ಸರಕಾರ ಟೀಕಿಸುವ ನೈತಿಕತೆ ಅಮಿತ್ ಶಾಗೆ ಇಲ್ಲ: ಸಿದ್ದರಾಮಯ್ಯ

Update: 2017-08-14 16:20 GMT

ಬೆಂಗಳೂರು, ಆ. 14: ಜೈಲಿಗೆ ಹೋಗಿ ಬಂದಿರುವ ಭ್ರಷ್ಟರನ್ನು ಪಕ್ಕದಲ್ಲಿ ಕೂರಿಸಿಕೊಂಡು ನಮ್ಮ ಸರಕಾರದ ಬಗ್ಗೆ ಮಾತನಾಡುವ ನೈತಿಕತೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರಿಗೆ ಇಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ.

ಸೋಮವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ನಾಲ್ಕು ವರ್ಷಗಳಲ್ಲಿ ಭ್ರಷ್ಟಾಚಾರ, ಹಗರಣ ಮುಕ್ತ ಸರಕಾರ ನಡೆಸಿದ್ದೇವೆ. ಬಿಜೆಪಿಯವರಂತೆ ನಮ್ಮಲ್ಲಿ ಯಾರೂ ಜೈಲಿಗೆ ಹೋಗಿ ಬಂದಿಲ್ಲ ಎಂದು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.

ರೈತ ವಿರೋಧಿ: ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ರೈತರು ಮಾಡಿರುವ ಸಾಲವನ್ನು ಕೇಂದ್ರ ಸರಕಾರವೆ ಮನ್ನಾ ಮಾಡಬೇಕು. ಈ ವಿಚಾರದಲ್ಲಿ ಯಾವುದೇ ನೆಪ ಹೇಳಬಾರದು. ಒಂದು ವೇಳೆ ಮನ್ನಾ ಮಾಡದಿದ್ದರೆ ಬಿಜೆಪಿಯವರು ರೈತ ವಿರೋಧಿಗಳಾಗುತ್ತಾರೆ ಎಂದು ಸಿದ್ದರಾಮಯ್ಯ ಎಚ್ಚರಿಸಿದರು.

ಈ ಹಿಂದೆ ಮನಮೋಹನ್ ಸಿಂಗ್ ಪ್ರಧಾನಿಯಾಗಿದ್ದಾಗ 72 ಸಾವಿರ ಕೋಟಿ ರೂ. ಸಾಲ ಮನ್ನಾ ಮಾಡಿದ್ದರು. ಅದಕ್ಕೂ ಮೊದಲು ವಿ.ಪಿ.ಸಿಂಗ್ 10ಸಾವಿರ ಕೋಟಿ ರೂ.ಗಳಷ್ಟು ಸಾಲಮನ್ನಾ ಮಾಡಿದ್ದರು. ಆಗ ಬಿಜೆಪಿಯವರೇಕೆ ಮಾತನಾಡಲಿಲ್ಲ ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು. ಮಹಾದಾಯಿ ವಿವಾದಕ್ಕೆ ಕಾಂಗ್ರೆಸ್ ಕಾರಣವಲ್ಲ. 2002ರಲ್ಲಿ ವಾಜಪೇಯಿ ಪಧಾನಿಯಾಗಿದ್ದಾಗ ಏನು ಮಾಡಿದ್ದರು ಎಂದು ಬಿಜೆಪಿಯವರಿಗೆ ಗೊತ್ತಿದೆಯೇ? ಕಳಸಾ-ಬಂಡೂರಿ ನಾಲೆ ಯೋಜನೆಗೆ ಸಿಕ್ಕಿದ್ದ ಅನುಮತಿಯನ್ನು ಕಾರ್ಯರೂಪಕ್ಕೆ ತರಲು ಅವರು ಬಿಟ್ಟಿರಲಿಲ್ಲ ಎಂದು ಸ್ಮರಿಸಿದರು.

ಕ್ಯಾಂಟೀನ್ ಉದ್ಘಾಟನೆ: ಬೆಂಗಳೂರು ನಗರದಲ್ಲಿ 101ವಾರ್ಡ್‌ಗಳಲ್ಲಿ ಇಂದಿರಾ ಕ್ಯಾಂಟೀನ್ ಬುಧವಾರ ಏಕಕಾಲಕ್ಕೆ ಉದ್ಘಾಟನೆಗೊಳ್ಳಲಿದೆ. ಉಳಿದ ಕ್ಯಾಂಟಿನ್‌ಗಳು ಅಕ್ಟೋಬರ್ 2ರಂದು ಚಾಲನೆ ನೀಡಲಾಗುವುದು ಎಂದು ಸಿದ್ದರಾಮಯ್ಯ ಇದೇ ವೇಳೆ ತಿಳಿಸಿದರು.

‘ಆದಿಚುಂಚನಗಿರಿ ಮಠದ ಶ್ರೀ ನಿರ್ಮಲಾನಂದ ಸ್ವಾಮೀಜಿಗೆ ಬಿಜೆಪಿ ರಾಜ್ಯಾಧ್ಯಕ್ಷ ಅಮಿತ್ ಶಾ ಅಗೌರವ ತೋರಿದ್ದಾರೆ. ಮಠಾಧೀಶರ ಸಮ್ಮುಖದಲ್ಲಿ ಹೇಗೆ ನಡೆದುಕೊಳ್ಳಬೇಕೆಂಬ ಕನಿಷ್ಠ ಜ್ಞಾನ ಇರಬೇಕು. ಸಾಮಾನ್ಯವಾಗಿ ಯಾವುದೇ ಮಠಕ್ಕೆ ಹೋದರೂ ನಾವು ಸಹಜವಾಗಿ ಗೌರವ ಸೂಚಿಸುತ್ತೇವೆ’
-ಸಿದ್ದರಾಮಯ್ಯ, ಮುಖ್ಯಮಂತ್ರಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News