್ತು ಪಾಂಡ್ಯ 7ನೆ ವಿಕೆಟ್‌ಗೆ 17 ರನ್ ರನ್ ಸೇರಿಸಿದರು. ಸಹಾ 16 ರನ್ ಗಳಿಸಿ ಔಟಾದರು. ಎಂಟನೆ ವಿಕೆಟ್‌ಗೆ ಕುಲದೀಪ್ ಯಾದವ್ ಮತ್ತು ಪಾಂಡ್ಯ 62 ರನ್ ಸೇರಿಸಿದರು. ಕುಲದೀಪ್ 26 ರನ್ ಮತ್ತು ಮುಹಮ್ಮದ್ ಶಮಿ 8 ರನ್ ಗಳಿಸಿ ಔಟಾದರು.

    ಊಟದ ವಿರಾಮದ ಹೊತ್ತಿಗೆ ಭಾರತ ಮೊದಲ ಇನಿಂಗ್ಸ್‌ನಲ್ಲಿ 122 ಓವರ್‌ಗಳಲ್ಲಿ 9 ವಿಕೆಟ್ ನಷ್ಟದಲ್ಲಿ 487 ರನ್ ಗಳಿಸಿತ್ತು. ಪಾಂಡ್ಯ 108ರನ್ (96ಎ, 8ಬೌ,7ಸಿ) ಮತ್ತು ಉಮೇಶ್ ಯಾದವ್ 3 ರನ್ ಗಳಿಸಿ ಔಟಾಗದೆ ಕ್ರೀಸ್‌ನಲ್ಲಿದ್ದರು. ಅಂತಿಮ ವಿಕೆಟ್‌ಗೆ ಪಾಂಡ್ಯ ಮತ್ತು ಯಾದವ್ ಜೊತೆಯಾಟದಲ್ಲಿ 66 ರನ್‌ಗಳ ಜೊತೆಯಾಟ ನೀಡಿದ್ದರು. ಊಟದ ವಿರಾಮದ ಬಳಿಕ ಪಾಂಡ್ಯ ಅವರು ಸಂಡಕನ್ ಎಸೆತದಲ್ಲಿ ದಿಲ್ರುವಾನ್ ಪೆರೆರಾಗೆ ಕ್ಯಾಚ್ ನೀಡುವುದರೊಂದಿಗೆ ಔಟಾದರು. ಯಾದವ್ 3 ರನ್ ಗಳಿಸಿ ಔಟಾಗದೆ ಉಳಿದರು.

ಶ್ರೀಲಂಕಾದ ಲಕ್ಷಣ್ ಸಂಡಕನ್ 132ಕ್ಕೆ 5, ಮಲಿಂದಾ ಪುಷ್ಪಕುಮಾರ್ 82ಕ್ಕೆ 3, ವಿಶ್ವ ಫೆರ್ನಾಂಡೊ 87ಕ್ಕೆ 2 ವಿಕೆಟ್ ಪಡೆದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News