ಮೊದಲು ತಮ್ಮಲ್ಲಿ ಬದಲಾವಣೆ ತಂದುಕೊಳ್ಳಿ: ನಟ ಉಪೇಂದ್ರಗೆ ಎಸ್.ಆರ್.ಹಿರೇಮಠ್ ಸಲಹೆ

Update: 2017-08-14 16:26 GMT

ಬೆಂಗಳೂರು, ಆ. 14: ನಟ, ನಿರ್ದೇಶಕ ಉಪೇಂದ್ರ ರೈತರಿಂದ ಖರೀದಿ ಮಾಡಿದ ಕೃಷಿ ಭೂಮಿಯನ್ನು ವಾಣಿಜ್ಯ ಉದ್ದೇಶಕ್ಕೆ ಬಳಸಿಕೊಂಡಿದ್ದು, ಆ ಭೂಮಿಯನ್ನು ಕೂಡಲೇ ಹಿಂದಿರುಗಿಸುವ ಮೂಲಕ ಮೊದಲು ತಮ್ಮಲ್ಲಿ ಬದಲಾವಣೆ ತಂದುಕೊಳ್ಳಬೇಕು ಎಂದು ಸಮಾಜ ಪರಿವರ್ತನಾ ಸಮುದಾಯದ ಮುಖ್ಯಸ್ಥ ಎಸ್.ಆರ್.ಹಿರೇಮಠ ಸಲಹೆ ಮಾಡಿದ್ದಾರೆ.

ಸೋಮವಾರ ಹುಬ್ಬಳ್ಳಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಬದಲಾವಣೆ ಬಯಸಿ ನಟ ಉಪೇಂದ್ರ ರಾಜಕೀಯ ಪ್ರವೇಶ ಸ್ವಾಗತಾರ್ಹ. ಆದರೆ, ರೈತರಿಂದ ಖರೀದಿಸಿರುವ ಕೃಷಿ ಭೂಮಿಯನ್ನು ಹಿಂದಿರುಗಿಸಿ ವೈಯಕ್ತಿಕವಾಗಿ ಬದಲಾವಣೆ ತಂದುಕೊಳ್ಳಬೇಕು ಎಂದು ಆಗ್ರಹಿಸಿದರು.

ಬೆಂಗಳೂರು ದಕ್ಷಿಣ ಜಿಲ್ಲೆಯ ಬ್ಯಾಲ್ಯಾಳ ಗ್ರಾಮದ 17.10 ಎಕರೆ ಭೂಮಿಯನ್ನು ಕಾನೂನು ಬಾಹಿರವಾಗಿ ಕಬಳಿಸಿ, ಭೂ ಸುಧಾರಣಾ ತಿದ್ದುಪಡಿ ಕಾಯಿದೆಯನ್ನು ಉಲ್ಲಂಘಿಸಿದ್ದಾರೆ. ಉಪೇಂದ್ರ ಮೇಲೆ ಸರಕಾರ ಕೂಡಲೇ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು ಎಂದು ಅವರು ಒತ್ತಾಯಿಸಿದರು.
ಕೃಷಿ ಭೂಮಿಯಲ್ಲಿ ಉಪೇಂದ್ರ ರುಪ್ಪೀಸ್ ರೆಸಾರ್ಟ್ ನಿರ್ಮಾಣ ಮಾಡಿ ರೈತರಿಗೆ ವಂಚನೆ ಮಾಡಿದ್ದಾರೆ. ಈ ಸಂಬಂಧದ ಪ್ರಕರಣಕ್ಕೆ ಹೈಕೋರ್ಟಿನ ಏಕಸದಸ್ಯ ಪೀಠ ನೀಡಿದ್ದ ತೀರ್ಪನ್ನು ಪ್ರಶ್ನಿಸಿ ವಿಭಾಗೀಯ ಪೀಠಕ್ಕೆ ಮೇಲ್ಮನವಿ ಸಲ್ಲಿಸಲು ಕಂದಾಯ ಇಲಾಖೆಗೆ ಮನವಿ ಮಾಡಿದ್ದು, ಮೇಲ್ಮನವಿ ಸಲ್ಲಿಸಲು ಸರಕಾರ ಆದೇಶಿಸಿದೆ ಎಂದು ತಿಳಿಸಿದರು.

‘ಲಿಂಗಾಯತ ಪ್ರತ್ಯೇಕ ಧರ್ಮ ವಿಚಾರ ಮುಂದಿಟ್ಟುಕೊಂಡು ಪ್ರಸ್ತುತ ಕೀಳು ರಾಜಕೀಯ ಮಾಡಲಾಗುತ್ತಿದೆ. ಧರ್ಮ ಮತ್ತು ರಾಜಕೀಯ ಎರಡೂ ಬೇರೆ. ಅದನ್ನು ಬೆರೆಸಬಾರದು. ಕಲುಷಿತ ವಾತಾವರಣದಲ್ಲಿ ಧರ್ಮ ಕುರಿತಾದ ಚರ್ಚೆ ಅನಗತ್ಯ’
-ಎಸ್.ಆರ್.ಹಿರೇಮಠ್, ಸಮಾಜ ಪರಿವರ್ತನಾ ಸಮುದಾಯದ ಮುಖ್ಯಸ್ಥ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News